Asianet Suvarna News Asianet Suvarna News

ಚಳಿಗಾಲದಲ್ಲಿ ಬೆಚ್ಚನೆಯ ಗೂಡು ನಿಮ್ಮದಾಗಬೇಕೆ? ಈ ಟಿಪ್ಸ್ ಟ್ರೈ ಮಾಡಿ

ಈ ಚಳಿಗಾಲ ಯಾಕಾದ್ರೂ ಬರುತ್ತಪ್ಪ ಎಂದು ಗೊಣಗುತ್ತಲೇ ದಿನ ಪ್ರಾರಂಭಿಸುವವರಿಗೆ ಮನೆಯೊಳಗಿನ ಚಳಿಯನ್ನು ಹೊರಗೊಡಿಸೋದು ಹೇಗಪ್ಪಾ ಅನ್ನೋದೇ ಚಿಂತೆ. ಮನೆಯೊಳಗೇ ಇರುವ ಕೆಲವು ವಸ್ತುಗಳು ಚಳಿಯಲ್ಲಿ ಮನೆಮಂದಿಗೆ
ಬೆಚ್ಚನೆಯ ಭಾವವನ್ನು ನೀಡಬಲ್ಲವು.

How to keep house warm during winter
Author
Bangalore, First Published Jan 6, 2020, 11:18 AM IST

ಚಳಿಗಾಲದ ಮುಂಜಾನೆ ಕಿಟಕಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದರೂ ಸಂದಿಗೊಂದಿಗಳಿಂದ ಮೈ ಕೊರೆಯುವ ಚಳಿ ಗಾಳಿ ಒಳನುಗ್ಗುತ್ತಿರುತ್ತದೆ. ಬೆಳ್ಳಂಬೆಳಗ್ಗೆ ಹಾಸಿಗೆ ಬಿಟ್ಟೇಳಲು ಒಲ್ಲೆ ಎನ್ನುವ ಮನಸ್ಸನ್ನು ಸಂತೈಸಿ ಕೆಳಗೆ
ಕಾಲಿಟ್ಟರೆ ಇದು ನೆಲವೋ ಇಲ್ಲ ಮಂಜುಗಡ್ಡೆಯೋ ಎಂಬ ಅನುಮಾನ ಮೂಡುತ್ತದೆ. ಮನೆ ಹೊರಗೆ ಹೋಗುವುದಂತೂ ಅಸಾಧ್ಯವಾದ ಮಾತು. ಮನೆಯೊಳಗಡೆಯಾದರೂ ಬೆಚ್ಚಗೆ ಕೂರೋಣವೆಂದರೆ ಅದೂ ಆಗುತ್ತಿಲ್ಲ ಎಂಬ
ಅಸಹಾಯಕತೆ. ಹೀಗಾಗಿ ಸೂರ್ಯನ ಕಿರಣಗಳು ಮನೆಯೊಳಗೆ ನುಗ್ಗಿ ಬಿಸಿಯೇರಿಸಿದರೆ ಸಾಕಪ್ಪ ಎಂದು ಕಾಯುತ್ತಿರುತ್ತೇವೆ. ಆದರೆ, ಕೆಲವೊಂದು ಸರಳ ಹಾಗೂ ಆಸಕ್ತಿಕರ ಟಿಪ್ಸ್ ಅನುಸರಿಸುವ ಮೂಲಕ ಮನೆಯನ್ನು
ಬೆಚ್ಚಗಿರಿಸಬಹುದು.

ಕಿಟಕಿಗೆ ದಪ್ಪನೆಯ ಕರ್ಟನ್ಸ್ ಅಳವಡಿಸಿ: ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳನ್ನು ಎಷ್ಟೇ ಬಿಗಿಯಾಗಿ ಮುಚ್ಚಿದ್ದರೂ ಮನೆ ಬೆಚ್ಚಗಿರುವುದಿಲ್ಲ. ಕಿಟಕಿ ಬಾಗಿಲುಗಳಲ್ಲಿನ ಚಿಕ್ಕಪುಟ್ಟ ರಂಧ್ರಗಳ ಮೂಲಕ ಗಾಳಿ ಒಳನುಸುಳುತ್ತದೆ. ಕಿಟಕಿಗೆ
ದಪ್ಪನೆಯ ಕರ್ಟನ್ಗಳನ್ನು ಅಳವಡಿಸುವುದರಿಂದ ಹೊರಗಿನಿಂದ ಒಳನುಸುಳುವ ಗಾಳಿಯ ತೀವ್ರತೆಯನ್ನು ತಗ್ಗಿಸಬಹುದು. ಜೊತೆಗೆ ಮನೆಯೊಳಗಿರುವ ಬಿಸಿಗಾಳಿ ಹೊರಗೆ ಹೋಗದಂತೆ ತಡೆಯಲು ಸಾಧ್ಯವಾಗುತ್ತದೆ. ಬಿಸಿಲು
ಬಂದ ತಕ್ಷಣ ಕರ್ಟನ್ ಬದಿಗೆ ಸರಿಸುವ ಮೂಲಕ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಿ. ಇದರಿಂದ ಮನೆ ನೈಸರ್ಗಿಕವಾಗಿ ಬೆಚ್ಚಗಾಗುತ್ತದೆ. 

ನೆಲಕ್ಕೆ ಕಾರ್ಪೆಟ್ ಹಾಕಿ: ಚಳಿಗಾಲದಲ್ಲಿ ನೆಲ ಕೂಡ ತಣ್ಣಗಾಗಿರುತ್ತದೆ. ಕಾಲುಗಳನ್ನು ನೆಲದ ಮೇಲಿಡಲು ಅಂಜಬೇಕಾದಂತಹ ಪರಿಸ್ಥಿತಿ ಇರುತ್ತದೆ. ಹೀಗಾಗಿ ನೆಲಕ್ಕೆ ದಪ್ಪನೆಯ ಕಾರ್ಪೆಟ್ ಹೊದಿಸುವುದರಿಂದ ಮನೆಯೊಳಗಡೆ
ನಡೆದಾಡುವಾಗ ಚಳಿಯ ಅನುಭವವಾಗುವುದಿಲ್ಲ. ಜೊತೆಗೆ ರೂಮ್ ಒಳಗಿನ ಉಷ್ಣಾಂಶ ಹೆಚ್ಚಿಸುವಲ್ಲಿಯೂ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. 

ಕಳೆದ ವರ್ಷದ ವೇಸ್ಟ್ ಮುಂದಿನ ವರ್ಷಕ್ಕೆ ಬೇಕಾ? ಮನೆ ಕ್ಲೀನಿಂಗ್‍ಗೆ ಇದೇ ರೈಟ್ ಟೈಮ್!

ಕಿಟಕಿ ಒಳಭಾಗಕ್ಕೆ ಪ್ಲಾಸ್ಟಿಕ್ ಕವರ್ ಅಳವಡಿಸಿ: ಕಿಟಕಿ ಮೂಲಕ ಒಳಬರುವ ಗಾಳಿಯನ್ನು ತಡೆಯಲು ದಪ್ಪನೆಯ ಕರ್ಟನ್ ಬಳಸುವ ಜೊತೆಗೆ ಒಳಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ. ಇದು ಚಳಿ ಗಾಳಿ ಒಳಪ್ರವೇಶಿಸದಂತೆ
ಹಾಗೂ ಒಳಗಿನ ಬಿಸಿ ಗಾಳಿ ಹೊರಹೋಗದಂತೆ ತಡೆಯುವ ಮೂಲಕ ಕೋಣೆಯ ಉಷ್ಣಾಂಶವನ್ನು ನಿಯಂತ್ರಿಸಲು ನೆರವು ನೀಡುತ್ತದೆ.

ಅಡುಗೆಮನೆ ಬೆಚ್ಚಗಿರಿಸುವ ಓವನ್: ಮಹಿಳೆಯರಿಗೆ ಚಳಿಗಾಲದ ಮುಂಜಾನೆ ಬ್ರೇಕ್‍ಫಾಸ್ಟ್ ಸಿದ್ಧಪಡಿಸಲು ಚಳಿ ಅಡ್ಡಿಪಡಿಸುತ್ತಿರುತ್ತದೆ. ಇಂಥ ಸಮಯದಲ್ಲಿ ನೀವು ಓವನ್ ಬಳಸಿ ಏನಾದರೂ ಬೇಕ್ ಮಾಡಿ, ಆ ಬಳಿಕ ಅದರ
ಬಾಗಿಲನ್ನು ತೆರೆದಿಟ್ಟರೆ ಅಡುಗೆ ಮನೆಯ ಉಷ್ಣಾಂಶ ಹೆಚ್ಚಿ ಬೆಚ್ಚಗಾಗುತ್ತದೆ.

ಬಾತ್‍ರೂಮ್ ಡೋರ್ ತೆಗೆದ್ರೆ ರೂಮ್ ಹಾಟ್: ಚಳಿಗಾಲದಲ್ಲಿ ಬಿಸಿ ನೀರಿಲ್ಲದೆ ಸ್ನಾನ ಮಾಡಲು ಸಾಧ್ಯವಿಲ್ಲ ಅಲ್ಲವೆ? ಬಿಸಿ ಬಿಸಿ ನೀರು ನಿಮ್ಮ ಮೈ ಮನವನ್ನು ಹಗುರಾಗಿಸುವುದರ ಜೊತೆಗೆ ರೂಮ್ ಅನ್ನು ಬೆಚ್ಚಗಿರಿಸಬಲ್ಲದು
ಗೊತ್ತಾ? ಅದು ಹೇಗೆ ಅಂತೀರಾ? ಸ್ನಾನದ ಬಳಿಕ ಬಾತ್‍ರೂಮ್ ಡೋರ್ ತೆಗೆದಿಡಿ. ಬಾತ್‍ರೂಮ್ ಒಳಗಿರುವ ಬಿಸಿ ಹಬೆ ರೂಮ್‍ನೊಳಗೆ ಪ್ರವೇಶಿಸುವ ಮೂಲಕ ವಾತಾವರಣದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಮನೆ ಶಿಫ್ಟಿಂಗ್ ತಲೆನೋವಿಗೆ ಪ್ಲ್ಯಾನಿಂಗ್ಯೇ ರಾಮಬಾಣ!...
 

ಬೆಚ್ಚಗಿರಿಸುವ ಸ್ಟೀಮ್ ವೇಪರೈಸರ್: ನೀವು ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯಲು ಸ್ಟೀಮ್ ವೇಪರೈಸರ್ ಬಳಸುತ್ತೀರಿ ತಾನೇ? ಇದನ್ನು ರೂಮ್‍ನ ಉಷ್ಣಾಂಶ ಹೆಚ್ಚಿಸಲು ಕೂಡ ಬಳಸಬಹುದು. ಮಲಗುವ ಮುನ್ನ ಸ್ವಲ್ಪ ಹೊತ್ತು ವೇಪರೈಸರ್ ಹಾಕಿಟ್ಟರೆ ರೂಮ್ ಬೆಚ್ಚಗಾಗುತ್ತದೆ.

ಬೆಡ್‍ಶೀಟ್‍ಗೆ ಹೇರ್ ಡ್ರೈಯರ್ನಿಂದ  ಡ್ರೈ ಮಾಡಿ: ಚಳಿಗಾಲದಲ್ಲಿ ಮಲಗಲು ಹೋದರೆ ಬೆಡ್‍ಶೀಟ್ ಕೂಡ ಐಸ್‍ನಂತೆ ತಣ್ಣಗಿರುತ್ತದೆ. ಮಲಗಿದ ತಕ್ಷಣ ಚಳಿಯ ಅನುಭವವಾಗುತ್ತದೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪ್ರತಿದಿನ ರಾತ್ರಿ
ಮಲಗುವ ಮುನ್ನ ಬೆಡ್‍ಶೀಟ್ ಮೇಲೆ ಹೇರ್ ಡ್ರೈಯರ್ನಿಂದ ಬಿಸಿ ಗಾಳಿ ಹಾಯಿಸಿ. ಇದು ಬೆಡ್‍ಶೀಟ್ ಅನ್ನು ಬೆಚ್ಚಗಾಗಿಸುತ್ತದೆ.

ಮಲಗುವ ಮುನ್ನ ಇಸ್ತ್ರಿ ಹಾಕಿದ ಬಟ್ಟೆ ಧರಿಸಿ: ಕೆಲವೊಮ್ಮೆ ಧರಿಸಿರುವ ಬಟ್ಟೆ ಕೂಡ ತಣ್ಣಗಾದ ಅನುಭವವಾಗುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ಚಳಿಯಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಪಡೆಯಲು ನೈಟ್ ಡ್ರೆಸ್ ಧರಿಸುವ ಮುನ್ನ ಇಸ್ತ್ರಿ
ಹಾಕಿ.

ಜೇಬಿನಲ್ಲಿ ಈ ವಸ್ತುಗಳಿದ್ದರೆ ಅದೃಷ್ಟವೋ ಅದೃಷ್ಟ...
 

ಹೊದಿಕೆಗೆ ಬಿಸಿ ನೀರಿನ ಶಾಖ ನೀಡಿ: ಇದೇನಪ್ಪಾ ಎಂದು ಅಚ್ಚರಿಪಡಬೇಡಿ. ಹೊದಿಕೆಯನ್ನು ಬೆಚ್ಚಗಿರಿಸಲು ಅದರ ಅಡಿ ಭಾಗದಲ್ಲಿ ಬಿಸಿ ನೀರಿನ ಬ್ಯಾಗ್ ಇಡಿ. ಬಿಸಿ ನೀರಿನ ಬ್ಯಾಗ್‍ನಿಂದ ಹೊದಿಕೆ ಮೇಲೆ ಇಸ್ತ್ರಿ ಮಾಡುವ ಮೂಲಕ
ಕೂಡ ಅದನ್ನು ಬೆಚ್ಚಗಾಗಿಸಬಹುದು. 

Follow Us:
Download App:
  • android
  • ios