ನೀಮ್‌ ಕರೋಲಿ ಬಾಬಾ ಆಶ್ರಮದಲ್ಲಿ ನಾನು ಕಂಡದ್ದೇನು!

Published : Dec 11, 2025, 08:48 PM IST
neem karoli baba

ಸಾರಾಂಶ

ಇತ್ತೀಚೆಗೆ ರಾಜ್‌ ಬಿ ಶೆಟ್ಟಿ ಅವರು ತಮ್ಮ ಮೊಬೈಲ್‌ ಸ್ಕ್ರೀನ್‌ನಲ್ಲಿ ನೀಮ್‌ ಕರೋಲಿ ಬಾಬಾರ ಫೋಟೋ ಸ್ಕ್ರೀನ್‌ ಸೇವರ್‌ ಆಗಿದ್ದದ್ದನ್ನು ತೋರಿಸಿದ್ದರು. ಆದರೆ ಇಲ್ಲೊಬ್ಬ ವ್ಯಕ್ತಿ ನೀಮ್‌ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ ಸನ್ನಿವೇಶವನ್ನು ಹೀಗೆ ಹೇಳಿದ್ದಾರೆ. 

ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಭೇಟಿಯಿಂದ ಜನಪ್ರಿಯ ಯಾತ್ರಾ ಕೇಂದ್ರವನ್ನಾಗಿ ಪರಿವರ್ತನೆಯಾಗುವ ಬಹಳ ಹಿಂದೆಯೇ ನಾನು ನೀಮ್‌ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದೆ. ಅದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವ. ನೈನಿತಾಲ್‌ನಿಂದ ಕೈಂಚಿ ಧಾಮ್‌ಗೆ ಹೋಗುವ ರಸ್ತೆ ಸರಳ ಮತ್ತು ರಮಣೀಯವಾಗಿತ್ತು - ರೋಡೋಡೆಂಡ್ರನ್ ಹೂವು‌ಗಳು ಮತ್ತು ಬೆಟ್ಟಗಳಿಂದ ಆವರಿಸಿದ್ದು, ಕೆಳಗಿನ ಕಣಿವೆಯ ಮನಮೋಹಕ ದೃಶ್ಯಗಳು ಎಂದೂ ಮರೆಯದಂಥವು. ದಾರಿಯಲ್ಲಿ ಕೆಲವೇ ಅಂಗಡಿಗಳು, ಹಣ್ಣುಗಳ ಅಂಗಡಿ, ಒಂದು ಸಣ್ಣ ನರ್ಸರಿ ಮತ್ತು ಪಹಾಡಿ ಮ್ಯಾಗಿ ಮತ್ತು ಜೋಳವನ್ನು ಪೂರೈಸುವ ಸಾಂದರ್ಭಿಕ ಚಹಾ ಅಂಗಡಿಗಳು ಇದ್ದವು. ಡ್ರೈವ್ ಸ್ವತಃ ಪ್ರಶಾಂತ ಪ್ರಾರ್ಥನೆಯಂತೆ ಇತ್ತು.

ಕೆಂಪು ಮತ್ತು ಹಳದಿ ಬಣ್ಣಗಳ ಪೇಂಟಿಂಗ್‌ನಲ್ಲಿ ಕಂಗೊಳಿಸುತ್ತಿದ್ದ ಆಶ್ರಮ, ಅದರ ಮೇಲೆ ಒಂದು ಸಣ್ಣ ಸೇತುವೆ, ಬಿಸಿಲಿಗೆ ಹೊಳೆಯುತ್ತ ಹರಿಯುವ ನದಿಗಳಿಂದ ರಮಣೀಯವಾಗಿದ್ದ ತಾಣವದು. ಸುತ್ತಲಿನ ತಾಜಾ ಗಾಳಿ, ಇನ್ನೊಂದೆಡೆ ಪರ್ವತಗಳ ಕಡೆಯಿಂದ ಹಾದುಬರುವ ಸುಗಂಧ ಭರಿತ ಗಾಳಿಯೊಂದಿಗೆ ಬೆರೆತಯ ಹೋಗುವ ಹರಿಯುವ ನೀರಿನ ಶಬ್ದ. ನಾನು ಈ ಪ್ರವೇಶಿಸುತ್ತಿದ್ದಂತೆ ಪ್ರಶಾಂತ ಅಂಗಳ ಸ್ವಾಗತಿಸಿತು. ಅದು ಒಂದು ಕಾಲದಲ್ಲಿ ಮನೆಯಾಗಿದ್ದು, ನಂತರ ದೇವಾಲಯವಾಗಿ ರೂಪಾಂತರಗೊಂಡಿರಬೇಕು. ಬಲಭಾಗದಲ್ಲಿ ವಿವಿಧ ದೇವರು ಮತ್ತು ದೇವತೆಗಳ ದೇವಾಲಯಗಳಿದ್ದವು, ಮುಂದೆ ನೀಮ್ ಕರೋಲಿ ಬಾಬಾ ಅವರ ದೇವಾಲಯವಿತ್ತು. ಬೆಚ್ಚಗಿನ ಕಂಬಳಿಯಲ್ಲಿ ಹೊದಿಸಲಾದ ಅವರ ಪ್ರತಿಮೆಯತ್ತ ದೃಷ್ಟಿ ನೆಟ್ಟರೆ, ಆ ಯೋಗಿಯ ಕಣ್ಣುಗಳು ನಮ್ಮ ಕಣ್ಣುಗಳೊಂದಿಗೆ ಬೆರೆತು ವಿಶೇಷ ಸಂದೇಶ ರವಾನಿಸಿದಂತೆ ಭಾಸವಾಗುತ್ತಿತ್ತು. ಭಕ್ತರು ಕಂಬಳಿಗಳನ್ನು ಹೊತ್ತುಕೊಂಡು ಬಂದು ಶಾಂತಿ, ಭಕ್ತಿಯಿಂದ ಅವುಗಳನ್ನು ಬಾಬಾರಿಗೆ ಅರ್ಪಿಸಿದರು. ಅದು ಅಲ್ಲಿನ ಪದ್ಧತಿ.

ಹತ್ತಿರದಲ್ಲಿ ಕೆಲವು ಸಣ್ಣ ಕೋಣೆಗಳಿದ್ದವು, ಬಾಬಾ ದೇಹದಲ್ಲಿದ್ದಾಗ ಅಲ್ಲಿ ವಾಸಿಸುತ್ತಿದ್ದರು. ಈಗ ಅವರ ಛಾಯಾಚಿತ್ರಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಅಲ್ಲಿ ಸಂರಕ್ಷಿಸಲಾಗಿದೆ. ಆ ಶಾಂತ ಅಂಗಳದಲ್ಲಿ ಸುಮ್ಮನೇ ಕೂತರೂ ಮನಸ್ಸು ಧ್ಯಾನಸ್ಥವಾಗುತ್ತಿತ್ತು. ನಮಗೆ ಅಲ್ಲಿದ್ದವರು ಕಡಲೆ ಮತ್ತು ಹಲ್ವಾವನ್ನು ನೀಡುತ್ತಿದ್ದರು, ಅವರ ನಡೆಯಲ್ಲೂ ಪವಿತ್ರತೆ ಇತ್ತು. ಯಾವುದೇ ಆತುರವಿಲ್ಲ, ಶಬ್ದವಿಲ್ಲ, ಕೇವಲ ಶಾಂತಿ ಮತ್ತು ಭಕ್ತಿ.

ಜನದಟ್ಟಣೆಯಲ್ಲಿ ಕಳೆದುಹೋದ ಭಕ್ತಿ

ಆದರೆ ಈ ಬಾರಿ ಮಾತ್ರ ದಿಗ್ಭ್ರಾಂತಿಯೇ ಆಗಿ ಬಿಟ್ಟಿತು. 'ಮೇಡಂ, ನೀವು ಬೆಳಿಗ್ಗೆ 6 ಗಂಟೆಯೊಳಗೆ ತಲುಪಬೇಕು, ಇಲ್ಲದಿದ್ದರೆ ಅದು ತುಂಬಾ ಜನದಟ್ಟಣೆಯಾಗಿರುತ್ತದೆ' ಎಂದ ಹೊಟೇಲಿನವರ ಮಾತನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಆದರೆ ಅಲ್ಲಿ ನೋಡಿದರೆ ಎಲ್ಲೆಲ್ಲೂ ಕಾರುಗಳು, ಬೈಕ್‌ಗಳು. ಒಂದು ಕಾಲದಲ್ಲಿ ಸುಂದರ ಅರ್ಧ ಗಂಟೆಯ ಡ್ರೈವ್ ಆಗಿದ್ದ ಇದು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಂಡಿತು. ನಾನು ಅಂತಿಮವಾಗಿ ಬಂದಾಗ, ಮುಖ್ಯ ರಸ್ತೆಯಿಂದ ದೇವಾಲಯದ ದ್ವಾರದವರೆಗೆ ಜನಸಮೂಹವು ಅಂತ್ಯವಿಲ್ಲದೆ ವಿಸ್ತರಿಸಿತ್ತು. ಜನ ಪ್ರಾರ್ಥನೆ ಮಾಡುವ ಬದಲಿಗೆ ವೀಡಿಯೋ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಹುಡುಗ ಹುಡುಗಿ ಹೊಳೆಗೆ ಇಳಿದು ಬಂಡೆಗಳ ಮೇಲೆ ಪೋಸ್‌ ನೀಡಿದರು, ಪೊಲೀಸರು ಅವರನ್ನು ಓಡಿಸುವವರೆಗೂ ಅಲ್ಲೇ ಸರ್ಕಸ್‌ ಮಾಡುತ್ತಿದ್ದರು. ಇಡೀ ಪರಿಸರ ಅವ್ಯವಸ್ಥೆಯಲ್ಲಿ ಕಳೆದುಹೋದಂತೆ ತೋರುತ್ತಿತ್ತು.

ದೇವಾಲಯದ ಒಳಗೆ ನಾನು ತಲೆ ಬಾಗಿ ಪ್ರಾರ್ಥನೆ ಮಾಡಲು ಪ್ರಯತ್ನಿಸಿದೆ, ಆದರೆ ಗಾರ್ಡ್‌ಗಳು ಮುಂದಕ್ಕೆ ಹೋಗಲು ಒತ್ತಾಯಿಸಿದರು. ಹೊರಗೆ ಬರುವಾಗ, ನನ್ನ ಹೃದಯದಲ್ಲಿ ನಿರಾಸೆ, ನೋವು. ಆಧ್ಯಾತ್ಮಿಕ ಜಾಗಗಳೆಲ್ಲ ಹೀಗೆ ಜನಸಂದಣಿಯಿಂದ ಶೋಕಿಯ ಜಾಗವಾಗಿ ಮಾರ್ಪಟ್ಟರೆ ನಿಜ ಆಧ್ಯಾತ್ಮಿಕ ಅನ್ವೇಷಕರಿಗೆ ಜಾಗವೇ ಇರುವುದಿಲ್ಲ ಅಲ್ಲವೇ.. ಇಷ್ಟಾದರೂ ಹೀಗೆ ದೊಂಬಿ ಎಬ್ಬಿಸುವ ಜನರದು ನಂಬಿಕೆಯೋ ಅಥವಾ ಉನ್ಮಾದವೋ ಅರ್ಥವಾಗದೇ ಗೊಂದಲದಲ್ಲಿ ಬಿದ್ದೆ.

PREV
Read more Articles on
click me!

Recommended Stories

ಅಂಜುವ ಮಾತೇ ಇಲ್ಲ, ತಮ್ಮ ಹಣೆಬರಹವನ್ನ ತಾವೇ ಬದಲಾಯಿಸಿಕೊಳ್ಳುವ 4 ರಾಶಿಗಳಿವು
ನಾಳೆ ಡಿಸೆಂಬರ್ 12 ರಂದು ಲಕ್ಷ್ಮಿ ನಾರಾಯಣ ಯೋಗ, ಮೇಷ ಮತ್ತು ಕರ್ಕ ರಾಶಿ ಸೇರಿದಂತೆ 5 ರಾಶಿಗೆ ಅದೃಷ್ಟ