ತುಂಟ ವಿನಾಯಕನ ತರಹೇವಾರಿ ಕತೆಗಳು!

By Web DeskFirst Published Sep 2, 2019, 11:31 AM IST
Highlights

ಹಿಂದೂಗಳಲ್ಲಿ ಕೋಟ್ಯಾನೋಕೋಟಿ ದೇವರು, ದೇವತೆಗಳಿದ್ದರೂ ಅವರಲ್ಲಿ ಗಣೇಶ ಸ್ವಲ್ಪ ಹೆಚ್ಚೇ ಫೇಮಸ್. ಅಷ್ಟೇ ಅಲ್ಲ, ಮೊದಲ ಪೂಜಿತ. ಅವನ ಕುರಿತಾದ ನೂರಾರು ಕತೆಗಳು ಬಹಳ ಆಸಕ್ತಿಕರವಾಗಿವೆ. 

ಪ್ರಥಮ ವಂದಿತ ಗಣಪತಿಗೆ ನೂರೆಂಟು ಹೆಸರು. ಒಂದೊಂದು ಹೆಸರಿನ ಹಿಂದೆಯೂ ಕತೆಯಿದೆ, ಆತನ ಒಂದೊಂದು ಚೇಷ್ಟೆ, ಮಾತು, ಶಕ್ತಿ- ಪ್ರತಿಯೊಂದರ ಕುರಿತೂ ಕತೆಗಳು ಜನಪ್ರಿಯವಾಗಿವೆ. ಅಂಥ ಕೆಲವು ಕತೆಗಳನ್ನು ಇಲ್ಲಿ ಕೊಡಲಾಗಿದೆ. 

ಮುಂಬಯಿಯಲ್ಲಿ ಗಣೇಶ ಮಹಾಪರ್ವ!

ಸ್ತ್ರೀ ರೂಪ

ವಿನಾಯಕನ ಸ್ತ್ರೀ ಸ್ವರೂಪವೇ ವಿನಾಯಕಿ. ಒಮ್ಮೆ ಅಂಧಕನೆಂಬ ಅಸುರ ಕೈಲಾಸಕ್ಕೆ ಲಗ್ಗೆ ಹಾಕಿ ಪಾರ್ವತಿಯನ್ನು ಹೊತ್ತುಕೊಂಡು ಹೋಗಲು ಯತ್ನಿಸುತ್ತಾನೆ. ಆಗ ಶಿವ ಆತನನ್ನು ತ್ರಿಶೂಲದಿಂದ ಇರಿಯುತ್ತಾನೆ. ಆದರೆ, ಅಂಧಕನ ಒಂದೊಂದು ರಕ್ತದ ಹನಿ ಬಿದ್ದಂತೆಯೂ ಅದರಿಂದೆಲ್ಲ ಮತ್ತಷ್ಟು ಅಂಧಕರು ಹುಟ್ಟಿಕೊಳ್ಳತೊಡಗುತ್ತಾರೆ. ಹೀಗಾಗಿ, ತಮ್ಮ ಶಕ್ತಿಯನ್ನು ಬಳಸಿ ಆತನ ರಕ್ತ ನೆಲಕ್ಕೆ ತಾಕದಂತೆ ನೋಡಿಕೊಳ್ಳಬೇಕೆಂದು ಪಾರ್ವತಿಯು ದೇವತೆಗಳಲ್ಲಿ ಆಜ್ಞಾಪಿಸುತ್ತಾಳೆ. ಇದಕ್ಕಾಗಿ ಗಣಪತಿಯು ವಿನಾಯಕಿಯ ರೂಪ ತಾಳಿ ಕಾರ್ಯ ಸಾಧಿಸುತ್ತಾನೆ. ಈಗ ಈ ವಿನಾಯಕಿಯು ತಾಂತ್ರಿಕ ಸಾಧನೆಗಳನ್ನು ಮಾಡುವವರ ಮೆಚ್ಚಿನ ದೇವತೆ. 

ಮಹಾಭಾರತ ಲಿಪಿಕಾರ

ಮಹರ್ಷಿ ವೇದವ್ಯಾಸರು ವೇದ, ಉಪನಿಷತ್ತು ಹಾಗೂ ಪುರಾಣಗಳ ಕತೆಗಳು ಹಾಗೂ ಸಿದ್ಧಾಂತಗಳನ್ನೆಲ್ಲ ಸೇರಿಸಿ ಮಹಾಕಾವ್ಯ ರಚಿಸಲು ವೇದವ್ಯಾಸರು ಮುಂದಾದಾಗ ಅದನ್ನು ತಮ್ಮ ಯೋಚನೆಯಷ್ಟೇ ವೇಗದಲ್ಲಿ ಬರೆಯುವ ಲಿಪಿಕಾರ ಬೇಕಿತ್ತು. ಅವರು ಕಣ್ಣು ಮುಚ್ಚಿ ಕುಳಿತಾಗ ಹೊಳೆಯುತ್ತಿದ್ದ ಸಾಲುಗಳನ್ನು ಹಾಗೆಯೇ ಹೇಳುತ್ತಾ ಹೋದಂತೆಲ್ಲ ಬರೆವಷ್ಟು ವೇಗಿ ಲಿಪಿಕಾರ ಯಾರೂ ಸಿಗಲಿಲ್ಲ. ಆಗ ಗಣಪತಿಯು ಇದೇನು ಮಹಾ ವೇಗ, ನಾನು ಬರೆಯುವ ವೇಗಕ್ಕೆ ನೀವು ಹೇಳಲು ಸೋತರೆ ನಾನು ಅರ್ಧದಲ್ಲಿಯೇ ಎದ್ದು ಹೋಗುತ್ತೇನೆ ಎಂದು ಸವಾಲು ಹಾಕಿದ.

ಗಣಪನ ಮಾರಿ ಬಂದ ಹಣ: ಧೃಡತೆಯತ್ತ ಹೆಣ್ಣುಮಕ್ಕಳ ಶಿಕ್ಷಣ!

ಒಂದು ವೇಳೆ ತಾವು ಸೋತರೆ ಎಂದು ಯೋಚಿಸಿದ ವೇದವ್ಯಾಸರು ಗಣಪತಿಗೆ ಮತ್ತೊಂದು ಕಂಡೀಶನ್ ಹಾಕಿದರು. ನಾನು ಹೇಳುವ ಶ್ಲೋಕಗಳನ್ನು ನೀನು ಅರ್ಥ ಮಾಡಿಕೊಂಡೇ ಬರೆಯಬೇಕು ಎಂದು. ವ್ಯಾಸರಿಗೆ ವಿಶ್ರಾಂತಿ ಬೇಕೆಂದಾಗೆಲ್ಲ ಅವರು ಕ್ಲಿಷ್ಟಕರವಾದ ಗೂಢಾರ್ಥ ಬಿಡಿಸಬೇಕಾದ ಶ್ಲೋಕ ಹೇಳುತ್ತಿದ್ದರು. ಗಣಪ ಅದನ್ನು ಅರ್ಥ ಮಾಡಿಕೊಂಡು ಬರೆವಷ್ಟರಲ್ಲಿ ಮುಂದಿನ ಶ್ಲೋಕ ರೆಡಿ ಇರುತ್ತಿತ್ತು. ಇವರಿಬ್ಬರ ವೇಗಕ್ಕೆ ಸರಿಸಾಟಿಯಾಗಲಾರದೆ ಬಳಪವಾಗಿ ಬಳಕೆಯಾಗುತ್ತಿದ್ದ ಗರಿ ಮುರಿದು ಹೋಗುತ್ತಿತ್ತು. ಆಗ ಗಣಪತಿ ತನ್ನ ದಂತವನ್ನೇ ಮುರಿದು ಅದನ್ನೇ ಪೆನ್ನಾಗಿ ಬಳಸಿದ. ಸುಮಾರು ಮೂರು ವರ್ಷ ಕಾಲ ಈ ಜೋಡಿ ಪಂದ್ಯಾಟ ನಡೆದು, 1 ಲಕ್ಷಕ್ಕೂ ಹೆಚ್ಚು ಶ್ಲೋಕಗಳೊಂದಿಗೆ ಮಹಾಭಾರತ ಸೃಷ್ಟಿಯಾಯಿತು. 

ವಕ್ರದಂತ

ಪಾರ್ವತಿ ಸ್ನಾನಕ್ಕೆ ಹೋದಾಗ ಶಿವನಿಗೆ ಕೈಲಾಸದೊಳಕ್ಕೆ ಹೋಗಲು ಗಣಪತಿ ಬಿಡದ ಕತೆ ನಿಮಗೆ ಗೊತ್ತೇ ಇದೆ. ಇನ್ನೊಮ್ಮೆ ಶಿವ ತನ್ನ ಗಣಗಳೊಂದಿಗೆ ಸಮಾಲೋಚನೆಯಲ್ಲಿದ್ದಾಗ, ಪರಶುರಾಮ ಬಂದ. ಆಗ ಕೂಡಾ ಪರಶುರಾಮನನ್ನು ಗಣಪ ತಡೆದ. ಮೊದಲೇ ಪರಶುರಾಮನಿಗೆ ಸಿಟ್ಟು ಜಾಸ್ತಿ. ತಕ್ಷಣ ಅವನು ತನ್ನ ಕೊಡಲಿಯನ್ನು ಗಣಪನತ್ತ ಬೀಸಿದ. ಆ ಕೊಡಲಿಯನ್ನು ಶಿವನೇ ಪರಶುರಾಮನಿಗೆ ಕೊಟ್ಟಿದ್ದರಿಂದ ವಿನಾಯಕನಿಗೆ ಅದರ ವಿರುದ್ಧ ಹೋರಾಡುವಂತಿರಲಿಲ್ಲ. ಹಾಗಾಗಿ, ಆತ ತನ್ನ ದಂತವನ್ನು ಕೊಡಲಿಗೆ ಅಡ್ಡ ತಂದ. ತಂದ ಮುರಿಯಿತು. ಈತ ವಕ್ರತುಂಡನಾದ. 

ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ

ಜ್ಞಾನದ ಹಣ್ಣು

ಒಮ್ಮೆ ವಿನಾಯಕ ಹಾಗೂ ಅಣ್ಣ ಷಣ್ಮುಖ ಆಡುವಾಗ ಅವರಿಗೊಂದು ಹಣ್ಣು ಕಂಡಿತು. ಇಬ್ಬರೂ ಏಕಕಾಲಕ್ಕೆ ಅದಕ್ಕೆ ಕೈ ಹಾಕಿದರು. ನಂತರದಲ್ಲಿ ಅದು ತನಗೇ ಸೇರಬೇಕೆಂದು ಇಬ್ಬರೂ ಜಗಳವಾಡತೊಡಗಿದರು. ಹಂಚಿಕೊಳ್ಳಲು ಯಾರೊಬ್ಬರೂ ಸುತಾರಾಂ ತಯಾರಿರಲಿಲ್ಲ. ಜಗಳ ತಂದೆತಾಯಿಯವರೆಗೆ ಹೋಯಿತು. ಹಣ್ಣನ್ನು ನೋಡುತ್ತಿದ್ದಂತೆ ಶಿವ, ಇದು ಜ್ಞಾನ ಹಾಗೂ ಶಾಶ್ವತತೆ ನೀಡುವ ಹಣ್ಣು. ಪಾತ್ರರಿಗೆ ಇದು ಸೇರಬೇಕು. ಹಾಗಾಗಿ, ಒಂದು ಕೆಲಸ ಮಾಡೋಣ.

ನಿಮ್ಮಿಬ್ಬರಲ್ಲಿ ಯಾರು ಬೇಗ ಈ ಜಗತ್ತನ್ನು 3 ಸುತ್ತು ಹಾಕಿಕೊಂಡು ಮೊದಲು ಬರುವಿರೋ ಅವರಿಗೇ ಈ ಹಣ್ಣು ಎಂದ. ಕಾರ್ತಿಕೇಯನಿಗೆ ಖುಷಿಯಾಯಿತು. ಏಕೆಂದರೆ ಅವನ ವಾಹನ ನವಿಲು. ಆದರೆ, ಗಣಪನದು ಇಲಿ. ಹಾಗಾಗಿ, ತಾನೇ ಗೆಲ್ಲುವ ದೃಢ ವಿಶ್ವಾಸದೊಂದಿಗೆ ಷಣ್ಮುಖ ಸ್ವಲ್ಪವೂ ತಡ ಮಾಡದೆ ನವಿಲಿನ ಮೇಲೇರಿ ಹಾರಿದ. ಗಣಪತಿ ಮಾತ್ರ ಸ್ವಲ್ಪವೂ ಚಿಂತಿಸದೆ ಶಿವಪಾರ್ವತಿಗೆ ಮೂರು ಸುತ್ತು ಬಂದು ನಮಸ್ಕರಿಸಿದ. ಅರೆ, ನೀನು ಜಗತ್ತನ್ನು ಸುತ್ತಲು ಹೋಗುವುದಿಲ್ಲವೇ, ಈ ಹಣ್ಣು ಬೇಡವೇ ಎಂದು ಪಾರ್ವತಿ ಕೇಳಿದಾಗ, ಅಮ್ಮಾ, ನೀವಿಬ್ಬರೇ ನನ್ನ ಜಗತ್ತಾಗಿರುವಾಗ ನಾನೇಕೆ ಮತ್ತೆಲ್ಲೋ ಹೋಗಲಿ? ಅದಕ್ಕೇ ನಿಮಗೆ ಮೂರು ಸುತ್ತು ಬಂದಿದ್ದೇನೆ ಎಂದ. ತಕ್ಷಣ ಶಿವ ಪಾರ್ವತಿಯರಿಬ್ಬರೂ ನಸುನಗುತ್ತಾ ಹಣ್ಣನ್ನು ಗಣಪತಿಗೆ ನೀಡಿದರು. ಜ್ಞಾನದ ಹಣ್ಣನ್ನು ತಿಂದ ಗಣಪತಿಯು ಜ್ಞಾನದ ಅಧಿಪತಿಯಾಗಲೇಬೇಕಲ್ಲವೇ?

ಮರೆಯಲಾಗದ ಗಣೇಶನ ಹಬ್ಬ ಆಚರಣೆಗೆ ಇಲ್ಲಿ ವಿಸಿಟ್ ಮಾಡಿ...

ಅನ್ನದ ಪಾಯಸ

ಒಮ್ಮೆ ಗಣೇಶನಿಗೆ ಅಕ್ಕಿಯ ಪಾಯಸ ತಿನ್ನಲು ಆಸೆಯಾಯಿತು. ಆತ ಆಕ್ಕಿ ಹಾಗೂ ಬೆಲ್ಲವನ್ನು ಬಹಳಷ್ಟು ಜನರ ಮನೆಗೆ ತೆಗೆದುಕೊಂಡು ಹೋಗಿ ಪಾಯಸ ಮಾಡಿಕೊಡುವಂತೆ ಕೇಳಿಕೊಂಡ. ಆದರೆ, ಎಲ್ಲರೂ ಅವರವರ ಕೆಲಸಗಳಲ್ಲ ಬ್ಯುಸಿಯಾಗಿದ್ದರು. ಕಡೆಗೆ ಬಡವಳಾದ ಮುದುಕಿಯೊಬ್ಬಳು ತಾನು ಪಾಯಸ ಮಾಡಿಕೊಡುವುದಾಗಿ ಹೇಳಿ ಎರಡನ್ನೂ ಸೇರಿಸಿ ಬೇಯಿಸಲಿಟ್ಟಳು.

ಗಣೇಶ ಆಡಲು ಹೋದ. ಮುದುಕಿ ನಿದ್ರಿಸಿದಳು. ಎದ್ದಾಗ ಪಾಯಸ ರೆಡಿ ಇತ್ತು. ಗಣೇಶನಿಗಾಗಿ ಎಲ್ಲಿಯೇ ಹುಡುಕಿದರೂ ಆತ ಕಾಣಲಿಲ್ಲ. ಮುದುಕಿಗೆ ಹಸಿವು ತಡೆಯಲಾಗುತ್ತಿರಲಿಲ್ಲವಾದ್ದರಿಂದ ಅವಳು ಸ್ವಲ್ಪ ಖೀರನ್ನು ಗಣಪತಿಯ ವಿಗ್ರಹಕ್ಕೆ ನೈವೇದ್ಯ ಮಾಡಿ ತಾನು ಎಲ್ಲವನ್ನೂ ತಿಂದುಬಿಟ್ಟಳು. ಹೊಟ್ಟೆ ತುಂಬಿದ ಮೇಲೆ ಗಣೇಶ ಓಡುತ್ತಾ ಮನೆಗೆ ಬಂದ. ಆಗ ಮುದುಕಿಗೆ ತಾನು ಪೂರ್ತಿ ಪಾತ್ರೆ ಖಾಲಿ ಮಾಡಿದ್ದು ತಿಳಿಯಿತು. ತಪ್ಪಾಯಿತು ಕಂದಾ, ಹಸಿವಿನಲ್ಲಿ ಎಲ್ಲವನ್ನೂ ತಿಂದುಬಿಟ್ಟೆ. ನಿನಗೆ ಉಳಿಸಲಿಲ್ಲ ಎಂದಳು. ಆಗ ಗಣೇಶನು ನೀನು ನೈವೇದ್ಯ ಮಾಡಿದಾಗಲೇ ನನ್ನ ಹೊಟ್ಟೆ ತುಂಬಿತು ಎನ್ನುತ್ತಾ ತೇಗಿದನು. ಮುದುಕಿಗೆ ಈತನೇ ಗಣಪತಿ ಎಂಬುದು ಅರಿವಾಗಿ ಕಾಲಿಗೆ ಬಿದ್ದಳು. 

ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ನೀಡಬಹುದಾದ 4 ಉಡುಗೊರೆ!

click me!