ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ, ಮಿಕ್ಕವರಿಗೆ ಕೇಳಿದ್ದು ಹೌದು: ಪಲ್ಲವಿ

Synopsis
ಪಹಲ್ಗಾಂನಲ್ಲಿ ಭಯೋತ್ಪಾದಕರು ತನ್ನ ಪತಿಯನ್ನು ಕೊಂದಾಗ, "ನಮ್ಮನ್ನು ಸಾಯಿಸಿ" ಎಂದು ತಾನು ಮತ್ತು ತನ್ನ ಮಗ ಕೂಗಿದ್ದಾಗಿ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಹೇಳಿದ್ದಾರೆ. ಈ ಹೇಳಿಕೆಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ವಿವರಿಸಲು ಮನಸ್ಸಿಲ್ಲ ಎಂದು ಮನವಿ ಮಾಡಿದ್ದಾರೆ.
ಶಿವಮೊಗ್ಗ (ಏ.29): ಪಹಲ್ಗಾಂನಲ್ಲಿ ಭಯೋತ್ಪಾದಕರು ನನ್ನ ಪತಿಯನ್ನು ಕೊಂದಾಗ, ನಮ್ಮನ್ನು ಸಾಯಿಸಿ ಎಂದು ನಾನು ಮತ್ತು ನನ್ನ ಮಗ ಕೂಗಿ ಭಯೋತ್ಪಾದಕರನ್ನು ಕೇಳಿದ್ದು ಹೌದು. ಆಗ ಆ ಉಗ್ರರು ‘ಮೋದಿಗೆ ಹೋಗಿ ಹೇಳಿ’ ಎಂದಿದ್ದೂ ಹೌದು. ಆದರೆ, ನಾನು ಈ ಮಾತುಗಳನ್ನು ಹೇಳಿದ್ದಕ್ಕೆ ಅನೇಕ ನೆಗೆಟಿವ್ ಕಾಮೆಂಟ್ಸ್ ಬರುತ್ತಿದೆ ಎಂದು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಹೇಳಿದ್ದಾರೆ. ನಾನು ಈ ಮಾತುಗಳನ್ನೆಲ್ಲಾ ವಿಡಿಯೋ ಮಾಡಿಟ್ಟುಕೊಳ್ಳಬೇಕಿತ್ತೇನು ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಸನ್ನಿವೇಶದಲ್ಲಿ ನಡೆಯುವ ಘಟನೆಗಳನ್ನು ಯಾರಾದರೂ ವಿಡಿಯೋ ಮಾಡಿ ಇಟ್ಟುಕೊಳ್ಳಲು ಸಾಧ್ಯವಾ? ಇಂತಹ ನೆಗೆಟಿವ್ ಕಾಮೆಂಟ್ಸ್‌ಗಳಿಂದ ತೀವ್ರವಾಗಿ ಬೇಸರವಾಗುತ್ತಿದೆ. ಆದರೆ, ಇಂತಹ ಕಾಮೆಂಟ್ಸ್‌ಗಳಿಗೆ ನಾವು ಏನು ಮಾಡಲು ಸಾಧ್ಯ ಎಂದು ಮರು ಪ್ರಶ್ನಿಸಿದರು.
ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ. ಬಹುಶಃ ನನ್ನ ಪತಿಗೆ ದೂರದಿಂದಲೇ ಗುಂಡು ಹಾರಿಸಿದ್ದರಿಂದ ಈ ಮಾತನ್ನು ಕೇಳಿಲ್ಲ ಎಂದೆನಿಸುತ್ತದೆ. ಆದರೆ, ಮಿಕ್ಕವರಿಗೆ ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದು ಅಲ್ಲಿದ್ದ ಬೇರೆಯವರು ಹೇಳಿದ್ದು ಹೌದು ಎಂದು ಪಲ್ಲವಿ ತಿಳಿಸಿದರು.
ಇದನ್ನೂ ಓದಿ: ದಾಲ್ ಲೇಕ್‌ನಲ್ಲಿ ಪತ್ನಿ ಪಲ್ಲವಿ ಜೊತೆ ದೋಣಿ ವಿಹಾರ ಮಾಡಿದ್ದ ಮಂಜುನಾಥ್ ಕೊನೇ ವಿಡಿಯೋ ವೈರಲ್!
ದಯವಿಟ್ಟು ಅರ್ಥ ಮಾಡಿಕೊಳ್ಳಿ
ದಾಳಿ ನಡೆದ ದಿನ ಮಧ್ಯಾಹ್ನ 12.30ಕ್ಕೆ ಪಹಲ್ಗಾಂ ತಲುಪಿದ್ದೇವು. ಗುಡ್ಡದ ಮೇಲ್ಭಾಗಕ್ಕೆ ತಲುಪುವಷ್ಟರಲ್ಲಿ ಮಧ್ಯಾಹ್ನ 1.30 ಆಗಿತ್ತು. ನಾವು ಕುದುರೆಯಿಂದ ಇಳಿದು 5 ನಿಮಿಷಕ್ಕೆ ಈ ದಾಳಿ ನಡೆಯಿತು. ಸ್ವಲ್ಪ ದೂರದಿಂದಲೇ ನನ್ನ ಪತಿ ಮೇಲೆ ನೇರವಾಗಿ ಗುಂಡು ಹಾರಿಸಿದರು. ಒಂದೇ ಹೊಡೆತಕ್ಕೆ ಮೃತಪಟ್ಟು ಕೆಳಗೆ ಬಿದ್ದರು. ಇವರ ಹತ್ತಿರವೇ ಇದ್ದ ಲೆಫ್ಟಿನೆಂಟ್ ಅವರ ಮೇಲೂ ಗುಂಡು ಹಾರಿಸಿದರು. ಅವರು ಕೆಳಗೆ ಬಿದ್ದಾಗ ಅವರ ಪತ್ನಿ ಸ್ವಲ್ಪ ಉಸಿರಿದೆ, ಸಹಾಯ ಮಾಡಿ, ಕುದುರೆ ಮೇಲೆ ಕೆಳಗೆ ಕರೆದುಕೊಂಡು ಹೋಗೋಣ ಎಂದು ದೀನವಾಗಿ ಕೇಳಿಕೊಳ್ಳುತ್ತಿದ್ದರು.
ಇದನ್ನೂ ಓದಿ: ನನ್ನ ಮತ್ತು ಮಗನನ್ನೂ ಕೊಲ್ಲಿ ಎಂದು ಉಗ್ರರೆದುರು ಕಣ್ಣೀರಿಟ್ಟ ಪಲ್ಲವಿ, 'ಇದನ್ನ ಮೋದಿಗೆ ತಿಳಿಸು' ಎಂದ ಉಗ್ರ!
ನಾನು ಅವರ ಕಡೆ ಹೋದೆ. ಆಗ ಸ್ವಲ್ಪ ಉಸಿರಿತ್ತು. ಆದರೆ, ಆಗಿನ ಸ್ಥಿತಿಯಲ್ಲಿ ಅವರನ್ನು ಕುದುರೆ ಮೇಲೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇರಲಿಲ್ಲ. ಐದೇ ನಿಮಿಷದಲ್ಲಿ ಅವರ ಜೀವ ಹೋಯಿತು. ಆದರೆ, ಲೆಫ್ಟಿನೆಂಟ್ ಅವರ ಪತ್ನಿ ಚಿಕ್ಕ ವಯಸ್ಸಿನವಳಾಗಿದ್ದು, ಈ ಸಾವನ್ನು ಸ್ವೀಕರಿಸುವ ಮನಃಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ನಾನು ಏನೂ ಹೇಳಲಿಲ್ಲ ಎಂದರು.
ಈ ಬಗ್ಗೆ ಜಾಸ್ತಿ ಏನನ್ನೂ ಕೇಳಬೇಡಿ. ನನಗೆ ಇದನ್ನು ವಿವರಿಸಿ ಹೇಳಲು ಮನಸ್ಸು ಇಲ್ಲ, ದಯವಿಟ್ಟು ನಮ್ಮನ್ನು ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದರು.