ಮರಗಳನ್ನು ಉಳಿಸಬೇಕು ಎಂಬುವುದು ಭಾರತೀಯ ಸಂಸ್ಕೃತಿಯಲ್ಲಿಯೇ ಹಾಸು ಹೊಕ್ಕಾಗಿದೆ. 'ಮೂಲತೋ ಬ್ರಹ್ಮರೂಪಾಯ| ಮಧ್ಯತೋ ವಿಷ್ಣುರೂಪಿಣೇ | ಅಗ್ರತ:ಶಿವರೂಪಾಯ| ವೃಕ್ಷರಾಜಾಯತೇ ನಮ:|' ಎಂದು ಮರದಲ್ಲಿಯೇ ತ್ರೀಮೂರ್ತಿಗಳನ್ನು ಕಾಣುವ ಪರಿಪಾಠ ನಮ್ಮಲ್ಲಿದೆ. ಇಂಥ ಆಚಾರದ ಹಿನ್ನೆಲೆ ಏನು?
ಸನಾತನ ಪರಂಪರೆಯಲ್ಲಿ ಮರಗಿಡಗಳನ್ನೂ ದೇವರಂತೆ ಪೂಜಿಸಲಾಗುತ್ತದೆ. ಮನುಷ್ಯ ಬದುಕಲು ಶುದ್ಧ ಪರಿಸರ ಎಷ್ಟು ಮುಖ್ಯ ಎಂಬುದು ಪ್ರಾಚೀನರಿಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ಅವರು ನೀರು, ಗಾಳಿ, ಮಣ್ಣು, ಬೆಳಕು, ಮರಗಿಡಗಳಿಗೆ ದೇವರ ಸ್ಥಾನ ನೀಡಿ, ಅವುಗಳನ್ನು ಜನರು ಹಾಳುಗೆಡವದಂತೆ ಕಟ್ಟಳೆಗಳನ್ನು ವಿಧಿಸಿದರು ಅಥವಾ ಅವುಗಳ ಶಕ್ತಿಯ ಬಗ್ಗೆ ಸಣ್ಣದೊಂದು ಭೀತಿಯನ್ನು ನಮ್ಮಲ್ಲಿ ತುಂಬಿದರು. ಇವುಗಳನ್ನು ಪೂಜಿಸುವುದಕ್ಕೆ ಶಾಸ್ತ್ರದ ಆಧಾರ ಏಕೆ ನೀಡಿದರು ಅಂದರೆ, ಯತ್ ಲೋಕಹಿತಂ ಅತ್ಯಂತಂ ತತ್ ಶಾಸ್ತ್ರಮ್ - ನಮಗೆ ಯಾವುದೆಲ್ಲಾ ಒಳ್ಳೆಯದನ್ನು ಮಾಡುತ್ತದೆಯೋ ಅದು ಶಾಸ್ತ್ರ.
undefined
ಮರಗಿಡಗಳಲ್ಲಿ ಭಾರತೀಯರು ಪವಿತ್ರ ಎಂದು ಪರಿಗಣಿಸುವುದು ಅಶ್ವತ್ಥ, ಔದುಂಬರ, ಪ್ಲಕ್ಷ, ಚೂತ ಹಾಗೂ ನ್ಯಗ್ರೋಧಗಳನ್ನು. ಇವುಗಳನ್ನು ಪಂಚ ದೇವವೃಕ್ಷಗಳು ಎನ್ನಲಾಗುತ್ತದೆ. ಅಶ್ವತ್ಥ ಅಂದರೆ ಅರಳಿ, ಔದುಂಬರ ಅಂದರೆ ಅತ್ತಿ, ಪ್ಲಕ್ಷ ಅಂದರೆ ಬಸರೀಮರ, ಚೂತ ಅಂದರೆ ಮಾವು ಮತ್ತು ನ್ಯಗ್ರೋಧ ಅಂದರೆ ಆಲ. ಈ ಐದು ಮರಗಳ ಎಲೆಗಳನ್ನು ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಈ ಐದು ಮರಗಳಿಗೆ ಬೇರೆ ಬೇರೆ ಸಂದರ್ಭದಲ್ಲಿ ಪೂಜೆಯನ್ನೂ ಮಾಡಲಾಗುತ್ತದೆ.
ಹಳೆ ವಿಚಾರ, ಹೊಸ ವಿಚಾರ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಏಕೆಂದರೆ, ಈ ಐದೂ ಮರಗಳ ಕಾಂಡ, ಎಲೆ ಅಥವಾ ಬೇರುಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಮಾವಿನ ಎಲೆಯಲ್ಲಿ ಕೀಟಾಣುಗಳನ್ನು ನಾಶಪಡಿಸುವ, ಅರಳಿ ಎಲೆಗಳಲ್ಲಿ ಗಾಳಿಯನ್ನು ಶುದ್ಧಗೊಳಿಸುವ, ಅತ್ತಿ ಎಲೆ ಅಥವಾ ಕಾಯಿ-ಹಣ್ಣಿನಲ್ಲಿ ನಾನಾ ರೋಗಗಳನ್ನು ಗುಣಪಡಿಸುವ ಗುಣಗಳಿವೆ. ಗಿಡಮೂಲಿಕೆ ಔಷಧ ನೀಡುವವರು ಬಸರೀಮರ ಹಾಗೂ ಆಲದ ಮರದ ಎಲೆ, ಬೇರುಗಳನ್ನು ನಾನಾ ವ್ಯಾಧಿಗಳಿಗೆ ನೀಡುತ್ತಾರೆ. ಈ ಎಲ್ಲ ಮರಗಳು ಉಳಿಯಬೇಕು ಅಂದರೆ ಇವುಗಳನ್ನು ಪೂಜ್ಯ ಭಾವದಿಂದ ನೋಡುವುದೇ ಸರಿಯಾದ ಮಾರ್ಗವಲ್ಲವೇ?
- ಮಹಾಬಲ ಸೀತಾಳಬಾವಿ