ಶಾಸಕ ವಿನಯ್ ಕುಲಕರ್ಣಿಗೂ ಉಂಟು, ಬಂಗಾರದ ವಂಚಕಿ ಐಶ್ವರ್ಯ ಗೌಡ ನಂಟು!
ಐಶ್ವರ್ಯ ಗೌಡ ವಿನಯ್ ಕುಲಕರ್ಣಿ ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ಕೋಟಿ ಕೋಟಿ ಹಣದ ವ್ಯವಹಾರ ಮಾಡಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನು ಟ್ರ್ಯಾಪ್ ಮಾಡಿದ್ದಲ್ಲದೆ, ಕೇವಲ 3 ವರ್ಷಗಳಲ್ಲಿ 75 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟಿಲ್ಲ.

ವಿನಯ್ ಕುಲಕರ್ಣಿ ಐಶ್ವರ್ಯಾ ಗೌಡ ನಡುವೆ ಸ್ನೇಹಕ್ಕೂ ಮಿಗಿಲಾದ ಸ್ನೇಹವಿತ್ತಂತೆ. ಯೋಗೇಶ್ ಗೌಡ ಹತ್ಯೆ ಕೇಸ್ ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಐಶ್ವರ್ಯ ಗೌಡ ಸಹಾಯ ಮಾಡಿದ್ದಳಂತೆ. ವಿನಯ್ ಕುಲಕರ್ಣಿ ಬಳಿ ಬರೊಬ್ಬರಿ 24 ಕೋಟಿ ರೂ. ಹಣದ ವ್ಯವಹಾರ ಮಾಡಿದ್ದಳು. ವಿನಯ್ ಕುಲಕರ್ಣಿ ಅಲ್ಲದೆ ಕಾಂಗ್ರೆಸ್ ನಾಯಕನೊಬ್ಬನ ಜೊತೆಗೂ ನಂಟನ್ನ ಹೊಂದಿದ್ದಳು. ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ರೂ TAX ಕಟ್ಟುತ್ತಿರಲಿಲ್ಲ. ಐಶ್ವರ್ಯಗೌಡ ಬ್ಯಾಂಕ್ ಅಕೌಂಟ್ ಮೂಲಕವೇ 75 ಕೋಟಿ ರೂ. ವ್ಯವಹಾರ ನಡೆಸಿರೋದು ಪತ್ತೆಯಾಗಿದೆ.

ವಿನಯ್ ಕುಲಕರ್ಣಿ ಬಳಿ ಬರೋಬ್ಬರಿ 24 ಕೋಟಿ ರೂಪಾಯಿ ಸಾಲ ರೂಪದಲ್ಲಿ ಪಡೆದಿದ್ದ ಐಶ್ವರ್ಯ ಗೌಡ, ದಿನಕ್ಕೆ 24 ಲಕ್ಷ ಬಡ್ಡಿ ಕೊಡುವುದಾಗಿ ಹೇಳಿದ್ದರಂತೆ. ಅಂದರೆ, ದಿನಕ್ಕೆ 1% ಬಡ್ಡಿ ಕೊಡುವುದಾಗಿ ತಿಳಿಸಿದ್ದರಂತೆ. ಹಣ ಪಡೆದ ನಂತರ ಅಸಲು, ಬಡ್ಡಿ ಎರಡನ್ನೂ ಕೊಡದೇ ತನಗೆ ಇನ್ನಷ್ಟು ಸಮಯ ಬೇಕು ಎಂದು ಐಶ್ವರ್ಯ ಗೌಡ ಕೇಳಿಕೊಂಡಿದ್ದಳಂತೆ. ಆಗ ಐಶ್ವರ್ಯಾ ಜೊತೆ ಮಾತುಕತೆ ನಡೆಸಿ ವಿನಯ್ ಕುಲಕರ್ಣಿ ಒಪ್ಪಂದ ಮಾಡಿಕೊಂಡಿದ್ದರು. ತಾನು ಕೊಟ್ಟ 24 ಕೋಟಿ ಹಣಕ್ಕೆ ತನ್ನ ಸ್ನೇಹಿತನ ಹೆಸರಿನಲ್ಲಿ ಕೈ ಸಾಲ ಪಡೆದಿದ್ದಾಗಿ ಅಗ್ರಿಮೆಂಟ್ ಮಾಡಿಸಿದ್ದರಂತೆ. ಜೊತೆಗೆ, ವಿನಯ್ ಕುಲಕರ್ಣಿ ಕೆಲವೊಬ್ಬರನ್ನು ಟ್ರ್ಯಾಪ್ ಮಾಡುವಂತೆ ಟಾಸ್ಕ್ ನೀಡಿದ್ದರಂತೆ.
ಹೀಗಾಗಿ ಯೋಗೇಶ್ ಗೌಡ ಕೊಲೆ ಕೇಸಿನ ಒರ್ವ ಆರೋಪಿ ಲಕ್ಷ್ಮಣ್ ಐಶ್ವರ್ಯ ಗೌಡ ಮನೆಯಲ್ಲೆ ಇದ್ದನು. ಇಬ್ಬರೂ ಸೇರಿ ಆಡಿಯೋ ರೆಕಾರ್ಡ್ ಮಾಡಿದ್ದರು. 24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿಯೇ ವಿನಯ್ ಕುಲಕರ್ಣಿ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ರೇಡ್ ಮಾಡಿತ್ತು. ಸತತ 26 ಗಂಟೆಗಳ ಕಾಲ ದಾಳಿ ನಡೆಸಿ ಹಲವು ದಾಖಲೆ ಸಂಗ್ರಹಿಸಿರುವ ಇ.ಡಿ, ಯೋಗೇಶ್ ಗೌಡ ಮರ್ಡರ್ ಕೇಸ್ ನಲ್ಲೂ ವಿನಯ್ ಕುಲಕರ್ಣಿಗೆ ಐಶ್ವರ್ಯಾ ಗೌಡ ಸಹಾಯ ಮಾಡಿದ್ದಳು ಎಂಬುದು ತಿಳಿದುಕೊಂಡಿದ್ದಾರೆ. ಕೋಟಿ-ಕೋಟಿ ಸಾಲದ ಋಣವಾಗಿ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡಿದ್ದಳು. ಪ್ರಕರಣದ ಸಾಕ್ಷಿಯಾಗಿದ್ದ ಬಸವರಾಜ್ ಮುತ್ತಗಿಗೆ ಐಶ್ವರ್ಯ ಗೌಡ ಟ್ರ್ಯಾಪ್ ಮಾಡಿದ್ದಳು. ಐಶ್ವರ್ಯ ತಾನೇ ಬಸವರಾಜ್ಗೆ ಕರೆ ಮಾಡಿ ಟ್ರ್ಯಾಪ್ ಮಾಡಿದ್ದಳು ಎಂಬುದು ಬಹಿರಂಗವಾಗಿದೆ.
ಇದನ್ನೂ ಓದಿ: ಡಿ.ಕೆ.ಸುರೇಶ್ ಹೆಸರಿನಲ್ಲಿ ವಂಚಿಸಿದ್ದ ಬಂಗಾರಿ ಇ.ಡಿ. ಟೀಂ ಬಲೆಗೆ: ವಿನಯ್ ಕುಲಕರ್ಣಿ ಮೇಲೂ ರೇಡ್
ಇದಾದ ನಂತರ ಯೋಗೇಶ್ ಗೌಡ ಹತ್ಯೆ ಕೇಸಿನ ಸಾಕ್ಷಿ ಬಸವರಾಜ ಮುತ್ತಗಿಯನ್ನು ಐಶ್ವರ್ಯ ಹಾಗೂ ಲಕ್ಷ್ಮಣ ಸೇರಿಕೊಂಡು ಹಣ ಆಮಿಷ ಒಡ್ಡಿದ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಹೈಕೋರ್ಟ್ ನಲ್ಲಿ ಈ ಆಡಿಯೋ ನೀಡಿ ಮಾಫಿ ಸಾಕ್ಷಿ ರದ್ದು ಮಾಡಲು ಮುಂದಾಗಿದ್ದಳು. ಆದರೆ ಈ ವಿಚಾರ ಸಿಬಿಐ ನ್ಯಾಯಾಲಯಕ್ಕೆ ನೀಡಿತ್ತು. ಹೀಗಾಗಿ ಮಾಫಿ ಸಾಕ್ಷಿ ರದ್ದಿಗೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿತ್ತು. ಇ.ಡಿ ವಿಚಾರಣೆ ವೇಳೆ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡಿದ್ದು ಬಯಲಿಗೆ ಬಂದಿದೆ.
ಐಶ್ವರ್ಯ ಗೌಡ ಕಾಂಗ್ರೆಸ್ ಮುಖಂಡ ತಿಬ್ಬೆಗೌಡರ ಜೊತೆ ಕೋಟಿ-ಕೋಟಿ ವಹಿವಾಟು ಮಾಡಿದ್ದರು. ತಿಬ್ಬೆಗೌಡರ ಜೊತೆ ಐಶ್ವರ್ಯಗೌಡ ಸುಮಾರು 60 ಕೋಟಿ ಹಣದ ವಹಿವಾಟು ನಡೆಸಿದ್ದಾರೆ. ಆದ್ದರಿಂದ ಇಡಿ ಅಧಿಕಾರಿಗಳು ಆರ್.ಆರ್.ನಗರದ ತಿಬ್ಬೇಗೌಡರ ನಿವಾಸದ ಮೇಲೂ ದಾಳಿ ನಡೆಸಿದ್ದರು. ತಿಬ್ಬೇಗೌಡರ ಜೊತೆ ನಡೆಸಿರೋ 60 ಕೋಟಿ ಹಣ ಯಾರಿಗೆ ಸೇರಿದ್ದು? ಹಣದ ಮೂಲ ಏನು ಎಂದು ತನಿಖೆ ಮುಂದುವರೆಸಲಾಗಿದೆ. ತಿಬ್ಬೇಗೌಡರ ಮೊಬೈಲ್ ಸೀಜ್ ಮಾಡಿ ಬ್ಯಾಂಕ್ ಪಾಸ್ಬುಕ್ ವಶಪಡಿಸಿಕೊಳ್ಳಲಾಗಿದೆ. ಸದ್ಯದಲ್ಲಿ ತಿಬ್ಬೇಗೌಡರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲು ಇಡಿ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಬಂಗಾರಿ ಜತೆ ಸಹವಾಸ: ಶಾಸಕ ವಿನಯ್ ಕುಲಕರ್ಣಿಗೆ ಬಂಧನ ಭೀತಿ
ಒಟ್ಟಾರೆ ಬಂಗಾರಿ ಐಶ್ವರ್ಯ ಗೌಡ ರಾಜರೋಷವಾಗಿ ಬ್ಯಾಂಕ್ ಅಕೌಂಟ್ ಮೂಲಕವೇ 75 ಕೋಟಿ ರೂ. ವ್ಯವಹಾರ ಮಾಡಿದ್ದಳು. ಕೇವಲ 3 ವರ್ಷದಲ್ಲಿ 75 ಕೋಟಿ ವ್ಯವಹಾರ ಮಾಡಿದ್ದರೂ, ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೇ ವಂಚನೆ ಮಾಡಿರುವುದು ಬಯಲಿಗೆ ಬಂದಿದೆ. ಕೇಸ್ ದಾಖಲಾಗುತ್ತಿದ್ದಂತೆ 46 ಲಕ್ಷ ರೂ. ಆದಾಯ ಬಂದಿದೆ ಎಂದು ಟ್ಯಾಕ್ಸ್ ಕಟ್ಟಲು ಮುಂದಾಗಿದ್ದಳು. ಐಟಿ ಫೈಲ್ ಮಾಡಲು ತೆರಳಿದ್ದಾಗ ಆದಾಯ ತೆರಿಗೆ ಅಧಿಕಾರಿಗಳು ರಿಜೆಕ್ಟ್ ಮಾಡಿ ಕಳುಹಿಸಿದ್ದರು.