
ನಿಂಬೆಹಣ್ಣಿನ ಮೇಲೆ ಓಡಿಸಲು ಹೋಗಿ ಹೊಸ ಕಾರು ಜಖಂ:
ನವದೆಹಲಿ: ಮಹಿಳೆಯೊಬ್ಬರು ಥಾರ್ ಗಾಡಿಯನ್ನು ಖರೀದಿಸಿ ಕೆಲ ನಿಮಿಷಗಳಲ್ಲೇ ಅದನ್ನು ಶೋರೂಮ್‌ನ ಮಹಡಿಯಿಂದ ಕೆಳಗೆ ಬೀಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಪರಿಣಾಮ ಥಾರ್ ಗಾಡಿಯ ಗಾಜುಗಳೆಲ್ಲಾ ಪುಡಿಪುಡಿಯಾಗಿದೆ. ಕೆಲ ವರದಿಗಳ ಪ್ರಕಾರ, ಮಹಿಳೆ ಮೊದಲ ಪ್ರಯಾಣಕ್ಕೂ ಮೊದಲು ನಿಂಹೆಹಣ್ಣಿನ ಮೇಲೆ ಕಾರು ಓಡಿಸಲು ಯತ್ನಿಸಿದಾಗ ಈ ಅಚಾನಕ್ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಪಘಾತಕ್ಕೀಡಾದ ಮಹೀಂದ್ರ ಬ್ರಾಂಡ್ ನ್ಯೂ ಥಾರ್ ರಾಕ್ಸ್ ಶೋರೂಮ್‌ನ ಮೊದಲ ಮಹಡಿಯಲ್ಲಿ ಇತ್ತು. ರಾಷ್ಟ್ರ ರಾಜಧಾನಿ ದೆಹಲಿಯ ನಿರ್ಮಾಣ ವಿಹಾರ್‌ನಲ್ಲಿರುವ ಮಹೀಂದ್ರ ಶೋ ರೂಮ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ.
ಮಹೀಂದ್ರ ನ್ಯೂ ಬ್ರಾಂಡ್ ಥಾರ್ ರಾಕ್ಸ್ ಕಾರು ಖರೀದಿಸಿದ ದಂಪತಿ
29 ವರ್ಷದ ಯುವತಿ ಮಣಿ ಪವಾರ್ ಎಂಬುವವರು ತಮ್ಮ ಪತಿಯ ಜೊತೆ ಇಲ್ಲಿಗೆ ಬಂದು ಮಹೀಂದ್ರ ಥಾರ್ ರಾಕ್ಸ್ ಕಾರು ಖರೀದಿ ಮಾಡಿದ್ದಾರೆ. ರಸ್ತೆಗಿಳಿಸುವುದಕ್ಕೂ ಮೊದಲು ಅವರು ಕಾರಿಗೆ ಪೂಜೆ ಮಾಡಿ ನಿಂಬೆಹಣ್ಣಿನ ಮೇಲೆ ಕಾರು ಓಡಿಸಲು ಮುಂದಾದರು ಈ ವೇಳೆ ಕಾರು ಮೊದಲ ಮಹಡಿಯ ಶೋರೂಮ್‌ನ ಗಾಜುಗಳನ್ನು ಒಡೆದುಕೊಂಡು ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ. ಮಣಿ ಪವಾರ್ ಅವರು ಆಕಸ್ಮಿಕವಾಗಿ ಆಕ್ಸಿಲರೇಟ್ ಪ್ರೆಸ್ ಮಾಡಿದ ಪರಿಣಾಮ ಕಾರು ಮೊದಲ ಮಹಡಿಯಿಂದ ಗಾಜಿನ ಗೋಡೆಯನ್ನು ಒಡೆದುಕೊಂಡು ಹೊರಗೆ ಚಿಮ್ಮಿದೆ.
ಅರಿವಿಲ್ಲದೇ ಅಕ್ಸಿಲರೇಟರ್ ಒತ್ತಿದ ಮಹಿಳೆ
27 ಲಕ್ಷ ಮೌಲ್ಯದ ಕಾರು ಇದಾಗಿದೆ. ಕಾರನ್ನು ರಸ್ತೆಗಿಳಿಸುವುದಕ್ಕೂ ಮೊದಲು ಶೋ ರೂಮ್‌ನಲ್ಲೇ ಅವರು ಪೂಜೆಗೆ ಮುಂದಾದಾಗ ಈ ಅನಾಹುತ ಸಂಭವಿಸಿದೆ. ಶೋ ರೂಮ್‌ನ ಮೊದಲ ಮಹಡಿಯಲ್ಲಿ ನಿಲ್ಲಿಸಿದ ಕಾರಿನ ಚಕ್ರದ ಮುಂದೆ ನಿಂಬೆಹಣ್ಣನ್ನು ಇಟ್ಟು ಕಾರಿನ ಚಕ್ರ ಅದರ ಮೇಲೆ ಹೋಗಬೇಕು ಎಂದು ಅವರು ಬಯಸಿದ್ದರು. ಹೀಗಾಗಿ ಕಾರನ್ನು ನಿಧಾನವಾಗಿ ಚಲಾಯಿಸಿ ನಿಂಬೆಹಣ್ಣಿನ ಮೇಲೆ ಚಲಿಸಲು ಯತ್ನಿಸುತ್ತಿದ್ದಾಗ ಅರಿವಿಲ್ಲದೇ ಅವರು ಆಕ್ಸಿಲರೇಟರನ್ನು ಒತ್ತಿದ್ದು, ಕಾರು ಮೊದಲ ಮಹಡಿಯಿಂದ ಜಂಪ್ ಆಗಿ ಕೆಳಗೆ ಬಿದ್ದಿದೆ. ಟನೆಯ ವೇಳೆ ಶೋ ರೂಮ್‌ನ ವಿಕಾಸ್ ಎಂಬ ಸಿಬ್ಬಂದಿ ಹಾಗೂ ಕಾರಿನ ಮಾಲಕಿ ಮಣಿ ಪವಾರ್ ಹಾಗೂ ಅವರ ಪತಿ ಕಾರಿನ ಒಳಗೆ ಕುಳಿತಿದ್ದರು.
ಕಾರಿನ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ದೊಡ್ಡ ಅನಾಹುತದಿಂದ ಪಾರು:
ಆದರೆ ಕಾರು ಕ್ಷಣದಲ್ಲಿ ಹಾರಿ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದೆ. ಕೂಡಲೇ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅನಾಹುತ ತಪ್ಪಿದೆ. ಕಾರಿನಲ್ಲಿದ್ದ ವಿಕಾಸ್ ಹಾಗೂ ಮಣಿ ಪವಾರ್ ಹಾಗೂ ಅವರ ಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಮಲ್ಲಿಕ್ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಘಟನೆಯಲ್ಲಿ ಸ್ಥಳದಲ್ಲಿದ್ದ ಒಂದು ಬೈಕ್‌ಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ದೆಹಲಿ ಪೊಲೀಸರ ಪ್ರಕಾರ, ಸಂಜೆ 5 ಗಂಟೆ ಸುಮಾರಿಗೆ ಮಹೀಂದ್ರಾ ಶಿವ ಶೋ ರೂಂನಲ್ಲಿ ಅಪಘಾತ ಸಂಭವಿಸಿದೆ. ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಮಹಿಳೆ, ಆಕೆಯ ಪತಿ ಮತ್ತು ಶೋ ರೂಂ ಸೇಲ್ಸ್‌ಮ್ಯಾನ್ ಕಾರಿನಲ್ಲಿದ್ದರು. ಕಾರಿನ ಸೇಲ್ಸ್‌ಮ್ಯಾನ್ ಕಾರಿನ ವಿಶೇಷತೆಯ ಬಗ್ಗೆ ವಿವರಿಸುತ್ತಿದ್ದಾಗ ಮಹಿಳೆ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ವಾಹನವು ಶೋರೂಮ್ನ ಗಾಜಿನ ಗೋಡೆಯನ್ನು ಭೇದಿಸಿ ಕೆಳಗಿನ ಪಾದಚಾರಿ ಮಾರ್ಗಕ್ಕೆ ಉರುಳಿತು. ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿಗಳಾದ 29 ವರ್ಷದ ಮಹಿಳೆ ಮತ್ತು ಅವರ ಪತಿ ಥಾರ್ ರಾಕ್ಸ್ ಖರೀದಿಸಲು ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿದ್ದರು ಅವರು ಮೊದಲ ಮಹಡಿಯಲ್ಲಿ ಕಾರನ್ನು ಆಯ್ಕೆ ಮಾಡಿ ಹಣ ಪಾವತಿಸಿ, ಪೂಜೆ ಮಾಡಿ ಡೆಲಿವರಿ ಪಡೆದ ನಂತರ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರ ತರದ ಕಾಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿ ಐಸ್‌ಕ್ರೀಂ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ: ವೈರಲ್ ವೀಡಿಯೋ
ಇದನ್ನೂ ಓದಿ: ನನ್ನ ಆತ್ಮೀಯ ಗೆಳೆಯ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಡೋನಾಲ್ಡ್ ಟ್ರಂಪ್