Asianet Suvarna News Asianet Suvarna News

Asian Champions trophy 2023: ಇಂದು ಭಾರತ vs ಜಪಾನ್‌ ಸೆಮೀಸ್‌ ಕದನ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿಂದು ಸೆಮಿಫೈನಲ್ ಫೈಟ್
ಸತತ ಎರಡನೇ ಬಾರಿಗೆ ಫೈನಲ್‌ಗೇರುವ ನಿರೀಕ್ಷೆಯಲ್ಲಿ ಜಪಾನ್‌
5ನೇ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿರುವ ಭಾರತ ಹಾಕಿ ತಂಡ

Asian Champions trophy 2023 Semi Final Indian Hockey Team take on Japan Challenge kvn
Author
First Published Aug 11, 2023, 10:37 AM IST

ಚೆನ್ನೈ: 7ನೇ ಆವೃತ್ತಿಯ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ರೌಂಡ್‌ ರಾಬಿನ್‌ ಹಂತವನ್ನು ಮುಕ್ತಾಯಗೊಳಿಸಿರುವ ಭಾರತ ತಂಡ, ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಜಪಾನ್‌ ಸವಾಲನ್ನು ಎದುರಿಸಲಿದೆ. 3 ಬಾರಿ ಚಾಂಪಿಯನ್‌ ಭಾರತ 5ನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿದ್ದರೆ, ಕಳೆದ ಆವೃತ್ತಿಯಲ್ಲಿ ರನ್ನರ್‌-ಅಪ್‌ ಆಗಿದ್ದ ಜಪಾನ್‌, ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಲು ಕಾತರಿಸುತ್ತಿದೆ.

ಲೀಗ್‌ ಹಂತದಲ್ಲಿ ಭಾರತಕ್ಕೆ ಜಪಾನ್‌ ವಿರುದ್ಧ ಮಾತ್ರ ಗೆಲ್ಲಲು ಸಾಧ್ಯವಾಗಿರಲಿಲ್ಲ. ಭಾರತವನ್ನು 1-1ರ ಡ್ರಾಗೆ ನಿಯಂತ್ರಿಸಿದ್ದ ಜಪಾನ್‌, ಆತಿಥೇಯ ತಂಡಕ್ಕೆ ಮತ್ತೊಮ್ಮೆ ಪ್ರಬಲ ಪೈಪೋಟಿ ನೀಡಲು ಎದುರು ನೋಡುತ್ತಿದೆ. ಭಾರತ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ಆಗಿ ಕಣಕ್ಕಿಳಿಯಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪೂರ್ತಿ 60 ನಿಮಿಷಗಳ ಕಾಲ ತೀವ್ರತೆ ಕಾಯ್ದುಕೊಳ್ಳುವುದು ತಂಡದ ಮುಂದಿರುವ ಸವಾಲು.

ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನವನ್ನು ಹೊರದಬ್ಬಿದ ಭಾರತ..!

ಭಾರತ ಟೂರ್ನಿಯಲ್ಲಿ ಸದ್ಯ ಆಡಿರುವ 5 ಪಂದ್ಯಗಳಲ್ಲಿ ಒಟ್ಟು 20 ಗೋಲುಗಳನ್ನು ಬಾರಿಸಿದೆ. ಇದು ಉಳಿದೆಲ್ಲಾ ತಂಡಗಳಿಗೆ ಹೋಲಿಸಿದರೆ ಅತಿಹೆಚ್ಚು. ಆದರೆ ಜಪಾನ್‌ ವಿರುದ್ಧದ ಪಂದ್ಯದಲ್ಲಿ ತಂಡ 15 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದರೂ, ಕೇವಲ 1ರಲ್ಲಿ ಮಾತ್ರ ಗೋಲು ಬಾರಿಸಲು ಯಶಸ್ವಿಯಾಗಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಸುಧಾರಿತ ಪ್ರದರ್ಶನ ನೀಡಿರುವ ಭಾರತ, ಜಪಾನ್‌ ವಿರುದ್ಧವೂ ತನಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.

ಜಪಾನ್‌ ಲೀಗ್‌ ಹಂತದಲ್ಲಿ ಹೇಳಿಕೊಳ್ಳುವ ಪ್ರದರ್ಶನವನ್ನೇನೂ ನೀಡಿಲ್ಲ. ಆಡಿದ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯಿಸಿ, 2 ಸೋಲು ಹಾಗೂ 2 ಡ್ರಾ ಕಂಡಿದೆ. ಆದರೆ ಜಪಾನ್‌ನ ರಕ್ಷಣಾ ಪಡೆ ಗಮನಾರ್ಹ ಪ್ರದರ್ಶನ ತೋರಿದ್ದು, ಪ್ರಮುಖವಾಗಿ ಪೆನಾಲ್ಟಿ ಕಾರ್ನರ್‌ಗಳ ಎದುರು ಉತ್ತಮ ಕೌಶಲ್ಯ ಪ್ರದರ್ಶಿಸಿದೆ. ಹೀಗಾಗಿ ಹರ್ಮನ್‌ಪ್ರೀತ್‌ ಸಿಂಗ್‌ ಪಡೆ ತನ್ನ ಎದುರಾಳಿಯನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಬಾಲಿಯಲ್ಲಿ ಪತ್ನಿ-ಮಕ್ಕಳ ಜತೆ ಡೇವಿಡ್ ವಾರ್ನರ್ ಮೋಜು-ಮಸ್ತಿ..! ಫೋಟೋಗಳು ಇಲ್ಲಿವೆ ನೋಡಿ.

ಭಾರತದ ಪಂದ್ಯಕ್ಕೂ ಮುನ್ನ ಮೊದಲ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಹಾಗೂ ಕೊರಿಯಾ ಸೆಣಸಲಿವೆ. ಮೇಲ್ನೋಟಕ್ಕೆ ಮಲೇಷ್ಯಾ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ.

ಭಾರತ-ಜಪಾನ್‌ ಪಂದ್ಯ: ರಾತ್ರಿ 8.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಫ್ಯಾನ್‌ ಕೋಡ್‌

2021ರ ಸೆಮಿಫೈನಲ್‌ನಲ್ಲಿ ಜಪಾನ್‌ಗೆ ಶರಣಾಗಿದ್ದ ಭಾರತ!

ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯ ಲೀಗ್‌ ಹಂತದ ಪಂದ್ಯದಲ್ಲಿ 0-6ರಿಂದ ಸೋತಿದ್ದ ಜಪಾನ್‌, ಸೆಮಿಫೈನಲ್‌ನಲ್ಲಿ ಭಾರತವನ್ನು 5-3 ಗೋಲುಗಳಿಂದ ಬಗ್ಗುಬಡಿದು 2ನೇ ಬಾರಿಗೆ ಫೈನಲ್‌ ಪ್ರವೇಶಿಸಿತ್ತು. ಜಪಾನ್‌ 2013, 2021ರಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಅಂಡರ್‌-17 ಹಾಕಿ ತಂಡಕ್ಕೆ ರಾಣಿ, ಸರ್ದಾರ್‌ ಕೋಚ್‌

ನವದೆಹಲಿ: ಇದೇ ಮೊದಲ ಬಾರಿಗೆ ರಾಷ್ಟ್ರೀಯ ಅಂಡರ್‌-17 ತಂಡಗಳನ್ನು ರಚಿಸಲು ಹಾಕಿ ಇಂಡಿಯಾ ನಿರ್ಧರಿಸಿದ್ದು, ಭಾರತದ ಮಾಜಿ ನಾಯಕರಾದ ಸರ್ದಾರ್‌ ಸಿಂಗ್‌ ಹಾಗೂ ರಾಣಿ ರಾಂಪಾಲ್‌ರನ್ನು ಕ್ರಮವಾಗಿ ಪುರುಷ ಹಾಗೂ ಮಹಿಳಾ ತಂಡಗಳ ಕೋಚ್‌ಗಳನ್ನಾಗಿ ನೇಮಿಸಲಾಗಿದೆ. ರಾಷ್ಟ್ರೀಯ ತಂಡಗಳಿಗೆ ಕಾಲಿಡುವ ಆಟಗಾರರ ಗುಣಮಟ್ಟ ಹೆಚ್ಚಿಸಲು, ರಾಷ್ಟ್ರೀಯ ತಂಡಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅಂಡರ್‌-17 ತಂಡ ನೆರವಾಗಲಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ಹೇಳಿದ್ದಾರೆ.

Follow Us:
Download App:
  • android
  • ios