ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.12): ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠದಲ್ಲಿ ಶ್ರೀರಾಮ ಸೇನೆ ಹಮ್ಮಿಗೊಂಡಿರುವ ದತ್ತಮಾಲಾ ಅಭಿಮಾನವೂ ನಾಳೆ ಸಂಪನ್ನವಾಗಲಿದೆ. ದತ್ತಮಾಲಾ ಅಭಿಯಾನದ ಕೊನೆಯ ದಿನವಾದ ನಾಳೆ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ದತ್ತಪೀಠದಲ್ಲಿ ಧಾರ್ಮಿಕ ಸಭೆ ಆಯೋಜನೆ ಮಾಡಿದೆ. ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ್ ಮಾಡಿಕೊಂಡಿದೆ. ಜಿಲ್ಲಾಡಳಿತ 23 ಚೆಕ್ ಪೋಸ್ಟ್ಗಳನ್ನು ತೆರೆದಿದ್ದರೆ, ಜಿಲ್ಲಾ ಪೊಲೀಸ್ ಇಲಾಖೆ ಪ್ರತ್ಯೇಕವಾಗಿ 26 ಚೆಕ್ ಪೋಸ್ಟ್ ತೆರೆದಿದೆ.ಪ್ರತಿ ವರ್ಷದಂತೆ ಈ ಬಾರಿ ಶ್ರೀರಾಮ ಸೇನೆ ನವೆಂಬರ್ 7 ರಿಂದ 13 ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ದತ್ತಪೀಠಕ್ಕೆ ತೆರಳುವ ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಮುಖಂಡರು ಈಗಾಗಲೇ ದತ್ತಮಾಲೆಯನ್ನು ಧರಿಸಿದ್ದಾರೆ.
ದತ್ತಮಾಲೆಯನ್ನು ಧರಿಸಿರುವ ಭಕ್ತರು ಚಿಕ್ಕಮಗಳೂರಿನಲ್ಲಿ ಇಂದು ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡಿದರು. ಈ ಪಡಿಯನ್ನು ನಾಳೆ ದತ್ತಪೀಠದಲ್ಲಿ ದತ್ತಪಾದುಕೆಗಳ ದರ್ಶನದ ಬಳಿಕ ಸಮರ್ಪಿಸಲಿದ್ದಾರೆ.
ನಾಳೆ ಶೋಭಾಯಾತ್ರೆ
ದತ್ತಪೀಠಕ್ಕೆ ತೆರಳಲು ರಾಜ್ಯದ ವಿವಿಧೆಡೆಯಿಂದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ನಾಳೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಬೆಳಗ್ಗೆ ಆಗಮಿಸಲಿದ್ದಾರೆ. ಇಲ್ಲಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಂಕರಮಠ ಎದುರು ಧಾರ್ಮಿಕ ಸಭೆಯನ್ನು ನಡೆಸಿ ಅಲ್ಲಿಂದ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಆಜಾದ್ ಪಾರ್ಕ್ ವೃತ್ತಕ್ಕೆ ತಲುಪಿದ ನಂತರ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಸರದಿ ಸಾಲಿನ ಮುಖಾಂತರ ದತ್ತ ಗುಹೆಯೊಳಗೆ ಪ್ರವೇಶ ಮಾಡಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ.
Chikkamagaluru: ದತ್ತಮಾಲಾ ಅಭಿಯಾನ: ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ನಿಷೇಧ
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಜೇವರ್ಗಿಯ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರದ ಹಿಂದೂ ರಾಷ್ಟ್ರ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಧನಂಜಯ ದೇಸಾಯಿ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ವಿಶ್ವಧರ್ಮ ರಕ್ಷಾ ಸೇವಾ ಸಂಘಟನೆಯ ಮುಖ್ಯಸ್ಥರಾದ ಯೋಗಿ ಸಂಜೀತ್ ಸುವರ್ಣ ಪಾಲ್ಗೊಳ್ಳಲಿದ್ದಾರೆ.
49 ಚೆಕ್ ಪೋಸ್ಟ್
ದತ್ತ ಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ 49 ಚೆಕ್ ಪೋಸ್ಟ್‌ಗಳನ್ನು ತೆರೆದಿದೆ. ಪ್ರತಿಯೊಂದು ಚೆಕ್ ಪೋಸ್ಟ್ನಲ್ಲಿ ಇಬ್ಬರು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜಿಸಿದೆ. ಇದರ ಜತೆಗೆ ಪ್ರತಿಯೊಂದು ಕೇಂದ್ರದಲ್ಲಿ ತಲಾ ಇಬ್ಬರು ಸಹಾಯಕ ಸಿಬ್ಬಂದಿ ಸಹ ನಿಯೋಜಿಸಿದೆ. ಇದರ ಜತೆಗೆ 27 ಮಂದಿ ವಿಶೇಷ ಕಾರ್ಯ ನಿರ್ವಾಹಕ ದಂಡಾಕಾರಿಗಳಾಗಿ ರಿಸರ್ವ್ ಇಟ್ಟುಕೊಳ್ಳಲಾಗಿದೆ. ಅಂದರೆ, ಈಗಾಗಲೇ ಗುರುತು ಮಾಡಿರುವ ಚೆಕ್ ಪೋಸ್ಟ್ ಹೊರತು ಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಈ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಪೊಲೀಸ್ ಬಂದೋಬಸ್ತ್
ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಜಿಲ್ಲಾ ಪೊಲೀಸ್ ಇಲಾಖೆ 26 ಸ್ಥಳಗಳಲ್ಲಿ ಚೆಕ್ ಪೋಸ್ಟ್ ತೆರೆದಿದೆ. ಇವುಗಳು ನವೆಂಬರ್ 12 ರಿಂದ 14ರ ಬೆಳಗ್ಗೆಯವರೆಗೆ ಕಾರ್ಯನಿರ್ವಹಿಸಲಿವೆ. ಕರ್ತವ್ಯಕ್ಕಾಗಿ ಎಸ್ಪಿ, ಎಎಸ್ಪಿ, ಡಿವೈಎಸ್ಪಿ- 3, ಸಿಪಿಐ- 18, ಪಿಎಸ್ಐ- 67, ಎಎಸ್ಐ- 142 , ಪಿಸಿ/ಎಚ್ಸಿ- 841 , ಹೋಂ ಗಾರ್ಡ್- 200, ಕೆಎಸ್ಆರ್‌ಪಿ ತುಕಡಿ- 5, ಡಿಎಆರ್ ತುಕಡಿ- 11 ನಿಯೋಜಿಸಲಾಗಿದೆ.
ಪ್ರವಾಸಿಗರಿಗೆ ನಿರ್ಬಂಧ
ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ನವೆಂಬರ್ 13ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 14ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗಿದೆ.
ವಾಹನ ಸಂಚಾರ ನಿಲುಗಡೆ ನಿರ್ಬಂಧ
ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧವನ್ನು ನವೆಂಬರ್ 13ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸವನಹಳ್ಳಿ ಮುಖ್ಯರಸ್ತೆ (ಕೆ.ಇ.ಬಿ ಈದ್ಗಾ ಸರ್ಕಲ್ ನಿಂದ ಹನುಮಂತಪ್ಪ ವೃತ್ತದವರೆಗೆ) ಮತ್ತು ಎಂ.ಜಿ (ಹನುಮಂತಪ್ಪ ವೃತ್ತದಿಂದ ಆಜದ್ ಪಾರ್ಕ್ ವೃತ್ತದ ವರೆಗೆ)ಯಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ತಿಳಿಸಿದ್ದಾರೆ.
Chikkamagaluru: ಶ್ರೀರಾಮಸೇನೆ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ
ಮೆರವಣಿಗೆ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕ ವಾಹನಗಳು ಬಸವನಹಳ್ಳಿ ಮುಖ್ಯರಸ್ತೆ ಬದಲಾಗಿ ರತ್ನಗಿರಿ ರಸ್ತೆ (ಆರ್.ಜಿ ರಸ್ತೆ) ಮತ್ತು ಎಂ.ಜಿ ರಸ್ತೆಯ ಬದಲಾಗಿ ಐ.ಜಿ ರಸ್ತೆ ಮತ್ತು ಅಂಬೇಡ್ಕರ್ ರಸ್ತೆ (ಮಾರ್ಕೆಟ್ ರಸ್ತೆ) ಮೂಲಕ ಸಂಚರಿಸಲು ತಿಳಿಸಲಾಗಿದೆ.ಕಡೂರು ಕಡೆಯಿಂದ ಮೂಡಿಗೆರೆ ಕಡೆಗೆ ಹೋಗುವ ಭಾರಿ ವಾಹನಗಳು ಎಐಟಿ ಸರ್ಕಲ್, ಬೈಪಾಸ್, ಪೈ ಸರ್ಕಲ್, ಹಿರೇಮಗಳೂರು, ಕೈಗಾರಿಕಾ ಪ್ರದೇಶ, ರಾಂಪುರದ ಮೂಲಕ ಸಂಚರಿಸಲು ತಿಳಿಸಲಾಗಿದೆ.ಮೂಡಿಗೆರೆ ಕಡೆಯಿಂದ ಕಡೂರು ಕಡೆಗೆ ಹೋಗುವ ಭಾರಿ ವಾಹನಗಳು ರಾಂಪುರ, ಕೈಗಾರಿಕಾ ಪ್ರದೇಶ, ಹಿರೇಮಗಳೂರು, ಪೈ ಸರ್ಕಲ್, ಬೈಪಾಸ್, ಎಐಟಿ ಸರ್ಕಲ್, ಮೂಲಕ ಸಂಚರಿಸಲು ತಿಳಿಸಿದ್ದಾರೆ.