ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು!

Synopsis
ಕರ್ನಾಟಕದಲ್ಲಿ ಬೇಸಿಗೆ ಮುಗಿಯಲು ಇನ್ನೂ ಒಂದರಿಂದ ಒಂದೂವರೆ ತಿಂಗಳು ಬಾಕಿ ಇದ್ದರೂ, ರಾಜ್ಯದ ಜಲಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. 42 ಸಾವಿರ ಕೆರೆಗಳ ಪೈಕಿ 17 ಸಾವಿರ ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿವೆ. ಜಲಾಶಯಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ.
ಗಿರೀಶ್ ಗರಗ
ಬೆಂಗಳೂರು (ಏ.29) : ಬೇಸಿಗೆ ಮುಗಿಯಲು ಇನ್ನೂ ಒಂದರಿಂದ ಒಂದೂವರೆ ತಿಂಗಳು ಬಾಕಿ ಇದೆ. ಆದರೆ, ಈಗಾಗಲೇ ರಾಜ್ಯದ ಜಲಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. ಅದರಲ್ಲೂ ರಾಜ್ಯದ 42 ಸಾವಿರ ಕೆರೆಗಳ ಪೈಕಿ 17 ಸಾವಿರ ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿವೆ. ಕಳೆದ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಾಗಿ ರಾಜ್ಯದ ಜಲಮೂಲಗಳು ಭರ್ತಿಯಾಗಿದ್ದವು.
ಇದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದೇ ಅಂದಾಜಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕೆರೆಕಟ್ಟೆಗಳು, ಜಲಾಶಯಗಳು ಭರ್ತಿಯಾಗಿ ಗ್ರಾಮೀಣ ಭಾಗದ ಜನರ ಮೊಗದಲ್ಲಿ ಸಂತಸವನ್ನುಂಟು ಮಾಡಿತ್ತು. ಆದರೆ, ಏಪ್ರಿಲ್ ಮಧ್ಯಭಾಗದಲ್ಲಿಯೇ ರಾಜ್ಯದ ಒಟ್ಟು ಕೆರೆಗಳ ಪೈಕಿ ಶೇ.35ರಷ್ಟು ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆಯಿದೆ. ಬಿಸಿಲಝಳ ಇದೇ ರೀತಿ ಮುಂದುವರಿದರೆ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ ಹಾಗೂ ಮತ್ತಷ್ಟು ಕೆರೆಗಳಲ್ಲಿಯೂ ನೀರು ಶೇಖರಣೆ ಪ್ರಮಾಣ ಶೇ. 30ಕ್ಕೆ ಕುಸಿಯುವ ಸಾಧ್ಯತೆಗಳಿವೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಅಬ್ಬರದ ಬೇಸಿಗೆ ಮಳೆ ಶುರು; ಬೆಂಗಳೂರಲ್ಲಿ ಆಗುತ್ತಾ ವರುಣನ ಸಿಂಚನ?
16,660 ಕೆರೆಗಳಲ್ಲಿ ನೀರಿನ ಕೊರತೆ: ರಾಜ್ಯದಲ್ಲಿ ಒಟ್ಟಾರೆ 41,875 ಕೆರೆಗಳಿವೆ. ಅವುಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ವಹಣೆಯಲ್ಲೇ 32,068 ಕೆರೆಗಳಿವೆ. ಉಳಿದಂತೆ ಸಣ್ಣ ನೀರಾವರಿ ಇಲಾಖೆ ನಿರ್ವಹಣೆಯಲ್ಲಿ 3,778, ಜಲಸಂಪನ್ಮೂಲ ಇಲಾಖೆ ಅಡಿ 2,048, ಬಿಬಿಎಂಪಿ, ಬಿಡಿಎ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಿರ್ವಹಣೆಯಲ್ಲಿ 1,285 ಹಾಗೂ ಅರಣ್ಯ, ಕಂದಾಯ ಸೇರಿದಂತೆ ಇನ್ನಿತರ ಇಲಾಖೆಗಳ ಸುಪರ್ದಿಯಲ್ಲಿ 2,696 ಕೆರೆಗಳಿವೆ. ಆ ಕೆರೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ವಹಣೆಯಲ್ಲಿರುವ 14,285 ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದೆ. ಉಳಿದಂತೆ ಸಣ್ಣ ನೀರಾವರಿ ಇಲಾಖೆ ಕೆರೆಗಳಲ್ಲಿ 1,443, ಜಲಸಂಪನ್ಮೂಲ ಇಲಾಖೆ ಕೆರೆಗಳಲ್ಲಿ 344, ಬಿಬಿಎಂಪಿ, ಬಿಡಿಎ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಿರ್ವಹಣೆಯ 588 ಕೆರೆಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಿದೆ. ಒಟ್ಟಾರೆ 16,660 ಕೆರೆಗಳಲ್ಲಿ ಶೇಖರಣೆಯಾಗಿರುವ ನೀರಿನ ಪ್ರಮಾಣ ಶೇ.30ಕ್ಕಿಂತ ಕಡಿಮೆಯಿದೆ.
ಉಳಿದಂತೆ ಅರಣ್ಯ, ಕಂದಾಯ ಸೇರಿ ಇನ್ನಿತರ ಇಲಾಖೆಗಳ ಸುಪರ್ದಿಯಲ್ಲಿರುವ ಕೆರೆಗಳಲ್ಲಿ ನೀರಿನ ಪ್ರಮಾಣ ಶೇ.30ಕ್ಕಿಂತ ಹೆಚ್ಚಿದೆ. -ಬಾಕ್ಸ್- ಜಲಾಶಯಗಳಲ್ಲೂ ನೀರಿನ ಕೊರತೆ ಕೆರೆಗಳಷ್ಟೇ ಅಲ್ಲದೆ ರಾಜ್ಯದ ಪ್ರಮುಖ ಜಲಾಶಯಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ. ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ಒಟ್ಟಾರೆ 207.18 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದೆ.
ಅದರಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ 104 ಟಿಎಂಸಿ ಅಡಿಗಳಷ್ಟು ನೀರು ಮಾತ್ರ ಬಳಕೆ ಮಾಡಬಹುದಾಗಿದೆ. ಅದರಲ್ಲೂ 123 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆ ಸಾಮರ್ಥ್ಯವಿರುವ ಆಲಮಟ್ಟಿ ಜಲಾಶಯದಲ್ಲಿ ಕೇವಲ 8 ಟಿಎಂಸಿ ಅಡಿ, 105 ಟಿಎಂಸಿ ಅಡಿ ನೀರು ಶೇಖರಣೆ ಮಾಡಬಹುದಾದ ತುಂಗಭದ್ರಾ ಜಲಾಶಯದಲ್ಲಿ 1.39 ಟಿಎಂಸಿ ಅಡಿ, 49.45 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆ ಸಾಮರ್ಥ್ಯದ ಕೃಷ್ಣರಾಜಸಾಗರ ಜಲಾಶಯದಲ್ಲಿ 11.78 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಬಳಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಬೇಸಿಗೆ ರಜೆಯಲ್ಲಿ ನಿಮ ಮಕ್ಕಳನ್ನ ಈ ತರಗತಿಗೆ ಕಳಿಸಿ, ಗಣಿತದ ಭಯ ಕೊನೆಗೊಳ್ಳುತ್ತೆ!
ವಾಣಿವಿಲಾಸ 92% ಭರ್ತಿ ರಾಜ್ಯದ ಉಳಿದೆಲ್ಲ ಜಲಾಶಯಗಳಿಗಿಂತ ವಾಣಿವಿಲಾಸ ಸಾಗರ ಬೇಸಿಗೆ ಕಾಲದಲ್ಲೂ ಭರ್ತಿಯಾಗಿದೆ. ಚಿತ್ರದುರ್ಗದ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಸಾಮರ್ಥ್ಯ 30 ಟಿಎಂಸಿ ಅಡಿಗಳಷ್ಟಿದೆ. ಅದರಲ್ಲಿ ಒಟ್ಟಾರೆ 27.82 ಟಿಎಂಸಿ ಅಡಿಗಳಷ್ಟು ನೀರು ಭರ್ತಿಯಾಗಿದ್ದು, ಡೆಡ್ ಸ್ಟೋರೇಜ್ ಹೊರತುಪಡಿಸಿ 25.24 ಟಿಎಂಸಿ ಅಡಿಗಳಷ್ಟು ನೀರನ್ನು ಬಳಕೆ ಮಾಡಬಹುದಾಗಿದೆ.