ದೀಪಾವಳಿ ಆರಂಭದಲ್ಲೇ ಈ ರಾಶಿಗೆ ಆಘಾತ

By Suvarna News  |  First Published Oct 29, 2024, 6:33 PM IST

ಬಹಳ ವರ್ಷಗಳಿಂದ ಕಷ್ಟ ಅನುಭವಿಸುತ್ತಿರುವ ರಾಶಿಗಳಿಗೆ ಈ ದೀಪಾವಳಿಯಿಂದ ಒಳ್ಳೇ ಫಲಗಳು ದೊರೆತರೆ, ಇಷ್ಟು ಕಾಲ ಖುಷಿಯಾಗಿದ್ದ ರಾಶಿಗಳು ದುಃಖ ಅನುಭವಿಸಬೇಕಾಗಿ ಬರಬಹುದು. 


ಲೇಖಕರು: ಶ್ರೀಕಂಠಶಾಸ್ತ್ರಿ, ಜ್ಯೋತಿಷ್ಯರು

ನವೆಂಬರ್ 2 ರಿಂದ ಕಾರ್ತಿಕ ಮಾಸ ಪ್ರಾರಂಭ. ದೀಪಾವಳಿ ಬೆಳಕಿನ ಹಬ್ಬ. ನಮ್ಮ ಮುಂದಿನ ಹಾದಿಯನ್ನು ದೀಪದ ಸಹಾಯದಿಂದಲೇ ಕ್ರಮಿಸಿದರೆ ದಾರಿಯಲ್ಲಿರುವ ಕಲ್ಲು-ಮುಳ್ಳುಗಳು ಗೋಚರಿಸುತ್ತವೆ. ಹಾಗಾಗಿ ಎಚ್ಚರದಿಂದ ಹೆಜ್ಜೆ ಇಡಲು ದೀಪದ ಸಹಾಯ ಬೇಕು. ಕಾಣುವ ಹಾದಿಯನ್ನು ದೀಪದ ಮೂಲಕ ದಾಟಿ ಕೊಳ್ಳಬಹುದು. ಆದರೆ ಕಾಣದ ಹಾದಿಯನ್ನು ದಾಟಲಿಕ್ಕೆ ವಿಶೇಷ ಬೆಳಕು ಬೇಕಾಗುತ್ತದೆ. ಆ ಬೆಳಕೇ ಜ್ಯೋತಿಷ. ಜ್ಯೋತಿಷವೆಂದರೆ ಬೆಳಕು. ಈ ಬೆಳಕಿನ ಸಹಾಯದಿಂದ  ಮುಂದಿನ ಯುಗಾದಿವರೆಗೆ ಅಂದರೆ ಮಾರ್ಚ್ 29 ರವರೆಗೆ ನಮ್ಮದಾರಿ ಹೇಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡೋಣ.

ಈ ನಾಲ್ಕು ತಿಂಗಳ ಅಂತರದಲ್ಲಿ ರವಿ, ಚಂದ್ರ, ಕುಜ. ಬುಧ, ಶುಕ್ರರ ಸ್ಥಾನ ಪಲ್ಲಟಗಳನ್ನು ಗಮನಿಸುತ್ತೇವೆ. ಮಾರ್ಚ್ 29 ರಂದು ಶನೈಶ್ಚರನ ಸ್ಥಾನ ಬದಲಾವಣೆ ಕಾಣುತ್ತೇವೆ. ಈ ಎಲ್ಲ ಗ್ರಹಗಳ ಸ್ಥಾನ ಪಲ್ಲಟದಿಂದ ನಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಿದ್ದಾವೆ? ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು, ಯಾವ ಪರಿಹಾರದಿಂದ ಕಷ್ಟ ದಾಟಲಿಕ್ಕೆ ಸಾಧ್ಯ? ಗಮನಿಸೋಣ.

Tap to resize

Latest Videos

undefined

ಮೇಷ - ಈ ವಾರದ ಆದಿಯಲ್ಲಿ ನಿಮ್ಮ ರಾಶ್ಯಧಿಪತಿ ಕುಜ ಕರ್ಕ ರಾಶಿಯನ್ನು ಪ್ರವೇಶಿಸುವುದರಿಂದ ವಿಸುಹೃನ್ಮಾತೃಕ್ಷೋಣಿ ಸುಖಾಲಯ ವಾಹನ: ಎಂಬ ಶಾಸ್ತ್ರ ವಚನದಂತೆ ತಾಯಿ, ಬಂಧುಗಳಲ್ಲಿ ಕಲಹದ ವಾತಾವರಣ. ವಾಹನ ಅಪಘಾತಗಳಾಗುವ ಸಾಧ್ಯತೆ ಹೆಚ್ಚು. ನಿವೇಶನ, ಗೃಹ ಸಂಬಂಧಿ ವಿಚಾರಗಳಿಗೆ ಕೋರ್ಟು ಕಚೇರಿ ಅಲೆದಾಟ ಹೆಚ್ಚಾಗಲಿದೆ. ನೀರಿನ ಕಂಟಕಗಳೂ ಹೆಚ್ಚಬಹುದು. ಜನವರಿ ಅಂತ್ಯದವರೆಗೆ ಹೆಚ್ಚಿನ ಎಚ್ಚರವಹಿಸಿ. ಉಳಿದಂತೆ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವೃತ್ತಿಯಲ್ಲಿ ವಿಶೇಷ ಅನುಕೂಲ ಉಂಟಾಗಲಿದೆ. ಸ್ತ್ರೀಯರಿಗೆ ಹೆಚ್ಚಿನ ಗೌರವಗಳು ದೊರೆಯಲಿವೆ. ಫ್ರೆಬ್ರವರಿ ಪ್ರಾರಂಭದಲ್ಲಿ ನಿಮ್ಮ ಸಹೋದರರಲ್ಲಿ ಕಿರಿಕಿರಿ ಉಂಟಾಗಲಿದೆ. ಭಯದ ವಾತಾವರಣ ಇರಲಿದೆ. ಆದರೆ ಕಲಾವಿದರಿಗೆ ಹೆಚ್ಚಿನ ಅನುಕೂಲವಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಸರ್ಕಾರಿ ನೌಕರಿಯಲ್ಲಿರುವವರಿಗೆ ಹೆಚ್ಚಿನ ಅನುಕೂಲಗಳುಂಟಾಗಲಿವೆ. ಪೋಲೀಸ್, ಸೇನೆಯಲ್ಲಿರುವವರಿಗೆ ಹೆಚ್ಚಿನ ತೊಡಕುಗಳಿವೆ. ಮಾರ್ಚ್ ಕೊನೆಯಲ್ಲಿ ಶನೈಶ್ಚರ ಮೀನ ರಾಶಿಗೆ ಬಂದಾಗ ಸಾಡೇಸಾತ್ ಶನಿ ಕಾಟ ಪ್ರಾರಂಭವಾಗಲಿದೆ. ಅಲ್ಲಿಂದ ನಿಮ್ಮ ಜೀವನ ಸ್ವಲ್ಪ ಶೋಚನೀಯವಾಗಬಹುದು. ಆರೋಗ್ಯದಲ್ಲಿ ಏರುಪೇರಾಗಬಹುದು. ವೃತ್ತಿಯಲ್ಲಿ ಸ್ಥಾನಚ್ಯುತಿಯಾಗಬಹುದು. ಕಾಲಿನ ಬಾಧೆಗಳು ಕಾಣಿಸಿಕೊಳ್ಳಲಿವೆ. ಜಾತಕದಲ್ಲಿ ಶನೈಶ್ಚರ ಉತ್ತಮ ಸ್ಥಾನದಲ್ಲಿದ್ದರೆ ಭಯಪಡುವ ಅಗತ್ಯವಿಲ್ಲ.  

ಪರಿಹಾರ - ಕುಕ್ಕೆ ಕ್ಷೇತ್ರದರ್ಶನ ಹಾಗೂ ಶಿವ ಸನ್ನಿಧಾನ ದರ್ಶನ ಮಾಡಿ
ಅದೃಷ್ಟ ಸಂಖ್ಯೆ 1, 5 ಹಾಗೂ 9
ಬಣ್ಣ - ಹವಳದ ಬಣ್ಣ
ರತ್ನ - ಹವಳ, ಮಾಣಿಕ್ಯ

ವೃಷಭ - ವ್ಯಯಾಧಿಪತಿಯಾದ ಕುಜ ಗ್ರಹ ದೀಪಾವಳಿ ಪ್ರಾರಂಭದಲ್ಲಿ ಸಹೋದರ ಸ್ಥಾನಕ್ಕೆ ಹೋಗುವುದರಿಂದ ಸಹೋದದರರಲ್ಲಿ ಅಸಮಾಧಾನ ಉಂಟಾಗಲಿದೆ. ಧೈರ್ಯ ಪರಾಕ್ರಮಗಳು ಉಂಟಾಗಲಿದೆ. ಗಂಟಲು-ಕಿವಿ ಸಮಸ್ಯೆಗಳು ಎದುರಾಗಬಹುದು. ಉಳಿದಂತೆ ವಸ್ತ್ರ-ಹಾಲು-ಹೈನು ಕ್ಷೇತ್ರದವರಿಗೆ ಹೆಚ್ಚಿನ ಅನುಕೂಲವಿದೆ. ಕಲಾವಿದರಿಗೆ ಅನುಕೂಲವಿದೆ. ವೃತ್ತಿಯಲ್ಲಿ ವಿಶೇಷ ಅನುಕೂಲಗಳು ಉಂಟಾಗಲಿವೆ. ಕಬ್ಬಿಣ,ಮರಳು, ಸೀಮೆಂಟ್, ಗ್ರಾನೈಟ್ ವ್ಯಾಪಾದಲ್ಲಿ ಲಾಭ ಬರಲಿದೆ. ವಿದ್ಯಾರ್ಥಿಗಳಿಗೆ ಸಾಧಾರಣ ಫಲ. ಔಷಧ ವ್ಯಾಪಾರದಲ್ಲಿ ಹೆಚ್ಚಿನ ಅನುಕೂಲ. ರಾಸಾಯನಿಕ ಕ್ಷೇತ್ರದವರಿಗೆ ಲಾಭ. ವಿದೇಶ ವಹಿವಾಟಿನಿಂದ ಅನುಕೂಲವಿದೆ. ಷೇರು ವ್ಯಾಪಾರದಲ್ಲಿ ಲಾಭ ಕಾಣಲಿದ್ದೀರಿ. ಮಾರ್ಚ್ ನಂತರ ಶನೈಶ್ಚರ ಬದಲಾವಣೆಯಿಂದ ನಿಮ್ಮ ಬದುಕು ಉನ್ನತ ಸ್ತರಕ್ಕೆ ಹೋಗಲಿದೆ. ವಿದೇಶ ವಹಿವಾಟಿನಿಂದ ಅಧಿಕ ಲಾಭ ಬರಲಿದೆ. ನಿಮ್ಮ ವೃತ್ತಿಯಲ್ಲೂ ಬಡ್ತಿ, ವಿಶೇಷ ಅನುಕೂಲಗಳನ್ನು ಕಾಣಲಿದ್ದೀರಿ. ದಾಂಪತ್ಯ ಜೀವನ ಸ್ವಲ್ಪ ಮಂಕಾಗಲಿದೆ.

ಪರಿಹಾರ - ಪಳನಿ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ, ಲಕ್ಷ್ಮೀನಾರಾಯಣರ ಆರಾಧನೆ ಮಾಡಿ
ಅದೃಷ್ಟ ಸಂಖ್ಯೆ 5, ಹಾಗೂ 6
ಬಣ್ಣ - ಬಿಳಿ ಬಣ್ಣ
ರತ್ನ - ವಜ್ರ ಹಾಗೂ ನೀಲ

ಮಿಥುನ - ದೀಪಾವಳಿ ಪ್ರಾರಂಭದಲ್ಲಿ ನಿಮ್ಮ ಬದುಕಿಗೆ ಒಂದು ಆಘಾತ ಅಪ್ಪಳಿಸಲಿದೆ. ಕಣ್ಣು, ಹಣ, ವಿದ್ಯೆ, ಕುಟುಂಬ ವಿಚಾರಗಳಲ್ಲಿ ಎಚ್ಚರವಹಿಸಬೇಕು. ಬೆಂಕಿ ಸಂಬಂಧಿ ತೊಂದರೆಗಳುಂಟಾಗಲಿವೆ. ಒರಟು ಮಾತಿನಿಂದ ಬಾಂಧವ್ಯಗಳು ಅಳಿಸಿಹೋಗಲಿವೆ. ಮಾತಿನ ಮೇಲೆ ನಿಗಾವಹಿಸಿ. ವಿದ್ಯಾರ್ಥಿಗಳು ಸಹವಾಸದಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚು. ಜನವರಿ ಅಂತ್ಯದವರೆಗೆ ತುಂಬಾ ಎಚ್ಚರವಾಗಿರಿ. ಉಳಿದಂತೆ ಸಂಗಾತಿ ವಿಚಾರದಲ್ಲಿ ಅಸಮಾಧಾನ. ವೃತ್ತಿಯಲ್ಲಿ ಶ್ರಮ ಹೆಚ್ಚಲಿದೆ. ಆದಾಯ ಹೆಚ್ಚಲಿದೆ. ವಸ್ತ್ರ-ಹರಳು ವ್ಯಾಪಾರದಲ್ಲಿ ಲಾಭ. ಉನ್ನತ ಶಿಕ್ಷಣದವರಿಗೆ ಹೆಚ್ಚಿನ ಅನುಕೂಲ. ತಂದೆ-ಮಕ್ಕಳ ಬಾಂಧವ್ಯ ವೃದ್ಧಿ. ಆರೋಗ್ಯ ವ್ಯತ್ಯಾಸವಾಗಲಿದೆ. ಶಿಕ್ಷಣ ಕ್ಷೇತ್ರದವರಿಗೆ ಸ್ವಲ್ಪ ಕಿರಿಕಿರಿ. ಮಾರ್ಚ್ ವೇಳೆಗೆ ವೃತ್ತಿಯಲ್ಲಿ ವಿಶೇಷ ಅನುಕೂಲಗಳುಂಟಾಗಲಿವೆ. ಕನ್ಸ್ಟ್ರಕ್ಷನ್ ಕ್ಷೇತ್ರವರಿಗೆ ಹೆಚ್ಚಿನ ಅನುಕೂಲ. ಶ್ರಮಜೀವಿಗಳಿಗೆ ಹೆಚ್ಚಿನ ಅನುಕೂಲವಿದೆ.

ಪರಿಹಾರ : ದುರ್ಗಾ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ
ಅದೃಷ್ಟ ಸಂಖ್ಯೆ - 3 ಹಾಗೂ 5
ಬಣ್ಣ - ಹಸಿರು ಬಣ್ಣ
ರತ್ನ - ಪಚ್ಚೆ

ಕರ್ಕಟಕ - ಈ ಬಾರಿಯ ದೀಪಾವಳಿ ನಿಮ್ಮ ಪಾಲಿಗೆ ಅನೇಕ ಸವಾಲುಗಳನ್ನು ತರಲಿದೆ. ವೃತ್ತಿಯಲ್ಲಿ ಸ್ವಲ್ಪ ಶ್ರಮ ಹೆಚ್ಚಾಗಲಿದೆ. ಅನಗತ್ಯ ಕಿರಿಕಿರಿಗಳು ನಿಮ್ಮನ್ನು ಬಾಧಿಸಲಿವೆ. ಬೆಂಕಿ-ಲೋಹ ಕ್ಷೇತ್ರದವರಿಗೆ ಸಮಸ್ಯೆಗಳು ಎದುರಾಗಲಿವೆ. ಮುಖಕ್ಕೆ ಪೆಟ್ಟು ಬಿದ್ದು, ದೇಹ ತರಚುವ ಸಾಧ್ಯತೆ ಇದೆ. ವೃತ್ತಿ ಸ್ಥಳದಲ್ಲಿ ಎಚ್ಚರವಹಿಸಿ. ಉಳಿದಂತೆ ಬಂಧು-ಸ್ನೆಹಿತರಿಂದ ಹೆಚ್ಚಿನ ವ್ಯಯ ಉಂಟಾಗಲಿದೆ. ಕಲಾವಿದರಿಗೆ ಹೆಚ್ಚಿನ ಅನುಕೂಲ. ಜನವರಿ ನಂತರ ನಿಮಗೆ ಸ್ವಲ್ಪ ಅಭಿವೃದ್ಧಿಯ ಕಾಲ. ದೈವಾನುಕೂಲದಿಂದ ಕಷ್ಟಗಳು ಕಡಿಮೆಯಾಗಲಿವೆ. ಕೃಷಿ-ಪುಷ್ಪ-ಫಲ ವ್ಯಾಪಾರದಲ್ಲಿ ವಿಶೇಷ ಲಾಭ ಬರಲಿದೆ. ಸ್ತ್ರೀಯರಿಗೆ ಹೆಚ್ಚಿನ ಮಾನ್ಯತೆ ಸಿಗಲಿದೆ. ಸಂಗಾತಿ ವಿಚಾರದಲ್ಲಿ ಸಮಾಧಾನ ಇರಲಿದೆ. ಗೃಹ-ನಿವೇಶನ ಖರೀದಿ ವಿಚಾರಗಳಲ್ಲಿ ಸ್ಪಷ್ಟತೆ ಸಿಗಲಿದೆ. ಅನುಕೂಲವೂ ಉಂಟಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ದೈವಾನುಕೂಲವಿದೆ. ಹಳೆ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಯ ಹೆಚ್ಚಲಿದೆ.

ಪರಿಹಾರ - ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ, ತೊಗರಿ-ಬೆಲ್ಲ ದಾನ ಮಾಡಿ.
ಅದೃಷ್ಟ ಸಂಖ್ಯೆ - 2 ಹಾಗೂ 9
ಬಣ್ಣ - ಬಿಳಿ ಹಾಗೂ ಹಳದಿ ಬಣ್ಣ
ರತ್ನ - ಮುತ್ತು

ಸಿಂಹ - ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಕತ್ತಲನ್ನು ತರಲಿದೆ. ಹಬ್ಬದ ಪ್ರಾರಂಭದಲ್ಲಿ ವ್ಯಯ ಸ್ಥಾನಕ್ಕೆ ಬರುವ ಕುಜ ಹೆಚ್ಚಿನ ವ್ಯಯ ಉಂಟು ಮಾಡುತ್ತಾನೆ. ಗೃಹ-ನಿವೇಶನ ವಿಚಾರಗಳಲ್ಲಿ ಅಲೆದಾಟ ಹೆಚ್ಚಾಗಲಿದೆ. ಕೈಗೆ ಬಂದದ್ದೂ ತಪ್ಪಿಹೋಗುವ ಸಾಧ್ಯತೆ ಹೆಚ್ಚು. ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಮಾತ್ರ ಹೆಚ್ಚಿನ ಅನುಕೂಲವಿದೆ. ಸರ್ಕಾರಿ ಹಾಗೂ ಸಿವಿಲ್ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಅನುಕೂಲವಿದೆ. ಹಳೆಯ ಕಾರ್ಯಗಳು ಕೈಗೂಡಲಿವೆ. ಜನವರಿ ನಂತರ ನಿಮ್ಮ ಉದ್ಯೋಗದಲ್ಲಿ ವಿಶೇಷ ಅನುಕೂಲವಿದೆ. ಕಳೆದು ಕೊಂಡ ಹಣ ಮತ್ತೆ ಮರಳಿ ಬರಲಿದೆ. ವಿವಾಹಾದಿ ಕಾರ್ಯಗಳು ಏರ್ಪಾಡಾಗಲಿವೆ. ಸಂಗಾತಿ ಸಹಕಾರ ಸಿಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ಒಂದು ಸಂಕಷ್ಟಕ್ಕೆ ಸಿಲುಕುವಿರಿ. ಒಂದು ದೊಡ್ಡ ಮೊತ್ತದ ನಷ್ಟ ಅನುಭವಿಸಬೇಕಾದೀತು. ದು:ಖ, ವ್ಯಥೆ, ಸೋಲುಗಳುಂಟಾಗಲಿದೆ. ಸಂಗಾತಿ ವಿಚಾರದಲ್ಲಿ ನೋವು ಇರಲಿದೆ.

ಪರಿಹಾರ - ಆಂಜನೇಯ ಪ್ರಾರ್ಥನೆ ಹಾಗೂ ಸುಂದರಕಾಂಡ ಪಾರಾಯಣ ಮಾಡಿಸಿ
ಅದೃಷ್ಟ ಸಂಖ್ಯೆ - 1, 5 ಹಾಗೂ 9
ಬಣ್ಣ - ಕೆಂಪು ಬಣ್ಣ
ರತ್ನ - ಮಾಣಿಕ್ಯ, ಹವಳ

ಕನ್ಯಾ - ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಒಂದು ವಿಶೇಷ ಲಾಭವನ್ನು ತರಲಿದೆ. ಸಹೋದರರಿಂದ ಹೆಚ್ಚಿನ ಅನುಕೂಲ ಕಾಣುತ್ತೀರಿ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಲಾಭಕಾಣುತ್ತೀರಿ. ಗೃಹ-ವಾಹನ ಖರೀದಿ ಸಾಧ್ಯತೆ ಇದೆ. ಶತ್ರುಗಳು ದೂರಾಗಲಿದ್ದಾರೆ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಬಲವನ್ನು ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಅನುಕೂಲವಿದೆ. ಕಲಾ ಕ್ಷೇತ್ರದವರಿಗೆ ಹೆಚ್ಚಿನ ಮಾನ್ಯತೆ ಸಿಗಲಿದೆ. ಜನವರಿ ನಂತರ ವೃತ್ತಿಯಲ್ಲಿ ವಿಶೇಷ ಅನುಕೂಲಗಳಿದ್ದರೂ ಕಿರಿಕಿರಿ ತಪ್ಪಿದ್ದಲ್ಲ. ಸೇನೆ-ಪೊಲೀಸ್ ಕ್ಷೇತ್ರದವರಿಗೆ ವಿಶೇಷ ಅನುಕೂಲ. ಮಾರ್ಚ್ ಅಂತ್ಯದ ವೇಳೆಗೆ ವೈವಾಹಿಕ ಜೀವನದಲ್ಲಿ ಸಂಕಷ್ಟ ಎದುರಾಗಲಿದೆ. ವ್ಯವಹಾರಗಳಲ್ಲಿ ಮೋಸ ಸಾಧ್ಯತೆ ಇದೆ. ಸಾಲ ವಿಚಾರದಲ್ಲಿ ಹೆಚ್ಚು ಬಳಲುತ್ತೀರಿ. ಕೋರ್ಟು-ಕಚೇರಿ ಅಲೆದಾಟ ಹೆಚ್ಚಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಡಲಿವೆ. ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗಲಿವೆ. ಮಕ್ಕಳ ವಿಚಾರದಲ್ಲಿ ತಕರಾರುಗಳು ಉಂಟಾಗಬಹುದು. ಎಚ್ಚರವಹಿಸಿ.

ಪರಿಹಾರ - ವಿಷ್ಣು ಸಹಸ್ರನಾಮ ಪಠಿಸಿ
ಅದೃಷ್ಟ ಸಂಖ್ಯೆ - 5 ಹಾಗೂ 9
ಬಣ್ಣ - ಹಸಿರು
ರತ್ನ - ಕೆಂಪು ಹಾಗೂ ಪಚ್ಚೆ

ತುಲಾ - ದೀಪಾವಳಿ ನಿಮ್ಮ ವೃತ್ತಿ ಬದುಕಿಗೆ ವಿಶೇಷ ಬೆಳಕನ್ನು ತರಲಿದೆ. ನಭಸಿ ನೃಪತಿ: ಎಂಬ ಶಾಸ್ತ್ರ ವಾಣಿಯಂತೆ ಅಧಿಕಾರ ಪ್ರಾಪ್ತಿಯಾಗಲಿದೆ. ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ಪೊಲೀಸ್, ಸೇನೆಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅನುಕೂಲ. ರಾಶ್ಯಧಿಪತಿ ಶುಕ್ರನ ಬಲವಿರುವುದರಿಂದ ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಸ್ತ್ರೀಯರಿಗೆ ಹೆಚ್ಚಿನ ಬಲ ಬರಲಿದೆ. ವಸ್ತ್ರ-ಹಾಲು-ಹೈನು ಕ್ಷೇತ್ರದಲ್ಲಿ ಲಾಭ ಕಾಣುವಿರಿ. ಜನವರಿ ನಂತರ ತಂದೆ-ಮಕ್ಕಳಲ್ಲಿ ಮನಸ್ತಾಪಗಳುಂಟಾಗಲಿವೆ. ಸ್ತ್ರೀಯರಿಗೆ ಸಾಲ ಬಾಧೆ ಕಾಡಲಿದೆ. ಹೆಚ್ಚಿನ ವ್ಯಯ ಉಂಟಾಗಲಿದೆ. ಆದರೆ ಶತ್ರುಗಳು ದೂರಾಗಿ ನಿಮ್ಮ ಕಾರ್ಯ ಸಾಧನೆಗೆ ಸಹಾಯ ಸಿಗಲಿದೆ. ಮಾರ್ಚ್ ಅಂತ್ಯದವೇಳೆಗೆ ಶನೈಶ್ಚರನಿಂದ ವಿಶೇಷ ಅನುಕೂಲ ಸಿಗಲಿದೆ. ಸಾಲ ನಿವಾರಣೆಯಾಗಲಿದೆ. ಧೈರ್ಯ -ಸಾಹಸ ಕಾರ್ಯಗಳಿಂದ ಯಶಸ್ಸುಗಳಿಸುವಿರಿ. ಸರ್ಕಾರಿ ಹಾಗೂ ರಾಜಕಾರಣದವರಿಗೆ ವಿಶೇಷ ಅನುಕೂಲ, ವಿಶೇಷ ಅಧಿಕಾರ ಸಿಗಲಿದೆ. ಅಷ್ಟಮದ ಗುರುವಿನಿಂದ ನಷ್ಟಗಳೂ ಇರಲಿವೆ. ಹೆಚ್ಚು ಸುಖವೂ ಇಲ್ಲ, ದು:ಖವೂ ಇಲ್ಲ ಮಿಶ್ರಫಲವಿದೆ. ಆತಂಕಬೇಡ.

ಪರಿಹಾರ - ಮಹಾಲಕ್ಷ್ಮೀ ಸನ್ನಿಧಾನಕ್ಕೆ ಮೊಸರು ಸಮರ್ಪಣೆ ಮಾಡಿ
ಅದೃಷ್ಟ ಸಂಖ್ಯೆ - 5 ಹಾಗೂ 9
ಬಣ್ಣ - ಬಿಳಿ ಹಾಗೂ ಗಾಢ ನೀಲಿ
ರತ್ನ - ವಜ್ರ-ನೀಲ

ವೃಶ್ಚಿಕ - ರಾಶ್ಯಧಿಪತಿ ಕುಜ ದೀಪಾವಳಿಯ ಪ್ರಾರಂಭದಲ್ಲೇ ನಿಮ್ಮ ರಾಶಿಯಿಂದ ಭಾಗ್ಯ ಸ್ಥಾನಕ್ಕೆ ಬರುವುದರಿಂದ ತಂದೆ-ಮಕ್ಕಳಲ್ಲಿ ಮನಸ್ತಾಪಗಳುಂಟಾಗಬಹುದು. ಪ್ರತಿಷ್ಠಿತ ಸ್ಥಾನಗಳು ಸಿಗಲಿದೆಯಾದರೂ ಅಪವಾದಗಳು ಬರಲಿವೆ. ಜನ ನಿಂದನೆಗೆ ಗುರಿಯಾಗುವಿರಿ. ಸಹೋದರರಲ್ಲಿ ಮನಸ್ತಾಪಗಳುಂಟಾಗಲಿವೆ. ವೃತ್ತಿಯಲ್ಲಿ ಹಿತಶತ್ರುಗಳ ಬಾಧೆ ಇರಲಿದೆ. ಮನೆಯ ಹಳೆವಸ್ತು, ರಿಪೇರಿ ಕಾರ್ಯಗಳು ನಡೆಯಲಿವೆ. ಹಳೆಯ ಮಿತ್ರರಿಂದ ಸಹಕಾರ ಉಂಟಾಗಲಿದೆ. ಜನವರಿ ನಂತರ ಮತ್ತೆ ಆರೋಗ್ಯ ಬಾಧೆ ಕಾಡಲಿದೆ. ಬೆಂಕಿ ವಿಚಾರದಲ್ಲಿ ಎಚ್ಚರವಿರಿ. ಸ್ಕಿನ್ ಅಲರ್ಜಿ ಕಾಡಬಹುದು. ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಗಳು ನಡೆಯಲಿವೆ. ಹೊಸ ವಾಹನ ಖರೀದಿಸುವಿರಿ. ಮಾರ್ಚ್ ಅಂತ್ಯದ ವೇಳೆಗೆ ಮಕ್ಕಳ ವಿಚಾರದಲ್ಲಿ ಮನಸ್ತಾಪಗಳು ಉಂಟಾಗಲಿವೆ. ಬುದ್ಧಿ ಮಂದವಾಗುತ್ತದೆ. ಉನ್ನತ ಶಿಕ್ಷಣದವರಿಗೆ ಹೆಚ್ಚಿನ ಅನುಕೂಲ ಇರಲಿದೆ. ವೃತ್ತಿಯಲ್ಲಿ ಒಂದು ವಿಶೇಷ ಸ್ಥಾನ ಸಿಗಲಿದೆ. ಹೆಚ್ಚಿನ ಅನುಕೂಲಗಳೇ ಇವೆ ಅತಂಕ ಬೇಡ.


ಪರಿಹಾರ - ಸುಬ್ರಹ್ಮಣ್ಯ ಪ್ರಾರ್ಥನೆ, ದುರ್ಗಾ ಕವಚ ಪಠಿಸಿ. ಬೆಲ್ಲ ದಾನ ಮಾಡಿ.
ಅದೃಷ್ಟ ಸಂಖ್ಯೆ - 2 ಹಾಗೂ 10
ಬಣ್ಣ - ಕೆಂಪು ಹಾಗೂ ಕೇಸರಿ
ರತ್ನ - ಹವಳ ಹಾಗೂ ಪುಷ್ಯರಾಗ.

ಧನುಸ್ಸು - ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಕಹಿ-ಸಿಹಿ ಎರಡನ್ನೂ ತರಲಿದೆ. ದೀಪಾವಳಿಯ ಪ್ರಾರಂಭದಲ್ಲೇ ಅಷ್ಟಮ ಸ್ಥಾನಕ್ಕೆ ಹೋಗುವ ಕುಜ ಸ್ವಲ್ಪ ಅವಮಾನಗಳನ್ನು ತರುತ್ತಾನೆ. ಹೆಚ್ಚಿನ ವ್ಯಯವನ್ನುಂಟು ಮಾಡುತ್ತಾನೆ. ಆರೋಗ್ಯದಲ್ಲಿ ಹೆಚ್ಚಿನ ಅನಾನುಕೂಲ ಉಂಟು ಮಾಡುತ್ತಾನೆ. ಜನನಿಂದನೆಗೆ ಗುರಿಯಾಗುವಿರಿ. ಕಷ್ಟ-ನಷ್ಟಗಳಿಂದ ಬಳಲಬೇಕಾಗುತ್ತದೆ. ಸೋಲುಂಟಾಗಲಿದೆ. ಜನವರಿ ನಂತರ ನಿಮ್ಮ ಬದುಕಿಗೆ ಹೊಸ ತಿರುವು ಸಿಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಗೃಹ-ನಿವೇಶ-ವಾಹನ ಖರೀದಿ ಸಾಧ್ಯತೆ ಇದೆ. ವಸ್ತ್ರ ವ್ಯಾಪಾರಿಗಳಿಗೆ ಅನುಕೂಲ. ಕೃಷಿ, ಪಶುಸಂಗೋಪನೆ ಕಾರ್ಯಗಳಲ್ಲಿ ಲಾಭವಿದೆ. ಬಂಧು-ಸ್ನೇಹಿತರ ವಿಚಾರದಲ್ಲಿ ಎಚ್ಚರ ವಹಿಸಿ. ಸ್ನೇಹಿತರು-ಬಂಧುಗಳಿಂದ ಮನಸ್ಸಿಗೆ ಹೆಚ್ಚು ಸಮಾಧಾನ ಸಿಗಲಿದೆ. ಆತ್ಮೀಯರ ಜೊತೆ ಸಂಚಾರ ಮಾಡುವಿರಿ. ಮಾರ್ಚ್ ಅಂತ್ಯದ ವೇಳೆಗೆ ಹೃದಯ ಸಂಬಂಧಿ ತೊಂದರೆಗಳಾಗುವ ಸಾಧ್ಯತೆ. ವಾತ ರೋಗಗಳು ಬಾಧಿಸಲಿವೆ. ಸಂಗಾತಿಯ ವಿಚಾರದಲ್ಲಿ ಅಸಮಾಧಾನ ಕಾಡಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ.

ಪರಿಹಾರ - ಸುಬ್ರಹ್ಮಣ್ಯ ಕವಚ ಪಠಿಸಿ, ಕುಕ್ಕೆ ಕ್ಷೇತ್ರ ದರ್ಶನ ಮಾಡಿ
ಅದೃಷ್ಟ ಸಂಖ್ಯೆ - 3 ಹಾಗೂ 9
ಬಣ್ಣ - ಹಳದಿ
ರತ್ನ - ಪುಷ್ಯರಾಗ ಹಾಗೂ ನೀಲ

ಮಕರ - ದೀಪಾವಳಿ ನಿಮ್ಮ ಪಾಲಿಗೆ ಪ್ರಾರಂಭದಲ್ಲಿ ಕಹಿ ಕೊಟ್ಟು ನಂತರ ಸಿಹಿಯನ್ನು ತರಲಿದೆ. ಈ ಹಬ್ಬದ ಪ್ರಾರಂಭದಲ್ಲಿ ನಮ್ಮ ದಾಂಪತ್ಯದಲ್ಲಿ ಮನಸ್ತಾಪಗಳು ಉಂಟಾಗಲಿವೆ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಲಿವೆ. ವ್ಯಾಪಾರದಲ್ಲೂ ಮೋಸಗಳಾಗುವ ಸಾಧ್ಯತೆ ಇದೆ. ದೂರದ ಪ್ರಯಾಣದಲ್ಲಿ ತೊಂದರೆಗಳಾಗುವ ಸಾಧ್ಯತೆ ಇದೆ. ಬೆಂಕಿ-ನೀರಿನ ವಿಚಾರದಲ್ಲಿ ಎಚ್ಚರವಹಿಸಿ. ಜನವರಿ ನಂತರ ನಿಮ್ಮ ಬದುಕಿನಲ್ಲಿ ಹೊಸ ಹಾದಿ ತೆರೆದು ಕೊಳ್ಳಲಿದೆ. ವೃತ್ತಿಯಲ್ಲಿ ವಿಶೇಷ ಸ್ಥಾನಮಾನಗಳು ಸಿಗಲಿವೆ. ಗೃಹ-ವಾಹನ ಖರೀದಿ ಸಾಧ್ಯತೆ ಇದೆ. ವಸ್ತ್ರ-ಆಭರಣಗಳನ್ನು ಕೊಳ್ಳುವಿರಿ. ಸ್ತ್ರೀಯರಿಗೆ ವಿಶೇಷ ಅನುಕೂಲಗಳುಂಟಾಗುತ್ತವೆ. ಸಹೋದರರ ಸಹಕಾರ ಸಿಗಲಿದೆ. ಕುಟುಂಬದಲ್ಲಿ ಹಿರಿಯರಿಂದ ಹೆಚ್ಚಿನ ಸಹಕಾರ ಸಿಗಲಿದೆ. ಬಂಧುಗಳ ವಿಚಾರದಲ್ಲಿ ಎಚ್ಚರವಾಗಿರಿ. ಮಾರ್ಚ್ ಅಂತ್ಯದ ವೇಳೆಗೆ ಧೈರ್ಯ ಸಾಹಸಗಳಿಂದ ಹೊಸ ಕಾರ್ಯಗಳಲ್ಲಿ ತೊಡಗುವಿರಿ. ಕಿವಿ-ಗಂಟಲ ಭಾಗದಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಿವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಇರಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ.

ಪರಿಹಾರ - ದುರ್ಗಾ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಿ
ಅದೃಷ್ಟ ಸಂಖ್ಯೆ - 5 ಹಾಗೂ 6
ಬಣ್ಣ - ನೀಲ ಹಾಗೂ ಹಸಿರು
ರತ್ನ - ಪಚ್ಚೆ ಹಾಗೂ ನೀಲ

ಕುಂಭ - ದೀಪಾವಳಿ ನಿಮ್ಮ ಪಾಲಿಗೆ ಒಂದು ವಿಶೇಷ ಫಲವನ್ನು ತರಲಿದೆ. ವೃತ್ತಿಯಲ್ಲಿ ವಿಶೇಷ ಬದಲಾವಣೆ ಕಾಣುವಿರಿ. ರಾಜಸನ್ಮಾನಗಳು ಸಿಗಲಿವೆ. ಜನ್ಮದ ಶನಿಯಿಂದಲೂ ಅಧಿಕಾರ, ಸ್ಥಾನಮಾನಗಳು ಸಿಗಲಿವೆ. ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಲಿದೆ. ಉದರ ಬಾಧೆಗಳು ನಿಮ್ಮನ್ನು ಕಾಡಲಿವೆ. ಸಾಲದ ಸುಳಿಯಲ್ಲಿ ಸುರುಳಿಯಾಗುವುದು ನಿಶ್ಚಿತ. ಜನವರಿ ನಂತರ ದೈವಾನುಕೂಲ ಉಂಟಾಗಲಿದೆ. ಕುಟುಂಬದಲ್ಲಿ ಮನಸ್ತಾಪಗಳು ಕಡಿಮೆಯಾಗಲಿವೆ. ಸ್ತ್ರೀಯರಿಗೆ ವಿಶೇಷ ಅನುಕೂಲ ಉಂಟಾಗಲಿದೆ. ಗೃಹ-ವಾಹನ ಸೌಕರ್ಯ ಉಂಟಾಗಲಿವೆ. ವಸ್ತ್ರಾಭರಣ ಖರೀದಿ ಮಾಡುವಿರಿ. ಸ್ನೇಹಿತರ ಜೊತೆ ವಿಹಾರ-ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಅತಿಯಾದ ಆಸೆಗಳಿಗೆ ಬಲಿಯಾಗುವಿರಿ. ದ್ವಿತಿಯ ಸ್ಥಾನದ ರಾಹು ಹಾಗೂ ಇತರೆ ಗ್ರಹಗಳ ಪ್ರಭಾವದಿಂದ ಮಾತು-ಬರವಣಿಗೆ-ಬ್ಯಾಂಕ್ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುವಿರಿ. ಮಾರ್ಚ್ ಅಂತ್ಯದವೇಳೆಗೆ ಕುಟುಂಬ ಸ್ಥಾನಕ್ಕೆ ಬರುವ ಶನಿಯಿಂದ ಕುಟುಂಬದಲ್ಲಿ ಅವಮಾನಗಳುಂಟಾಗಲಿವೆ. ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಾನಿ. ಹಣ ಕಳೆದುಕೊಳ್ಳುವಿರಿ. ಎಚ್ಚರವಹಿಸಿ.

ಪರಿಹಾರ - ಈಶ್ವರ ಸನ್ನಿಧಾನಕ್ಕೆ ತೊಗರಿ-ಎಳ್ಳು ದಾನ ಮಾಡಿ
ಅದೃಷ್ಟ ಸಂಖ್ಯೆ - 1
ಬಣ್ಣ - ನೀಲ ಹಾಗೂ ಕಪ್ಪು
ರತ್ನ - ನೀಲ ಹಾಗೂ ವಜ್ರ

ಮೀನ - ಈ ದೀಪಾವಳಿಯ ಆರಂಭದಲ್ಲೇ ನಿಮಗೆ ಆರೋಗ್ಯ ಹಾಳಾಗಬಹುದು. ಉದರ ಸಂಬಂಧಿ ತೊಂದರೆಗಳುಂಟಾಗಬಹುದು. ಮಕ್ಕಳ ವಿಚಾರದಲ್ಲಿ ಮನೆಯಲ್ಲಿ ಕಲಹಗಳು, ಮನಸ್ತಾಪಗಳು ಬರಬಹುದು. ಸ್ವಲ್ಪ ಸಮಾಧಾನ ಇರಲಿದೆ. ಬುದ್ಧಿ ಕೋಪಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು. ಉನ್ನತ ಶಿಕ್ಷಣದವರಿಗೆ ತೊಂದರೆಗಳಿವೆ. ತಂದೆ-ಮಕ್ಕಳಲ್ಲಿ ಮನಸ್ತಾಪ ಉಂಟಾಗಬಹುದು. ಜನವರಿ ನಂತರ

ಒಂದು ವಿಶೇಷ ಫಲವನ್ನು ಹೊಂದುವಿರಿ. ಕೃಷಿ, ಹಾಲು-ಹೈನು ಕ್ಷೇತ್ರಗಳಲ್ಲಿ ಅಧಿಕ ಲಾಭಗಳಿಸುವಿರಿ. ಆದರೆ ಈ ಶುಭಫಲದ ಜೊತೆಗೆ ಸ್ತ್ರೀಯರಿಗೆ ಹೆಚ್ಚಿನ ವ್ಯಯವಿದೆ. ಆಪ್ತರಿಗಾಗಿ, ಹಿರಿಯರಿಗಾಗಿ ಹೆಚ್ಚು ವ್ಯಯ ಮಾಡುವಿರಿ. ಕಾಲಿನ ಬಾಧೆಗಳು ಕಾಡಲಿವೆ. ಪ್ರಯಾಣದಲ್ಲಿ ಎಚ್ಚರವಹಿಸಿ. ಕಣ್ಣು, ಚರ್ಮ ಸಂಬಂಧಿ ತೊಂದರೆಗಳು ಕಾಡಬಹುದು. ಬಂಧು-ಸ್ನೇಹಿತರಲ್ಲಿ ಮನಸ್ತಾಪಗಳು ಹೆಚ್ಚಾಗಬಹುದು. ಈ ವರ್ಷ ನಿಮ್ಮ ಪಾಲಿಗೆ ಸ್ವಲ್ಪ ಅಸಮಾಧಾನದ ಫಲಗಳೇ ಹೆಚ್ಚಾಗಿವೆ. ಮಾರ್ಚ್ ಅಂತ್ಯದ ವೇಳೆಗೆ ನಿಮ್ಮ ರಾಶಿಗೆ ಶನಿ ಪ್ರವೇಶ ಮಾಡುವುದರಿಂದ ದು:ಖವಶಗ: ಎಂಬ ಶಾಸ್ತ್ರವಾಣಿಯಂತೆ ದು:ಖಕ್ಕೆ ಒಳಗಾಗುವಿರಿ. ಆದಾಯದಲ್ಲಿ ಏರುಪೇರಾಗುತ್ತದೆ. ಶರೀರ ಕುಸಿಯಲಿದೆ. ಎಚ್ಚರವಾಗಿರಿ.

ಪರಿಹಾರ - ಗುರು ಸನ್ನಿಧಿಗೆ ಕಡಲೆ-ಬೆಲ್ಲ ಹಾಗೂ ಶನೈಶ್ಚರ ಸನ್ನಿಧಾನಕ್ಕೆ ಎಳ್ಳೆಣ್ಣೆ ದಾನ ಮಾಡಿ
ಅದೃಷ್ಟ ಸಂಖ್ಯೆ - 1 ಹಾಗೂ 9
ಬಣ್ಣ - ಕೆಂಪು ಕೇಸರಿ
ರತ್ನ - ಪುಷ್ಯರಾಗ ಹಾಗೂ ಮಾಣಿಕ್ಯ

ವಿಶೇಷ ಸೂಚನೆ -  ಇದು ಕೇವಲ ರಾಶಿಫಲ. ಇದನ್ನೇ ಮುಖ್ಯವಾಗಿ ಪರಿಗಣಿಸಬೇಡಿ. ನಿಮ್ಮ ಜಾತಕದಲ್ಲಿ ನಡೆಯುತ್ತಿರುವ ದಶಾಭುಕ್ತಿ ಕಾಲಗಳು ಅತಿ ಮುಖ್ಯ. ಯಾವ ಗ್ರಹದ ಸಮಯ ನಡೆಯುತ್ತಿದೆಯೋ ಆ ಫಲವನ್ನು ಹೆಚ್ಚು ಅನುಭವಿಸುತ್ತೀರಿ. ಹೀಗಾಗಿ ಚಿಂತಾಕ್ರಾಂತರಾಗಬೇಡಿ. ಸೂಚಿಸಿರುವ ಪರಿಹಾರದಿಂದ ನಿಮ್ಮ ಕಷ್ಟ ಸ್ವಲ್ಪ ಕಡಿಮೆಯಾಗಲಿದೆ. ತಪ್ಪದೆ ಶ್ರದ್ಧೆಯಿಂದ ಆಯಾ ಪರಿಹಾರಗಳನ್ನು ಮಾಡಿ.

click me!