ಕಳೆದ ನಾಲ್ಕು ಸಂಚಿಕೆಯಿಂದ ಸೂರ್ಯಗ್ರಹದ ಮಹತ್ವವನ್ನ ಓದುತ್ತಿದ್ದೀರಿ. ಸೂರ್ಯನ ಪ್ರಭಾವ, ಮಹತ್ವ ಎಷ್ಟು ಹೇಳಿದರೂ ಸಾಲದು. ಇಂಥ ಸೂರ್ಯ ತನ್ನದೇ ಆದ ಪ್ರಭಾವವನ್ನ ಪ್ರತಿಯೊಬ್ಬರಲ್ಲೂ ಬೀರುತ್ತಾನೆ. ಮುಂದೆ ಮುಂದೆ ಈ ಸೂರ್ಯ ಯಾವ ರಾಶಿಯಲ್ಲಿ ಎಂಥ ಫಲ ಕೊಡ್ತಾನೆ ಇತ್ಯಾದಿ ಸಮಸ್ತ ಮಾಹಿತಿಯನ್ನ ತಿಳಿಸುತ್ತೇನೆ.
ಅದಕ್ಕೂ ಮುನ್ನ ಎಲ್ಲ ಗ್ರಹಗಳ ಹಿನ್ನೆಲೆ ತಿಳಿದು ಬಿಡೋಣ. ನಂತರ ಆ ಗ್ರಹಗಳ ಪ್ರಭಾವ, ಆ ಗ್ರಹಗಳ ಫಲವನ್ನು ತಿಳಿದುಕೊಳ್ಳೋಣ. ಈಗ ಚಂದ್ರನ ಕುರಿತಾದ ಮಾಹಿತಿ ಏನು? ಯಾರು ಈ ಚಂದ್ರ? ಅವನ ಶಕ್ತಿ ಏನು? ಅದನ್ನ ತಿಳಿಯೋಣ.
ಯಾರು ಈ ಚಂದ್ರ?
ಚಂದ್ರ ಶಾಂತ ಗ್ರಹ. ಚಂದ್ರನನ್ನು ಮನಸ್ಸಿನ ಅಧಿಪತಿ ಅಂತಾರೆ. ಸೂರ್ಯ ಆತ್ಮಕಾರಕನಾದ್ರೆ ಚಂದ್ರ ಮನೋ ಕಾರಕ. ಅಷ್ಟೇ ಅಲ್ಲ ಚಂದ್ರನೂ ರಾಜ ಗ್ರಹವೇ. ವರಾಹಮಿಹಿರರು ಹೇಳುವ ಹಾಗೆ ‘ರಾಜಾನೌ ರವಿಶೀತಗೂ ಕ್ಷಿತಿಸುತೋ ನೇತಾ ಕುಮಾರೋ ಬುಧ:’ ಎಂಬ ವಿವರಣೆ ನೀಡುವಾಗ ರವಿ-ಚಂದ್ರರು ರಾಜರು ಅಂತ ಉಲ್ಲೇಖಿಸಿದ್ದಾರೆ. ಚಂದ್ರನಿಗೂ ಮಹತ್ವದ ಗುಣಗಳಿದ್ದಾವೆ.
ಯಾರಿಗೆ ಚಂದ್ರನ ಅನುಗ್ರಹವಿದೆಯೋ ಅವರು ಎಂದಿಗೂ ಕೊರಗುವುದಿಲ್ಲ. ನಾವು ಮಾನಸಿಕವಾಗಿ ಪ್ರಶಾಂತರಾಗಿರಬೇಕಾದರೆ ಚಂದ್ರನ ಅನುಗ್ರಹ ಬೇಕೇ ಬೇಕು. ಇಂಥ ಚಂದ್ರನ ಹಿನ್ನೆಲೆ ಏನು? ಯಾರು ಈ ಚಂದ್ರ? ಈ ಚಂದ್ರ ಹೇಗೆ ಮನುಷ್ಯರ ಮೇಲೆ ಪ್ರಭಾವ ಬೀರಬಲ್ಲ ಎಂಬುದನ್ನ ಸೂಕ್ಷ್ಮವಾಗಿ ಗಮನಿಸಿದರೆ, ವಿಶಿಷ್ಟ ಸಂಗತಿಗಳ ಪರಿಚಯವಾಗುತ್ತೆ.
ಚಂದ್ರನ ಮೂಲ ಏನು?
ಚಂದ್ರ ಯಾರು? ಚಂದ್ರನ ಅವತಾರವಾಗಿದ್ದು ಹೇಗೆ ಅಂತ ನೋಡಿದರೆ ಅದರ ಹಿಂದೆ ಒಂದು ಕಥೆ ತೆರೆದುಕೊಳ್ಳತ್ತೆ.
ಅದು ಅತ್ರಿ ಮುನಿಗಳ ಆಶ್ರಮ. ಅತ್ರಿ ಮುನಿಗಳು ತಪ್ಪಸ್ಸಿಗಾಗಿ ತೆರಳಿರುತ್ತಾರೆ. ಇತ್ತ ಆಶ್ರಮದಲ್ಲಿ ಅನಸೂಯೆ ತನ್ನ ನಿತ್ಯ ನೈಮಿತ್ತಕ ಕಾರ್ಯಗಳಲ್ಲಿ ತೊಡಗಿರುತ್ತಾಳೆ. ಆಗ ಆ ಆಶ್ರಮಕ್ಕೆ ಓರ್ವ ಸನ್ಯಾಸಿಯ ಆಗಮನವಾಗತ್ತೆ. ಬಂದ ಸನ್ಯಾನಿಯನ್ನ ಸ್ವಾಗತಿಸಿ ಆತಿಥ್ಯ ಕೊಡುವುದು ಧರ್ಮ ಪದ್ದತಿ. ಅದರಂತೆ ಅನಸೂಯೆ ಆ ಮುನಿಗಳನ್ನು ಆಶ್ರಮಕ್ಕೆ ಸ್ವಾಗತಿಸುತ್ತಾಳೆ. ಅನ್ನಪಾನಾದಿಗಳನ್ನು ಅರ್ಪಿಸಲು ಮುಂದಾಗುತ್ತಾಳೆ. ಆದರೆ ಬಂದ ಮುನಿ ಆತಿಥ್ಯ ಸ್ವೀಕರಿಸುವ ಮುನ್ನ ಒಂದು ಮಾತು ಹೇಳ್ತಾನೆ. ನೋಡು ತಾಯಿ ನಾವು ವ್ರತದಲ್ಲಿದ್ದೇವೆ ಅದರಂತೆ ನಾವು ನಡೆಯಬೇಕು ಮತ್ತು ನಮ್ಮ ಬಳಿ ಇರುವ ವಸ್ತುವನ್ನೇ ನೀನು ಬೇಯಿಸಿ ಕೊಡಬೇಕು. ಅದನ್ನೇ ನಾವು ಆಹಾರವಾಗಿ ಸ್ವೀಕರಿಸುವುದು ಅಂತ ಹೇಳ್ತಾರೆ.
ಹಾಗೆ ಹೇಳುತ್ತಾ ತಮ್ಮ ಬಳಿ ಇದ್ದ ಕಬ್ಬಿಣದ ಕಡಲೆಗಳನ್ನು ಕೊಟ್ಟು ಇದನ್ನ ಬೇಯಿಸಿ ಕೊಡು ಅಂತಾರೆ. ಅನಸೂಯಾ ಮರು ಮಾತನಾಡದೆ ಆ ಕಬ್ಬಿಣದ ಕಡಲೆಗಳನ್ನ ಸ್ವೀಕರಿಸಿ ಒಲೆಯ ಮೇಲಿಟ್ಟು ತನ್ನ ಪತಿ ದೇವರ ಕಮಂಡಲುವಿನಲ್ಲಿದ್ದ ಮಂತ್ರಜಲವನ್ನ ಆ ಪಾತ್ರೆಗೆ ಹಾಕಿ ಅಗ್ನಿ ದೇವನ ಪ್ರಾರ್ಥನೆ ಮಾಡುತ್ತಾಳೆ. ಮಂತ್ರಜಲ, ಮಂತ್ರಶಕ್ತಿಯ ಪ್ರಭಾವಕ್ಕೆ ಕಬ್ಬಿಣ ಬೆಂದು ಮೃದುವಾಗಿಬಿಡುತ್ತೆ. ಬೆಂದ ಕಬ್ಬಿಣದ ಭಕ್ಷ್ಯವನ್ನ ಮುನಿಯ ಮುಂದಿಡುತ್ತಾಳೆ. ಅದನ್ನ ಕಂಡ ಮುನಿಗೆ ದಿಗ್ಭ್ರಮೆ. ಆಗ ಆ ಮುನಿಗಳು ತಮ್ಮ ನಿಜ ಸ್ವರೂಪವನ್ನ ಪ್ರಕಟಿಸಿ ಅಮ್ಮಾ ನಾನು ನಾರದ ಮಹರ್ಷಿ. ನಿನ್ನ ತಪ:ಶಕ್ತಿ ಎಂಥದ್ದು, ಪತಿವ್ರತಾ ಶಕ್ತಿ ಎಂಥದ್ದು ಎಂಬುದನ್ನು ಲೋಕಕ್ಕೆ ತಿಳಿಸುವ ಸಲುವಾಗಿ ಹೀಗೆ ಮಾಡಿದೆ ಅಷ್ಟೆ. ಬೇಸರಿಸಬೇಡ ಎಂದು ಹೇಳಿ ಆಶೀರ್ವದಿಸಿ ಹೊರಡುತ್ತಾರೆ.
ಅಲ್ಲಿಂದ ತೆರಳಿದ ನಾರದು ನೇರ ಹೋಗಿದ್ದು ತ್ರಿಮೂರ್ತಿಗಳ ಪತ್ನಿಯರ ಸ್ಥಳಕ್ಕೆ. ನಾನು ಲೋಕ ಲೋಕಗಳ ಸಂಚಾರ ಮಾಡಿ ಬಂದಿದ್ದೇನೆ. ಆದ್ರೆ ಅಂಥ ಪತಿವ್ರತೆಯನ್ನ ಎಲ್ಲೂ ಕಾಣಲಿಲ್ಲ ಬಿಡಿ. ನಾನೇನೋ ಬ್ರಹ್ಮ ವಿಷ್ಣು ಮಹೇಶ್ವರರ ಶಕ್ತಿಯಂತಿರುವ ನಿಮ್ಮನ್ನೇ ಶುದ್ಧ ಪತಿವ್ರತೆಯರು ಅಂತ ಭಾವಿಸಿದ್ದೆ. ಇಲ್ಲ ಬಿಡಿ. ಅದು ಸುಳ್ಳಾಯ್ತು. ನೀವು ನಂಬಲಿಕ್ಕಿಲ್ಲ ನಾನು ಕಂಡದ್ದು ಮಾತ್ರ ಅದ್ಭುತ ಪತಿವ್ರತೆಯನ್ನ. ಎಂಥ ಪಾತಿವ್ರತ್ಯ, ಎಂಥ ಪತಿ ಭಕ್ತಿ..? ಹೀಗೂ ಪತಿಸೇವೆ ಮಾಡುವ ಸಾಧ್ವಿಯರು ಇರ್ತಾರಾ ಅನ್ನೋ ಕಲ್ಪನೆಯೂ ಇರಲಿಲ್ಲ ಬಿಡಿ. ಸಾಕ್ಷಾತ್ ಪರಬ್ರಹ್ಮ ವಸ್ತುವೇ ಬೆರಗಾಗುವ ಪತಿವ್ರತಾ ಶಕ್ತಿ ಅದು. ಅಬ್ಭಾ ಅಂಥ ಸದ್ಗುಣೆಯನ್ನ ಎಲ್ಲೂ ಕಾಣಲಿಲ್ಲ ಬಿಡಿ. ಅಲ್ಲ ಹೀಗೆ ಹೇಳ್ತೀನಿ ಅಂತ ನೀವು ಬೇಸರ ಮಾಡ್ಕೋಬೇಡಿ. ಆಕೆಯ ಮುಂದೆ ನೀವು... ಬಿಡಿ. ನಾನ್ಯಾಕೆ ಅದನ್ನ ಹೇಳಿ ನಿಮ್ಮ ಮನಸ್ಸನ್ನ ನೋಯಿಸಲಿ ಸರಿ ಬರ್ತೀನಿ. ನಾನು ಬಂದ ಕೆಲ್ಸ ಆಯ್ತು ಅಂತ ಅನ್ನುಸ್ತಾ ಇದೆ ಬರುವೆ ನಮಸ್ಕಾರ ಅಂತ ನಾರದು ಅಸೂಯೆಯ ಬೀಜವನ್ನ ಬಿತ್ತಿ ಅಲ್ಲಿಂದ ಹೊರಡುತ್ತಾರೆ.
ಅಷ್ಟರಲ್ಲಿ ಮೂರೂ ಶಕ್ತಿ ದೇವತೆಗಳು ತಾಳಿ ನಾರದರೇ. ನಮ್ಮನ್ನೂ ಮೀರಿದ ಆ ಪತಿವ್ರತೆ ಯಾರು..? ಎಲ್ಲಿದ್ದಾಳೆ ಆಕೆ ಅಂತ ಒಕ್ಕೊರಲಿನಿಂದ ಕೇಳ್ತಾರೆ. ಆಗ ನಾರದರು ತಡವರಿಸುತ್ತಾ ಅದು ಅದಾ ಆಕೆನಾ..? ಇಂಥ ಆಶ್ರಮದಲ್ಲಿದ್ದಾಳೆ ನನ್ನ ಮೆಲೆ ಏನೂ ಹೇಳಬೇಡಿ ಆಯ್ತಾ ಅಂತ ಹೇಳಿ ಹೊರಟುಬಿಡ್ತಾರೆ.
ಇದಾದ ಮೇಲೆ ನಿಜವಾದ ಕಥೆ ಶುರುವಾಗತ್ತೆ. ಈ ಮೂರೂ ಶಕ್ತಿಯರು ತಮ್ಮ ಗಂಡಂದಿರ ಬಳಿಗೆ ಹೋಗಿ ನೋಡಿ ಸ್ವಾಮಿ ಅಲ್ಲೆಲ್ಲೋ ಭೂ ಲೋಕದಲ್ಲಿ ಅದ್ಯಾರೋ ಪತಿವ್ರತೆ ಇದ್ದಾಳಂತೆ ಅನಸೂಯಾ ಅಂತ ನೀವು ಈಗಲೇ ಹೋಗಿ ಆಕೆಯ ಪತಿವ್ರತೆಯನ್ನ ಭಂಗ ಮಾಡಬೇಕು. ತಕ್ಷಣವೇ ಹೊರಡಬೇಕು ಅಂತ ಅಂಗಲಾಚುತ್ತಾರೆ. ಪಾಪ ಮಡಿದಿಯರ ಮಾತಿಗೆ ಕಟ್ಟುಬಿದ್ದ ತ್ರಿಮೂರ್ತಿಗಳು ಅತ್ರಿ ಮಹರ್ಷಿಗಳಿಲ್ಲದ ಸಮಯವನ್ನು ನೋಡಿಕೊಂಡು ಮಾರುವೇಶದಲ್ಲಿ ಆಶ್ರಮಕ್ಕೆ ಬರ್ತಾರೆ. ಸನ್ಯಾಸಿಗಳಂತೆ ಬಂದಿದ್ದವರು ಅನಸೂಯಾ ಬಳಿ ಬಂದು ಅಮ್ಮಾ ಎಂದು ಕೂಗುತ್ತಾರೆ. ಅಷ್ಟರಲ್ಲಿ ಹೊರಬಂದ ಅನಸೂಯಾ ನಗೆಯಿಂದ ಅವರನ್ನ ಸ್ವಾಗತಿಸಿ ಆತಿಥ್ಯ ಸ್ವೀಕರಿಸಲು ಭಿನ್ನವಿಸುತ್ತಾಳೆ.
ಆಗ ಸನ್ಯಾಸಿಗಳು ಅಮ್ಮಾ ನಾವು ಮಹಾ ಸನ್ಯಾಸಿಗಳು. ನಾವು ಪ್ರಸಾದ ಸ್ವೀಕರಿಸಬೇಕಾದರೆ ನೀನು ಒಂದು ನಿಯಮ ಪಾಲಿಸಬೇಕು. ಇಲ್ಲವಾದರೆ ನಮಗೆ ಆಹಾರವೇ ಸೇರೋದಿಲ್ಲಮ್ಮಾ ಅಂತ ಹೇಳ್ತಾರೆ. ಆಯ್ತು ಹೇಳಿ ಏನು ನಿಮ್ಮ ನಿಯಮ ಅಂತ ಕೇಳ್ತಾಳೆ ಅನಸೂಯ. ಅದಕ್ಕವರು ಒಕ್ಕೊರಲಿಂದ ಅಮ್ಮಾ ನಮಗೆ ನೀನು ಆಹಾರ ಬಡಿಸುವಾಗ ನಗ್ನಳಾಗಿರಬೇಕು ತಾಯಿ. ನಗ್ನ ರೂಪದಲ್ಲಿ ಬಡಿಸಿದ ಆಹಾರವನ್ನಷ್ಟೇ ನಾವು ಸ್ವೀಕರಿಸೋದು ಅಂತಾರೆ. ಆಗ ಅನಸೂಯಾ ಯಾವುದೇ ಮುಜುಗರವಿಲ್ಲದೆ ನಿಸ್ಸಂಕೋಚವಾಗಿ ಅಷ್ಟೇ ತಾನೆ, ಬನ್ನಿ ಒಳಗೆ ಅಂತ ಆ ಮುನಿಗಳನ್ನ ಮನೆಯೊಳಗೆ ಕರೆದೊಯ್ಯುತ್ತಾಳೆ. ಕರೆದು ಭೋಜನ ಸಿದ್ಧತೆ ಮಾಡಲಿಕ್ಕೆ ಒಳ ಹೋಗುತ್ತಾಳೆ.
ಇತ್ತ ಆಶ್ಚರ್ಯದಿಂದ ಕೂತ ತ್ರಿಮೂರ್ತಿಗಳು ಆಕೆ ಬರುವುದನ್ನೇ ಕಾಯ್ತಿರ್ತಾರೆ. ಇನ್ನೇನು ಆಕೆ ನಗ್ನಳಾಗಿ ಬಂದು ಊಟ ಬಡಿಸಬೇಕು. ಅಷ್ಟರಲ್ಲಿ ಆಕೆ ಒಳಗಡೆಯಿಂದ ಬಂದೇ ಬಿಡುತ್ತಾಳೆ. ಹೊರಗೆ ಬಂದವಳನ್ನ ನೋಡಿ ತ್ರಿಮೂರ್ತಿಗಳಿಗೂ ದಿಗ್ಭ್ರಮೆಯಾಗಿತ್ತು. ಆಕೆ ಕಿಂಚಿತ್ತೂ ಹೆದರದೆ ಸನ್ಯಾಸಿ ರೂಪಧಾರಿಗಳ ಮುಂದೆ ಬಂದು ನಿಂತಿದ್ದಳು..! ಮುಂದೆ ಏನಾಯಿತು ಗೊತ್ತಾ..?
( ಮುಂದುವರೆಯುವುದು...)
ಸಂಪರ್ಕ ಸಂಖ್ಯೆ : 9741743565/9164408090