ಪೋಲಿಸ್ ಅಧಿಕಾರಿ ಮೇಲೆಯೇ ಕೈ ಮಾಡಲು ಹೋಗುವ ಸಿಎಂ ಸಿದ್ದರಾಮಯ್ಯ ಗೂಂಡಾ.. ಈಶ್ವರಪ್ಪ ಕಿಡಿ

Synopsis
ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ದೇಶವಿರೋಧಿ ಎಂದು ಕರೆದಿದ್ದಾರೆ ಮತ್ತು ಸಿದ್ದರಾಮಯ್ಯನವರ ನಡವಳಿಕೆಯನ್ನು ಟೀಕಿಸಿದ್ದಾರೆ.
ಶಿವಮೊಗ್ಗ (ಏ.29): ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಅವರು, 'ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಕಾಂಗ್ರೆಸ್ ಮಾರ್ಗದರ್ಶಕರಾಗಿ ಕರೆಯಿಸಿಕೊಳ್ಳಲಿ. ಸಿದ್ದರಾಮಯ್ಯ, ತಿಮ್ಮಾಪುರ, ಸಂತೋಷ್ ಲಾಡ್ ಮುಂತಾದವರು ಕಾಂಗ್ರೆಸ್ ವರಿಷ್ಠರ ಸೂಚನೆಗೆ ಬೆಲೆ ಕೊಡುತ್ತಿಲ್ಲ. ಕಾಂಗ್ರೆಸ್ ನಾಯಕರ ಮನೆಯಲ್ಲಿ ಇಂತಹ ಘಟನೆಗಳಾದರೆ ಮಾತ್ರ ಅವರಿಗೆ ಗೊತ್ತಾಗುತ್ತದೆ. ಮುಸ್ಲಿಂ ಚೇಲಾಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್ ಮುಖಂಡರು ದೇಶವಿರೋಧಿ ಹೇಳಿಕೆಗಳನ್ನು ಯಾಕೆ ನೀಡುತ್ತಿದ್ದಾರೆ?' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಜಿಂ ಮುನೀರ್ ದೇಶ ಬಿಟ್ಟು ಓಡಿಹೋಗಿದ್ದು ಭಾರತೀಯ ಸೈನಿಕರ ತಾಕತ್ತು ತೋರಿಸುತ್ತದೆ ಎಂದರು.
ಇದನ್ನೂ ಓದಿ: ಶ್ರೀರಾಮಸೇನೆ, ಬಜರಂಗದಳದಿಂದ ದೇಶದ ಸೈನಿಕರ ಯಶಸ್ಸಿಗಾಗಿ ಮಹಾಯಾಗ!...
ಸಂವಿಧಾನ, ಕಾನೂನು ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ತಾನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ವೇದಿಕೆಯಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಂದಿಗೆ ಹೇಗೆ ವರ್ತಿಸಬೇಕು? ಅಧಿಕಾರಿ ಮೇಲೆಯೇ ಕೈಮಾಡಲು ಹೋದ ಸಿದ್ದರಾಮಯ್ಯ ಗುಂಡಾಗಿರಿಯಂತೆ ವರ್ತಿಸಿದ್ದಾರೆ. ಇದು ಸಿದ್ದರಾಮಯ್ಯನ ಅಹಂಕಾರ, ಅಧಿಕಾರದ ಮದ ತೋರಿಸುತ್ತದೆ. ಅಧಿಕಾರಿಯ ಕ್ಷಮೆ ಕೇಳಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೀರೋ ಆಗಿರಬಹುದು. ರಾಜ್ಯದಲ್ಲಿ ಜೀರೋ. ಅವರ ಹೇಳಿಕೆಗಳು ದೇಶದ್ರೋಹಿಗಳ ಪಟ್ಟಿಗೆ ಸೇರ್ಪಡೆಯಾಗುವಂತಿವೆ. ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಈಶ್ವರಪ್ಪ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಕೆಲವರು ಈಶ್ವರಪ್ಪ ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಇದು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ಎಂದು ಟೀಕಿಸಿದ್ದಾರೆ.