ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಕಾಶಿ ವಿಶ್ವನಾಥನ ಹಾಗೂ ರಾಮೇಶ್ವರದ ರಾಮನಾಥನ ದರ್ಶನ ಪಡೆಯಲೇಬೇಕು. ಹಿರಿಯರು ಹಾಗೂ ಪುರಾಣದಲ್ಲಿ ಹೇಳಿದಂತೆ ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ರಾಮೇಶ್ವರದಲ್ಲಿರುವ ರಾಮನಾಥಸ್ವಾಮಿಯೂ ಒಂದು.
- ರಾಮನಾಥಸ್ವಾಮಿ ತಮಿಳುನಾಡಿನ ರಾಮೇಶ್ವರದಲ್ಲಿ ನೆಲೆಸಿದ್ದಾನೆ. 12ನೇ ಶತಮಾನದಲ್ಲಿ ಪಾಂಡ್ಯಂ ಸಾಮ್ರಾಜ್ಯ ಆಳುತ್ತಿದ್ದ ರಾಜರು ಈ ದೇವಾಲಯವನ್ನು ಅಭಿವೃದ್ದಿ ಮಾಡಿದ್ದು, ವೈಷ್ಣವರು ಹಾಗೂ ಶೈವರಿಬ್ಬರೂ ಈ ಕ್ಷೇತ್ರವನ್ನು ಪವಿತ್ರ ಕ್ಷೇತ್ರವೆಂದು ಪರಿಗಣಿಸುತ್ತಾರೆ.
- ಈ ಪುಣ್ಯ ಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಸೀತೆಯನ್ನು ಅಪಹರಿಸಿದ ರಾವಣನನ್ನು ರಾಮ ಈ ಸ್ಥಳದಲ್ಲಿ ಸಂಹರಿಸುತ್ತಾನೆ. ಸಾಮಾನ್ಯವಾಗಿ ಬ್ರಾಹ್ಮಣರು ಅಹಿಂಸಾವಾದಿಗಳು. ಬ್ರಾಹ್ಮಣ ರಾವಣನನ್ನು ಸಂಹರಿಸಿದ ಪಾಪ ಪ್ರಾಯಶ್ಚಿತ್ತಕ್ಕಾಗಿ ರಾಮ ಈ ಸ್ಥಳದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಕೈಲಾಸದಿಂದ ಲಿಂಗವನ್ನು ತರಲು ರಾಮ ಹನುಮಂತನ ಸಹಾಯ ಪಡೆದುಕೊಳ್ಳುತ್ತಾನೆ. ಆದುದರಿಂದ ದೇವಾಲಯದ ಆವರಣದಲ್ಲಿ ಹನುಮಂತನ ದೊಡ್ಡ ಮೂರ್ತಿಯೂ ಇದೆ.
- ಪ್ರತಿಷ್ಠಾಪನೆ ಮಾಡಬೇಕಾದ ಲಿಂಗವನ್ನು ಹನುಮಂತ ತಡವಾಗಿ ತಂದ ಕಾರಣ ರಾಮನು ತನ್ನ ಕೈಯಿಂದಲೇ ಮರಳಿನ ಶಿವ ಲಿಂಗ ಮಾಡಿ, ಪ್ರತಿಷ್ಠಾಪಿಸುತ್ತಾನೆ. ಇದನ್ನು ನೋಡಿದ ಹನುಮಂತ ಕೋಪಿಸಿಕೊಳ್ಳುತ್ತಾನೆ. ಅದಕ್ಕೆ ರಾಮನು ಹನುಮಂತ ತಂದ ವಿಗ್ರಹವನ್ನೂ ಪ್ರತಿಷ್ಠಾಪಿಸುತ್ತಾನೆ. ರಾಮನೇ ಲಿಂಗವನ್ನು ಪ್ರತಿಷ್ಠಾಪಿಸಿದ್ದರಿಂದ ಇದಕ್ಕೆ ರಾಮನಾಥೇಶ್ವರ ಎಂದೇ ಕರೆಯುತ್ತಾರೆ.
- ಈ ದೇವಾಲಯದಲ್ಲಿ 100 ಸ್ತಂಭಗಳಿದ್ದು, ನಾಲ್ಕು ದಿಕ್ಕಿನಲ್ಲಿಯೂ ಬೃಹತ್ ಗೋಪುರಗಳಿವೆ. ದೇವಸ್ಥಾನದ ಪ್ರಾಂಗಣವೂ ವಿಶಾಲವಾಗಿದೆ. ಈ ದೇವಾಲಯದಲ್ಲಿ ಒಟ್ಟು 24 ಕಲ್ಯಾಣಿಗಳಿವೆ ಎಂದರೆ ಎಷ್ಟು ವಿಶಾಲವಾದ ಜಾಗದಲ್ಲಿ ಮಂದಿರವಿದೆ ಎಂಬುದನ್ನು ಊಹಿಸಿಕೊಳ್ಳಬಹುದು.
- ಪ್ರತಿ ದಿನವೂ ವಿಶೇಷ ಪೂಜೆ ನೆಡೆಯಲಿದ್ದು, ಬೆಳಗ್ಗೆ 4 ಗಂಟೆಗೇ ಸ್ಫಟಿಕ ಲಿಂಗ ದರ್ಶನ ಮಾಡಬಹುದು. ಹಾಗೂ ನೀರಿನಲ್ಲಿ ತೇಲುವ 15 ಕೆಜಿ ಕಲ್ಲೂ ಇವೆ. ಪುರಾಣದ ಪ್ರಕಾರ ಇಂಥ ನೀರಿನಲ್ಲಿ ತೇಲುವ ಕಲ್ಲುಗಳನ್ನೇ ಬಳಸಿ, ರಾಮ ಲಂಕೆಗೆ ಹೋಗಲು ರಾಮೇಶ್ವರದಲ್ಲಿ ರಾಮ ಸೇತು ನಿರ್ಮಿಸಿದನಂತೆ.
ದೇವಾಲದ ಸಮಯ : ಬೆಳಗ್ಗೆ 4 ರಿಂದ ಮಧ್ಯಾಹ್ನ 1 ಗಂಟೆಗೆ.
ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಗೆ.