Asianet Suvarna News Asianet Suvarna News

ರಷ್ಯಾ ಡೊಮೇನ್ ಬಳಸಿ ಒಂದೇ ಐಪಿಯಿಂದ ರಾಜಧಾನಿಯ 100 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ರಾಷ್ಟ್ರ ರಾಜಧಾನಿಯ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ ಬಂದಿದ್ದು, ಇದರಿಂದ ಬೆದರಿದ ಶಾಲಾ ಆಡಳಿತ ಮಂಡಳಿ ಇಂದು ಬೆಳಗ್ಗೆಯೇ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಿ ಶಾಲೆಗಳಲ್ಲಿ ಶೋಧ ನಡೆಸಿದೆ.

Delhi 100 schools get Hox bomb email threat using Russia domain single IP Adress akb
Author
First Published May 1, 2024, 4:06 PM IST

ನವದೆಹಲಿ: ರಾಷ್ಟ್ರ ರಾಜಧಾನಿಯ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ ಬಂದಿದ್ದು, ಇದರಿಂದ ಬೆದರಿದ ಶಾಲಾ ಆಡಳಿತ ಮಂಡಳಿ ಇಂದು ಬೆಳಗ್ಗೆಯೇ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಿ ಶಾಲೆಗಳಲ್ಲಿ ಶೋಧ ನಡೆಸಿದೆ. ಶಾಲೆಯಲ್ಲಿ ತಪಾಸಣೆ ವೇಳೆ ಯಾವುದೇ ಸಂಶಯಸ್ಪದ ವಸ್ತುಗಳು ಕಂಡುಬಂದಿಲ್ಲ, ಹೀಗಾಗಿ ಇದೊಂದು ಸುಳ್ಳು ಬೆದರಿಕೆ ಸಂದೇಶ ಎಂಬುದು ಗೊತ್ತಾಗಿದೆ.  ಗೃಹ ಸಚಿವಾಲಯ ಇದೊಂದು ಸುಳ್ಳು ಬೆದರಿಕೆ ಕರೆ ಎಂದು ಖಚಿತಪಡಿಸಿದೆ. 

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಈ ಬಗ್ಗೆ ಹೇಳಿಕೆ ನೀಡಿದ್ದು, ಬಾಂಬ್ ಬೆದರಿಕೆಯ ಇಮೇಲ್ ಬೆನ್ನತ್ತಿದ್ದಾಗ ಪೊಲೀಸರಿಗೆ ಇದೊಂದು ಸುಳ್ಳು ಬೆದರಿಕೆ ಸಂದೇಶ ಎಂಬುದು ಗೊತ್ತಾಗಿದೆ. ಅಲ್ಲದೇ ಈ ಎಲ್ಲಾ ಶಾಲೆಗಳಿಗೆ ಒಂದೇ ಐಪಿ ಅಡ್ರೆಸ್‌ನಿಂದ ಇಮೇಲ್ ಸಂದೇಶ ಕಳುಹಿಸಲಾಗಿದೆ. ಹಾಗೆಯೇ ಈ ಐಪಿ ವಿಳಾಸವೂ ರಷ್ಯಾ ಡೊಮೇನ್ ಅನ್ನು ಹೊಂದಿತ್ತು.  ಆದರೆ ಅಲ್ಲಿಂದಲೇ ಇಮೇಲ್ ಸಂದೇಶ ಬಂತಾ ಎಂಬುದು ಖಚಿತವಾಗಿಲ್ಲ, 

ರಾಮೇಶ್ವರಂ ಕೆಫೆಬಾಂಬ್ ಸ್ಫೋಟಕ್ಕೆ ಶಂಕಿತರು ಸಾಮಗ್ರಿ ಖರೀದಿಸಿದ್ದು ಚೆನ್ನೈನಲ್ಲಿ!

ಬಾಂಬ್ ಬೆದರಿಕೆ ಬಂದಂತಹ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ನಾವು  ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲವಾದ್ದರಿಂದ ಪೋಷಕರು ಭಯಪಡಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಮದರ್ ಮೇರಿ ಶಾಲೆ ಮತ್ತು ದ್ವಾರಕಾದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಇಂದು ಬೆಳಗ್ಗೆ ಎಲ್ಲಕ್ಕಿಂತ ಮೊದಲಿಗೆ ಬೆದರಿಕೆ ಇಮೇಲ್ ಸಂದೇಶ ಬಂದಿದ್ದವು. ಇದಾದ ನಂತರ ರಾಜಧಾನಿಯ ಸುಮಾರು 100 ಶಾಲೆಗಳಿಗೆ ಕ್ಯಾಂಪಸ್‌ನಲ್ಲಿ ಸ್ಫೋಟಕಗಳಿವೆ ಎಂಬ ಸಂದೇಶವಿದ್ದ ಇಮೇಲ್‌ಗಳು ಬಂದಿವೆ. ಇಂದು ಮದರ್ ಮೇರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದು, ಈ ಸುಳ್ಳು ಬೆದರಿಕೆ ಕರೆಯಿಂದಾಗಿ ಪರೀಕ್ಷೆಯನ್ನು ಅರ್ಧದಲ್ಲೇ ಮೊಟುಕುಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವಂತಾಯ್ತು.  ನಂತರ ಆ ಪ್ರದೇಶದಲ್ಲಿ ಸಂಪೂರ್ಣವಾಗಿ ತಪಾಸಣೆ ಮಾಡಲಾಯ್ತು. 

ಬೆಂಗಳೂರು ಕದಂಬ ಹೋಟೆಲ್‌ಗೆ ಬಾಂಬ್ ಬೆದರಿಕೆ ; ರಾಮೇಶ್ವರಂ ಕೆಫೆಗೂ ಬಾಂಬ್ ಇಟ್ಟಿದ್ದು ನಾನೇ ಎಂದ ಅನಾಮಿಕ!

ಈ ಬಗ್ಗೆ ದೆಹಲಿ ಡಿಎಸ್‌ಪಿ ಪೋಷಕರಿಗೆ ಇಮೇಲ್ ಸಂದೇಶ ಕಳುಹಿಸಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಬೆದರಿಕೆಯೊಡ್ಡುವ ಇಮೇಲ್ ಸಂದೇಶವನ್ನು ಸ್ವೀಕರಿಸಲಾಗಿದ್ದು,  ಮುನ್ನೆಚ್ಚರಿಕೆ ಕ್ರಮವಾಗಿ ನಾವು ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಕಳುಹಿಸುತ್ತಿದ್ದೇವೆ ಈ ಮೂಲಕ ನಿಮಗೆ ವಿಚಾರ ತಿಳಿಸುತ್ತಿದ್ದೇವೆ ಎಂದು ಪೋಷಕರಿಗೆ ಶಾಲೆಯಿಂದ ಸಂದೇಶ ಕಳುಹಿಸಲಾಗಿದೆ. ಅಲ್ಲದೇ ಶಾಲಾ ಆವರಣವನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿತ್ತು.  ಶಾಲೆಯಿಂದಲೂ ಪೋಷಕರಿಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಪೋಷಕರು ಕೂಡ ಆತಂಕದಿಂದಲೇ ಶಾಲೆ ಇರುವ ಸ್ಥಳಕ್ಕೆ ಬಂದಿದ್ದರಿಂದ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಬಾಂಬ್ ಬೆದರಿಕೆ ಬಂದ ಶಾಲೆಗಳಿಗೆ ಕೂಡಲೇ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ತಪಾಸಣಾ ತಂಡ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸಿದರು. ದೆಹಲಿ ಶಿಕ್ಷಣ ಸಚಿವೆ ಅತಿಶಿ ಕೂಡ ಈ ವಿಚಾರವನ್ನು ಖಚಿತಪಡಿಸಿದ್ದು ತಪಾಸಣೆ ವೇಳೆ ಏನು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios