ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ?

By Web DeskFirst Published Oct 5, 2019, 3:53 PM IST
Highlights

ಹಿಂದುಗಳ ಪೂಜಾ ವಿಧಾನಗಳಲ್ಲಿ ರುದ್ರಾಕ್ಷಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಏಕ ಹಾಗೂ ಹಲವು ಕಣ್ಣುಗಳಿರುವ ಈ ರುದ್ರಾಕ್ಷಿಯನ್ನು ಧರಿಸಿದರೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಅಷ್ಟಕ್ಕೂ ಇದನ್ನು ಧರಿಸುವುದರಿಂದೇನು ಪ್ರಯೋಜನ?

 

ರುದ್ರಾಕ್ಷಿ ಎಂಬ ಪದದ ಅರ್ಥ ಶಿವನ ಕಣ್ಣು. ಇದೊಂದು ಜಾತಿಯ ಫಲ. ಹಣ್ಣಾಗಿ, ಸಿಪ್ಪೆ ಸುಲಿದು, ಒಣಗಿದ ಮೇಲೆ ನಾವು ನೋಡುವ ರುದ್ರಾಕ್ಷಿಯಾಗುತ್ತದೆ. ಸಾಮಾನ್ಯವಾಗಿ ಜಪ ಮಾಡಲು ರುದ್ರಾಕ್ಷಿ ಮಾಲೆ ಧರಿಸುತ್ತಾರೆ. ಶೈವ ಪಂಥದ ಸನ್ಯಾಸಿಗಳೆಲ್ಲ ರುದ್ರಾಕ್ಷಿ ಹಾರವನ್ನು ಕೊರಳಿಗೆ ಹಾಕಿಕೊಂಡಿರುತ್ತಾರೆ. ಜನಸಾಮಾನ್ಯರೂ, ಧಾರ್ಮಿಕ ವ್ಯಕ್ತಿಗಳೂ ರುದ್ರಾಕ್ಷಿ ಮಾಲೆ ಧರಿಸುತ್ತಾರೆ.

ರುದ್ರಾಕ್ಷಿ ಮಹಿಮೆ ಅಪಾರ, ನೈಜ ಮಣಿಯನ್ನು ಕಂಡು ಹಿಡಿಯೋದು ಹೇಗೆ?

 

ಇದನ್ನು ಧರಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಶಿವನ ಕೃಪೆ ಸಿಗುತ್ತದೆ ಎಂಬ ನಂಬಿಕೆ ಇದೆ. ಜಪದಲ್ಲಿ ಇದನ್ನು ಬಳಸುವುದಕ್ಕೆ ಲೆಕ್ಕಾಚಾರ ಮಾಡಲು ಮಣಿಗಳು ಬೇಕು ಎಂಬುದು ಒಂದು ಕಾರಣವಾದರೆ, ರುದ್ರಾಕ್ಷಿಗಿರುವ ಧಾರ್ಮಿಕ ಮಹತ್ವ ಇನ್ನೊಂದು ಕಾರಣ. ಪುರಾಣದ ಕತೆಯ ಪ್ರಕಾರ, ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಲ್ಲಲು ಶಿವನು ಪ್ರಖರ ಅಸ್ತ್ರವೊಂದನ್ನು ಪ್ರಯೋಗಿಸಿದ್ದನಂತೆ. ಅದರ ಪ್ರಭೆಗೆ ಶಿವನ ಕಣ್ಣಲ್ಲಿಯೇ ನೀರು ಬಂತಂತೆ. ಆ ಕಣ್ಣೀರಿನ ಹನಿಗಳು ನೆಲಕ್ಕೆ ಬಿದ್ದಾಗ ಅಲ್ಲಿ ಕೆಲ ಗಿಡಗಳು ಹುಟ್ಟಿದವಂತೆ. ಅವು ಮರವಾಗಿ ಬೆಳೆದು, ಅವುಗಳಲ್ಲಿ ರುದ್ರಾಕ್ಷಿಯ ಫಲಗಳು ಬಿಡುತ್ತಿವೆಯಂತೆ.

ಭೂಕಂಪದಿಂದ ದೇವಸ್ಥಾನಕ್ಕೇಕೆ ಹಾನಿಯಾಗುವುದಿಲ್ಲ?

 

ಕತೆ ಹಾಗಿರಲಿ, ರುದ್ರಾಕ್ಷಿಯ ವ್ಯಾಪಕ ಬಳಕೆಗೆ ಅದರಲ್ಲಿರುವ ವೈದ್ಯಕೀಯ ಗುಣಗಳೂ ಕಾರಣ. ರುದ್ರಾಕ್ಷಿಯಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಮತ್ತು ಪ್ಯಾರಾ ಮ್ಯಾಗ್ನೆಟಿಕ್ ಗುಣಗಳಿದ್ದು, ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಮನಸ್ಸನ್ನು ಶಾಂತವಾಗಿ ಇರಿಸುತ್ತವೆಯಂತೆ. ಅದರಿಂದ ಆತ್ಮವಿಶ್ವಾಸ ಹೆಚ್ಚಿ, ನಮ್ಮ ಅಂತಃಸತ್ವ ಉದ್ದೀಪನೆಯಾಗುತ್ತದೆಯಂತೆ. ರುದ್ರಾಕ್ಷಿಯಿಂದ ಹೊರಟ ಬಯೋಎಲೆಕ್ಟ್ರಿಕ್ ಸಿಗ್ನಲ್‌ಗಳು ಮೆದುಳನ್ನು ಉದ್ದೀಪಿಸಿ, ನರವ್ಯೂಹವನ್ನು ಚುರುಕುಗೊಳಿಸುತ್ತವೆ. ಅದರಿಂದಾಗಿ ರಕ್ತದೊತ್ತಡ, ಖಿನ್ನತೆ, ಆತಂಕ, ಏಕಾಗ್ರತೆ ಕೊರತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ರುದ್ರಾಕ್ಷಿ ಮಾಲೆಯಲ್ಲಿ ಓಂ ಜಪ ಮಾಡಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ.

ಮಹಾಬಲ ಸೀತಾಳಬಾವಿ

click me!