Ramayana: ರಾಮಾಯಣ ಕತೆಯಲ್ಲಿ ಸೀತೆಯ ಗೆಳತಿಯಾಗಿದ್ದಳು ಈ ರಾಕ್ಷಸಿ ತ್ರಿಜಟೆ!

Published : Sep 23, 2025, 09:18 PM IST
trijata

ಸಾರಾಂಶ

Ramayana: ರಾವಣನಿಂದ ಅಶೋಕವನದಲ್ಲಿ ಸೀತೆಯ ಕಾವಲಿಗೆ ನೇಮಕಗೊಂಡಿದ್ದ ತ್ರಿಜಟೆ ಎಂಬ ರಾಕ್ಷಸಿ, ಇತರರಂತೆ ಸೀತೆಯ ಮೇಲೆ ಕ್ರೌರ್ಯ ತೋರಲಿಲ್ಲ. ಬದಲಿಗೆ ಏನು ಮಾಡಿದಳು? 

ನಮ್ಮ ದೇಶದ ಮೊದಲ ಪುರಾಣ ಮಹಾಕಾವ್ಯ ರಾಮಾಯಣ (Ramayana). ಹೋರಾಟ, ಧೈರ್ಯ, ನಿಷ್ಠೆ ಮತ್ತು ಭಕ್ತಿಯ ಕಥೆಗಳಿಂದ ತುಂಬಿದ ಕಾವ್ಯ. ಆದರೆ ಅದರ ಎಲ್ಲಾ ನಾಯಕರು ಯೋಧರು ಅಥವಾ ರಾಜರಲ್ಲ. ಅಂತಹ ಒಂದು ಪಾತ್ರವೆಂದರೆ ತ್ರಿಜಟೆ. ಈಕೆ ಲಂಕೆಯಲ್ಲಿ ವಾಸಿಸುತ್ತಿದ್ದ ಒಬ್ಬಳು ರಾಕ್ಷಸಿ. ರಾಕ್ಷಸರು ಎಂದರೆ ತಾಮಸಿ ಗುಣದವರು, ಕ್ರೂರಿಗಳು, ಸಜ್ಜನರ ವಿರೋಧಿಗಳು ಎಂಬ ಭಾವನೆ ಬರುತ್ತದೆ. ಆದರೆ ಈಕೆ ತನ್ನ ಸಂಬಂಧಿಕರಿಗಿಂತ ಭಿನ್ನವಾಗಿದ್ದಳು. ರಾವಣ ಸೀತೆಯನ್ನು ಕದ್ದು ತಂದು ಅಶೋಕವನದಲ್ಲಿ ಇರಿಸಿ ಆಕೆಯ ಕಾವಲಿಗೆ ತ್ರಿಜಟೆಯನ್ನು ಇಟ್ಟಿದ್ದ. ಅಲ್ಲಿ ಈಕೆ ಸೀತೆಗೆ ದಯೆ ಮತ್ತು ಸಹಾನುಭೂತಿ ತೋರಿಸಿದವಳು. ಕತ್ತಲೆಯಾಗಿರುವ ಸ್ಥಳಗಳಲ್ಲಿಯೂ ಸಹ ಒಳ್ಳೆಯತನ ಅರಳಬಹುದು ಎಂದು ಅವಳ ಕಥೆ ಎತ್ತಿ ತೋರಿಸುತ್ತದೆ.

ತ್ರಿಜಟೆ ಯಾರು? ಈಕೆ ಅಶೋಕ ವಾಟಿಕದಲ್ಲಿ ಸೀತೆಯನ್ನು ಕಾಪಾಡಲು ರಾವಣನಿಂದ ನಿಯೋಜಿಸಲ್ಪಟ್ಟ ವಯಸ್ಸಾದ ರಾಕ್ಷಸಿ. ಇತರ ರಾಕ್ಷಸಿಯರು ರಾವಣನ ಮೆಚ್ಚುಗೆ ಗಳಿಸಲು ಅಲ್ಲಿ ಸೀತೆಯನ್ನು ಅಪಹಾಸ್ಯ ಮಾಡುತ್ತಿದ್ದರು, ಬೆದರಿಸುತ್ತಿದ್ದರು. ಆದರೆ ತ್ರಿಜಟೆ ಬೇರೆ ಸ್ವಭಾವದವಳು. ಕ್ರೌರ್ಯದ ಬದಲು ಅವಳು ಸೀತೆಗೆ ಸಾಂತ್ವನ ಮತ್ತು ಭರವಸೆಯನ್ನು ನೀಡಿದಳು. ಲಂಕೆಯಲ್ಲಿ ಸೀತೆಯ ವನವಾಸದ ಕರಾಳ ದಿನಗಳಲ್ಲಿ ಅವಳ ಉಪಸ್ಥಿತಿಯು ಆಕೆಗೆ ಬೆಳಕಿನ ಕಿರಣವಾಯಿತು.

ತ್ರಿಜಟೆಯ ಕಥೆಯ ಅತ್ಯಂತ ಆಕರ್ಷಕ ಅಂಶವೆಂದರೆ ಅವಳು ಕಂಡ ಕನಸು. ಒಂದು ರಾತ್ರಿ ಅವಳಿಗೆ ಹೀಗೊಂದು ಕನಸು ಬಿತ್ತು- ರಾಮನು ಲಂಕೆಗೆ ಬಂದ, ರಾವಣನೊಂದಿಗೆ ಯುದ್ದ ಮಾಡಿ ಅವನನ್ನು ಕೊಂದ. ರಾಕ್ಷಸ ಕುಲವೇ ನಾಶವಾಯಿತು. ಲಂಕೆಯು ಬೆಂಕಿಗೆ ಆಹುತಿಯಾಯಿತು. ರಾಮನು ವಿಜಯಶಾಲಿಯಾದ. ಸೀತೆ ರಾಮನೊಂದಿಗೆ ಮತ್ತೆ ಒಂದಾಗುವುದನ್ನು ಸಹ ಅವಳು ನೋಡಿದಳು. ತ್ರಿಜಟೆಯು ಈ ಕನಸನ್ನು ಸಿತೆ ಹಾಗೂ ಇತರ ರಾಕ್ಷಸಿಯರೊಂದಿಗೆ ಬಹಿರಂಗವಾಗಿ ಹಂಚಿಕೊಂಡಳು. ಸೀತೆಯ ಪವಿತ್ರತೆ ಮತ್ತು ವಿಧಿಯು ದೈವಿಕ ಬಲದಿಂದ ರಕ್ಷಿಸಲ್ಪಟ್ಟಿದೆ, ಅವಳಿಗೆ ಹಾನಿ ಮಾಡಬಾರದೆಂದು ಎಚ್ಚರಿಸಿದಳು.

ಸೀತೆಯನ್ನು ಕೆಣಕುತ್ತಿದ್ದ ಇತರ ರಾಕ್ಷಸಿಯರಿಗಿಂತ ಭಿನ್ನವಾಗಿ, ತ್ರಿಜಟೆ ಅವಳನ್ನು ಸಮಾಧಾನಪಡಿಸುತ್ತಿದ್ದಳು. ರಾಮನು ಅವಳನ್ನು ರಕ್ಷಿಸಲು ಬರುತ್ತಾನೆ ಎಂದು ಪದೇಪದೇ ಭರವಸೆ ನೀಡುತ್ತಿದ್ದಳು. ಅವಳು ಸೀತೆಗೆ ತನ್ನ ಬಂಧನವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಿದಳು. ಸಹಾನುಭೂತಿಯ ಶಕ್ತಿಯನ್ನು ತೋರಿಸಿದಳು. ಅಧರ್ಮಿಗಳ ನಡುವೆ ವಾಸಿಸುವವರೂ ಸಹ ಧರ್ಮವನ್ನು ಎತ್ತಿಹಿಡಿಯಬಹುದು ಎಂದು ತ್ರಿಜಟೆಯ ವ್ಯಕ್ತಿತ್ವ ನಮಗೆ ನೆನಪಿಸುತ್ತವೆ.

ರಾಮಾಯಣದಲ್ಲಿ ಚಿಕ್ಕ ಪಾತ್ರವಾಗಿದ್ದರೂ, ಸೀತೆಯನ್ನು ಕಾಪಾಡಿಕೊಳ್ಳುವಲ್ಲಿ ತ್ರಿಜಟೆ ನಿರ್ಣಾಯಕ ಪಾತ್ರ ವಹಿಸುತ್ತಾಳೆ. ಅವಳಿಲ್ಲದೇ ಹೋಗಿದ್ದರೆ, ಸೀತೆಯ ನೋವು ಇನ್ನೂ ಹೆಚ್ಚಿರುತ್ತಿತ್ತು. ರಾಮಾಯಣದ ಕೆಲವು ನಂತರದ ಆವೃತ್ತಿಗಳಲ್ಲಿ ತ್ರಿಜಟೆ ತನ್ನ ಭಕ್ತಿಗಾಗಿ ಶ್ರೀರಾಮನಿಂದ ಆಶೀರ್ವದಿಸಲ್ಪಟ್ಟಳು ಮತ್ತು ಲಂಕಾ ವಿನಾಶದ ಸಮಯದಲ್ಲಿ ಬದುಕುಳಿದಳು ಎಂದು ಇದೆ. ಕರುಣೆ ಮತ್ತು ಸದಾಚಾರಕ್ಕೆ ಯಾವಾಗಲೂ ಪ್ರತಿಫಲ ಸಿಗುತ್ತದೆ ಎಂದು ಇದರಿಂದ ಭಾವಿಸಬಹುದು.

ತ್ರಿಜಟೆ ಹುಟ್ಟಿನಿಂದ ರಾಕ್ಷಸಿಯಾಗಿದ್ದಳು, ಆದರೆ ಬುದ್ಧಿಯಿಂದ ಆಕೆ ಧಾರ್ಮಿಕಳಾಗಿದ್ದಳು. ಸೀತೆಯ ಸ್ನೇಹ ಬೆಳೆಸಿಕೊಂಡು ರಾವಣನ ಪತನವನ್ನು ಮುನ್ಸೂಚಿಸುವ ಮೂಲಕ, ತ್ರಿಜಟೆಯು ಕರುಣೆ, ಶಾಂತ ಶಕ್ತಿಯ ಪ್ರತಿರೂಪವಾಗಿ ಲಂಕೆಯಲ್ಲಿ ಕಾಣಿಸಿಕೊಂಡಳು.

 

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 6 ರಂದು ದ್ವಿಪುಷ್ಕರ ಯೋಗ, 5 ರಾಶಿ ಜನರು ಅದೃಷ್ಟವಂತರು, ಲಾಭ ಡಬಲ್
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ