userpic
user icon
0 Min read

ಬೆಂಗಳೂರು ಕಂಟೋನ್ಮೆಂಟ್‌ನ 368 ಮರಗಳ ಮಾರಣಹೋಮಕ್ಕೆ ಕೊಡಲಿ ಹಿಡಿದು ನಿಂತ ಬಿಬಿಎಂಪಿ!

Save-bengaluru-cantonment-368-trees-request to Khandre sat

Synopsis

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಮರಗಳನ್ನು ಕಡಿಯುವ ಪಗ್ರಸ್ತಾಪವನ್ನು ಬಿಬಿಎಂಪಿ ಸಾರ್ವಜನಿಕರ ಮುಂದಿಟ್ಟಿದೆ. ಆದರೆ, ಪರಿಸರಕ್ಕಾಗಿ ನಾವು ಸಂಘಟನೆಯು ಮರಗಳನ್ನು ಉಳಿಸುವಂತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದೆ.

ಬೆಂಗಳೂರು (ಏ.29): ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಬೃಹತ್ ಮರಗಳನ್ನು ಕಡಿಯುವುದಕ್ಕೆ ಬಿಬಿಎಂಪಿ ಕೊಡಲಿ ಹಿಡಿದುಕೊಂಡು ಸಜ್ಜಾಗಿದೆ. ಆದರೆ, ಅತಿಯಾದ ವಾಹನ ಸಂಚಾರ ಮತ್ತು ಮಾಲಿನ್ಯದಿಂದಾಗಿ ಜನರಿಗ ಶುದ್ಧ ಗಾಳಿ ಅಗತ್ಯವಾಗಿದ್ದು, ಜೊತೆಗೆ ಇಲ್ಲಿ ಪಾರಂಪರಿಕ ಮರಗಳೂ ಇದ್ದು ಅವುಗಳನ್ನು ಉಳಿಸಿಕೊಡಬೇಕು ಎಂದು ಪರಿಸರಕ್ಕಾಗಿ ನಾವು ಸಂಘಟನೆಯಿಂದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಲಾಗಿದೆ.

ರೈಲ್ವೆ ಇಲಾಖೆಯ ಮನವಿಯಂತೆ ಏ.25ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ನೀಡಲಾದ ಸಾರ್ವಜನಿಕ ಪ್ರಕಟಣೆಯಲ್ಲಿ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ ವಾಣಿಜ್ಯ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದ್ದರಿಂದ, ಈ ಆವರಣದಲ್ಲಿ ಬೆಳೆದಿರುವ 368 ಬೃಹತ್ ಮರಗಳನ್ನು ತೆರವುಗೊಳಿಸುವಂತೆ ರೈಲ್ವೆ ಇಲಾಖೆಯವರು ಬಿಬಿಎಂಪಿಗೆ ಮನವಿ ಮಾಡಿದ್ದಾರೆ ಎಂದು ಪಾಲಿಕೆ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಜೊತೆಗೆ, ಈ ಬಗ್ಗೆ ಸ್ಥಳೀಯ ಬೆಂಗಳೂರು ನಾಗರಿಕರಿಂದ ಸಲಹೆಗಳು/ ಆಕ್ಷೇಪಣೆಗಳು / ಅಭಿಪ್ರಾಯಗಳನ್ನು ಆಹ್ವಾನಿಸಿದ್ದಾರೆ. ಒಂದು ವೇಳೆ ಸಾರ್ವಜನಿಕರು ಎಷ್ಟೇ ಅಹವಾಲು, ಆಕ್ಷೇಪಣೆ, ಅಭಿಪ್ರಾಯಗಳನ್ನು ಕೊಟ್ಟರೂ ಬಿಬಿಎಂಪಿ ಮರಗಳನ್ನು ಕತ್ತರಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಮರಗಳನ್ನು ತೆರವುಗೊಳಿಸದೇ ಉಳಿಸಿಕೊಳ್ಳುವ ಅನಿವಾರ್ಯತೆ ಬೆಂಗಳೂರಿಗೆ ತೀವ್ರ ಅಗತ್ಯವಾಗಿದೆ.

ಇದನ್ನೂ ಓದಿ: 

ಸಚಿವರೇ ಇತ್ತೀಚಿಗೆ ನೀವು ಮಂಡ್ಯ , ಮೈಸೂರು ಮುಂತಾದ ಕಡೆ ಮರಗಳನ್ನು ಕಡಿದಿದ್ದ ಕಾರಣದಿಂದ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶಗಳು ಕೂಡ ವ್ಯಕ್ತವಾಗಿದ್ದವು. ಇದನ್ನು ಗಮನಿಸಿದ ತಕ್ಷಣ ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಯಿಂದ ತನಿಖೆಗೆ ಆದೇಶಗಳನ್ನು ನೀಡಿದ್ದೀರಿ. ಈ ಆದೇಶಗಳಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ 'Cutting down  large number of trees is like killing human beings, or worse than that' ಇದನ್ನು ಕೂಡ ಉಲ್ಲೇಖಿಸಿದ್ದೀರಿ. ನಿಮ್ಮ  ಈ ತ್ವರಿತ ಸ್ಪಂದನೆ ನಿಮಗಿರುವ ಪರಿಸರ ಕಾಳಜಿಯನ್ನು ತೋರಿಸುತ್ತದೆ. ಜೊತೆಗೆ, ಪರಿಸರ ಕಾಳಜಿ ಹಾಗೂ ಪರಿಸರವನ್ನು ಉಳಿಸಿಕೊಳ್ಳಬೇಕು ಎಂಬ ನಿಮ್ಮ ಈ ನಿಲುವಿಗೆ ಸಾರ್ವಜನಿಕರಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ನಿಮ್ಮ ಎಲ್ಲ ಕ್ರಮಗಳು ಅಲ್ಲಿ ಮರಗಳನ್ನು ಕಡಿದ ನಂತರ ತನಿಖೆಗೆ ಸಂಬಂಧಪಟ್ಟಿವೆ.

ಆದರೆ, ಇದೀಗ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ 368 ಮರಗಳನ್ನು ಕಡಿದುಹಾಕುವ ಮೊದಲೇ ಉಳಿಸಿಕೊಳ್ಳುವುದಕ್ಕೆ ಅವಕಾಶ ಸಿಕ್ಕಿದೆ. ಈ ಮೂಲಕ ಪರಿಸರ ಸಂರಕ್ಷಣೆ ವಿಷಯದಲ್ಲಿ ನಿಮಗಿರುವ ಬದ್ಧತೆ ಮತ್ತು ಕಾಳಜಿಯನ್ನು ತೋರಿಸುವ ಅವಕಾಶವೂ ನಿಮಗೆ ಸಿಕ್ಕಿದೆ. ಒಂದು ಕಾಲದಲ್ಲಿ ಉದ್ಯಾನನಗರಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಈಗಿನ ಸ್ಥಿತಿಯ ಬಗ್ಗೆ ನಿಮಗೂ ಸ್ಪಷ್ಟವಾದ ಅರಿವಿದೆ. ಬೆಂಗಳೂರಿನ ಮರಗಳ‌ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ. ಈಗ ಕಡಿಯಲು ಹೊರಟಿರುವ 368 ಮರಗಳಲ್ಲಿ ಹಲವು ಮರಗಳು  ಪಾರಂಪರಿಕ ಮರಗಳೆಂದು (ಹೆರಿಟೇಜ್) ಕರೆಯಬಹುದಾದ ಮರಗಳಿವೆ. ಅವುಗಳನ್ನು ಉಳಿಸಿಕೊಳ್ಳುವ ಅಗತ್ಯತೆ ನಮಗಿದೆ.

ಇದನ್ನೂ ಓದಿ: 

ದೆಹಲಿಯಲ್ಲಿ ಈಗಾಗಲೇ ಶುದ್ಧಗಾಳಿ ಕೊರತೆಯಿಂದಾಗಿ ಉಸಿರಾಟದ ತೊಂದರೆ ಉಂಟಾಗಿದೆ. ಜಾಗತಿಕ ತಾಪಮಾನ ವಿಪರೀತ ಏರುತ್ತಿದ್ದು, ಈಗಿರುವ ಮರಗಳನ್ನು ಉಳಿಸಿಕೊಂಡು, ಗಿಡಗಳನ್ನು ನೆಟ್ಟು ಬೆಳೆಸಬೇಕಾದ ತುರ್ತು ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ನೂರಾರು ಬೃಹತ್ ಮರಗಳನ್ನು, ಅದರಲ್ಲಿಯೂ ವಾಣಿಜ್ಯ ಉದ್ದೇಶಕ್ಕಾಗಿ  ಕಡಿಯಲು ಹೊರಟಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಬೆಂಗಳೂರಿನ ವಾಯುಮಾಲಿನ್ಯ, ಜನ ಮತ್ತು ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ಸದರಿ ಮರಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳು ಇನ್ನು ಮುಂದೆ ಪರಿಸರ ಸ್ನೇಹಿ ಆಗಿರಬೇಕಾದ ಅನಿವಾರ್ಯತೆ ಇದೆ. ಈಗ ಸದರಿ ಮರಗಳನ್ನು ಕಡಿಯದಂತೆ ತಡೆಯುವ ಒಳ್ಳೆಯ ಕೆಲಸದ ಅವಕಾಶ ನಿಮ್ಮ ಮುಂದಿದೆ.

ಈ ಬಗ್ಗೆ ತಾವು ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ಪರಿಸರಕ್ಕಾಗಿ ನಾವು ಸಂಘಟನೆಗೆ ಒದಗಿಸಬೇಕು ಎಂದು ಸಂಘಟನೆ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕೂಡ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Latest Videos