ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣನ್ಯೂಸ್ ಕಾರವಾರ
ಉತ್ತರ ಕನ್ನಡ (ನ.29) ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಮಾಲಾಧಾರಿಗಳಾಗಿ ತೆರಳುತ್ತಾರೆ. ಆದ್ರೆ, ಇಲ್ಲೊಂದು ಬೀದಿನಾಯಿ ಮಾಲಾಧಾರಿಗಳ ಜತೆ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ಸುಮಾರು 200 ಕಿಲೋಮೀಟರ್ ದೂರದಿಂದ ಗುರುಸ್ವಾಮಿಗಳ ಜತೆ ಹೆಜ್ಜೆ ಹಾಕುತ್ತಿದೆ. ಅಲ್ಲದೇ, ಅಲ್ಲಲ್ಲಿ ಮಾಲಾಧಾರಿಗಳನ್ನು ರಕ್ಷಿಸುವ ಮೂಲಕ ಈ ಬೀದಿ ನಾಯಿ ಅಯ್ಯಪ್ಪನ ಸೇವೆ ಕೂಡಾ ನಡೆಸುತ್ತಿದೆ. ಈ ಬೀದಿ ನಾಯಿಯ ದೈವಭಕ್ತಿಯ ಒಂದು ಝಲಕ್ ಇಲ್ಲಿದೆ ನೋಡಿ...
undefined
ಒಂದೆಡೆ ಕುತ್ತಿಗೆಗೆ ಮಾಲೆಹಾಕಿ ಕಪ್ಪು ಬಟ್ಟೆ ಕಟ್ಟಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಗುರು ಸ್ವಾಮಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ ನಡೆಸುತ್ತಿರುವ ಶ್ವಾನ. ಮತ್ತೊಂದೆಡೆ ತಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ವಾನಕ್ಕೆ ಆಹಾರ ಹಾಕುತ್ತಾ ಆರೈಕೆ ಮಾಡುತ್ತಿರುವ ಮಾಲಾಧಾರಿಗಳು. ಇನ್ನೊಂದೆಡೆ ಈ ವಿಶೇಷ ಶ್ವಾನವನ್ನು ಆಶ್ಚರ್ಯದಿಂದ ನೋಡುತ್ತಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಧಾರವಾಡದಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಮೂಲಕ ಕೇರಳದತ್ತ ಸಾಗುವ ಹಾದಿಯಲ್ಲಿ.
Shabarimala: ಅಯ್ಯಪ್ಪ ಸ್ವಾಮಿಗೆ 20,000 ತುಪ್ಪ ತುಂಬಿದ ತೆಂಗಿನಕಾಯಿ ನೀಡಿದ ಬೆಂಗಳೂರು ಭಕ್ತ!
ಈ ಶ್ವಾನವನ್ನು ನೋಡಿದರೆ ಯಾರೋ ಸಾಕಿ ಕರೆದುಕೊಂಡು ಹೋಗುತ್ತಿದ್ದಾರೆಯೇ ಎಂದೆನಿಸಬಹುದು. ಆದರೆ, ಈ ಶ್ವಾನ ಯಾರೂ ಸಾಕಿದ್ದಲ್ಲ. ಬೀದಿಯಲ್ಲಿ ಬಿದ್ದ ಆಹಾರ ಸೇವಿಸಿಕೊಂಡು ಕಂಡಲ್ಲಿ ಮಲಗುವ ಬೀದಿ ನಾಯಿ. ಇದೀಗ ಗುರುಸ್ವಾಮಿಗಳೊಂದಿಗೆ ಮಾಲೆ ಧರಿಸಿ ಶಬರಿ ಮಲೆಗೆ ಹೊರಟು ನಿಂತಿದೆ.
ಧಾರವಾಡ ಜಿಲ್ಲೆಯ ಮಂಗಳಗಟ್ಟಿ ಗ್ರಾಮದ ನಿವಾಸಿಗಳಾದ ನಾಗನಗೌಡ ಪಾಟೀಲ್, ಮಂಜುಸ್ವಾಮಿ ಎಂಬವವರು ತಮ್ಮ ಮೂರು ಜನರ ತಂಡದೊಂದಿಗೆ ಮಾಲೆ ಧರಿಸಿ ಕೇರಳದ ಶಬರಿಮಲೆಗೆ ಪಾದಯಾತ್ರೆ ಮೂಲಕ ದರ್ಶನಕ್ಕೆ ಹೊರಟಿದ್ದರು. ಇದೇ ಗ್ರಾಮದಲ್ಲಿದ್ದ ಈ ಬೀದಿ ನಾಯಿಯೂ ಸಹ ಹಿಂಬಾಲಿಸಿದೆ. ಆದ್ರೆ, ಒಂದಷ್ಟು ದೂರ ಬಂದು ಮರಳುತ್ತೆ ಎಂದು ಅಂದುಕೊಂಡಿದ್ದ ಗುರುಸ್ವಾಮಿಗಳು ತಮ್ಮಷ್ಟಕ್ಕೇ ತಾವು ಪಾದಯಾತ್ರೆ ಪ್ರಾರಂಭಿಸಿದ್ರು.
ಇವರನ್ನೇ ಹಿಂಬಾಲಿಸಿದ ಈ ಶ್ವಾನ ನೂರಾರು ಕಿಲೋಮೀಟರ್ ಕ್ರಮಿಸಿದರೂ ಇವರ ಸಂಘ ಮಾತ್ರ ಬಿಡಲಿಲ್ಲ. ದೇವರ ಪೂಜೆ, ವಿಶ್ರಾಂತಿ ಹೀಗೆ ಎಲ್ಲೆಂದರಲ್ಲಿ ಸಾಥ್ ನೀಡಿದ ಈ ಶ್ವಾನ ಇವರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡುತ್ತಾ ಇವರೊಂದಿಗೆ ಸಾಗಿದೆ.
Viral Video: ಅಪ್ಪು ಫೋಟೋ ಹಿಡಿದು ಅಯ್ಯಪ್ಪ ದರ್ಶನ ಮಾಡಿದ ಬಾಲಕ
ಇನ್ನು ಇವರನ್ನು ಹಿಂಬಾಲಿಸಿ ಇವರ ರಕ್ಷಣೆ ಮಾಡುತ್ತಾ ಬರುತಿದ್ದ ಈ ಶ್ವಾನದ ಬಗ್ಗೆ ಇವರಿಗೂ ಪ್ರೀತಿ ಹುಟ್ಟಿದೆ. ತಾವು ಪಡೆಯುವ ಪ್ರಸಾದವನ್ನು ಇದಕ್ಕೂ ನೀಡಿ ಅಯ್ಯಪ್ಪನ ಮಾಲೆ ಹಾಕಿ ಶಬರಿಮಲೆಗೆ ಈ ಶ್ವಾನದೊಂದಿಗೆ ಪ್ರಯಾಣ ಮುಂದುವರೆಸಿದ್ದು, ಉತ್ತರಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರದ ಮೂಲಕ ಶಬರಿಮಲೆಗೆ ಹೊರಟಿದ್ದಾರೆ. ಈ ಶ್ವಾನ ತಮ್ಮೊಂದಿಗೆ ಪ್ರಯಾಣ ಬೆಳೆಸಿದಾಗಿನಿಂದ ನಮಗೆ ತೊಂದರೆಗಳು ಬರಲಿಲ್ಲ, ಎಲ್ಲವೂ ಒಳಿತಾಗಿದೆ. ದಾರಿಯಲ್ಲಿ ಮಂಗಗಳ ಕಾಟದಿಂದಲೂ ಶ್ವಾನ ರಕ್ಷಣೆ ಒದಗಿಸಿದೆ. ಈ ಶ್ವಾನಕ್ಕೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿಸಿ ಅಲ್ಲಿಂದ ವಾಹನದ ಮೂಲಕ ಮರಳಿ ಧಾರವಾಡಕ್ಕೆ ಬಿಡುತ್ತೇವೆ ಎನ್ನುತ್ತಾರೆ ಶ್ವಾನದ ಜತೆಯಾದ ಗುರುಸ್ವಾಮಿ.
ಒಟ್ಟಿನಲ್ಲಿ ದೇವರಲ್ಲಿ ಭಕ್ತಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಪ್ರಾಣಿಗಳಿಗೂ ದೇವರಲ್ಲಿ ಭಕ್ತಿ ಇರುತ್ತೆ ಅನ್ನೋದಕ್ಕೆ ಈ ಶ್ವಾನವೇ ಸಾಕ್ಷಿ. ಅಯ್ಯಪ್ಪ ಮಾಲಾಧಾರಿಗಳ ಜತೆ ಸಾಗಿ ಮನುಷ್ಯರಂತೆ ಭಕ್ತಿ ತೋರುವ ಈ ಶ್ವಾನ ನಿಜಕ್ಕೂ ಗ್ರೇಟ್.