ಹಿಂದೂಗಳಿಗೆ ಮತಾಂತರ ಮಾಡುವಂತೆ ಚಕ್ರವರ್ತಿ ಸೂಲಿಬೆಲೆ ಕರೆ! ಹೇಳಿದ್ದೇನು?

Synopsis
ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ಹಿಂದೂ ಸಮಾಜವನ್ನು ವಿಸ್ತರಿಸುವಂತೆ ಕರೆ ನೀಡಿದ್ದಾರೆ. ಉಜಿರೆಯ ಶ್ರೀರಾಮೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಮತಾಂತರ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಹೇಳಿದರು. ಹಿಂದೂ ಧರ್ಮದ ವಿಶೇಷತೆಗಳನ್ನು ಮನವರಿಕೆ ಮಾಡಿ ಜನರನ್ನು ಸೇರಿಸಿಕೊಳ್ಳುವಂತೆ ಸಲಹೆ ನೀಡಿದರು.
ಬೆಳ್ತಂಗಡಿ (ಏ.20): ಹಿಂದೂ ಸಮಾಜವನ್ನು ವಿಸ್ತರಿಸುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಸರ್ಕಾರವೇ ನೀಡಿದ ಮತಾಂತರದ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳೋಣ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಉಜಿರೆಯಲ್ಲಿ ಶನಿವಾರ ನಡೆದ ಶ್ರೀರಾಮೋತ್ಸವದಲ್ಲಿ ಮಾತನಾಡಿದರು.ಧರ್ಮಕ್ಕೆ ಆಘಾತವಾದಾಗ ಸುಮ್ಮನೆ ಕುಳಿತುಕೊಳ್ಳುವವರು ಧರ್ಮದ್ರೋಹಿಗಳು. ದುಷ್ಟ ಶಕ್ತಿಗಳ ನಾಶಕ್ಕೆ ಹನುಮಂತನಂತೆ ಬಲವಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ. ಸನಾತನ ಧರ್ಮವೆಂಬುದು ಕೇವಲ ಪ್ರಾಚೀನವಾದಷ್ಟೇ ಅಲ್ಲ, ಜಗತ್ತಿನ ಹಳೆಯ, ಇಂದಿನ ವರೆಗೆ ಜೀವಂತವಿರುವ ಏಕೈಕ ಧರ್ಮವಾಗಿದೆ. ಹೀಗಾಗಿ ಹಿಂದು ಧರ್ಮದ ತಂಟೆಗೆ ಬಂದರೆ ಅದಕ್ಕೆ ಸದಾ ಉತ್ತರಿಸಲು ಸಿದ್ಧವಾಗಬೇಕಾಗಿದೆ ಎಂದರು.
ಬಿಂದು ಬಿಂದು ಸೇರಿ ಒಂದಾಗುವಂತೆ ಹಿಂದುಗಳು ಒಟ್ಟಾಗಿ ಎದುರಿಸುವ ಕಾಲಬಂದಿದೆ. ಬಂಗಾಲದ ಗೋಪಾಲ ಮುಖರ್ಜಿಯ ಆದರ್ಶ ಅನುಸರಿಸುವ ಸಂದರ್ಭ ಬಂದಿದೆ ಎಂದು ಹೇಳಿದರು. ಗಂಗೆ, ಸರಯೂ ಸ್ವಚ್ಛವಾದಾಗ ಕಾಶಿ ವಿಶ್ವನಾಥನ, ಅಯೋಧ್ಯೆ ರಾಮನ ಮಂದಿರ ಎದ್ದು ನಿಂತಿತು. ಅದೇ ರೀತಿ ಯಮುನೆ ಸ್ಛಚ್ಛವಾಗುವ ಕಾಲ ಬಂದಿದೆ. ಕೃಷ್ಣನ ಭವ್ಯವಾದ ಮಂದಿರ ನೋಡುವ ಭಾಗ್ಯ ಬರಲಿದೆ ಎಂದು ಆಶಿಸಿದರು.
ಹಿಂದು ಸಂಖ್ಯೆ ಕಡಿಮೆಯಾದಂತೆ ದೇಶದ ಮೂಲ ಸತ್ವ ಕಡಿಮೆಯಾಗುತ್ತದೆ. ಹೀಗಾಗಿ ಹಿಂದೂ ಸಂಖ್ಯೆಯನ್ನು, ಹಿಂದೂ ಸಮಾಜವನ್ನು ವಿಸ್ತಾರಗೊಳಿಸಲು ಸರ್ಕಾರ ನೀಡಿರುವ ಮತಾಂತರವೆಂಬ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಳ್ಳೋಣ. ಸಮಾಜದ ವಿವಿಧ ಜಾತಿಯ ಸ್ವಾಮೀಜಿಗಳು, ಮುಖಂಡರು ಹಿಂದೂ ಧರ್ಮದ ವಿಶೇಷತೆಗಳನ್ನು ಮನವರಿಕೆ ಮಾಡಿ ಒಲಿಸು ಸೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ನಮ್ಮ ಹೃದಯ ವಿಶಾಲವಾಗಬೇಕು ಎಂದ ಅವರು ಬಜರಂಗದಳದ ಈ ಯೋಜನೆಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಸಾಗರದಲ್ಲಿ ವಿದ್ಯಾರ್ಥಿಯ ಜನಿವಾರ ಕಟ್; ಮತ್ತೊಂದು ಪ್ರಕರಣ ಬೆಳಕಿಗೆ!
ಜನಸಂಖ್ಯೆ ಜಾಸ್ತಿಯಾಗಲು ನಮ್ಮ ಜನ ಎರಡು ಮೂರು ಮಕ್ಕಳನ್ನ ಮಾಡ್ತಾರೇನ್ರೀ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ, ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಅಷ್ಟೇ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹೀಗಾಗಿ ಧರ್ಮ ವಿಸ್ತರಿಸಲು ಮಕ್ಕಳೇ ಆಗಬೇಕಂತೇನಿಲ್ಲ. ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳೋಣ. ಪೊಲೀಸರಿಗೂ ಹೇಳ್ತಾ ಇದೀನಿ, ಇದು ಸರ್ಕಾರ ಕೊಟ್ಟಿರೋ ಕಾನೂನು, ನಾವು ಹೇಳ್ತಿರೋದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು, ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವು ಮತಾಂತರ ಮಾಡಬಹುದು ಅಂತಾಯ್ತಲ್ಲ? ಸರ್ಕಾರವೇ ಧೈರ್ಯವಾಗಿ ಹೇಳಿದೆ, ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಎಂದರು.
ಒಂದೇ ದೇವರು ಒಳ್ಳೆಯದೋ ಅಥವಾ 33 ಕೋಟಿ ದೇವರು ಒಳ್ಳೆಯದೋ?
ಜಗತ್ತಿನ ಯಾವ ರಾಷ್ಟ್ರದಲ್ಲೂ ಈ ರೀತಿಯ ಪರಿಸ್ಥಿತಿ ಎಲ್ಲೂ ಇಲ್ಲ. ಹಾಗಾಗಿ ಮತಾಂತರ ಮಾಡಿ, ಸರ್ಕಾರವೇ ಅಧಿಕೃತವಾಗಿ ಹೇಳಿದೆ, ಮಾಡಲು ನಿಮಗೆ ಕಷ್ಟ ಏನು? ಮಾಡೋದು ಕಷ್ಟ ಏನಿಲ್ಲ, ನಾನು ಜಗತ್ತಿನ ಅತ್ಯಂತ ಶ್ರೇಷ್ಟ ಹಿಂದೂ ಧರ್ಮಕ್ಕೆ ಸೇರಿದವನು ಅಂತ ಹೇಳಿ. ಜಗತ್ತಿನಲ್ಲಿ ಅನೇಕ ಮತ ಪಂಥಗಳಿವೆ, ಆದರೆ ಅವರಿಗೆಲ್ಲಾ ಒಬ್ಬನೇ ದೇವರು ಇದ್ದಾನೆ. ಒಬ್ಬ ದೇವರಿಗೆ ಸಮಸ್ಯೆಯಾದ್ರೆ ಆ ಧರ್ಮವೇ ಹೋಯಿತು, ಆದರೆ ನಮಗೆ 33 ಕೋಟಿ ದೇವತೆಗಳಿದ್ದಾರೆ. ನೀವು ರಾಮನನ್ನ ಬೈದರೆ ನಾನು ಸೀತೆಯನ್ನ ಹಿಡಿದುಕೊಳ್ತೀನಿ, ನೀವು ಸೀತೆಗೆ ಕಳಂಕ ತರೋ ಪ್ರಯತ್ನ ಪಟ್ಟರೆ ಶ್ರೀಕೃಷ್ಣ ಇದ್ದಾನೆ. ಕೃಷ್ಣನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನಮಗೆ ಮಂಜುನಾಥ ಸ್ವಾಮಿ ಇದ್ದಾನೆ. ನೀವು ಮಂಜುನಾಥನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನನಗೆ ಊರಲ್ಲೊಂದು ದೇವಸ್ಥಾನ ಇದೆ, ಎಲ್ಲಿ ಬೇಕಾದರೂ ಹೋಗ್ತೀವಿ. ಹಾಗಾಗಿ ಅವರಿಗೆ ಹೇಳಿ, ಒಂದೇ ದೇವರು ಒಳ್ಳೆಯದೋ ಅಥವಾ 33 ಕೋಟಿ ದೇವರು ಒಳ್ಳೆಯದೋ?
ಮಿತ್ರರೇ ಅವರು ಬಂದು ಹೇಳ್ತಾರೆ, ನಮ್ಮದೊಂದೇ ಪುಸ್ತಕ ನಿಮ್ಮತ್ರ ಬಹಳ ಪುಸ್ತಕ ಇದೆ ಅಂತ. ಆಗ ನೀವು ಹೇಳಿ, ನಮ್ಮತ್ರ ಲೈಬ್ರಿರಿನೇ ಇದೆ, ಯಾವುದೋ ಒಂದು ಪುಸ್ತಕ ಸುಡೋದ್ರಿಂದ ಹಿಂದೂ ಧರ್ಮ ಸಾಯಲ್ಲ. ನಿಮ್ಮ ಮತ-ಪಂಥಗಳಲ್ಲಿ ಹೆಣ್ಮಕ್ಕಳಿಗೆ ಗೌರವ ಇಲ್ಲ ಅಂತ ಅವರಿಗೆ ಹೇಳಿ. ಇಲ್ಲಿರೋ ಹೆಣ್ಮಕ್ಕಳಿಗೆ ಮುಖ ಮುಚ್ಚಿಕೊಳ್ಳಿ ಅಂತ ಹೇಳಿಲ್ಲ, ಗಂಡು ಮಕ್ಕಳ ಪಕ್ಕದಲ್ಲಿ ಕೂರಬೇಡಿ ಅಂತ ಹೇಳಿಲ್ಲ. ಬರೋರಿಗೆ ಬನ್ನಿ ಅಂತ ಹೇಳಿ, ಬರುವವರನ್ನು ಮುಕ್ತ ಕಂಠದಿಂದ ಸ್ವಾಗತಿಸಿ. ಸಂಖ್ಯೆ ವೃದ್ದಿಸಲು ಮಕ್ಕಳೇ ಆಗಬೇಕೆಂದಿಲ್ಲ, ನಮ್ಮ ಹೃದಯ ಸ್ವಲ್ಪ ವಿಶಾಲ ಆಗಬೇಕಿದೆ ಎಂದರು.
ಇದನ್ನೂ ಓದಿ: ಅನ್ಯಧರ್ಮೀಯ ಯುವತಿಯರ ವಿವಾಹವಾಗಿ ಎಂದ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ
ಸೇವೆ ಮಾಡೋದು ನಿಮ್ಮ ಸಮಾಜ ಮಾತ್ರ ಅಲ್ಲ, ನಮ್ಮ ಸಮಾಜ ಮಾಡೋ ಸೇವೆ ಯಾವ ಧರ್ಮ ಮಾಡಿದೆ ಅಂತಾ ಕೇಳಿ. ಇಂಥ ಸೇವೆ ಮಾಡೋ ಸಮಾಜ ಮತ್ತೊಂದಿಲ್ಲ ಅಂತ ಹೇಳಿ ನಮ್ಮ ಸಮಾಜಕ್ಕೆ ಕರೆಯಿರಿ. ನಮ್ಮ ಸಮಾಜದ ಎಲ್ಲಾ ಪ್ರಮುಖರು ಈ ಬಗ್ಗೆ ಒಂದು ಘೋಷಣೆ ಹೊರಡಿಸಿ. ಯಾರಾದರೂ ನಮಗೆ ಮತಾಂತರ ಆಗಬೇಕು ಅಂದರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತೆ ಬನ್ನಿ ಅಂತ ಕರೀರಿ. ಸಮಾಜದ ಸ್ವಾಮೀಜಿಗಳ ಮೂಲಕ ಘೋಷಣೆ ಕೊಡಲಿ, ಯಾರಾದ್ರೂ ಬರ್ತೀರ ಅಂತಾದರೆ ಜಾತಿ ಕೇಳದೇ ಕರೆಯಿರಿ. ನೀವು ಒಂದು ಸಲ ಮುಕ್ತ ಕಂಠದಿಂದ ಕರೀರಿ, ಎಷ್ಟು ಜನ ಸೈಲೆಂಟಾಗಿ ಸೇರಿಕೊಳ್ತಾರೆ ನೋಡಿ. ಜನಸಂಖ್ಯೆ ಜಾಸ್ತಿ ಮಾಡಲು ಸರ್ಕಾರವೇ ಕೊಟ್ಟ ಇಂಥ ಕಾನೂನುಗಳು ನಮ್ಮಲ್ಲಿವೆ. ಹಾಗಾಗಿ ಸಂಖ್ಯೆ ವಿಸ್ತರಿಸಲು ಈ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಮುಂದಿನ ಪೀಳಿಗೆಗೆ ಭಾರತ ಬಿಟ್ಟು ಕೊಟ್ಟು ಹೋಗುವಾಗ ಅದಕ್ಕೆ ಸ್ವಲ್ಪ ಪಾಕಿಸ್ತಾನ, ಬಾಂಗ್ಲಾದೇಶ, ಅಗತ್ಯ ಬಿದ್ದರೆ ನೇಪಾಳವನ್ನೂ ಸೇರಿಸೋಣ ಎಂದು ಕರೆ ನೀಡಿದ್ದಾರೆ.
ವೇದಿಕೆಯಲ್ಲಿ ವಿ.ಹಿಂ.ಪ.ದ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗ ದಳ ಸಹಸಂಯೋಜಕ ದಿನೇಶ್ ಚಾರ್ಮಾಡಿ, ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಠೆ ಉಪಸ್ಥಿತರಿದ್ದರು.