ವಿಜೃಂಭಣೆಯಿಂದ ಜರುಗಿದ ಶ್ರೀ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ; ಕಣ್ಣು ಹಾಯಿಸಿದಷ್ಟು ಜನವೋ ಜನ!

By Ravi Janekal  |  First Published Dec 2, 2022, 8:29 AM IST

12 ವರ್ಷಗಳ ನಂತರ ಕೋಡಿ ಬಿದ್ದ ನಾಯಕನಹಟ್ಟಿಯ ಐತಿಹಾಸಿಕ ಹಿರೇಕೆರೆಯಲ್ಲಿ ಶ್ರೀ ಕ್ಷೇತ್ರದ ಅವಧೂತ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ  ಸಂಭ್ರಮದಿಂದ ಜರುಗಿತು. ಭಕ್ತಿ ಭಾವದ ಪರವಶ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. 


ವರದಿ: ಕಿರಣ್ ಎಲ್ ತೊಡರನಾಳ್ ‌ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.2) : 12 ವರ್ಷಗಳ ನಂತರ ಕೋಡಿ ಬಿದ್ದ ನಾಯಕನಹಟ್ಟಿಯ ಐತಿಹಾಸಿಕ ಹಿರೇಕೆರೆಯಲ್ಲಿ ಶ್ರೀ ಕ್ಷೇತ್ರದ ಅವಧೂತ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ  ಸಂಭ್ರಮದಿಂದ ಜರುಗಿತು. ಭಕ್ತಿ ಭಾವದ ಪರವಶ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. 

Latest Videos

undefined

ಈ ಹಿಂದೆ  2010 ರಲ್ಲಿ ಹಿರೇಕೆರೆ ತುಂಬಿ ಕೋಡಿ ಬಿದ್ದಿತ್ತು‌. ಆ ವರ್ಷದ ಡಿ.16 ರಂದು ತೆಪ್ಪೋತ್ಸವ ಜರುಗಿಸಲಾಗಿತ್ತು. ಈ ಬಾರಿ  ಉತ್ತಮ ಮಳೆಯಿಂದ ಹಿರೇಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು, ದೈವಸ್ಥರು, ಗುರು ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ಸಾಂಪ್ರದಾಯಿಕ ಜನಪದರ ಹಬ್ಬ:

ಎತ್ತಿನ ಬಂಡಿ, ಟ್ರ್ಯಾಕ್ಟರ್, ಟೆಂಪೋ, ಕಾರು, ಬೈಕ್‌ಗಳಲ್ಲಿ ಚಿತ್ರದುರ್ಗ, ಬಳ್ಳಾರಿ,ದಾವಣಗೆರೆ ಜಿಲ್ಲೆಯ ಲಕ್ಷಾಂತರ ಭಕ್ತರು ತೆಪ್ಪೋತ್ಸವಕ್ಕೆ ಆಗಮಿಸಿ, ತಿಪ್ಪೇರುದ್ರಸ್ವಾಮಿಗಳ ಮಹಿಮೆಯನ್ನು ಕಣ್ಣದುಂಬಿಕೊಂಡರು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಪೌಳಿ(ಡೇರೆ)ಗಳನ್ನು ನಿರ್ಮಿಸಿಕೊಂಡು, ತಾವು ತಂದ ಬುತ್ತಿಯನ್ನು ತಿಂದು, ತಿಪ್ಪೇರುದ್ರಸ್ವಾಮಿಗೆ ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು. 

ಮುಕ್ತಿ ಬಾವುಟ 26 ಲಕ್ಷಕ್ಕೆ ಹರಾಜು, ನಾಯಕನಹಟ್ಟಿ ಜಾತ್ರೆ ಹೀಗಿತ್ತು..!

ಹತ್ತಿ ಮತ್ತು ಬೂರುಗದ ಮರಗಳ ದಿಮ್ಮಿಗಳಿಂದ ತಯಾರಿಸಿದ ಗುರುತಿಪ್ಪೇರುದ್ರಸ್ವಾಮಿ ತೆಪ್ಪದಲ್ಲಿ ನಿಶಾನಿಪಟ, ದೇವಾಲಯದ ನಗಾರಿ, ಪಂಚ‌ ಲೋಹದ ಕಳಸ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಇಟ್ಟು 50ಕ್ಕೂ ಹೆಚ್ಚು ಜನರು ದೊಡ್ಡ ಬಿದಿರಿನ ಗಳಗಳಿಂದ ಒಡ್ಡು ಹಾಕಿ ತೆಪ್ಪ ನಡೆಸಿದರು.

ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇದರ ನೇತೃತ್ವ ವಹಿಸಿದ್ದರು. ರಾಜ್ಯದಲ್ಲಿಯೇ ಅತಿದೊಡ್ಡ ತೆಪ್ಪೋತ್ಸವ ಜನಪದರ ಸಾಂಪ್ರದಾಯಿಕ ಹಬ್ಬವಾಗಿ ಮಾರ್ಪಡು ಆಗಿದೆ. 

ಜಲ ಸಂರಕ್ಷಣೆ, ನವಕಾರ್ಮಿಕ ನೀತಿಗೆ ಮುನ್ನುಡಿ ಬರೆದ ಅವಧೂತ:

ಅವಧೂತ ಪರಂಪರೆಗೆ ಸೇರಿದ ಗುರುತಿಪ್ಪೇರುದ್ರಸ್ವಾಮಿ ನಾಯಕನಹಟ್ಟಿಗೆ ಬಂದು ನೆಲೆಸಿ ಈ ಭಾಗದ ಸಾಮಾನ್ಯ ಜನರ ಸಂಕಷ್ಟಗಳನ್ನು ಪರಿಹರಿಸಿದರು. ಬರಗಾಲ ಹಾಗೂ ನೀರಿನ ಬವಣೆ ಅನುಭವಿಸುತ್ತಿದ್ದ ಪ್ರದೇಶದಲ್ಲಿ ಜಲಸಂರಕ್ಷಣೆ ಮಹತ್ವ ಸಾರಿ ಕೆರೆ ಕಟ್ಟೆ ನಿರ್ಮಿಸಿ ಬಯಲು ಸೀಮೆಯಲ್ಲಿ ಹಸಿರು ನಳನಳಿಸುವಂತೆ ಮಾಡಿದರು. ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿ ಸಮೀಪದಲ್ಲಿ ಹಿರೇಕೆರೆ, ಚಿಕ್ಕಕೆರೆ, ರಾಮಸಾಗರಕೆರೆ, ಭೀಮನಕೆರೆ, ಮನುಮೈನಹಟ್ಟಿ ಹೊಸಕೆರೆ ಸೇರಿದಂತೆ 5 ಕೆರೆಗಳನ್ನು ಕಟ್ಟಿಸಿದರು. ಮಹಾದೇವಪುರ, ಗೌರಿಪುರ, ಗಿಡ್ಡಾಪುರ, ಕುದಾಪುರ, ಕಾಶಿಪುರ ಎಂಬ 5 ಪುರಗಳನ್ನು ನಿರ್ಮಿಸಿದರು.  

ಕೆರೆ ನಿರ್ಮಿಸುವ ವೇಳೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಅನುಸರಿಸಿದ ತಿಪ್ಪೇರುದ್ರಸ್ವಾಮಿಗಳು ಗರ್ಭಿಣಿ ಮಹಿಳೆ ಕೆಲಸಕ್ಕೆ ದ್ವಿಗುಣ ಕೂಲಿ ನೀಡಿದರು. ಇದು ಈಗಿನ ಕಾರ್ಖಾನೆಗಳಲ್ಲಿ ನೀಡುವ ಓಟಿ(ಓವರ್ ಟೈಮ್ ಡ್ಯೂಟಿ) ಕಲ್ಪನೆ ಹೋಲುತ್ತದೆ. ಕಾರ್ಮಿಕ ಶ್ರಮ ಗೌರವಿಸುವ ಮೂಲಕ ಕಾಯಕ ತತ್ವವನ್ನು ಪರಿಪಾಲಿಸಿದರು. ಜನರಲ್ಲಿ ಭಕ್ತಿ ಸಾಮರಸ್ಯ ಮೂಡಿಸಿದ ಅವಧೂತ ತಿಪ್ಪೇರುದ್ರಸ್ವಾಮಿಗಳ ತೆಪ್ಪೋತ್ಸವದಲ್ಲಿ ಜಾತಿ ಭೇದ ಮರೆತು ಜನರು ಪಾಲ್ಗೊಳ್ಳುತ್ತಾರೆ. ಕೃಷಿ, ಪಶುಪಾಲನೆ, ಆಧ್ಯಾತ್ಮ, ಧ್ಯಾನ, ಸಮಾನತೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು.

Chitradurga: ತಿಪ್ಪೇರುದ್ರಸ್ವಾಮಿ ಬೃಹತ್ ರಥೋತ್ಸವ: ಲಕ್ಷಾಂತರ ಮಂದಿ ಭಾಗಿ

17ನೇ ಶತಮಾನದಲ್ಲಿ ನಿರ್ಮಿಸಿದ ನಾಯಕನಹಟ್ಟಿ ಹಿರೇಕೆರೆಯು ಅಣೆಕಟ್ಟು ಮಾದರಿಯಲ್ಲಿದೆ. ಕೆರೆ ಏರಿಯು 1.2 ಕಿ.ಮೀ. ಉದ್ದ ಮತ್ತು 98 ಅಡಿ ಅಗಲ ಇದೆ. 809 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ 610 ಹೆಕ್ಟೇರ್ ಪ್ರದೇಶಕ್ಕೆ ನೀರು ಲಭಿಸುತ್ತದೆ. ಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ಜನರು ತೆಪ್ಪೋತ್ಸವ ನಡೆಸುತ್ತಾರೆ. ಕೆರೆಯಲ್ಲಿ ನೀರಿನ ಸಂಗ್ರಹವಿದ್ದು ಪ್ರತಿ ವರ್ಷವೂ ಕೋಡಿ ಬಿದ್ದರೆ ಮೂರು ವರ್ಷಗಳಿಗೊಮ್ಮೆ ತೆಪ್ಪೋತ್ಸವ ಜರುಗುತ್ತದೆ.

click me!