ಕಾಗೆ ಶನಿದೇವರ ವಾಹನವಾದದ್ದು ಹೇಗೆ? ಇಲ್ಲಿದೆ ಕಥೆ

Published : Feb 04, 2026, 08:24 PM IST
shani dev

ಸಾರಾಂಶ

ಶನಿದೇವರು ಮಂದಗತಿಯಲ್ಲಿ ಚಲಿಸುವವರು ಎಂದು ಹೇಳಲಾಗುತ್ತದೆ. ಆದರೆ ವೇಗವಾಗಿ ಹಾರುವ ಗರುಡ, ಗಿಡುಗ ಮುಂತಾದವನ್ನು ಅವರು ವಾಹನವಾಗಿ ಅಂಗೀಕರಿಸಿಲ್ಲ. ಬದಲು ಕಾಗೆಯನ್ನು ವಾಹನವಾಗಿಸಿಕೊಂಡಿದ್ದಾರೆ. ಇದರ ಹಿಂದೆ ಕತೆಗಳಿವೆ. ಈ ಕಥೆಗಳು ಅಹಂಕಾರದ ಪತನ ಮತ್ತು ಶ್ರದ್ಧೆಯ ಮಹತ್ವವನ್ನು ಸಾರುತ್ತವೆ.

ಪೌರಾಣಿಕ ಕಾಲದಲ್ಲಿ ಅಸಾಧಾರಣ ಬುದ್ಧಿಶಕ್ತಿ ಹೊಂದಿದ್ದರೂ ಸ್ವಭಾವದಲ್ಲಿ ವಿಚಿತ್ರನಾದ ಕಾಕಾಸುರ ಎಂಬವನು ಇದ್ದ. ಅಪಾರ ಜ್ಞಾನ ಇದ್ದರೂ, ಅವನ ಅಹಂಕಾರ ಮತ್ತು ಮೋಸದ ಸ್ವಭಾವವೇ ಅವನ ಬದುಕನ್ನು ಶಾಪಗಳ ಸರಣಿಯನ್ನಾಗಿ ಮಾಡಿತ್ತು. ತನ್ನ ಬುದ್ಧಿವಂತಿಕೆಯನ್ನು ತಪ್ಪು ದಾರಿಯಲ್ಲಿ ಬಳಸುತ್ತಿದ್ದ ಕಾಕಾಸುರ ದೇವತೆಗಳಿಗೂ ಸಹ ಕಿರಿಕಿರಿ ಉಂಟುಮಾಡುತ್ತಿದ್ದ.

ಒಂದು ದಿನ ಶನಿದೇವನು ಲೋಕಸಂಚಾರಕ್ಕೆ ಯೋಗ್ಯವಾದ ವಾಹನವನ್ನು ಹುಡುಕುತ್ತಿದ್ದ. ಆನೆ, ಕುದುರೆ, ಸಿಂಹ, ಹುಲಿ, ಗರುಡ ಮೊದಲಾದ ಅನೇಕ ಪ್ರಾಣಿಗಳು “ನಾನೇ ಯೋಗ್ಯ” ಎಂದು ಮುಂದೆ ಬಂದವು. ಆದರೆ ಶನಿಯ ತೀಕ್ಷ್ಣ ದೃಷ್ಟಿಯನ್ನು ಸಹಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಎಲ್ಲರೂ ಭಯದಿಂದ ಹಿಂದೆ ಸರಿದರು.

ಆ ಸಂದರ್ಭದಲ್ಲಿ ಕಾಕಾಸುರ ಮುಂದೆ ಬಂದು, “ನಿನ್ನ ದೃಷ್ಟಿಯನ್ನು ಸಹಿಸುವ ಶಕ್ತಿ ನನಗಿದೆ. ನಾನು ವೇಗವಾಗಿ ಎಲ್ಲೆಂದರಲ್ಲಿ ಹಾರಬಲ್ಲೆ. ನನ್ನನ್ನು ವಾಹನವಾಗಿಸಿಕೊಳ್ಳಿ” ಎಂದು ಶನಿದೇವನಿಗೆ ವಿನಂತಿಸಿದ. ಕರುಣೆಯಿಂದ ಕಾಗೆಯನ್ನು ನೋಡಿದ ಶನಿದೇವನು ಅದನ್ನು ತನ್ನ ವಾಹನವಾಗಿಸಲು ಒಪ್ಪಿದ. ಶನಿಯ ದೃಷ್ಟಿ ಕಾಗೆಯ ಮೇಲೆ ಬಿದ್ದ ತಕ್ಷಣ, ಅದರ ಅಹಂಕಾರ ಕರಗಿತು. ತನ್ನ ಹಿಂದಿನ ಪಾಪಗಳು, ತಪ್ಪುಗಳು ಅರಿವಿಗೆ ಬಂದು ಶನಿದೇವನ ಪಾದಕ್ಕೆ ಶರಣಾದ. ಶನಿದೇವನು ಕಾಗೆಯ ಪಾಪಗಳನ್ನು ಕ್ಷಮಿಸಿ ಅದನ್ನು ತನ್ನ ಶಾಶ್ವತ ವಾಹನವನ್ನಾಗಿ ಮಾಡಿಕೊಂಡರು.

ಲಕ್ಷ್ಮಿಗೆ ಕಾಟ ನೀಡಿದ ಕಾಕಾಸುರ

ಇನ್ನೊಂದು ಪೌರಾಣಿಕ ಕಥೆಯ ಪ್ರಕಾರ, ದೇವಲೋಕದಲ್ಲಿ ಕಾಕಾಸುರ ಎಂಬ ಭಯಾನಕ ರಾಕ್ಷಸನಿದ್ದ. ಅವನು ಎಲ್ಲ ಲೋಕಗಳಿಗೂ ತೊಂದರೆ ಕೊಡುತ್ತಿದ್ದ. ಒಂದು ಬಾರಿ ಮಹಾಲಕ್ಷ್ಮಿ ಸ್ನಾನ ಮಾಡುತ್ತಿದ್ದಾಗ, ಕಾಕಾಸುರ ಅವಳನ್ನು ಒಂದು ಕಣ್ಣಿನಿಂದ ಕದ್ದು ನೋಡಿದ. ಲಕ್ಷ್ಮಿ ಭಯದಿಂದ ಕೂಗಿಕೊಂಡಳು. ಆ ವೇಳೆ ಲೋಕಸಂಚಾರದಲ್ಲಿದ್ದ ನಾರಾಯಣನಿಗೆ ಆ ಕೂಗು ಕೇಳಿ ತಕ್ಷಣ ಅಲ್ಲಿಗೆ ಧಾವಿಸಿದ. ಲಕ್ಷ್ಮಿ ನಡೆದ ಸಂಗತಿಯನ್ನು ವಿವರಿಸಿದಾಗ ನಾರಾಯಣನಿಗೆ ಅಪಾರ ಕೋಪ ಉಂಟಾಯಿತು.

ನಾರಾಯಣನ ಕೋಪದಿಂದ ಹೆದರಿದ ಕಾಕಾಸುರ ರಕ್ಷಣೆಗೆ ಶಿವನ ಬಳಿ ಓಡಿ ಬಂದು ಶರಣಾದ. ಆದರೆ ಶಿವನು, “ನಾರಾಯಣನ ಪತ್ನಿ ಲಕ್ಷ್ಮಿಗೆ ಅವಮಾನ ಮಾಡಿದ ತಪ್ಪಿಗೆ ನಾನು ನಿನ್ನನ್ನು ರಕ್ಷಿಸಲು ಸಾಧ್ಯವಿಲ್ಲ. ಈ ಕೋಪದಿಂದ ನಿನ್ನನ್ನು ಉಳಿಸಬಲ್ಲವನು ಶನಿದೇವ ಮಾತ್ರ” ಎಂದು ತಿಳಿಸಿದ. ತಕ್ಷಣ ಕಾಕಾಸುರ ಶನಿಯ ಬಳಿಗೆ ಹೋಗಿ ಶರಣಾದನು.

ಅಷ್ಟರಲ್ಲಿ ನಾರಾಯಣನು ಅಲ್ಲಿಗೆ ಬಂದು, “ಕಾಕಾಸುರನನ್ನು ನನಗೆ ಒಪ್ಪಿಸು” ಎಂದು ಶನಿದೇವನಿಗೆ ಹೇಳಿದರು. ಶನಿದೇವನು ನಾರಾಯಣನ ಕೋಪವನ್ನು ಶಮನಗೊಳಿಸಿ, ಕಾಕಾಸುರನಿಗೆ ಪ್ರಾಯಶ್ಚಿತ್ತ ವಿಧಿಸಿದರು. “ನಿನ್ನ ಕಾಕದೃಷ್ಟಿಯಿಂದ ಮಾಡಿದ ತಪ್ಪಿಗೆ ನಿನ್ನ ಒಂದು ಕಣ್ಣನ್ನು ಕಿತ್ತು ವಿಷ್ಣುವಿನ ಪಾದದ ಕೆಳಗೆ ಇಡಬೇಕು” ಎಂದರು. ಕಾಕಾಸುರ ಹಾಗೆಯೇ ಮಾಡಿ ತನ್ನ ಒಂದು ಕಣ್ಣನ್ನು ಕಳೆದುಕೊಂಡನು.

ಅಂದಿನಿಂದ ಕಾಗೆಗೆ ಒಂದು ಕಣ್ಣು ಮಾತ್ರ ಉಳಿಯಿತು. ಅದಕ್ಕೇ “ಒಕ್ಕಣ್ಣಿನ ಕಾಗೆ” ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ. ನಾರಾಯಣನ ಕೋಪಕ್ಕೆ ಸದಾ ಭಯಪಟ್ಟ ಕಾಕಾಸುರ, ಶನಿದೇವನ ವಾಹನವಾಗಿ ಉಳಿಯುವುದೇ ತನ್ನ ರಕ್ಷಣೆಯ ಮಾರ್ಗ ಎಂದು ತಿಳಿದುಕೊಂಡ. ಶನಿದೇವನು ಕಾಕಾಸುರನನ್ನು ಕಾಗೆಯ ರೂಪದಲ್ಲಿ ತನ್ನ ವಾಹನವನ್ನಾಗಿ ಮಾಡಿಕೊಂಡರು. ಅದಕ್ಕಾಗಿಯೇ ಇಂದಿಗೂ ಶನಿದೇವನ ಪ್ರತಿಮೆಗಳ ಬಳಿ ಕಾಗೆಯ ರೂಪವನ್ನು ಕಾಣಬಹುದು.

ಈ ಕಥೆಗಳು ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತವೆ. ಎಷ್ಟೇ ಬುದ್ಧಿವಂತಿಕೆ ಇದ್ದರೂ ಅಹಂಕಾರ ಇದ್ದರೆ ಅದು ಪತನಕ್ಕೆ ಕಾರಣವಾಗುತ್ತದೆ. ಕಾಕಾಸುರನ ಅಪಾರ ಜ್ಞಾನವೂ ಅವನ ಅಹಂಕಾರದಿಂದಲೇ ನಾಶವಾಯಿತು. ಶನಿಯ ದೃಷ್ಟಿ ಕಠಿಣವಾದರೂ, ಅದು ಶುದ್ಧೀಕರಣಕ್ಕೆ ಕಾರಣವಾಗುತ್ತದೆ. ಸತ್ಯ, ನಿಷ್ಠೆ, ಸೇವಾಭಾವನೆ ಮತ್ತು ತ್ಯಾಗ ಹೊಂದಿರುವವರಿಗೆ ಶನಿದೇವ ಎಂದಿಗೂ ಹಾನಿಕಾರಕನಲ್ಲ. ಶನಿಯ ವಾಹನವಾದ ಕಾಗೆ ಇಂದು ಬುದ್ಧಿವಂತಿಕೆ, ತಾಳ್ಮೆ ಮತ್ತು ಶ್ರದ್ಧೆಯ ಸಂಕೇತವಾಗಿ ಗೌರವ ಪಡೆಯುತ್ತಿದೆ.

PREV
Read more Articles on
click me!

Recommended Stories

Date of Birth: ನೀವು ಹುಟ್ಟಿದ ದಿನಾಂಕಕ್ಕೂ, ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗೂ ಇದೆ ಸಂಬಂಧ!
ಮೃಗಶಿರ ನಕ್ಷತ್ರದಲ್ಲಿ ಶುಕ್ರ ಸಂಚಾರ, ಈ 3 ರಾಶಿಗೆ ಹೆಚ್ಚಿದ ಸಂತೋಷ ಮತ್ತು ಸಮೃದ್ಧಿ