Asianet Suvarna News Asianet Suvarna News

ರಾಜ್ಯದ 25 ದಂಡಪಿಂಡಗಳನ್ನು ಜನರು ಮನೆಗೆ ಕಳಿಸಬೇಕು: ಬಿ.ವಿ.ಶ್ರೀನಿವಾಸ್ ವಿಶೇಷ ಸಂದರ್ಶನ!

ಲೋಕಸಭಾ ಚುನಾವಣೆ ಸಿದ್ಧತೆ, ಚುನಾವಣಾ ಮುಖ್ಯ ವಿಚಾರ, ಕಾಂಗ್ರೆಸ್‌ ಗ್ಯಾರಂಟಿ, ಫಲಿತಾಂಶ ಏನಾಗಲಿದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಭದ್ರಾವತಿ ವೆಂಕಟ ಶ್ರೀನಿವಾಸ್ (ಬಿ.ವಿ.ಶ್ರೀನಿವಾಸ್) ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.

Indian Youth Congress President BV Srinivas Special Interview Over Lok Sabha Elections 2024 gvd
Author
First Published Apr 23, 2024, 6:03 AM IST

ಶ್ರೀಕಾಂತ್‌ ಗೌಡಸಂದ್ರ

ಬೆಂಗಳೂರು (ಏ.23): ಭದ್ರಾವತಿ ವೆಂಕಟ ಶ್ರೀನಿವಾಸ್ (ಬಿ.ವಿ. ಶ್ರೀನಿವಾಸ್) ಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಮೊದಲ ಕನ್ನಡಿಗ. 16 ವರ್ಷದೊಳಗಿನ ಕರ್ನಾಟಕ ತಂಡಕ್ಕಾಗಿ ಕ್ರಿಕೆಟ್‌ ಆಡಿದವರು. ಎನ್‌ಎಸ್‌ಯುಐನಿಂದ ಹಂತ-ಹಂತವಾಗಿ ಬೆಳೆದು ರಾಷ್ಟ್ರಮಟ್ಟದಲ್ಲಿ ಯುವ ಕಾಂಗ್ರೆಸ್‌ ಮುನ್ನಡೆಸುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಲಾಕ್‌ಡೌನ್‌ ಸಂತ್ರಸ್ತರನ್ನ ಮನೆಗೆ ಸೇರಿಸಿದ, ಆಕ್ಸಿಜನ್‌, ಬೆಡ್‌ ವ್ಯವಸ್ಥೆ ಮಾಡುವ ಮೂಲಕ ‘ಆಕ್ಸಿಜನ್‌ ಮ್ಯಾನ್‌’ ಎಂದೇ ಹೆಸರಾಗಿದ್ದರು. ಇದೀಗ ಲೋಕಸಭೆ ಚುನಾವಣೆ ಸಲುವಾಗಿ ದೇಶಾದ್ಯಂತ ಯುವ ಮತದಾರರ ಮನವೊಲಿಸಲು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಸಿದ್ಧತೆ, ಚುನಾವಣಾ ಮುಖ್ಯ ವಿಚಾರ, ಕಾಂಗ್ರೆಸ್‌ ಗ್ಯಾರಂಟಿ, ಫಲಿತಾಂಶ ಏನಾಗಲಿದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.

* ಲೋಕಸಭೆ ಚುನಾವಣೆ ಮತದಾನ ಶುರುವಾಗಿದೆ. ದೇಶಾದ್ಯಂತ ಕಾಂಗ್ರೆಸ್‌ಗೆ ವಾತಾವರಣ ಹೇಗಿದೆ?
ಮೊದಲ ಹಂತದ ಚುನಾವಣೆಯ ಬಳಿಕ ಸಾಕಷ್ಟು ದೇಶಾದ್ಯಂತ ಸಾಕಷ್ಟು ಬದಲಾವಣೆ ಕಾಣುತ್ತಿದೆ. ರಾಜಸ್ಥಾನ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ ಪರ ಅಲೆ ಎದ್ದಿರುವುದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಬಿಜೆಪಿಯವರು ಹತ್ತು ವರ್ಷ ಹೇಳಿದ ಸಾಲುಸಾಲು ಸುಳ್ಳು ಈಗ ಕಂಟಕ ಆಗಿದೆ. ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ. ಕೊಟ್ಟ ಗ್ಯಾರಂಟಿಗಳನ್ನು ‘ಇಂಡಿಯಾ’ ಈಡೇರಿಸಲಿದೆ.

15 ವರ್ಷದ ಸಾಧನೆ, ಮೋದಿ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ: ಪಿ.ಸಿ.ಮೋಹನ್‌ ವಿಶೇಷ ಸಂದರ್ಶನ!

* ಪಕ್ಷ ಅಧಿಕ್ಕಾರಕ್ಕೆ ಬರಲು ಯುವ ಕಾಂಗ್ರೆಸ್ ಮಾಡಿರುವ ಸಿದ್ಧತೆಗಳೇನು?
ಕೇಂದ್ರದ ಅನ್ಯಾಯ, ವೈಫಲ್ಯಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ರಾಜ್ಯದಲ್ಲಿ ಬರ ಪರಿಹಾರ, ತೆರಿಗೆ ಪಾಲು, ಕೇಂದ್ರದ ಯೋಜನೆಗಳಿಗೆ ಹಣ ನೀಡದಿರುವುದು, ನೀರಾವರಿ ಯೋಜನೆಗಳಿಗೆ ಅನುಮತಿ ನೀಡದಿರುವುದನ್ನು ಜನರಿಗೆ ಮುಟ್ಟಿಸುತ್ತಿದ್ದೇವೆ. ಎಲ್ಲದಕ್ಕಿಂತ ಮಿಗಿಲಾಗಿ ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವ 5 ಗ್ಯಾರಂಟಿ ಹಾಗೂ ಕಾಂಗ್ರೆಸ್‌ ಲೋಕಸಭೆಗೆ ನೀಡಿರುವ ಪ್ರಣಾಳಿಕೆಯ ಗ್ಯಾರಂಟಿಗಳನ್ನು ಮನೆ-ಮನೆಗೂ ಹೋಗಿ ತಲುಪಿಸುತ್ತಿದ್ದೇವೆ.

* ನಿಮ್ಮ ಪ್ರಕಾರ ಈ ಚುನಾವಣೆಯಲ್ಲಿ ಮುಖ್ಯವಾಗುವ ವಿಷಯವೇನು?
ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಆರ್ಥಿಕ ಅನ್ಯಾಯಗಳು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಬಂದು ದೇಶ ರಕ್ಷಿಸುವ ಸೈನಿಕರಿಗೂ ಉದ್ಯೋಗ ಭದ್ರತೆ ಇಲ್ಲದಂತೆ ಮಾಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ 40 ಮಂದಿ ಸೈನಿಕರಿಗೂ ನ್ಯಾಯ ನೀಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಅಗ್ನಿವೀರ್‌, ಅಗ್ನಿಪಥ್‌ ರದ್ದು ಮಾಡುತ್ತೇವೆ.

* ನೀವು ಅಧಿಕಾರಕ್ಕೆ ಬಂದರೆ ನಿರುದ್ಯೋಗ, ಬೆಲೆ ಏರಿಕೆ ಹೇಗೆ ನಿವಾರಣೆ ಮಾಡುತ್ತೀರಾ?
ಈಗಾಗಲೇ ಪ್ರಣಾಳಿಕೆಯಲ್ಲಿ 30 ಲಕ್ಷ ಖಾಲಿ ಉದ್ಯೋಗ ಭರ್ತಿ ಮಾಡುವುದಾಗಿ ಹೇಳಿದ್ದೇವೆ. ಎಂಎಸ್‌ಎಂಇ ಕ್ಷೇತ್ರದ ಅಭಿವೃದ್ಧಿ, ಸ್ಟಾರ್ಟ್‌ ಅಪ್‌ ನಿಧಿ ಸೇರಿದಂತೆ ಉದ್ಯೋಗ ಸೃಷ್ಟಿಗೆ ವಿಫುಲ ಅವಕಾಶ ಸೃಷ್ಟಿಸುತ್ತೇವೆ. ಇನ್ನು ಮೋದಿ ಆಡಳಿತದಲ್ಲಿ ಬೆಲೆ ಏರಿಕೆ ಮಿತಿ ಮೀರಿದೆ. ಉದಾ: ಯುಪಿಎ ಅವಧಿಯಲ್ಲಿ ಬ್ಯಾರಲ್‌ ಕಚ್ಚಾತೈಲ 110 ಡಾಲರ್‌ ಇದ್ದಾಗ ನಾವು 60-70 ರು.ಗೆ ಲೀಟರ್‌ ಪೆಟ್ರೋಲ್‌, ಡೀಸೆಲ್‌ ನೀಡಿದ್ದೇವೆ. ಈಗ ಕಚ್ಚಾತೈಲ 60-70 ಡಾಲರ್‌ ಆಗಿರುವಾಗ ಪೆಟ್ರೋಲ್‌ 100ರ ಗಡಿ ದಾಟಿದೆ.

* ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಯಾಕೆ ಮತ ನೀಡಬೇಕು?
ಕಳೆದ ಬಾರಿ ಬಿಜೆಪಿಗೆ ಮತ ನೀಡಿ 25 ಮಂದಿ ದಂಡ ಪಿಂಡಗಳನ್ನು ಸಂಸದರಾಗಿ ಮಾಡಲಾಗಿತ್ತು. ಆ ದಂಡ ಪಿಂಡಗಳು ಒಂದು ದಿನವೂ ರಾಜ್ಯದ ಪರ ಧ್ವನಿ ಎತ್ತಲಿಲ್ಲ. ಜಿಎಸ್‌ಟಿ ಪಾಲು ಕೇಳಲಿಲ್ಲ, ಅನುದಾನ ಕೇಳಲಿಲ್ಲ, ಬರ ಪರಿಹಾರ ಕೇಳಲಿಲ್ಲ. ರಾಜ್ಯದ ಪರ ಮಾತನಾಡದೆ ಮೋದಿ ಭಜನೆ ಮಾಡಿಕೊಂಡು ಬಂದರು. ಇಂತಹ ದಂಡಪಿಂಡಗಳನ್ನು ಮನೆಗೆ ಕಳುಹಿಸಲು ಕಾಂಗ್ರೆಸ್‌ಗೆ ಮತ ನೀಡಬೇಕು.

* ಕೇಂದ್ರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದಿದ್ದೀರಿ. ಅಂತಹ ವಿಚಾರಗಳೇನಿವೆ?
ಕೇಂದ್ರದಲ್ಲಿ ಭ್ರಷ್ಟಾಚಾರ ತಾರಕ್ಕೇರಿದೆ. ಇದೇ ಮೋದಿ ಸ್ವಿಸ್‌ ಬ್ಯಾಂಕ್‌ನಲ್ಲಿರುವ 14,000 ಕೋಟಿ ರು. ಹಣ ವಾಪಸು ತರುವುದಾಗಿ ಹೇಳಿದ್ದರು.ಈಗ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತೀಯರ ಹಣ 48 ಸಾವಿರ ಕೋಟಿ ರು. ಆಗಿದೆ. ಈ ಹಣ ಯಾರದ್ದು? ರಫೇಲ್‌ ಹಗರಣ, ಎಲೆಕ್ಟೊರಲ್‌ ಹಗರಣ, ಕೋವಿಡ್‌ ಹಗರಣ, ಉದ್ಯಮಿಗಳ ಸಾವಿರಾರು ಕೋಟಿ ರು. ಸಾಲ ಮನ್ನಾ, ಉದ್ಯಮಿಗಳು ಸಾವಿರಾರು ಕೋಟಿ ರು. ಲೂಟಿ ಹೊಡೆದು ಪರಾರಿಯಾಗಲು ನೆರವು ಇವೆಲ್ಲಾ ಆಗಿದ್ದ ಬಿಜೆಪಿ ಅವಧಿಯಲ್ಲೇ ಅಲ್ಲವೇ?

* ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ಎಂದು ಮೋದಿ ಹೇಳಿದ್ದಾರಲ್ಲ?
ಅವರೇ ಭ್ರಷ್ಟಾಚಾರದ ಪೋಷಕರು. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಯಾರ ಮೇಲೆ ಭ್ರಷ್ಟಾಚಾರ, ಹಗರಣಗಳ ಆರೋಪ ಮಾಡಿದ್ದಾರೋ ಅವರನ್ನೇ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ನವೀನ್‌ ಜಿಂದಾಲ್‌, ಜನಾರ್ದನ ರೆಡ್ಡಿ, ಅಶೋಕ್‌ ಚೌಹಾಣ್‌ ಸೇರಿ ಬಿಜೆಪಿ ಸೇರುತ್ತಿರುವವರೆಲ್ಲರೂ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಹೀಗಾಗಿ ಭ್ರಷ್ಟರನ್ನು ಸ್ವಚ್ಛ ಮಾಡಿರುವ ವಾಶಿಂಗ್ ಮೆಷಿನ್‌ ಇಟ್ಟುಕೊಂಡಿರುವ ಮೋದಿ ಭ್ರಷ್ಟರ ಮಹಾ ಪೋಷಕರು.

* ಮೋದಿಯವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದು ಯಾಕೆ?
ನರೇಂದ್ರ ಮೋದಿ ಅವರದ್ದು ಸರ್ವಾಧಿಕಾರದ ಪರಮಾವಧಿ. ದೇಶದಲ್ಲಿ ಎಷ್ಟೇ ಹಿಂಸೆ, ಅನ್ಯಾಯ, ಸಂವಿಧಾನ ವಿರೋಧಿ ಚಟುವಟಿಕೆ ಕೊನೆಗೆ ತಮ್ಮ ಸಚಿವರೇ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದರೂ ಗಾಂಧಾರಿಯಂತೆ ಬಟ್ಟೆ ಕಟ್ಟಿ ಕುಳಿತಿದ್ದಾರೆ. ಮಣಿಪುರದಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಈಗಲೂ 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಆದರೆ ಮೋದಿ ಮಾತ್ರ ಮತ ವಿಭಜನೆ, ಕೋಮುವಾದ ಭಾಷಣ ಮಾತ್ರ ಮಾಡುತ್ತಾರೆ.

* ಈ ಚುನಾವಣೆಯಲ್ಲಿ ಸಿಬಿಐ, ಐಟಿ, ಇಡಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿರುವುದು ಯಾಕೆ?
ಬಿಜೆಪಿಗೆ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಸಿಬಿಐ, ಐಟಿ, ಇಡಿ ಮೂಲಕ ಚುನಾವಣೆ ಮಾಡುತ್ತಿದ್ದಾರೆ. ಐಟಿ-ಇಡಿ ದಾಳಿ ಆದವರಲ್ಲಿ ಶೇ.99 ರಷ್ಟು ಮಂದಿ ವಿರೋಧಪಕ್ಷದವರು. 10 ಸಾವಿರ ಮತ ಇದ್ದರೆ ಅವರ ಮೇಲೆ ಐಟಿ-ಇಡಿ ದಾಳಿ ಮಾಡಿ ಬೆದರಿಸಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯ ಒಬ್ಬರ ಮೇಲೂ ಈ ದಾಳಿ ಆಗಲ್ಲ. ಈ ಸಂಸ್ಥೆಗಳು ಬಿಜೆಪಿಯ ಚುನಾವಣಾ ಅಸ್ತ್ರಗಳಾಗಿವೆ.

* ಮತದಾರರನ್ನು ಬೆದರಿಸಿದ್ದಾರೆ, ಆಮಿಷ ಒಡ್ಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರ ಮೇಲೂ ಎಫ್ಐಆರ್ ಅಗಿದೆಯಲ್ಲಾ?
ಮತ ಹಾಕದಿದ್ದರೆ ನೀರು ಕೊಡಲ್ಲ ಎಂದಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿದ್ದಾರೆ. ಸುಳ್ಳಿನಲ್ಲಿ ಅವರು ನಿಸ್ಸೀಮರು. ವಾಟ್ಸಾಪ್‌ ವಿಶ್ವವಿದ್ಯಾಲಯದಲ್ಲಿ ಪ್ರೊಪಗ್ಯಾಂಡಾ ಸಿದ್ಧಪಡಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದರ ವಿರುದ್ಧ ಮತದಾರರು ಜಾಗೃತರಾಗಿದ್ದಾರೆ.

* ಈಗಲೂ ಭಾವನಾತ್ಮಕ ವಿಚಾರಗಳೇ ಚರ್ಚೆಗೆ ಬರುತ್ತಿವೆಯಲ್ಲ? ಯುವಕರನ್ನು ಹೇಗೆ ಸೆಳೆಯುತ್ತೀರಿ?
ಖಂಡಿತ ಇಲ್ಲ. ಈವರೆಗೆ ಧರ್ಮದ ಅಫೀಮು ಹಂಚುವ ಕೆಲಸ ಮಾಡುತ್ತಿದ್ದರು. ಜನರಿಗೆ ಬಿಸಿ ತಟ್ಟಿದೆ.ಕಾಂಗ್ರೆಸ್‌-ಬಿಜೆಪಿ ಎರಡೂ ಪ್ರಣಾಳಿಕೆ ಹೋಲಿಕೆ ಮಾಡಿ ತೋರಿಸುತ್ತಿದ್ದೇವೆ. ಬಿಜೆಪಿಯವರು ಯಾವ ಭರವಸೆಯನ್ನೂ ಈಡೇರಿಸಿಲ್ಲ. ಕೇವಲ ಕೋಮು ಧ್ರುವೀಕರಣದ ಮೇಲೆ ಚುನಾವಣೆಗೆ ಹೋಗುತ್ತಿದ್ದಾರೆ. ನಾವು ಜನರ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಮತ ಕೇಳುತ್ತಿದ್ದೇವೆ. ನಿರುದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರ, ಹಿಂಸೆ, ನೋಟ್ ಬ್ಯಾನ್‌, ಕೊರೋನಾ ಹಗರಣಗಳನ್ನು ಮುಟ್ಟಿಸುತ್ತಿದ್ದೇವೆ.

* ರಾಜ್ಯದಲ್ಲಿ ಗ್ಯಾರಂಟಿಗಳ ಲಾಭ ಕಾಂಗ್ರೆಸ್ ಗೆ ನಿಜವಾಗಲೂ ಸಿಗುತ್ತಾ?
ಕಳೆದ ಬಾರಿ ಗ್ಯಾರಂಟಿಗಳನ್ನು ಈಡೇರಿಸುತ್ತಾರೆ ಎಂದೇ ಜನ ಕಾಂಗ್ರೆಸ್‌ಗೆ 136 ಸ್ಥಾನ ನೀಡಿದ್ದಾರೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ನುಡಿದಂತೆ ನಡೆದಿದ್ದೇವೆ. ಹೀಗಾಗಿ ಜನ ನಮ್ಮ ಕೈ ಬಿಡುವುದಿಲ್ಲ.

* ರಾಯಪುರ ಕಾಂಗ್ರೆಸ್ ಸಮಾವೇಶದಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್‌ ಎಂದಿದ್ದಿರಿ. ಈಗ ಸಚಿವರ ಮಕ್ಕಳಿಗೆ ಆರು ಟಿಕೆಟ್‌ ನೀಡಿದ್ದೀರಿ?
ಸ್ಥಳೀಯವಾಗಿ ಗೆಲ್ಲುವ ಮಾನದಂಡವನ್ನೂ ನೋಡಬೇಕು. ಸಮೀಕ್ಷೆ ಆಧಾರದ ಮೇಲೆ ಟಿಕೆಟ್‌ ನೀಡಲಾಗುತ್ತದೆ. ಕೆಲವರು ಸಚಿವರ ಮಕ್ಕಳಿಗೆ ನೀಡಿದ್ದರೂ ಪಕ್ಷಸೇವೆ, ಸಾಮರ್ಥ್ಯ ಮೇಲೆಯೇ ನೀಡಲಾಗಿದೆ. ಇನ್ನು ವಿನೋದ್‌ ಅಸೂಟಿ, ರಕ್ಷಾ ರಾಮಯ್ಯ, ಗೌತಮ್‌ ಅವರಂತಹ ಯುವ ಕಾಂಗ್ರೆಸ್ ಪದಾಧಿಕಾರಿಗಳೂ ಅವಕಾಶ ನೀಡಲಾಗಿದೆ.

ಅಟಲ್‌ರಂತೆ ನರೇಂದ್ರ ಮೋದಿ ಕೂಡ ಸೋಲುತ್ತಾರೆ: ಮುಖಾಮುಖಿ ಸಂದರ್ಶನದಲ್ಲಿ ಸುರ್ಜೇವಾಲಾ

* ನೀವು ಚುನಾವಣೆಗೆ ನಿಲ್ಲುತ್ತೀರಿ ಎಂಬ ಮಾತಿತ್ತು? ಕೊನೆಗೆ ಯಾಕೆ ಅವಕಾಶ ಸಿಗಲಿಲ್ಲ.
ನಾನು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ. ಈ ಬಾರಿ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ನನ್ನ ಮೊದಲ ಗುರಿ. ಈ ನಿಟ್ಟಿನಲ್ಲಿ ದೇಶಾದ್ಯಂತ ಕೆಲಸ ಮಾಡುವ, ಹೆಚ್ಚು ಸಮಯ ಕೊಡುವ ಜವಾಬ್ದಾರಿ ಇತ್ತು. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾದರೆ ಜವಾಬ್ದಾರಿ ನಿಭಾಯಿಸಲು ಸಾಧ್ಯವಿಲ್ಲ. ನನಗೆ ನೀಡಿರುವ ಸ್ಥಾನ ಸಂಸದ, ಸಚಿವ ಸ್ಥಾನಕ್ಕಿಂತ ದೊಡ್ಡದು. ಪಕ್ಷ ಎಲ್ಲವನ್ನೂ ನೀಡಿದೆ ಈಗ ಪಕ್ಷಕ್ಕೆ ನೀಡಬೇಕಿರುವ ಸಮಯ.

Follow Us:
Download App:
  • android
  • ios