Asianet Suvarna News Asianet Suvarna News

Lok Sabha Election 2024: ಈಶ್ವರಪ್ಪ ಅಲ್ಲ, ಬೆಂಬಲಿಗರೇ ಅಭ್ಯರ್ಥಿ ಎಂದುಕೊಳ್ಳಿ!

ಅಭಿಮಾನಿಗಳು ಮತ್ತು ಬೆಂಬಲಿಗರಾದ ನೀವು ಈಗಿನಿಂದಲೇ ಪ್ರತಿ ಬೂತ್‌, ವಾರ್ಡ್‌ಗಳಲ್ಲಿ ನೀವೇ ಸ್ಪರ್ಧಿ ಎಂದು ಭಾವಿಸಿ, ಚುನಾವಣಾ ಪ್ರಚಾರ ನಡೆಸಿ, ಈಶ್ವರಪ್ಪನವರನ್ನು ಗೆಲ್ಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ, ಬಿಜೆಪಿ ಪ್ರಮುಖ ಕೆ.ಎಸ್‌.ಈಶ್ವರಪ್ಪ ತಮ್ಮ ಬೆಂಬಲಿಗರಲ್ಲಿ ವಿನಂತಿಸಿದರು. 

Lok Sabha Election 2024 Not Eshwarappa let the supporters be the candidate gvd
Author
First Published Mar 21, 2024, 7:35 AM IST

ಶಿವಮೊಗ್ಗ (ಮಾ.21): ಅಭಿಮಾನಿಗಳು ಮತ್ತು ಬೆಂಬಲಿಗರಾದ ನೀವು ಈಗಿನಿಂದಲೇ ಪ್ರತಿ ಬೂತ್‌, ವಾರ್ಡ್‌ಗಳಲ್ಲಿ ನೀವೇ ಸ್ಪರ್ಧಿ ಎಂದು ಭಾವಿಸಿ, ಚುನಾವಣಾ ಪ್ರಚಾರ ನಡೆಸಿ, ಈಶ್ವರಪ್ಪನವರನ್ನು ಗೆಲ್ಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ, ಬಿಜೆಪಿ ಪ್ರಮುಖ ಕೆ.ಎಸ್‌.ಈಶ್ವರಪ್ಪ ತಮ್ಮ ಬೆಂಬಲಿಗರಲ್ಲಿ ವಿನಂತಿಸಿದರು. ತಮ್ಮ ಮನೆಯಂಗಳದಲ್ಲಿ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿರುವ ಅನೇಕರು ಮುಂದಿನ ದಿನಗಳಲ್ಲಿ ನಗರಪಾಲಿಕೆ, ನಗರಸಭೆ, ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದೀರಿ. ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದರು.

ಯಾರೇ ಬಂದು ನನ್ನ ಮನವೊಲಿಸುವ ಪ್ರಯತ್ನ ನಡೆಸಿದರೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಯಾವುದೇ ಎಂಪಿ, ಶಾಸಕ ಸ್ಥಾನದ ಆಕಾಂಕ್ಷಿಯಲ್ಲ. ಅಧಿಕಾರದ ಆಸೆಯಿಲ್ಲ. ಈಗಲೂ ಮೋದಿ ನನ್ನ ದೇವರು. ಬಿಜೆಪಿ ನನ್ನ ತಾಯಿ. ಆದರೆ, ಪಕ್ಷವನ್ನು ಕುಟುಂಬದ ಹಿಡಿತದಿಂದ, ಸರ್ವಾಧಿಕಾರಿ ಧೋರಣೆಯಿಂದ ಬಿಡಿಸಬೇಕು ಎಂಬ ಕಾರಣಕ್ಕೆ ನಾನು ಸ್ಪರ್ಧಿಸುತ್ತಿದ್ದೇನೆ. ಯಡಿಯೂರಪ್ಪ ಕುಟುಂಬದ ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆಯೇ ಹೊರತು, ಬಿಜೆಪಿಯ ವಿರುದ್ಧ ಅಲ್ಲ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಯಲ್ಲಿಯೇ ಇರುತ್ತೇನೆ ಎಂದರು.

ಯಡಿಯೂರಪ್ಪ ಅವರ ಮೇಲೆ ಅಸಮಾಧಾನವಿದೆ: ಮಾಜಿ ಸಚಿವ ಮಾಧುಸ್ವಾಮಿ

ನಾನು ಸಿಗಂದೂರು ಶ್ರೀ ಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿನ ಧರ್ಮದರ್ಶಿ ರಾಮಪ್ಪನವರು ವಿಶೇಷ ಆಸಕ್ತಿ ತೋರಿಸಿ, ನನ್ನನ್ನು ಬರಮಾಡಿಕೊಂಡರು. ಗರ್ಭಗುಡಿವರೆಗೆ ಕರೆದುಕೊಂಡು ಹೋಗಿ, ದೇವಿಯ ದರ್ಶನ ಮಾಡಿಸಿದರು. ಹಿಂದೂ ಭಕ್ತನೊಬ್ಬನನ್ನು ಗೆಲ್ಲಿಸಬೇಕು ಎಂದು ನನ್ನ ಪರವಾಗಿ ರಾಮಪ್ಪನವರೇ ದೇವಿಯನ್ನು ಪ್ರಾರ್ಥಿಸಿದ್ದಾರೆ ಎಂದು ಹೇಳಿದರು.

ತಂದೆ ಯಾರಿಗೂ ಅನ್ಯಾಯ ಮಾಡಿಲ್ಲ: ಈಶ್ವರಪ್ಪ ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ತಂದೆಯವರು ಈಗ ಕೈಗೊಂಡಿರುವ ನಿಲುವಿನಿಂದ ಹಿಂದಕ್ಕೆ ಸರಿಯುವುದಿಲ್ಲ. ಅವರು 40 ವರ್ಷ ರಾಜಕಾರಣ ಮಾಡಿದ್ದಾರೆ. ಇಷ್ಟು ಸುದೀರ್ಘ ಅವಧಿಯಲ್ಲಿ ಯಾರಿಗಾದರೂ ಅನ್ಯಾಯ ಮಾಡಿದ್ದಾರೆಯೇ? ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಇವರ ಜೊತೆಗೆ ನಾನು ಕೂಡ ಸಮಾಜದ ಅಳಿಲು ಸೇವೆ ಮಾಡುತ್ತ ಬಂದಿದ್ದೇನೆ. ನೀವು ಇದುವರೆಗೆ ನಮಗೆ ಬೆಂಬಲ ನೀಡಿದ್ದೀರಿ. ನಮ್ಮ ಕುಟುಂಬ ನಿಮ್ಮ ಜೊತೆ ಇರುತ್ತದೆ. ನಿಮ್ಮ ಋಣ ತೀರಿಸುತ್ತೇವೆ. ಎಂದರು.

ಕಾಂಗ್ರೆಸ್‌ ಇಲ್ಲದಿದ್ದರೆ ದೇವೇಗೌಡರನ್ನು ದೇಶ ನೆನೆಸಿಕೊಳ್ತಿರಲಿಲ್ಲ: ಸಂಸದ ಡಿ.ಕೆ.ಸುರೇಶ್‌

ಹಿಂದುತ್ವದ ಕಾರಣಕ್ಕಾಗಿಯೇ ಈಶ್ವರಪ್ಪನವರು ಸ್ಪರ್ಧೆ ಮಾಡುತ್ತಿದ್ದಾರೆ. ಈಗಾಗಲೇ ನಿರ್ಧಾರವು ಆಗಿದೆ. ಪಕ್ಷ ಉಳಿಯಬೇಕು ಎಂಬುವುದು ಎಲ್ಲರ ಆಶಯವಾಗಿದೆ. ಅವರ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಲತಾ ಗಣೇಶ್, ಸುವರ್ಣ ಶಂಕರ್, ಶಿವಕುಮಾರ್, ಮಾಜಿ ಉಪ ಮೇಯರ್‌ಗಳಾದ ಗನ್ನಿ ಶಂಕರ್, ಲಕ್ಷ್ಮೀ ಶಂಕರ ನಾಯ್ಕ್, ಮಹಾನಗರ ಪಾಲಿಕೆಯ 14 ಮಾಜಿ ಸದಸ್ಯರು, ನಾಲ್ಕು ಮಂದಿ ನಾಮನಿರ್ದೇಶಿತ ಸದಸ್ಯರು ಭಾಗಿಯಾಗಿದ್ದರು. ಪ್ರಮುಖರಾದ ಉಮಾ, ಭೂಪಾಲ್, ಕೇಬಲ್ ಬಾಬು ಸೇರಿದಂತೆ 200 ಜನರು ಭಾಗವಹಿಸಿದ್ದರು. ಇನ್ನೂ ಎರಡ್ಮೂರು ಮಂದಿ ಪಾಲಿಕೆ ಸದಸ್ಯರು ಜೊತೆಗೆ ಸೇರಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Follow Us:
Download App:
  • android
  • ios