ಬೆಂಗಳೂರು ಆಸ್ಪತ್ರೆಗಳಲ್ಲಿರುವ 69% ಕೊರೋನಾ ರೋಗಿಗಳು ಗಂಭೀರ!

By Kannadaprabha NewsFirst Published May 25, 2021, 7:42 AM IST
Highlights

* ಬೆಂಗಳೂರು ಆಸ್ಪತ್ರೆಗಳಲ್ಲಿರುವ 69% ಕೊರೋನಾ ರೋಗಿಗಳು ಗಂಭೀರ!

* ವಿವಿಧ ಆಸ್ಪತ್ರೆಗಳಲ್ಲಿ 7550 ಮಂದಿಗೆ ಚಿಕಿತ್ಸೆ 5258 ಮಂದಿ ಸ್ಥಿತಿ ಚಿಂತಾಜನಕ

* ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾದರೂ ಸಾವಿನ ಸಂಖ್ಯೆ ಹೆಚ್ಚುವ ಭೀತಿ

ಬೆಂಗಳೂರು(ಮೇ.25): ರಾಜಧಾನಿ ಬೆಂಗಳೂರಿನಲ್ಲಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಕೋಟಾದಡಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಒಟ್ಟು ಸೋಂಕಿತರಲ್ಲಿ ಶೇ.69ರಷ್ಟುಮಂದಿ ಗಂಭೀರ ಹಾಗೂ ಅತಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಹೌದು, ಆಸ್ಪತ್ರೆಗೆ ದಾಖಲಾಗಿರುವ ಪ್ರತಿ 10 ರೋಗಿಗಳಲ್ಲಿ 7 ಮಂದಿ ಗಂಭೀರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ 7,550 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಈ ಪೈಕಿ 5,258 ಮಂದಿಯ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ಮುಂದಿನ ಒಂದು ವಾರದಲ್ಲಿ ನಗರದಲ್ಲಿ ಸೋಂಕು ಕಡಿಮೆಯಾದರೂ ಸಾವಿನ ದರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಇದಕ್ಕೆ ಪೂರಕ ಎಂಬಂತೆ ಸೋಮವಾರ ನಗರದಲ್ಲಿ 5701 ಮಂದಿಗೆ ಮಾತ್ರ ಸೋಂಕು ಉಂಟಾಗಿದ್ದು, ಬರೋಬ್ಬರಿ 297 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಶೇ.5.20 ಮರಣ ದರದಂತೆ ಸಾವು ವರದಿಯಾಗಿದೆ. ಪ್ರತಿ 100 ಮಂದಿ ಸೋಂಕಿತರಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಶೇ.86.96ರಷ್ಟು ಕ್ರಿಟಿಕಲ್‌ ಕೇರ್‌ ಬೆಡ್‌ ಭರ್ತಿ:

ಬೆಂಗಳೂರಿನಲ್ಲಿ ಒಟ್ಟು ಸರ್ಕಾರಿ ಕೋಟಾದಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 13,250 (ಆರೈಕೆ ಕೇಂದ್ರ ಹೊರತುಪಡಿಸಿ) ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ (ಹೈ ಡಿಪೆಂಡೆನ್ಸಿ ಯುನಿಟ್‌), ಐಸಿಯು ಹಾಗೂ ವೆಂಟಿಲೇಟರ್‌ಸಹಿತ ಐಸಿಯು ಬೆಡ್‌ಗಳಿವೆ. ಐಸಿಯು ಹಾಗೂ ವೆಂಟಿಲೇಟರ್‌ನಲ್ಲಿರುವ ಸೋಂಕಿತರು ಅತಿ ಗಂಭೀರ ಸ್ಥಿತಿಯಲ್ಲಿದ್ದರೆ ಎಚ್‌ಡಿಯು ವಾರ್ಡ್‌ನಲ್ಲಿರುವವರು ಆಕ್ಸಿಜನ್‌ ವ್ಯವಸ್ಥೆಯ ಜತೆ ನಿಗಾದಲ್ಲಿದ್ದಾರೆ.

ಒಟ್ಟು ಇರುವ 6,048 ಎಚ್‌ಡಿಯು, ಐಸಿಯು, ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳಲ್ಲಿ ಶೇ.86.96ರಷ್ಟುಬೆಡ್‌ ಭರ್ತಿಯಾಗಿವೆ. ಐಸಿಯು ಮತ್ತು ವೆಂಟಿಲೇಟರ್‌ ಬೆಡ್‌ಗಳು ಕೇವಲ 21 ಲಭ್ಯವಿವೆ. 587 ಐಸಿಯು ಬೆಡ್‌ ಪೈಕಿ ಶೇ.97.62, 597 ವೆಂಟಿಲೇಟರ್‌ ಬೆಡ್‌ ಪೈಕಿ ಶೇ.98.83 ರಷ್ಟುಭರ್ತಿಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಜನರಲ್‌ ಬೆಡ್‌ ಖಾಲಿ:

ನಗರದ ಆಸ್ಪತ್ರೆಗಳಿಗೆ ರೋಗಿಗಳು ಬಹುತೇಕ ಗಂಭೀರ ಸ್ಥಿತಿಯಲ್ಲೇ ಬರುತ್ತಿದ್ದಾರೆ. ಹೀಗಾಗಿ ಜನರಲ್‌ ಬೆಡ್‌ ಬಹುತೇಕ ಖಾಲಿ ಇವೆ. 7,202 ಬೆಡ್‌ಗಳ ಪೈಕಿ 2290 ಬೆಡ್‌ ಮಾತ್ರ ಭರ್ತಿಯಾಗಿವೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿನ ಉಳಿದ ಬೆಡ್‌ಗಳು ಖಾಲಿ ಇವೆ.

30ಕ್ಕೂ ಹೆಚ್ಚು ದಿನದಿಂದ ಆಸ್ಪತ್ರೆಯಲ್ಲಿ 125 ಮಂದಿ:

ಕೊರೋನಾ ಸೋಂಕಿನಿಂದ ಗುಣಮುಖರಾಗುವ ಅವಧಿಯಲ್ಲೂ ಸಾಕಷ್ಟುವ್ಯತ್ಯಾಸವಿದೆ. ಸೋಮವಾರ 248 ಮಂದಿ ದಾಖಲಾಗಿದ್ದು, 1 ರಿಂದ 10 ದಿನಗಳಿಂದ 4,917, 11 ರಿಂದ 20 ದಿನಗಳಿಂದ 1,300 ಮಂದಿ, 21 ರಿಂದ 30 ದಿನಗಳಿಂದ 342 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ 125 ಮಂದಿ 30 ದಿನಗಳಕ್ಕೂ ಹೆಚ್ಚು ಕಾಲದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಏಕೆ ಹೀಗಾಗುತ್ತಿದೆ?

ಬೆಂಗಳೂರಿನಲ್ಲಿ ಬಹಳಷ್ಟು ಕೊರೋನಾ ರೋಗಿಗಳು ಗಂಭೀರ ಸ್ಥಿತಿಯಲ್ಲೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಜನರಲ್‌ ಬೆಡ್‌ಗಳು ಬಹುತೇಕ ಖಾಲಿಯಿವೆ. ಆದರೆ ಐಸಿಯು ಬೆಡ್‌, ಎಚ್‌ಡಿಯು ಬೆಡ್‌ ಹಾಗೂ ವೆಂಟಿಲೇಟರ್‌ ಬೆಡ್‌ ಭರ್ತಿಯಾಗಿವೆ. ಐಸಿಯು ಮತ್ತು ವೆಂಟಿಲೇಟರ್‌ಗೆ ಹೋದ ರೋಗಿಗಳು ಚೇತರಿಸಿಕೊಳ್ಳುವ ದರ ಕಡಿಮೆಯಿದೆ. ನಗರದಲ್ಲೀಗ ಕೋವಿಡ್‌ ಸಾವಿನ ದರ ಶೇ.5ಕ್ಕಿಂತ ಹೆಚ್ಚಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!