Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ

ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿದರೆ ಅದರ ಪ್ರಭಾವ ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳ ಮೇಲೂ ಆಗಬಹುದು. ಆಗ ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಸಾಧ್ಯವಾಗಬಹುದು ಎಂಬುದು ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಲೆಕ್ಕಾಚಾರ

Insist to HD Kumaraswamy Contest From Mandya in Lok Sabha Elections 2024 grg
Author
First Published Jan 11, 2024, 6:21 AM IST

ಚಿಕ್ಕಮಗಳೂರು(ಜ.11):  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಳೇ ಮೈಸೂರು ಭಾಗದಿಂದ ಕಣಕ್ಕಿಳಿಸುವ ಕುರಿತು ಜೆಡಿಎಸ್‌ನಲ್ಲಿ ಸದ್ದಿಲ್ಲದೆ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿದರೆ ಅದರ ಪ್ರಭಾವ ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳ ಮೇಲೂ ಆಗಬಹುದು. ಆಗ ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಹಾಕುತ್ತಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಸ್ಪರ್ಧೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚಿಸಲೆಂದೇ ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿರುವ ಹನಿ ಡ್ಯೂ ರೆಸಾರ್ಟ್‌ನಲ್ಲಿ ಹಳೇ ಮೈಸೂರು ಭಾಗದ ಜೆಡಿಎಸ್‌ ಮುಖಂಡರು ಸಭೆ ಸೇರಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕುಮಾರಸ್ವಾಮಿ ಅವರು ಮಂಗಳವಾರ ರಾತ್ರಿಯೇ ರೆಸಾರ್ಟ್‌ಗೆ ಆಗಮಿಸಿದ್ದು, ಮಂಡ್ಯದ ಮಾಜಿ ಸಂಸದ ಪುಟ್ಟರಾಜು ಸೇರಿ ಹಲವು ನಾಯಕರು ಜತೆಗಿದ್ದರು. ಬುಧವಾರ ಬೆಳಗ್ಗೆ ಮಾಜಿ ಶಾಸಕ‌ ಸಾ.ರಾ.ಮಹೇಶ್, ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಬಾಲಕೃಷ್ಣ ಭೇಟಿ ನೀಡಿ ಇಡೀ ದಿನ ಮುಖಂಡರು ಸಮಾಲೋಚನೆ ನಡೆಸಿದರು.

ಮೈಸೂರಿಂದ ಸಾ.ರಾ.ಮಹೇಶ್‌ಗೆ ಟಿಕೆಟ್‌ ಕೊಡಿಸಲು ಎಚ್‌ಡಿಕೆ ಪ್ರಯತ್ನ: ಎಂ.ಲಕ್ಷ್ಮಣ್‌

ಕುಮಾರಸ್ವಾಮಿ ಸ್ಪರ್ಧೆಗಿರುವ ಒತ್ತಡ ಕುರಿತು ಅವರ ಆಪ್ತರೂ ಆಗಿರುವ ಎಂಎಲ್ಸಿ ಎಸ್‌.ಎಲ್‌.ಭೋಜೇಗೌಡ ಕೂಡ ಸುಳಿವು ನೀಡಿದ್ದಾರೆ. ಮಂಡ್ಯ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಸ್ಪರ್ಧೆಗೆ ದುಂಬಾಲು ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಹನಿ ಡ್ಯೂ ರೆಸಾರ್ಟ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅ‍ವರು, ಮಂಡ್ಯ ಜೆಡಿಎಸ್‌ನ ಭದ್ರಕೋಟೆ. ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ ಅವರು ಹಿಂದಿನ ಸಂಸದ ಪುಟ್ಟರಾಜು ಅವರಿಗಿಂತಲೂ 60 ಸಾವಿರ ಹೆಚ್ಚು ಮತಗಳಿಸಿದ್ದರು. ಮಂಡ್ಯದಲ್ಲಿ ಜೆಡಿಎಸ್‌ಗೆ ಭದ್ರ ತಳಪಾಯ ಇಲ್ಲದಿದ್ದರೆ ಅಷ್ಟು ಮತಗಳು ಬೀಳುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!

ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ರಾಜ್ಯದಲ್ಲಿ ನಮಗೆ ಸ್ಪರ್ಧಿಸಲು ನಾಲ್ಕೈದು ಸೀಟ್ ಸಿಗಬಹುದು. ಆ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ನಡೆದಿದೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಬಿಜೆಪಿಗೆ ನಮ್ಮ ಶಕ್ತಿಯನ್ನು ಧಾರೆ ಎರೆಯುವ ಕುರಿತೂ ಸಮಾಲೋಚನೆಗಳು ನಡೆದಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಭಾವನೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾದರೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲು ಸಾಧ್ಯವಿದೆ ಎಂದು ಭೋಜೇಗೌಡ ತಿಳಿಸಿದ್ದಾರೆ.

ಇದೇ ವೇಳೆ ಸೀಟು ಹಂಚಿಕೆ ನಿರ್ಧಾರ ವಿಳಂಬವಾಗಬಾರದು ಎಂದಿರುವ ಅವರು, ಸಂಕ್ರಾಂತಿ ವೇಳೆಗೆ ಬಿಜೆಪಿಯಿಂದ ಖುಷಿಯ ಸುದ್ದಿ ಸಿಗುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios