
ಹಿಂದೂ ಸಂಪ್ರದಾಯದಲ್ಲಿ ಬೆಳಿಗ್ಗೆ ಮನೆ ಬಿಡುವಾಗ ತಂದೆಯ ಕಾಲಿಗೆ ನಮಸ್ಕಾರ ಮಾಡುವ ಅಭ್ಯಾಸ ಹಲವರಲ್ಲಿ ಇದೆ. ಇದು ಕೇವಲ ಒಂದು ಆಚರಣೆ ಅಲ್ಲ, ಒಂದು ಭಾವನೆ ಕೂಡ ಹೌದು. ನಮ್ಮ ಸಮಾಜದಲ್ಲಿ ತಂದೆಯನ್ನು ಮನೆಯ ನೆರಳು, ಆಧಾರ ಮತ್ತು ಶಿಸ್ತಿನ ಸ್ತಂಭ ಎಂದು ನೋಡಲಾಗುತ್ತದೆ. ವಿಶೇಷವಾಗಿ ಹಿಂದೂ ನಂಬಿಕೆಯಲ್ಲಿ ತಂದೆಗೆ ದೇವರ ಸಮಾನ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಸೂರ್ಯನು ತಂದೆಯನ್ನು ಸೂಚಿಸುವ ಗ್ರಹ. ತಂದೆಯೊಂದಿಗೆ ಸಂಬಂಧ ಸಮತೋಲನದಲ್ಲಿದ್ದರೆ ಜೀವನದ ದಾರಿ ಸ್ಪಷ್ಟವಾಗುತ್ತದೆ ಎಂದು ನಂಬಿಕೆ ಇದೆ.
ʼತಂದೆ ಇದ್ದರೆ ಮನೆಗೆ ಛಾವಣಿ ಇದ್ದಂತೆʼ ಎಂಬುದು ಹಿರಿಯರು ಹೇಳುವ ಮಾತು. ಇದರ ಅರ್ಥ, ಮನೆಯ ನಿರ್ಧಾರ, ಜವಾಬ್ದಾರಿ ಮತ್ತು ದಿಕ್ಕು ತೋರಿಸುವ ಪಾತ್ರವನ್ನು ಸಂಪ್ರದಾಯವಾಗಿ ತಂದೆಯೇ ವಹಿಸುತ್ತಿದ್ದರು. ಸೂರ್ಯನು ನಾಯಕತ್ವ ಮತ್ತು ಗೌರವದ ಸಂಕೇತ. ತಂದೆಯೊಂದಿಗೆ ಕಲಹಗಳು ಜೀವನದಲ್ಲಿ ಮುಂದುವರಿಯಲು ಅಡಚಣೆ ತರುವುದು ಖಚಿತ. ತಂದೆಗೆ ಗೌರವ ಸಲ್ಲಿಸುವುದು ಮಗನ/ಳ ಕರ್ತವ್ಯ.
ತಂದೆ ಜೀವಂತವಾಗಿರುವಾಗ ಮಗ ಈ ಕೆಳಗಿನ ಕೆಲಸಗಳನ್ನು ಮಾಡಬಾರದು ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ:
1. ತಂದೆ ಜೀವಂತವಾಗಿರುವಾಗ ತರ್ಪಣ ಅಥವಾ ಪಿಂಡದಾನ ಸ್ವತಃ ಮಾಡುವುದು ಸರಿಯಲ್ಲ. ಸಂಪ್ರದಾಯದ ಪ್ರಕಾರ ಪಿತೃಕರ್ಮಗಳಲ್ಲಿ ಮೊದಲ ಹಕ್ಕು ತಂದೆಗೆ ಇದೆ. ಕಾರಣವಿಲ್ಲದೆ ಮಗನೇ ಮುಂದಾಗಿ ಮಾಡುವುದು ಸರಿಯಲ್ಲ ಎಂದು ಹಿರಿಯರು ಹೇಳುತ್ತಾರೆ. ತಂದೆ ಅಳಿದ ಬಳಿಕ ಅದು ಮಗನ ಪಾಲು.
2. ಮನೆಯ ಪ್ರಮುಖ ಪೂಜೆಯಲ್ಲಿ ತಂದೆಯ ಸ್ಥಾನವನ್ನು ತಾನು ತೆಗೆದುಕೊಳ್ಳುವುದು ತಪ್ಪು. ದೊಡ್ಡ ಹವನ ಅಥವಾ ಕುಟುಂಬ ಪೂಜೆಯಲ್ಲಿ ಮೊದಲ ಸ್ಥಾನ ತಂದೆಗೆ. ಇದು ಅಧಿಕಾರದ ವಿಷಯವಲ್ಲ, ಗೌರವದ ವಿಷಯ. ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕುಟುಂಬದ ಹಿರಿಯ ಯಜಮಾನನ ಹೆಸರು ಮೊತ್ತ ಮೊದಲು. ಉಳಿದವರೆದ್ದೆಲ್ಲಾ ನಂತರ.
3. ಮೀಸೆ ಸಂಪೂರ್ಣ ಕತ್ತರಿಸಿಕೊಳ್ಳುವುದು ಸರಿಯಲ್ಲ ಎಂಬುದೊಂದು ಹಳೆಯ ನಂಬಿಕೆ. ಕೆಲವೆಡೆ ತಂದೆ ಜೀವಂತವಾಗಿರುವಾಗ ಮಗನು ಮೀಸೆ ಸಂಪೂರ್ಣ ತೆಗೆದುಹಾಕಬಾರದು ಎಂಬ ನಂಬಿಕೆ ಇತ್ತು. ಇದು ಕಟ್ಟುನಿಟ್ಟಿನ ನಿಯಮವಲ್ಲ, ಒಂದು ಸಂಕೇತ ಮಾತ್ರ.
4. ಎಲ್ಲ ಕಾರ್ಯಗಳಲ್ಲಿ ತಂದೆಯ ಹೆಸರಿಗಿಂತ ಮೊದಲು ತನ್ನ ಹೆಸರನ್ನು ಮುಂದಿಡುವುದು ಸರಿಯಲ್ಲ. ದಾನ, ಸಮಾಜಸೇವೆ ಅಥವಾ ಕಾರ್ಯಕ್ರಮಗಳಲ್ಲಿ ತಂದೆಯ ಹೆಸರನ್ನು ಮೊದಲು ಉಲ್ಲೇಖಿಸುವುದು ವಿನಯದ ಸಂಕೇತ ಎಂದು ನೋಡಲಾಗುತ್ತದೆ. ಮದುವೆ ಪತ್ರಿಕೆಯಲ್ಲಿ “ಇಂಥವರ ಪುತ್ರ” ಎಂದು ಬರೆಯುವ ಪದ್ಧತಿ ಇದರಿಂದ ಬಂದಿದೆ.
5. ಸಾರ್ವಜನಿಕವಾಗಿ ತಂದೆಯನ್ನು ವಿರೋಧಿಸುವುದು ಸಲ್ಲದು. ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಾರ್ವಜನಿಕವಾಗಿ ತಂದೆಯನ್ನು ಮಧ್ಯೆ ನಿಲ್ಲಿಸಿ ಮಾತಾಡುವುದು ಅಥವಾ ಅವಮಾನಿಸುವುದು ಕುಟುಂಬ ಏಕತೆಯನ್ನು ಕುಂದಿಸುತ್ತದೆ ಎಂದು ನಂಬಿಕೆ.
ನಿಜವಾಗಿಯೂ ಭಾಗ್ಯಕ್ಕೆ ಸಂಬಂಧವಿದೆಯೇ?
ಆಧುನಿಕ ದೃಷ್ಟಿಯಿಂದ ನೋಡಿದರೆ, ಇವು ಜ್ಯೋತಿಷ್ಯಕ್ಕಿಂತ ಮನೋವಿಜ್ಞಾನಕ್ಕೆ ಹೆಚ್ಚು ಸಂಬಂಧಪಟ್ಟಿವೆ. ತಂದೆಯ ಆಶೀರ್ವಾದ ಮತ್ತು ಬೆಂಬಲ ಇದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಭಯ ಕಡಿಮೆಯಾಗುತ್ತದೆ. ಅಂದರೆ, ಗ್ರಹಗಳಿಗಿಂತ ನಮ್ಮ ಮನಸ್ಥಿತಿ ಹೆಚ್ಚು ಪ್ರಭಾವ ಬೀರುತ್ತದೆ.
ಪ್ರತಿ ಸಂಪ್ರದಾಯದ ಮೂಲ ಉದ್ದೇಶ ಕುಟುಂಬದಲ್ಲಿ ಗೌರವ ಮತ್ತು ಸಮತೋಲನ ಉಳಿಸುವುದು. ಇಂದಿನ ಕಾಲದಲ್ಲಿ ಇವುಗಳನ್ನು ಅಂಧನಂಬಿಕೆ ಎಂದು ನೋಡುವುದಕ್ಕಿಂತ, ಸಂಬಂಧಗಳನ್ನು ಕಾಪಾಡುವ ಜ್ಞಾನವಾಗಿ ನೋಡಬಹುದು. ತಂದೆ ಜೀವಂತವಾಗಿರುವಾಗ ಗೌರವ, ವಿನಯ ಮತ್ತು ಸಂವಹನ ಕಾಪಾಡುವುದು – ಇದುವೇ ಈ ನಿಯಮಗಳ ನಿಜವಾದ ಪಾಠ.