11 ಕಿ.ಮೀಗೆ ಕೇವಲ 166 ರೂ: ಪ್ರಾಮಾಣಿಕ ಆಟೋ ಚಾಲಕನಿಗೆ ಪ್ರಯಾಣಿಕನ ಸಲಾಂ!

Synopsis
ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು 11 ಕಿ.ಮೀ. ಪ್ರಯಾಣಕ್ಕೆ ಕೇವಲ ₹166 ಮಾತ್ರ ಪಡೆದಿದ್ದಾರೆ. ಇದು ಸಾಮಾನ್ಯವಾಗಿ ಹೆಚ್ಚಿನ ದರಗಳನ್ನು ವಿಧಿಸುವ ಆಟೋ ಚಾಲಕರಿಂದ ಭಿನ್ನವಾಗಿದೆ. ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಅಲ್ಲಿಗೆ ಬರ್ತೀರಾ, ಇಲ್ಲಿಗೆ ಬರ್ತೀರಾ ಎಂದು ಕೇಳಿದಾಗ, ಅದು ಒಂದು ಕಿಲೋ ಮೀಟರ್ಗಿಂತ ಕಡಿಮೆ ಅಂತರವಾದ್ರೂ ಸೈ. ಹೆಚ್ಚಿನ ಆಟೋ ಚಾಲಕರ ಬಾಯಲ್ಲಿ ಶುರುವಾಗುವುದೇ 100 ರೂಪಾಯಿಯಿಂದ! ಅದೂ ನಾವು ಕರೆದಲ್ಲಿ ಬಂದರೆ ಅದುವೇ ನಮ್ಮ ಪುಣ್ಯ. ಹತ್ತಿರವಾದರೂ ಬರಲ್ಲ, ದೂರವಾದರೂ ಬರಲ್ಲ. ಇನ್ನು ಬರುತ್ತೇನೆ ಎಂದರೆ ಅಷ್ಟಾಗುತ್ತೆ, ಇಷ್ಟಾಗುತ್ತೆ ಎನ್ನುವ ಮಾತು. ಮೀಟರ್ ಹಾಕಿ ಎಂದ್ರೆ ಆಗಲ್ಲ ಎನ್ನೋ ಮಾತು. ಇಷ್ಟು ಹತ್ತಿರಕ್ಕೆ ಇಷ್ಟೊಂದು ರೇಟಾ ಕೇಳಿದ್ರೆ, ವಾಪಸ್ ಬರುವಾಗ ಖಾಲಿ ಬರಬೇಕು, ಆ ರಸ್ತೆ ಸರಿ ಇಲ್ಲ. ಅಲ್ಲಿ ಏರು ಜಾಸ್ತಿ ಇದೆ... ಹೀಗೆ ಏನೇನೋ ನೆಪಗಳೇ ಜಾಸ್ತಿ. ಒಂದು ವೇಳೆ ಅಪ್ಪಿ ತಪ್ಪಿ ಮೀಟರ್ ಹಾಕಿದ್ರೆ, ಅಲ್ಲಿ ಏನಾದ್ರೂ ಎಡವಟ್ಟು ಇದ್ಯೋ ಎನ್ನುವ ಸಂದೇಹ ಪಡುವ ಸ್ಥಿತಿಯೂ ಇರುತ್ತದೆ! ಹಾಗಾಗಿದೆ ಸದ್ಯದ ಸ್ಥಿತಿ.
ಇದು ಬೆಂಗಳೂರು, ಮೈಸೂರಿನಂಥ ಮಹಾನಗರಗಳ ಮಾತಾದರೆ, ಇನ್ನು ಪಟ್ಟಣ, ನಗರಗಳಲ್ಲಿ ಕೇಳೋದೇ ಬೇಡ ಬಿಡಿ. ಮೀಟರೂ ಇಲ್ಲ, ಕೆಲವು ಆಟೋದವರ ರೇಟು ಕೇಳಿದ್ರೆ ದಂಗಾಗಿ ಹೋಗೋದೂ ಇದೆ. ಮಿನಿಮಮ್ ಚಾರ್ಜೇ 100 ರೂಪಾಯಿ ಇರುತ್ತದೆ. ನಿಮಗಿಂತ ಬೆಂಗಳೂರೇ ವಾಸಿನಪ್ಪಾ ಎನ್ನುವ ಸ್ಥಿತಿ ಅಲ್ಲಿ ಇರುತ್ತದೆ. ಆಗಲೂ ಅವರದ್ದು ಅದೇ ಮಾತು. ಡೀಸೆಲ್ ರೇಟ್ ಜಾಸ್ತಿ, ಗ್ಯಾಸ್ ರೇಟ್ ಜಾಸ್ತಿ, ರಸ್ತೆ ಸರಿಯಿಲ್ಲ... ಇತ್ಯಾದಿ ಇತ್ಯಾದಿ... ಆದರೆ, ಇವುಗಳ ನಡುವೆಯೂ ಕೆಲವು ಬಾರಿ ಅಚ್ಚರಿ ಎನ್ನುವ ರೀತಿಯಲ್ಲಿ ಪ್ರಾಮಾಣಿಕ ಆಟೋ ಚಾಲಕರೂ ಸಿಗುತ್ತಾರೆ. ಮೀಟರ್ ಹಾಕ್ತೇನೆ, ಒಂದಿಪ್ಪತ್ತು ರೂಪಾಯಿ ಹೆಚ್ಚು ಕೊಡಿ ಎಂದು ಪ್ರಾಮಾಣಿಕವಾಗಿ ಹೇಳುವವರು ಇದ್ದಾರೆ. ಮತ್ತೆ ಕೆಲವರು, ಏನೂ ಹೇಳದೇ ಒಂದಿಷ್ಟು ಒಪ್ಪಬಹುದಾದ ಹಣವನ್ನು ಹೇಳಿದರೆ, ಮತ್ತೆ ಬೆರಳೆಣಿಕೆ ಚಾಲಕರು ಮೀಟರ್ ಹಾಕಿ, ಆ ಮೀಟರ್ ನಲ್ಲಿ ಯಾವುದೇ ರೀತಿ ಗೋಲ್ಮಾಲ್ ಮಾಡದೇ ಸರಿಯಾದ ಹಣವನ್ನು ಪಡೆಯುವವರೂ ಇದ್ದಾರೆ. ಅಂಥ ಒಬ್ಬ ಬೆಂಗಳೂರಿನ ಆಟೊ ಚಾಲಕನ ಬಗ್ಗೆ ಇದೀಗ ಪ್ರಯಾಣಿಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇನ್ನೂ ಹತ್ತೇ ವರ್ಷ: ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಬಿಲ್ ಗೇಟ್ಸ್ ಶಾಕಿಂಗ್ ವಿಷ್ಯ ರಿವೀಲ್!
ಬೆಂಗಳೂರಿನ ವ್ಯಕ್ತಿಯೊಬ್ಬರು ಇದನ್ನು ಶೇರ್ ಮಾಡಿದ್ದಾರೆ. ಅವರು ರೆಡ್ಡಿಟ್‌ನಲ್ಲಿ ಇದನ್ನು ಶೇರ್ ಮಾಡಿದ್ದಾರೆ. 11 ಕಿ.ಮೀ ಸವಾರಿಗೆ ಕೇವಲ 166 ರೂ. ಶುಲ್ಕ ವಿಧಿಸಿದ ಆಟೋ ಚಾಲಕನೊಂದಿಗೆ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಸಾಮಾನ್ಯವಾಗಿ ದರಗಳ ಮೇಲೆ ಚೌಕಾಶಿ ಮಾಡುವ ನಗರದಲ್ಲಿ ಒಂದು ಹೊಸ ಬದಲಾವಣೆಯಾಗಿದೆ. "ಬೆಂಗಳೂರಿನಲ್ಲಿ ಉತ್ತಮ ಆಟೋ ಚಾಲಕರು ಇನ್ನೂ ಇದ್ದಾರೆ!" ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ತಮ್ಮ ಮನೆಯಿಂದ ಅರಮನೆ ಮೈದಾನಕ್ಕೆ 11.2 ಕಿಲೋ ಮೀಟರ್ ಆಗಿದ್ದು, ಆಟೋ ಚಾಲಕನ ಮೀಟರ್ನಲ್ಲಿ ಕೇವಲ 166 ರೂಪಾಯಿ ತೋರಿಸಿದುದಾಗಿ ಹೇಳಿದ್ದಾರೆ.
ಇದನ್ನು ನೋಡಿದ ಮೇಲೆ, ದಿನನಿತ್ಯ ಆಟೋದಲ್ಲಿ ಹೋಗುವವರು ತಾವು ಹೋಗುತ್ತಿರುವ ಆಟೋಗಳ ಮೀಟರ್ ಮೇಲೆ ಸಂದೇಹ ಪಡುವಂತಾಗಿದೆ! ಮೀಟರ್ ಹಾಕುವುದೇ ಇಲ್ಲ, ಹಾಕಿದರೆ ಐದಾರು ಕಿಲೋಮೀಟರ್ಗೆ 150 ರೂಪಾಯಿ ದಾಟುವುದನ್ನು ನೋಡಿದ್ದೇವೆ. ಅಬ್ಬಾ ನಾವು ಇಷ್ಟು ಮೋಸ ಹೋಗುತ್ತಿದ್ದೆವೆಯೋ ಕೇಳುತ್ತಿದ್ದಾರೆ. ಅದಕ್ಕೆ ಕೆಲವರು ಓಲಾ, ಊಬರ್ ಬುಕ್ ಮಾಡಿಸಿ. ಅದರಲ್ಲಿ ರೇಟು ಸ್ವಲ್ಪ ಹೆಚ್ಚಾದರೂ ಮಾಮೂಲಿ ಆಟೋಗಳ ರೀತಿಯಲ್ಲಿ ವಸೂಲಿ ಮಾಡುವುದಿಲ್ಲ ಎಂದು ಸಲಹೆ ಕೊಡುತ್ತಿದ್ದಾರೆ. ಒಟ್ಟಿನಲ್ಲಿ ಈ ಆಟೋ ರೇಟು ಪ್ರಯಾಣಿಕರನ್ನು ಚಿಂತೆಗೀಡು ಮಾಡಿದ್ದಂತೂ ಸತ್ಯ.