ದಿಢೀರ್ ಅತಿಥಿ ಎಂಟ್ರಿಗೆ ಮನೆ ಸಜ್ಜುಗೊಳಿಸುವುದು ಹೇಗೆ ಗೊತ್ತಾ?

By Suvarna NewsFirst Published Jan 13, 2020, 6:17 PM IST
Highlights

ಮನೆಗೆ ದಿಢೀರಾಗಿ ಅತಿಥಿಗಳು ಆಗಮಿಸುತ್ತಾರೆ ಎಂಬ ಸುದ್ದಿ ತಿಳಿದ ತಕ್ಷಣ ಮನೆಯೊಡತಿಗೆ ಕಾಡುವ ಮೊದಲ ಪ್ರಶ್ನೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳನ್ನೆಲ್ಲ ಜೋಡಿಸಿಟ್ಟು ಮನೆಯನ್ನು ನೀಟಾಗಿ ಕಾಣುವಂತೆ ಮಾಡುವುದು
ಹೇಗೆ ಎಂಬುದು. ಸ್ವಲ್ಪ ಬುದ್ಧಿ ಓಡಿಸುವ ಜೊತೆಗೆ ಮನೆಯ ಇತರ ಸದಸ್ಯರ ನೆರವು ಪಡೆದರೆ ಸೀಮಿತ ಸಮಯದಲ್ಲೇ ಮನೆ ಚಿತ್ರಣವನ್ನು ಬದಲಾಯಿಸಬಹುದು.

ಇವತ್ತು ಹೇಗಿದ್ದರೂ ಸಂಡೇ, ಆಫೀಸ್‍ಗೆ ರಜೆ. ಕೆಲಸಗಳನ್ನು ನಿಧಾನವಾಗಿ ಮುಗಿಸಿದರಾಯಿತು ಎಂದು ಬೆಳಗ್ಗೆ ಲೇಟಾಗಿ ಎದ್ದಿರುವ ನೀವು, ತಿಂಡಿ ತಿನ್ನುತ್ತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿರುತ್ತೀರಿ. ಟಿವಿಯಲ್ಲಿ ಯಾವುದೋ
ರಿಯಾಲಿಟಿ ಶೋ ನೋಡುತ್ತ ಪತಿ, ಮಕ್ಕಳೊಂದಿಗೆ ಅಲ್ಲೇ ಸ್ವಲ್ಪ ಹೊತ್ತು ಕೂತು ಹರಟುತ್ತಿರುತ್ತೀರಿ. ಅದೇ ಸಮಯಕ್ಕೆ ಸರಿಯಾಗಿ ನಿಮ್ಮ ಪತಿಯ ಅತ್ತೆ ಮಗಳು ಕಾಲ್ ಮಾಡಿ ಕುಟುಂಬ ಸಮೇತ ನಿಮ್ಮನೆಗೆ ಹೊರಟಿರುವುದಾಗಿ
ತಿಳಿಸುತ್ತಾರೆ. ಇವತ್ತು ಆರಾಮವಾಗಿ ರಿಲಾಕ್ಸ್ ಮಾಡುವ ನಿಮ್ಮ ಪ್ಲ್ಯಾನ್ ಆ ಕ್ಷಣಕ್ಕೇ ತಲೆಕೆಳಗಾಗುವ ಜೊತೆಗೆ ಮನೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು ನಿಮ್ಮ ನೆಮ್ಮದಿ ಕೆಡಿಸಿಬಿಡುತ್ತವೆ. ಸ್ವಲ್ಪ ಸಮಯದಲ್ಲೇ
ಅತಿಥಿಗಳು ಮನೆಗೆ ಆಗಮಿಸುತ್ತಾರೆ. ಇಷ್ಟು ಕಡಿಮೆ ಸಮಯದಲ್ಲಿ ಇದನ್ನೆಲ್ಲ ಕ್ಲೀನ್ ಮಾಡೋದು ಹೇಗಪ್ಪಾ ಎಂಬ ಚಿಂತೆ ಕಾಡಲಾರಂಭಿಸುತ್ತದೆ. ಆದ್ರೆ ಕ್ಲೀನ್ ಮಾಡೋದು ಅನಿವಾರ್ಯ. ಇಲ್ಲವಾದ್ರೆ ಇವರೇನಪ್ಪಾ ಮನೇನಾ ಈ
ರೀತಿ ಇಟ್ಟುಕೊಳ್ತಾರೆ ಎಂಬ ಭಾವನೆ ಅತಿಥಿಗಳ ಮನಸ್ಸಿನಲ್ಲಿ ಮೂಡೋದು ಗ್ಯಾರಂಟಿ. ಇಂಥ ಸಂದರ್ಭಗಳಲ್ಲಿ ಟೆನ್ಷನ್ ಮಾಡಿಕೊಳ್ಳುತ್ತ ಟೈಮ್ ವೇಸ್ಟ್ ಮಾಡುವ ಬದಲು ಜಾಣತನದಿಂದ ಯೋಚಿಸಿ ಕೆಲಸ ಮಾಡುವುದು ಅಗತ್ಯ.
ಅತಿಥಿಗಳ ಕಣ್ಣಿಗೆ ಬೀಳುವ ಜಾಗಗಳನ್ನು ಮಾತ್ರ ಕ್ಲೀನ್ ಮಾಡಲು, ನೀಟಾಗಿಡಲು ಮಹತ್ವ ನೀಡಿದರೆ, ಕಡಿಮೆ ಅವಧಿಯಲ್ಲಿ ನೀವು ಈ ಹಿಂದೆಂದೂ ಮಾಡಿರದ ರೀತಿಯಲ್ಲಿ ಮನೆಯನ್ನು ಒಪ್ಪ ಓರಣವಾಗಿ ಕಾಣುವಂತೆ ಮಾಡಬಹುದು. 

ಮನೆ ಕ್ಲೀನಿಂಗ್‍ಗೆ ಇದೇ ರೈಟ್ ಟೈಮ್!

1.ಹಾಲ್‍ಗೆ ಮೊದಲ ಪ್ರಾಶಸ್ತ್ಯ: ನಿಮ್ಮ ಬಳಿ ಟೈಮ್ ತುಂಬಾ ಕಡಿಮೆಯಿದೆ. ಹೀಗಾಗಿ ಅತಿಥಿಗಳ ಕಣ್ಣಿಗೆ ಬೇಗ ಬೀಳುವ ಸ್ಥಳಗಳನ್ನು ಮೊದಲು ಕ್ಲೀನ್ ಮಾಡುವುದು ಅಗತ್ಯ. ಸೋ, ಅತಿಥಿಗಳು ಮೊದಲು ಎಂಟ್ರಿ ಕೊಡುವುದು
ಹಾಲ್‍ಗೆ, ಹೀಗಾಗಿ ಹಾಲ್‍ನಲ್ಲಿರುವ ವಸ್ತುಗಳನ್ನು ಮೊದಲು ನೀಟಾಗಿ ಜೋಡಿಸಿ. ನ್ಯೂಸ್[ಪೇಪರ್‍ಗಳನ್ನು ನಿಗದಿತ ಸ್ಥಳದಲ್ಲಿಡಿ. ಸೋಫಾ, ದಿವಾನ್ ಕಾಟ್ ಕವರ್‍ಗಳನ್ನು ಸರಿಯಾಗಿ ಹಾಕಿಡಿ. ನೆಲದ ಮೇಲೆ ಕಸ ಬಿದ್ದಿದ್ದರೆ ಫಟಾಫಟ್
ಗುಡಿಸಿಬಿಡಿ. ಸಾಧ್ಯವಾದರೆ ಹಾಲ್‍ನ್ನೊಮ್ಮೆ ಒರೆಸಿ.

2.ಅಡುಗೆಮನೆ ಕಟ್ಟೆಗಳನ್ನು ಶುಚಿಗೊಳಿಸಿ: ಅಡುಗೆ ಮನೆಯ ಕಟ್ಟೆ ಮೇಲೆ ಕೊಳೆಯಿದ್ದರೆ ಅದನ್ನು ಒರೆಸಿ. ಸ್ಪೂನ್, ಸೌಟು, ಲೋಟಗಳನ್ನು ಅವುಗಳ ಸ್ಥಳದಲ್ಲಿಡಿ. ಅನಗತ್ಯ ವಸ್ತುಗಳೇನಾದರೂ ಇದ್ದರೆ ಎಲ್ಲವನ್ನೂ ಸ್ಟೋರೇಜ್
ಒಳಗಡೆ ಹಾಕಿ ಅದರ ಬಾಗಿಲು ಮುಚ್ಚಿಡಿ. ಅವರು ಹೋದ ಮೇಲೆ ಅವುಗಳನ್ನು ಸ್ವಸ್ಥಾನದಲ್ಲಿ ಸರಿಯಾಗಿ ಜೋಡಿಸಿಡಬಹುದು. ಸಿಂಕ್ ಕ್ಲೀನ್ ಮಾಡಿ.

3. ಮಕ್ಕಳ ಆಟಿಕೆಗಳನ್ನು ಬಾಕ್ಸ್ವೊಳಗೆ  ತುಂಬಿಸಿ: ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಮನೆ ತುಂಬಾ ಆಟಿಕೆಗಳು ಬಿದ್ದಿರುತ್ತವೆ. ಅವುಗಳನ್ನೆಲ್ಲ ಒಂದು ಬಾಕ್ಸ್ವೊಳಗೆ ತುಂಬಿಸಿಡಿ. ಮಕ್ಕಳ ಕೈಯಿಂದಲೇ ಈ ಕೆಲಸ ಮಾಡಿಸಿ. ಇದರಿಂದ ನಿಮಗೆ ಬೇರೆ ಕೆಲಸಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.

ಚಳಿಗಾಲದಲ್ಲಿ ಬೆಚ್ಚನೆಯ ಗೂಡು ನಿಮ್ಮದಾಗಬೇಕೆ? ಈ ಟಿಪ್ಸ್ ಟ್ರೈ ಮಾಡಿ

4.ಬಟ್ಟೆಗಳನ್ನು ವಾಡ್‍ರೋಪ್ ಒಳ ಸೇರಿಸಿ: ಬೆಡ್ ಮೇಲೆ, ಕುರ್ಚಿಗಳ ಮೇಲೆ ಡ್ರೆಸ್‍ಗಳು ಬಿದ್ದಿರಬಹುದು. ಅವುಗಳನ್ನೆಲ್ಲ ಮಡಚುತ್ತ ಕೂರಲು ಈಗ ಸಮಯವಿರುವುದಿಲ್ಲ. ಹೀಗಾಗಿ ಹೇಗೆ ಸಾಧ್ಯವೋ ಹಾಗೆಯೇ ವಾರ್ಡ್‍ರೋಪ್
ಒಳಗೆ ಸೇರಿಸಿ ಬಾಗಿಲು ಮುಚ್ಚಿಡಿ. ಅತಿಥಿಗಳು ಹೋದ ಬಳಿಕ ಅವುಗಳನ್ನು ಹೊರತೆಗೆದು ನೀಟಾಗಿ ಮಡಚಬಹುದು. ಸದ್ಯಕ್ಕೆ ಈ ಬಟ್ಟೆಗಳ ರಾಶಿ ಅತಿಥಿಗಳ ಕಣ್ಣಿಗೆ ಬೀಳದಂತೆ ಮಾಡಿದರೆ ಸಾಕು.

5.ಬೆಡ್‍ಶೀಟ್ ಸರಿಪಡಿಸಿ: ಬೆಡ್‍ರೂಮ್‍ನಲ್ಲಿರುವ ಕಾಟ್‍ಗಳ ಬೆಡ್‍ಶೀಟ್ ಸರಿಪಡಿಸಿ. ಒಂದು ವೇಳೆ ಈಗಿನ ಬೆಡ್‍ಶೀಟ್ ಕೊಳಕಾಗಿದ್ದರೆ ಅದನ್ನು ತೆಗೆದು ಹೊಸದನ್ನು ಹಾಕಿ. 

6. ವಾಷ್‍ರೂಮ್ ಕ್ಲೀನಾಗಿರಲಿ: ವಾಷ್‍ರೂಮ್‍ನಲ್ಲಿ ಎಲ್ಲವೂ ಕ್ಲೀನಾಗಿದೆಯೋ ಇಲ್ಲವೋ ನೋಡಿ. ಕ್ಲೀನ್‍ಯಿಲ್ಲವೆಂದರೆ ಥಟ್ಟನೆ ಕ್ಲೀನ್ ಮಾಡಿ. ಏರ್ ಪ್ರೆಷನರ್, ಹ್ಯಾಂಡ್ವಾಷ್ ಖಾಲಿಯಾಗಿದ್ದರೆ ಹೊಸದನ್ನು ಇಡಿ.

ಲಿವಿಂಗ್ ರೂಮ್ ಗೋಡೆಯೂ ಮಾತಾಡಬಲ್ಲದು ಗೊತ್ತಾ?

7.ಗಂಡ, ಮಕ್ಕಳ ನೆರವು ಪಡೆಯಿರಿ: ಸಮಯ ಕಡಿಮೆಯಿರುವ ಕಾರಣ ಎಲ್ಲ ಕೆಲಸಗಳನ್ನು ನಿಮ್ಮ ತಲೆ ಮೇಲೆ ಎಳೆದುಕೊಳ್ಳಬೇಡಿ. ಬದಲಿಗೆ ಗಂಡ ಮತ್ತು ಮಕ್ಕಳ ನೆರವು ಪಡೆಯಿರಿ. ಇದರಿಂದ ಅತಿಥಿಗಳು ಹೊಸ್ತಿಲು
ದಾಟುವುದರೊಳಗೆ ಮನೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿಬಿಡಬಹುದು.

click me!