Asianet Suvarna News Asianet Suvarna News

ಪ್ರಧಾನಿ ಮೋದಿಯಿಂದ ನಿಜವಾದ ಮಹಿಳಾ ಸಬಲೀಕರಣ: ಡಾ.ಕೆ.ಸುಧಾಕರ್‌

ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ಮಹಿಳಾ ಸಬಲೀಕರಣ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಸರ್ಕಾರ ಕೇವಲ ಕೈಗೆ ₹2 ಸಾವಿರ ನೀಡಿರುವುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಹೇಳಿದರು. 
 

Real Women Empowerment by PM Narendra Modi Says Dr K Sudhakar gvd
Author
First Published Apr 19, 2024, 8:49 AM IST

ದೇವನಹಳ್ಳಿ (ಏ.19): ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ಮಹಿಳಾ ಸಬಲೀಕರಣ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಸರ್ಕಾರ ಕೇವಲ ಕೈಗೆ ₹2 ಸಾವಿರ ನೀಡಿರುವುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಹೇಳಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರೆ ₹2 ಸಾವಿರ ಎನ್ನುತ್ತಾರೆ. ಆದರೆ ಕೋವಿಡ್‌ ಅವಧಿಯಿಂದ ಆರಂಭವಾಗಿ 5 ಕೇಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದೆ. 

ಮುಂದಿನ ಐದು ವರ್ಷವೂ ಈ ಯೋಜನೆ ಮುಂದುವರಿಸುವುದಾಗಿ ಬಿಜೆಪಿ ತಿಳಿಸಿದೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.33 ಮಹಿಳಾ ಮೀಸಲಾತಿ ತಂದಿದ್ದು, ಇದರಿಂದ ಮಹಿಳೆಯರ ರಾಜಕೀಯ ಸಬಲೀಕರಣ ಸಾಧ್ಯವಾಗಲಿದೆ. ಮಹಿಳೆಯರು ಉದ್ಯಮಿಗಳಾಗಿ ಬೆಳೆಯಲು ಮುದ್ರಾ ಯೋಜನೆಯಡಿ ₹20 ಲಕ್ಷ ಸಾಲ ನೀಡಲಾಗುತ್ತದೆ. ಇದು ನಿಜವಾದ ಸಬಲೀಕರಣವೇ ಹೊರತು ಕೈಗೆ ಹಣ ನೀಡುವುದಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಜನ ಔಷಧಿ ಮಳಿಗೆಗಳನ್ನು ನೀಡಿದ್ದು, ಶೇ.40-50 ರಿಯಾಯಿತಿ ದರದಲ್ಲಿ ಔಷಧಿ ದೊರೆಯುತ್ತಿದೆ. ಇನ್ನು ಮುಂದೆ ಪ್ರಮುಖ ಔಷಧಿಗಳನ್ನು ಶೇ.90 ರಿಯಾಯಿತಿ ದರದಲ್ಲಿ ನೀಡುವುದಾಗಿ ತಿಳಿಸಲಾಗಿದೆ. 

ಸಿದ್ದರಾಮಯ್ಯನವರೇ ರಾಜ್ಯವನ್ನು ಯಾರಿಗೆ ಅಡವಿಡುತ್ತಿದ್ದೀರಿ: ಎಚ್‌.ವಿಶ್ವನಾಥ್ ಪ್ರಶ್ನೆ

ಬಡವರಿಗೆ 3 ಕೋಟಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಈಗಾಗಲೇ 11 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ನೀಡಿದ್ದು, ಇದನ್ನೂ ಮುಂದುವರಿಸಲಾಗುವುದು. ಆದರೆ ಕಾಂಗ್ರೆಸ್‌ ಸಣ್ಣ ಆಸೆ ತೋರಿಸಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದೆ ಎಂದು ಟೀಕಿಸಿದರು. ಕೋವಿಡ್‌ ಬಂದಾಗ ನಾನು ಆರೋಗ್ಯ ಸಚಿವನಾಗಿ ಜನರಿಗೆ ಲಸಿಕೆ ನೀಡಿದ್ದೆ. ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಳ ಮಾಡಿಸಿದ್ದೆ. ಆದರೆ ಈ ಸರ್ಕಾರ ಹಾಲಿನ ಪ್ರೋತ್ಸಾಹಧನ, ಕಿಸಾನ್‌ ಸಮ್ಮಾನ್‌, ಹಾಲು ಒಕ್ಕೂಟ ಎಲ್ಲವನ್ನೂ ಕಿತ್ತುಕೊಂಡಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್‌ ಘೋಷಣೆ ಕೇಳಿಬರುತ್ತದೆ. ಇಂತಹವರು ಸರ್ಕಾರ ಮಾಡಬೇಕಾ ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ನೀರಾವರಿ ಹಾಗೂ ಜನಜೀವನಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತ ನೀಡಿ ಎಂದು ಮನವಿ ಮಾಡಿದರು.ಭ್ರಷ್ಟಾಚಾರದಿಂದಲೇ ಸೋತಿದ್ದಾ?

ಸಿದ್ದರಾಮಯ್ಯಗೆ ಸುಧಾಕರ್‌ ಪ್ರಶ್ನೆ: 2018ರಲ್ಲಿ ಮುಖ್ಯಮಂತ್ರಿ ಆಗಿದ್ದೂ 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರಲ್ಲ ಆಗ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಅಂತ ಜನ ನಿಮ್ಮನ್ನು ಸೋಲಿಸಿದ್ದರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾ। ಕೆ.ಸುಧಾಕರ್‌ ಪ್ರಶ್ನಿಸಿದ್ದಾರೆ. 2019ರಲ್ಲಿ ನಿಮ್ಮ ನಾಯಕ ರಾಹುಲ್‌ ಗಾಂಧಿ ಅವರು 55,000ಕ್ಕೂ ಹೆಚ್ಚು ಮತಗಳ ಅಂತರದಿಂದ ಅಮೇಥಿಯಲ್ಲಿ ಸೋತಿದ್ದರು. ನಿಮ್ಮ ಪ್ರಕಾರ ರಾಹುಲ್ ಗಾಂಧಿ ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ, ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಿ. ಅದರಲ್ಲೇ ನಿಮ್ಮ ತನಿಖೆ ಎಷ್ಟು ಪೂರ್ವಗ್ರಹ ಪೀಡಿತ, ಎಷ್ಟು ನಿಷ್ಪಕ್ಷಪಾತ ಎಂದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಸರ್ವೆ ವರದಿಗಳು, ಸಮೀಕ್ಷೆಗಳು ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಗೆಲ್ಲುತ್ತದೆ, ನಾನು ಗೆಲ್ಲಲಿದ್ದೇನೆ ಎಂದು ಹೇಳುತ್ತಿರುವುದರಿಂದ ಹತಾಶೆಯಿಂದ ನನ್ನ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದೀರಿ. ಈ ಎಲ್ಲ ಅಪಪ್ರಚಾರಗಳು, ತೇಜೋವಧೆಯ ಪ್ರಯತ್ನಗಳು ಕಾಂಗ್ರೆಸ್ ಪಕ್ಷಕ್ಕೇ ತಿರುಗು ಬಾಣ ಆಗಲಿದೆ. 2013ರಿಂದ 2018 ರವರೆಗೆ ನಿಮ್ಮ ಜೊತೆ ಕೆಲಸ ಮಾಡಿದ್ದೇನೆ. ನಾನು ಆಗ ನೋಡಿದ್ದ ಸಿದ್ದರಾಮಯ್ಯನವರಿಗೂ ಈಗ ನೋಡುತ್ತಿರುವ ಸಿದ್ದರಾಮಯ್ಯನವರಿಗೂ ಬಹಳ ವ್ಯತ್ಯಾಸವಿದೆ. ನಿಮ್ಮ ಸ್ಥಿತಿ ಬಗ್ಗೆ ಕನಿಕರವಿದೆ ಎಂದು ಅವರು ಹೇಳಿದ್ದಾರೆ.

ನಾವು ಪಾಕಿಸ್ತಾನದಲ್ಲಿ ಇದ್ದೀವಾ?: ‘ಜೈ ಶ್ರೀರಾಮ್‌’ ಕೂಗಿದವರ ಮೇಲೆ ಹಲ್ಲೆಗೆ ಬಿಜೆಪಿ ಕೆಂಡ

ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ತಮ್ಮ ಒಕ್ಕಲಿಗ ದ್ವೇಷ ಗುಟ್ಟೇನೂ ಅಲ್ಲ. ಅದು ಇಡೀ ರಾಜ್ಯಕ್ಕೆ ತಿಳಿದಿರುವ ವಿಷಯ. ನನ್ನ ಸೋಲು ಗೆಲುವು ಮತದಾರರು ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ.
-ಡಾ.ಕೆ.ಸುಧಾಕರ್‌, ಎನ್‌ಡಿಎ ಅಭ್ಯರ್ಥಿ, ಚಿಕ್ಕಬಳ್ಳಾಪುರ

Follow Us:
Download App:
  • android
  • ios