ಬಿಜೆಪಿಯಿಂದ ದೇಶಭಕ್ತಿ ಕಲಿಬೇಕಿಲ್ಲ; ಕಾಂಗ್ರೆಸ್ ಪಕ್ಷಕ್ಕೆ ಬಹಳ ಸ್ಪಷ್ಟ ನಿಲುವಿದೆ: ಬಿಕೆ ಹರಿಪ್ರಸಾದ್

Synopsis
ಬಿಜೆಪಿಯ 'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಟೀಕೆಯನ್ನು ಬಿಕೆ ಹರಿಪ್ರಸಾದ್ ಖಂಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ, ಬಿಜೆಪಿ ಸೋಷಿಯಲ್ ಮೀಡಿಯಾ ರಾಜಕಾರಣ ಮತ್ತು ಸ್ಲೋಗನ್‌ಗಳ ಮೂಲಕ ವಾತಾವರಣ ಹಾಳುಗೆಡವುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಉಗ್ರ ದಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಏ.29): 'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಬಿಜೆಪಿಯವರ ಟೀಕೆಗೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ. ಆರು ತಿಂಗಳ ಹಿಂದಿನ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಅವರು, ಬಿಜೆಪಿಯವರು ಸೋಷಿಯಲ್ ಮೀಡಿಯಾ ರಾಜಕಾರಣಕ್ಕೆ ಒತ್ತು ನೀಡಿ, ಸ್ಲೋಗನ್‌ಗಳ ಮೂಲಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿಯವರು ಘೋಷಣಾ ವೀರರು, ಸ್ಲೋಗನ್‌ಗಳೇ ಅವರ ಗೊಬ್ಬರ ಮತ್ತು ಊಟ ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, ಕೇಂದ್ರ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದರು. ಭಾರತೀಯರ ಮೇಲಿನ ಉಗ್ರ ದಾಳಿಗಳ ವಿರುದ್ಧ ಕಾಂಗ್ರೆಸ್ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕೇಂದ್ರದ ನಾಯಕರು ಸಾಂತ್ವನ ಹೇಳಲು ಹೋಗದಿರುವುದು, ಸರ್ವಪಕ್ಷ ಸಭೆಗಳಿಂದ ಮೋದಿ ತಪ್ಪಿಸಿಕೊಳ್ಳುವುದು ಏಕೆ? ತುರ್ತು ಸಂಸತ್ ಅಧಿವೇಶನ ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ, ಮಿಕ್ಕವರಿಗೆ ಕೇಳಿದ್ದು ಹೌದು: ಪಲ್ಲವಿ
ನಾಗಪುರ್ ಮತ್ತು ವಾಟ್ಸಾಪ್ ಯೂನಿವರ್ಸಿಟಿಗಳಿಂದ ದೇಶ ಹಾಳಾಗುತ್ತಿದೆ ಎಂದು ಆರೋಪಿಸಿದ ಅವರು, ಪಹಲ್ಗಾಂ ದಾಳಿಯಿಂದ ಇಡೀ ದೇಶ ದುಃಖದಲ್ಲಿರುವಾಗ ಐಪಿಎಲ್ ಪಂದ್ಯಗಳನ್ನ ಏಕೆ ನಿಲ್ಲಿಸುತ್ತಿಲ್ಲ? ಎಂದು ಪ್ರಶ್ನಿಸಿದ ಬಿಕೆ ಹರಿಪ್ರಸಾದ್ ಅವರು, ಅಮಿತ್ ಶಾ ಅವರ ಮಗನಿಗೆ ತೊಂದರೆಯಾಗಬಾರದು ಎಂಬ ಕಾರಣವಿದೆ ಎಂದು ಕಿಡಿಕಾರಿದರು.
26/11 ದಾಳಿಯ ಸಂದರ್ಭದಲ್ಲಿ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿದ್ದನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರವೇ ತಪ್ಪೊಪ್ಪಿಕೊಂಡಿದೆ ಎಂದಿರುವ ಹರಿಪ್ರಸಾದ್, ಲೋಕಸಭೆ ಮತ್ತು ರಾಜ್ಯಸಭೆಯ ತುರ್ತು ಅಧಿವೇಶನ ಕರೆದು ಎಲ್ಲವನ್ನೂ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವು ಸ್ಪಷ್ಟವಾಗಿದೆ, ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.