ಪುತ್ತಿಗೆ ಶ್ರೀಗಳ ವಿಶ್ವ ಪರ್ಯಾಯಕ್ಕೆ ಬಾಳೆ ಮಹೂರ್ತದ ನಾಂದಿ!

By Ravi JanekalFirst Published Dec 2, 2022, 2:34 PM IST
Highlights
  • ಪುತ್ತಿಗೆ ಮಠದ ಬಾಳೆ ಮುಹೂರ್ತ
  • 2024 ಜನವರಿಯಲ್ಲಿ ಪುತ್ತಿಗೆ ಪರ್ಯಾಯ
  • ಅನ್ನ ಬ್ರಹ್ಮನ ಆರಾಧನೆ ಹಲವು ವಿಶೇಷ
  • ಪರ್ಯಾಯವೆಂಬ ಅದ್ಭುತ ಆಡಳಿತ ವ್ಯವಸ್ಥೆ

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಡಿ.2) : ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಅನ್ನೋದು ಒಂದು ಅದ್ಬುತ ಆಡಳಿತ ವ್ಯವಸ್ಥೆ. ಸದ್ಯ ಕೃಷ್ಣಾಪುರ ಸ್ವಾಮೀಜಿಗಳ ಮಹತ್ವದ ಪರ್ಯಾಯ ಮಹೋತ್ಸವ ನಡೆಯುತ್ತಿದೆ. ಮುಂದಿನ ಸರದಿ ಪುತ್ತಿಗೆ ಮಠದ್ದು, 2024 ಜನವರಿಯಲ್ಲಿ ನಡೆಯುವ ಈ  ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಯಿತು.

 ವಿದೇಶ ಯಾನದ ಮೂಲಕ ಗಮನಸೆಳೆದಿರುವ ಪುತ್ತಿಗೆ ಶ್ರೀಗಳು ನಾಲ್ಕನೇ ಬಾರಿ ಸರ್ವಜ್ಞಪೀಠಾರೋಹಣಕ್ಕೆ ಸಿದ್ದರಾಗಿದ್ದಾರೆ. ಇದೊಂದು ಶಿಸ್ತುಬದ್ಧ ಆಡಳಿತ ವ್ಯವಸ್ಥೆ. ಎಂಟ್ನೂರು ವರ್ಷಗಳಲ್ಲಿ ಒಬ್ಬ ಯತಿಯೂ ಅಧಿಕಾರ ಬಿಟ್ಟು ಕೊಡೋದಿಲ್ಲ ಬಂಡಾಯವೆದ್ದಿಲ್ಲ.  ನಿಯಮಿತ ಕಾಲಕ್ಕೆ ಸರಿಯಾಗಿ ಕೃಷ್ಣಮಠದ ಆಡಳಿತ, ಅಷ್ಟಮಠಗಳ ನಡುವೆ ಹಸ್ತಾಂತರವಾಗುತ್ತೆ. ಪರ್ಯಾಯ ಮಹೋತ್ಸವ ಎಂದು ಕರೆಯಲಾಗುವ ಈ ಆಡಳಿತ ಹಸ್ತಾಂತರ ಒಂದು ಸಾಂಪ್ರದಾಯಿಕ ಮಾದರಿ ಆಚರಣೆ. 

ಲೋಕ ಕಲ್ಯಾಣಾರ್ಥವಾಗಿ ಲಾಸ್ ಏಂಜಲೀಸ್‌ನಲ್ಲಿ ಮಹಾರುದ್ರಯಾಗ

2024 ರಿಂದ ಪುತ್ತಿಗೆ ಮಠದ ಪರ್ಯಾಯ ಆರಂಭವಾಗಲಿದೆ. ಸರಿ ಸುಮಾರು ಒಂದು ವರ್ಷ ಮುಂಚಿತವಾಗಿ ಈ ಮಹೋತ್ಸವಕ್ಕೆ ಪೂರಕವಾಗಿ ಬಾಳೆ ಮುಹೂರ್ತ ನಡೆಯಿತು. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು 16 ವರ್ಷಗಳ ನಂತ್ರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಮುಂದಿನ ಒಂದು ವರ್ಷಗಳ ಕಾಲ ದೇಶದ ನಾನಾ ತೀರ್ಥಕ್ಷೇತ್ರಗಳನ್ನು ಅವರು ಸಂದರ್ಶಿಸಲಿದ್ದಾರೆ. ಈ ಬಾರಿಯ ತಮ್ಮ ನಾಲ್ಕನೇ ಪರ್ಯಾಯದಲ್ಲಿ ಚಿನ್ನದ ಪಾರ್ಥ ಸಾರಥಿ ರಥ, ಮಧ್ವ ಮಹಾದ್ವಾರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ದೇವರ ಪೂಜೆಗೂ ಬಾಳೆ ಮುಹೂರ್ತಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ದಿನವೂ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವ. ಬಾಳೆಯ ಗಿಡಗಳನ್ನು ನೆಟ್ಟು ಮುಂದಿನ ವರ್ಷಕ್ಕೆ ಬೇಕಾದ ಬಾಳೆ ಎಲೆಗಳನ್ನು ಸಂಗ್ರಹಿಸುವುದು ಉದ್ದೇಶ. 

ಪುತ್ತಿಗೆ ಮಠದಲ್ಲಿ ಪೂಜೆ ಮಾಡಿ, ರಥಬೀದಿಯಲ್ಲಿರು ಅನಂತೇಶ್ವರ, ಚಂದ್ರೇಶ್ವರ ದೇವಸ್ಥಾನ ಸಂದರ್ಶಿಸಿ, ಕೃಷ್ಣ ದೇವರಿಗೂ ಪೂಜೆ ಸಲ್ಲಿಸಲಾಯ್ತು. ಬಳಿಕ ಮೆರವಣಿಗೆಯಲ್ಲಿ ತೆರಳಿ ಬಾಳೆಯ ಗಿಡಗಳನ್ನು ನೆಡುವುದು ಸಂಪ್ರದಾಯ. ಅಷ್ಟಮಠಗಳ ಪ್ರಮುಖರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಭಗವದ್ಗೀತೆ ಪ್ರಚಾರ ಪುತ್ತಿಗೆ ಪರ್ಯಾಯದ ಮಹತ್ವಾಕಾಂಕ್ಷಿ ಧಾರ್ಮಿಕ ಯೋಜನೆಯಾಗಿದೆ. ಈಗಾಗಲೇ ಈ ಯೋಜನೆಗೆ ಚಾಲನೆ ದೊರಕಿದ್ದು, ಕೋಟಿ ಗೀತ ಲೇಖನ ಯಜ್ಞ ನಡೆಸುವ ಮೂಲಕ ವಿಶ್ವ ಪರ್ಯಾಯದ ಸಂಕಲ್ಪ ಮಾಡಿದ್ದಾರೆ. 

ಪುತ್ಯಿಗೆ ಮಠದಿಂದ ಕೋಟಿ ಗೀತಾ ಲೇಖನ ಯಜ್ಞ- ಐದು ತಂಡಗಳ ರಾಜ್ಯ ಪ್ರವಾಸ

ಪುತ್ತಿಗೆ ಶ್ರಿಗಳ ಮೂರನೇ ಪರ್ಯಾಯ ಮಹೋತ್ಸವ ಹಲವು ಕಾರಣದಿಂದ ಗಮನಸೆಳೆದಿತ್ತು. ವಿದೇಶ ಯಾನ ಮಾಡಿದ್ದರು ಅನ್ನೋ ಕಾರಣಕ್ಕೆ ಕೃಷ್ಣ ದೇವರ ಪೂಜೆಯನ್ನು ಇತರ ಮಠಾಧೀಶರು‌ ನಿರಾಕರಿಸಿದ್ದರು. ವಿರೋಧದ ಹೊರತಾಗಿಯೂ ಪುತ್ತಿಗೆ ಶ್ರೀಗಳು ಕೃಷ್ಣಪೂಜೆ ನಡೆಸಿದ್ದರು. ಅವರು‌ ಕೃಷ್ಣ ದೇವರ ವಿಗ್ರಹವನ್ಬು ಸ್ಪರ್ಶಿಸಿದ್ದಾರೆ ಅಥವಾ ಇಲ್ಲ ಅನ್ನೋ ಬಗ್ಗೆ ಜಿಜ್ಞಾಸೆಗಳು‌ ಕೇಳಿಬಂದಿತ್ತು.  ಈ ಬಾರಿ ಪುತ್ತಿಗೆ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿದ್ದು, ಈ ಬಾರಿ ಶಿಷ್ಯನ‌ ಜೊತೆ ಯಾಗಿ ಪರ್ಯಾಯ ನಡೆಸೋದಾಗಿ ಘೋಷಿಸಿದ್ದಾರೆ.

click me!