ಹೊಸ ಟ್ರಾಫಿಕ್ ರೂಲ್ಸ್: ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಸಿಗಲಿದೆ ಇನ್ಶೂರೆನ್ಸ್!

By Web Desk  |  First Published Sep 11, 2019, 7:07 PM IST

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ಎಲ್ಲರ ಬಾಯಲ್ಲೂ ದುಬಾರಿ ದಂಡ ಮಾತು. ಆದರೆ ನೂತನ ಕಾಯ್ದೆಯಲ್ಲಿ ವಾಹನ ಸವಾರರಿಗೆ ಅನುಕೂಲವಾಗುವ ಅಂಶಗಳೂ ಸಾಕಷ್ಟಿವೆ.  ಇದರಲ್ಲಿ ರಸ್ತೆ ಮೇಲೆ ಸಂಚರಿಸುವ ಪ್ರತಿಯೊಬ್ಬರಿಗೂ ವಿಮೆ ಸೌಲಭ್ಯವಿದೆ. ಹೆಚ್ಚಿನ ವಿವರಕ್ಕೆ ಇಲ್ಲಿದೆ ಮಾಹಿತಿ.
 


ಬೆಂಗಳೂರು(ಸೆ.11): ದೇಶಾದ್ಯಂತ ಈಗ ಟ್ರಾಫಿಕ್‌ ನಿಯಮ ಉಲ್ಲಂಘಿಸುವವರಿಗೆ ದುಬಾರಿ ದಂಡ ವಿಧಿಸುತ್ತಿರುವುದೇ ಸುದ್ದಿ. ಮೊದಲು 100-200 ರು. ವಿಧಿಸುತ್ತಿದ್ದ ದಂಡ ಇದೀಗ 5000 - 10000 ರು.ಗೆ ಏರಿಕೆಯಾಗಿದೆ. ವಾಹನಗಳಿಗೆ ಸಂಬಂಧಿಸಿದ ದಾಖಲೆಗಳಿಲ್ಲದಿದ್ದರೆ ಅದಕ್ಕೂ ಭಾರಿ ಮೊತ್ತದ ದಂಡ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು, ಸೆಪ್ಟೆಂಬರ್‌ 1ರಿಂದ ಜಾರಿಗೊಳಿಸಿದ ಹೊಸ ನಿಯಮಗಳಡಿ ಈ ದಂಡ ವಿಧಿಸಲಾಗುತ್ತಿದೆ. ಆದರೆ, ಹೊಸ ನಿಯಮದಲ್ಲಿ ಕೇವಲ ದಂಡ ವಿಧಿಸುವ ಅಂಶವಷ್ಟೇ ಅಲ್ಲ, ವಾಹನ ಸವಾರರಿಗೆ ಅನುಕೂಲವಾಗುವ ಸಾಕಷ್ಟುಅಂಶಗಳೂ ಇವೆ. ಮೋಟಾರು ವಾಹನ ಕಾಯ್ದೆಗೆ ಕೇಂದ್ರ ಸರ್ಕಾರ ಒಟ್ಟಾರೆ 65 ತಿದ್ದುಪಡಿಗಳನ್ನು ಮಾಡಿದೆ. ಅವುಗಳ ಪೈಕಿ ದಂಡ ಹೊರತುಪಡಿಸಿ ಇನ್ನುಳಿದ ಮಹತ್ವದ ತಿದ್ದುಪಡಿಗಳು ಏನೇನು ಎಂಬ ವಿವರ ಇಲ್ಲಿದೆ.

ವಾಹನದಲ್ಲಿ ದೋಷವಿದ್ದರೆ ತಯಾರಿಕಾ ಕಂಪನಿಗೆ ದಂಡ
ನೂತನ ಕಾಯ್ದೆ ಪ್ರಕಾರ ಸುರಕ್ಷಿತ ಸಂಚಾರಕ್ಕೆ ತೊಡಕಾಗುವ ಹಾಗೂ ಪರಿಸರಕ್ಕೆ ಮಾರಕವಾಗಬಲ್ಲ ವಾಹನಗಳ ದೋಷ ಸರಿಪಡಿಸಲು ಮತ್ತು ದೋಷಪೂರಿತ ವಾಹನಗಳನ್ನು ತಯಾರಿಕಾ ಕಂಪನಿಗಳೇ ಹಿಂಪಡೆಯುವಂತೆ ಸೂಚನೆ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ದೊರೆತಿದೆ. ಇದರೊಂದಿಗೆ ಹಿಂಪಡೆದ ವಾಹನದ ಪೂರ್ಣ ಹಣವನ್ನು ಗ್ರಾಹಕರಿಗೆ ನೀಡುವುದು ಅಥವಾ ದೋಷಪೂರಿತ ಬಿಡಿಭಾಗ ಹೊಂದಿದ್ದ ವಾಹನಕ್ಕೆ ಬದಲಾಗಿ ಹೊಸ ವಾಹನ ನೀಡಬೇಕೆಂದು ಕಾಯ್ದೆ ಹೇಳುತ್ತದೆ. ವಾಹನ ತಯಾರಿಕೆಯಲ್ಲಿ ಸರ್ಕಾರದ ನಿಯಮ ಪಾಲನೆ ಆಗದಿದ್ದರೆ ಅಂಥ ಕಂಪನಿಗೆ 500 ಕೋಟಿ ದಂಡ ಅಥವಾ ಇದಕ್ಕೆ ಕಾರಣರಾದವರಿಗೆ ಜೈಲು ಶಿಕ್ಷೆ ವಿಧಿಸಲೂ ಕಾಯ್ದೆಯಲ್ಲಿ ಅವಕಾಶವಿದೆ.

Tap to resize

Latest Videos

ಇದನ್ನೂ ಓದಿ: ಕರ್ನಾಟಕದಲ್ಲಿ ದುಬಾರಿ ಟ್ರಾಫಿಕ್ ದಂಡಕ್ಕೆ ಬ್ರೇಕ್; ಸಿಎಂ ಆದೇಶ ತಕ್ಷಣವೇ ಜಾರಿ!

ಗಾಯಾಳುಗಳಿಗೆ ನೆರವು ನೀಡುವವರಿಗೆ ಕಿರಿಕಿರಿ ಇಲ್ಲ
ಅಪಘಾತ ಸಂಭವಿಸಿದಾಗ ಕಾನೂನು ಕಟ್ಟಲೆಗಳಿಗೆ ಹೆದರಿ ಸಂತ್ರಸ್ತರ ನೆರವಿಗೆ ಧಾವಿಸಲು ಜನರು ಹಿಂದೆಮುಂದೆ ನೋಡುತ್ತಾರೆ. ಇದರಿಂದಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಇದಕ್ಕೆ ಪರಿಹಾರವೆಂಬಂತೆ ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವ್ಯಕ್ತಿಯನ್ನು ಯಾವುದೇ ಅಪರಿಚಿತ ವ್ಯಕ್ತಿಯು ಮುಂಗಡ ಪಾವತಿ ಇಲ್ಲದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬಹುದಾಗಿದೆ. ಜೊತೆಗೆ ನೆರವಾಗುವ ವ್ಯಕ್ತಿ ಪೊಲೀಸ್‌ ಅಥವಾ ವೈದ್ಯರ ಬಳಿ ತಮ್ಮ ಹೆಸರು ಮತ್ತು ವಿಳಾಸವನ್ನು ನಮೂದಿಸದಿರಲೂ ಮಸೂದೆಯಲ್ಲಿ ಅವಕಾಶವಿದೆ. ನೆರವಾಗುವ ವ್ಯಕ್ತಿಗೆ ಕಾನೂನಿನ ಹೆಸರಿನಲ್ಲಿ ತೊಂದರೆ ಕೊಡದಂತೆಯೂ ಮಸೂದೆಯಲ್ಲಿ ಹೇಳಲಾಗಿದೆ. ಕರ್ನಾಟಕದಲ್ಲಿ ಹರೀಶ್‌ ನಿಧನದ ಬಳಿಕ ರಾಜ್ಯ ಸರ್ಕಾರ ಇದಕ್ಕೊಂದು ಕಾನೂನು ತಿದ್ದುಪಡಿ ತಂದಿತ್ತು.

ಇದನ್ನೂ ಓದಿ: ದಂಡ ವಿಧಿಸಿದ ಪೊಲೀಸ್, ಠಾಣೆಯ ನೀರಿನ ಕನೆಕ್ಷನ್ನೇ ಕಟ್ ಮಾಡಿದ ಅಧಿಕಾರಿ!

ರಸ್ತೆ ಮೇಲೆ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ!
ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೆ ಅಥವಾ ತೀವ್ರವಾಗಿ ಗಾಯಗೊಂಡರೆ ತಕ್ಷಣದ ನೆರವಿಗಾಗಿ ಥರ್ಡ್‌ ಪಾರ್ಟಿ ವಿಮೆಯ ಹಣ ಕೊಡಿಸಲು ಸರ್ಕಾರ ಯೋಜನೆ ರೂಪಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಹಾಗೆಯೇ ಹಿಟ್‌ ಆ್ಯಂಡ್‌ ರನ್‌ ಕೇಸ್‌ಗಳಲ್ಲಿ ವ್ಯಕ್ತಿ ಮೃತಪಟ್ಟರೆ ಸರ್ಕಾರದ ವತಿಯಿಂದ 2 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚು ಮತ್ತು ತೀವ್ರವಾಗಿ ಗಾಯಗೊಂಡರೆ 12,500ದಿಂದ 50,000 ರು. ಪರಿಹಾರ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ತಿದ್ದುಪಡಿಗೂ ಮೊದಲು ಮೃತಪಟ್ಟವ್ಯಕ್ತಿಯ ಕುಟುಂಬಕ್ಕೆ 25,000 ರು. ನೀಡಲಾಗುತ್ತಿತ್ತು. ಜೊತೆಗೆ ದೇಶದ ರಸ್ತೆ ಮೇಲೆ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಕಲ್ಪಿಸುವ ನಿಟ್ಟಿನಲ್ಲಿ ನಿಧಿ ಸ್ಥಾಪನೆಗೂ ಅವಕಾಶವಿದೆ.

ಇದನ್ನೂ ಓದಿ: ಓವರ್‌ಲೋಡ್‌ : ಭಗವಾನ್ ರಾಮನಿಗೆ 1.50 ಲಕ್ಷ ರು. ದಂಡ!

ವಾಣಿಜ್ಯ ವಾಹನಗಳ ಲೈಸನ್ಸ್‌ ಅವಧಿ 3ರಿಂದ 5 ವರ್ಷಕ್ಕೇರಿಕೆ
ಇ-ಆಡಳಿತದ ಮೂಲಕ ಸುಲಭವಾಗಿ ಚಾಲನಾ ಪರವಾನಗಿ ಪಡೆಯಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ವಾಹನಗಳ ಚಾಲನಾ ಪರವಾನಗಿಯನ್ನು ಈ ಮೊದಲು 3 ವರ್ಷಗಳಿಗೆ ಮಾತ್ರ ನೀಡಲಾಗುತ್ತಿತ್ತು. ಪ್ರಸಕ್ತ ತಿದ್ದುಪಡಿ ಮೂಲಕ ಇದನ್ನು 5 ವರ್ಷಗಳಿಗೆ ಹೆಚ್ಚಿಸಲಾಗಿದೆ. ಇನ್ನು, ಅಂಗವಿಕಲರಿಗೆ ಸುಲಭವಾಗಿ ಚಾಲನಾ ಪರವಾನಗಿ ಪಡೆಯಲು ನಿಯಮಗಳನ್ನು ಸರಳೀಕರಿಸಲಾಗಿದೆ. ಮತ್ತು ಅಂಗವಿಕಲರು ಮೋಟಾರು ವಾಹನಗಳನ್ನು ತಮಗೆ ಅನುಕೂಲವಾಗುವಂತೆ ಮಾರ್ಪಡಿಸಿಕೊಳ್ಳಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಲುಂಗಿ ಧರಿಸಿದರೆ ಲಾರಿ ಚಾಲಕರಿಗೆ 2000 ರು. ದಂಡ!

ಡೀಲರ್‌ಗಳ ಬಳಿಯೇ ವಾಹನ ನೋಂದಣಿ ಸೌಲಭ್ಯ ಸಿಗುತ್ತೆ
ಹೊಸ ವಾಹನಗಳ ಖರೀದಿ ನಂತರದ ನೋಂದಣಿ ಇನ್ನು ಮುಂದೆ ಡೀಲರ್‌ ಹಂತದಲ್ಲಿಯೇ ನಡೆಯಲಿದೆ. ಅಲ್ಲದೆ ತಾತ್ಕಾಲಿಕ ನೋಂದಣಿಯಡಿ ವರ್ಷಾನುಗಟ್ಟಲೆ ನೋಂದಣಿ ಮಾಡದೆ ವಾಹನ ಚಲಾಯಿಸುವುದರಿಂದ ತಾತ್ಕಾಲಿಕ ನೋಂದಣಿಯನ್ನು ಈಗ ಸ್ಥಗಿತಗೊಳಿಸಲಾಗಿದೆ. ನೋಂದಣಿ ಸಂದರ್ಭದಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಡೀಲರ್‌ ಬಳಿ ಹೋಗಿಯೇ ವಾಹನ ತಪಾಸಣೆ ಕೈಗೊಳ್ಳಲು ಕಾಯ್ದೆ ಸೂಚಿಸುತ್ತದೆ. ವಾಹನ ನೋಂದಣಿ ಮತ್ತು ಪರವಾನಗಿ ಪ್ರಕ್ರಿಯೆಯನ್ನು ರಾಷ್ಟ್ರೀಕೃತಗೊಳಿಸಲಾಗಿದೆ. ಹಾಗೆಯೇ ವಾಹನ ನೋಂದಣಿಗೂ ಆಧಾರ್‌ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: 6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ಅಪ್ರಾಪ್ತರಿಗೆ ವಾಹನ ಕೊಟ್ಟರೆ ಪೋಷಕರಿಗೆ ದಂಡ-ಜೈಲು
ಅಪ್ರಾಪ್ತರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರ ತಪ್ಪಿಗೆ ಪೋಷಕರು ಅಥವಾ ವಾಹನದ ಮಾಲಿಕರು ಹೊಣೆಗಾರರಾಗಿರುತ್ತಾರೆ. ಅದರ ಹೊರತಾಗಿ ಸಂಚಾರಿ ನಿಯಮ ಉಲ್ಲಂಘನೆಗೂ ತಮಗೂ ಸಂಬಂಧವಿಲ್ಲವೆಂದು ಅಥವಾ ತಮಗೆ ತಿಳಿಯದೇ ಇಂಥದ್ದೊಂದು ಅವಘಡ ಸಂಭವಿಸಿದೆಯೆಂದು ಅವರು ಸಾಬೀತುಪಡಿಸಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ಒಂದು ವರ್ಷದವರೆಗೆ ಮೋಟಾರು ವಾಹನದ ನೋಂದಣಿಯನ್ನು ರದ್ದುಪಡಿಸುವ ಅವಕಾಶವಿರುತ್ತದೆ. ಹಾಗೆಯೇ ಬಾಲಾಪರಾಧಿ ಕಾಯ್ದೆಯಡಿ ಬಾಲಾಪರಾಧಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಸೆಕ್ಷನ್‌ 199ಎ ಮತ್ತು 199ಬಿ ಪ್ರಕಾರ ಅಪ್ರಾಪ್ತರಿಗೆ ವಾಹನ ನೀಡಿದಲ್ಲಿ ಪೋಷಕರು 25,000 ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೇ ಈ ದಂಡದ ಪ್ರಮಾಣ ಪ್ರತಿ ವರ್ಷ 10% ಏರಿಕೆಯಾಗುತ್ತದೆ.

ಇದನ್ನೂ ಓದಿ: ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

ರಸ್ತೆ ಗುಂಡಿಯಿಂದ ಆ್ಯಕ್ಸಿಡೆಂಟ್‌ ಆದರೆ ಗುತ್ತಿಗೆದಾರರು ಹೊಣೆ!
ರಸ್ತೆ ನಿಯಮ ಉಲ್ಲಂಘಿಸುವವರಿಂದ ಅಪಘಾತಗಳು ಸಂಭವಿಸುತ್ತದೆಯೆಂದು ಸರ್ಕಾರ ದುಬಾರಿ ದಂಡ ವಿಧಿಸುತ್ತಿದೆ. ಆದರೆ, ಕಳಪೆ ಗುಣಮಟ್ಟದ ರಸ್ತೆ, ಗುಂಡಿಬಿದ್ದ ರಸ್ತೆಗಳಿಂದಲೂ ಅಪಘಾತ ಸಂಭವಿಸುತ್ತದೆ. ಹೀಗಾಗಿ ಹೊಸ ಕಾಯ್ದೆಯಡಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಏನು ಶಿಕ್ಷೆ ಕೊಡುತ್ತೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅದಕ್ಕೂ ತಿದ್ದುಪಡಿಯಲ್ಲಿ ಉತ್ತರವಿದೆ. ಅಪಘಾತಗಳಿಗೆ ಕಾರಣವಾಗುವ ಕಳಪೆ ರಸ್ತೆ ಮತ್ತು ರಸ್ತೆಗಳ ಕಳಪೆ ನಿರ್ವಹಣೆಗೆ ಗುತ್ತಿಗೆದಾರರು, ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳು ಜವಾಬ್ದಾರರಾಗಿರುತ್ತಾರೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಹೇಗೆ ಇವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ.

ಇದನ್ನೂ ಓದಿ: ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿ; ನಿಟ್ಟುಸಿರು ಬಿಟ್ಟ ಸವಾರರು!

ಡಿಎಲ್‌ ನವೀಕರಣ, ವಿಳಾಸ ಬದಲಾವಣೆಯಿನ್ನು ಸುಲಭ
ವಾಹನ ಚಾಲನಾ ಪರವಾನಗಿ ನವೀಕರಣಕ್ಕೆ ಕಾಯ್ದೆ ತಿದ್ದುಪಡಿಗೂ ಮೊದಲು ಕೇವಲ ಒಂದು ತಿಂಗಳು ಮಾತ್ರ ಅವಕಾಶ ನೀಡಲಾಗಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ಚಾಲನಾ ಪರವಾನಗಿ ನವೀಕರಣ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಅಂದರೆ ಪರವಾನಗಿ ಅವಧಿ ಮುಗಿಯುವ ಒಂದು ವರ್ಷದ ಒಳಗಾಗಿ ಅಥವಾ ಮುಗಿದ ಒಂದು ವರ್ಷದೊಳಗಾಗಿ ನವೀಕರಣ ಮಾಡಬಹುದು. ಆದರೆ ಅವಧಿ ಮುಗಿದ ಒಂದು ವರ್ಷದ ಬಳಿಕ ನವೀಕರಣ ಮಾಡಿಸುವವರು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಹಾಗೆಯೇ ಪರವಾನಗಿಯಲ್ಲಿ ವಿಳಾಸ ಬದಲಿಸಬೇಕಿದ್ದರೆ ಆನ್‌ಲೈನ್‌ ಮೂಲಕವೇ ಬದಲಾಯಿಸಬಹುದು.

ಇದನ್ನೂ ಓದಿ: ಟ್ರಾಫಿಕ್ ಜಾಗೃತಿ ಮೂಡಿಸುತ್ತಿದ್ದ MLA ಕಾರಿಗೆ ದಂಡ!

ದಂಡದ ಹಣ ಪ್ರತಿ ವರ್ಷ ಏರಿಕೆಯಾಗುತ್ತೆ!
ಇದೇ ಸೆಪ್ಟೆಂಬರ್‌ 1ರಿಂದ ಅನುಷ್ಠಾನಗೊಂಡಿರುವ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ದೇಶದ ಅಪಾಘಾತ ಸಂಖ್ಯೆಯನ್ನು ಕಡಿಮೆ ಮಾಡುವ ಮಹತ್ತರ ಉದ್ದೇಶ ಹೊಂದಿದೆ. ಕಾಯ್ದೆಯು ಸಂಚಾರ ನಿಯಮ ಉಲ್ಲಂಘನೆ, ವೇಗದ ಮತ್ತು ಅಪಾಯಕಾರಿ ಚಾಲನೆ, ಮದ್ಯ ಸೇವನೆ ಮಾಡಿ ಗಾಡಿ ಚಲಾಯಿಸುವುದು, ಹೆಲ್ಮೆಟ್‌ ಹಾಗೂ ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡುವುದಕ್ಕೆ ಭಾರೀ ದಂಡ ವಿಧಿಸುವ ಪ್ರಸ್ತಾಪ ಒಳಗೊಂಡಿದೆ. ಹಾಗೆಯೇ ಈ ದಂಡದ ಮೊತ್ತವು ಪ್ರತಿ ವರ್ಷ 10% ಏರಿಕೆಯಾಗಲಿದೆ.

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ದಂಡ ಹೆಚ್ಚಳದಿಂದ ರಸ್ತೆ ಅಪಘಾತ ಅರ್ಧಕ್ಕರ್ಧ ಕಡಿಮೆಯಾಗುತ್ತಾ?
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ 2017ರ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು 4.64 ಲಕ್ಷ ಅಪಘಾತಗಳು ದೇಶದಲ್ಲಿ ಸಂಭವಿಸುತ್ತಿವೆ. ಇಂಥ ಪ್ರಕರಣಗಳಲ್ಲಿ ಸುಮಾರು 1.47 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರೇ ಹೆಚ್ಚು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಅಸುರಕ್ಷಿತ ಮತ್ತು ಅಜಾಗರೂಕ ಚಾಲನೆಯೂ ಒಂದು ಕಾರಣ. ಭಾರಿ ದಂಡ ಮತ್ತಿತರ ನಿಯಮಗಳಿಂದ ಸಂಚಾರಿ ನಿಯಮಗಳು ವ್ಯವಸ್ಥಿತವಾಗಿ ಪಾಲನೆಯಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು ಎಂಬುದು ನೂತನ ಕಾಯ್ದೆಯ ಮುಖ್ಯ ಉದ್ದೇಶ. ಗ್ರಾಹಕ ಧ್ವನಿ (ಕನ್ಸೂಮರ್‌ ವಾಯ್‌್ಸ) ಎಂಬ ಸಂಸ್ಥೆ ಕಳೆದ ವರ್ಷ ಸಮೀಕ್ಷೆಯೊಂದನ್ನು ಕೈಗೊಂಡಿತ್ತು. ಸಮೀಕ್ಷೆಗೊಳಪಟ್ಟ96% ಜನರು ಹೊಸ ಕಾಯ್ದೆಯ ಅನುಷ್ಠಾನದಿಂದ ದೇಶದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪೈಕಿ 2020ರ ವೇಳೆಗೆ 50% ಅಪಘಾತಗಳು ಕಡಿಮೆಯಾಗಬಹುದೆಂದು ನಂಬುವುದಾಗಿ ಹೇಳಿದ್ದರು. ಹಾಗೆಯೇ 97% ಜನರು ಮಸೂದೆಯನ್ನು ಪಕ್ಷಾತೀತವಾಗಿ ರಾಜಕೀಯ ನಾಯಕರು ಬೆಂಬಲಿಸಬೇಕು ಎಂದು ಬಯಸಿದ್ದರು.
 

click me!