userpic
user icon
0 Min read

ಮದುವೆಯಾಗುವಂತೆ ಪೀಡಿಸುತ್ತಿದ್ದ ಮಂಗಳಮುಖಿ ಕೊಲೆ ಮಾಡಿದ್ದ ಮೂವರ ಬಂಧನ

KR Puram Tanushree murder case Accused arrested rav

Synopsis

ಮಂಗಳಮುಖಿ ತನುಶ್ರೀ (45) ಕೊಲೆ ಪ್ರಕರಣದಲ್ಲಿ ಆಕೆಯ ಸ್ನೇಹಿತ ಸೇರಿ ಮೂವರನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಜಗದೀಶ್‌ ಎಂಬಾತ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು (ಏ.29): ಇತ್ತೀಚೆಗೆ ನಡೆದಿದ್ದ ಮಂಗಳಮುಖಿ ತನುಶ್ರೀ (45) ಕೊಂದಿದ್ದ ಪ್ರಕರಣ ಸಂಬಂಧ ಆಕೆಯ ಸ್ನೇಹಿತ ಸೇರಿ ಮೂವರನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪುರ ಸೀಗೇಹಳ್ಳಿ ನಿವಾಸಿ ಜಗದೀಶ್ (29), ಪ್ರಭಾಕರ್ (34) ಮತ್ತು ಸುಶಾಂತ್ (32) ಬಂಧಿತರು. ಆರೋಪಿಗಳು ಏ.17ರಂದು ಮಾರಕಾಸ್ತ್ರದಿಂದ ಮಂಗಳಮುಖಿ ತನುಶ್ರೀ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಮೂವರನ್ನು ಬಂಧಿಸಲಾಗಿದೆ.

ಪ್ರಕರಣದ ವಿವರ: ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣಕ್ಕೆ ರೋಚಕ ತಿರುವು

ಮೂವರು ಆರೋಪಿಗಳ ಪೈಕಿ ಜಗದೀಶ್‌ ವಿವಾಹಿತನಾಗಿದ್ದು, ಒಂದು ಮಗು ಇದೆ. ಕ್ಯಾಬ್‌ ಚಾಲಕನಾಗಿದ್ದ ಈತನಿಗೆ ಒಂದು ವರ್ಷದ ಹಿಂದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ತನುಶ್ರೀ ಪರಿಚಯವಾಗಿತ್ತು. ಸಾಮಾಜಿಕ ಕಾರ್ಯಗಳ ಸಂಬಂಧ ಇಬ್ಬರು ಒಟ್ಟಿಗೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಿದ್ದರು. ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದರಿಂದ ಜಗದೀಶ್‌ ಹೆಚ್ಚು ತನುಶ್ರೀ ಮನೆಯಲ್ಲೇ ಇರುತ್ತಿದ್ದ. ಈ ವೇಳೆ ಜಗದೀಶ್‌ ಮೇಲೆ ಹೆಚ್ಚು ವ್ಯಾಮೋಹ ಬೆಳೆಸಿಕೊಂಡಿದ್ದ ತನುಶ್ರೀ, ಮದುವೆಯಾಗುವಂತೆ ಆಗಾಗ ಒತ್ತಾಯಿಸಿದ್ದಳು. ಇದಕ್ಕೆ ಜಗದೀಶ್‌ ನಿರಾಕರಿಸಿದ್ದ. ಹೀಗೆ ತನುಶ್ರೀ ಮದುವೆಯಾಗುವಂತೆ ಬೆದರಿಕೆ ಹಾಕುತ್ತಿದ್ದರಿಂದ ಕೋಪಗೊಂಡ ಜಗದೀಶ್‌, ಸ್ನೇಹಿತರಾದ ಪ್ರಭಾಕರ್‌ ಮತ್ತು ಸುಶಾಂತ್‌ ಸಾಥ್‌ ಪಡೆದು ತನುಶ್ರೀ ಕೊಲೆಗೆ ಸಂಚು ರೂಪಿಸಿದ್ದನು.

ಪಾರ್ಟಿ ಮಾಡಿ ಬಳಿಕ ಕೊಲೆ:

ಏ.17ರ ರಾತ್ರಿ ಜಗದೀಶ್‌ ತನ್ನಿಬ್ಬರು ಸ್ನೇಹಿತರನ್ನು ತನುಶ್ರೀ ಮನೆಗೆ ಕರೆಸಿಕೊಂಡಿದ್ದ. ಬಳಿಕ ನಾಲ್ವರು ಕಂಠಪೂರ್ತಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಬಳಿಕ ಮೂವರು ಸೇರಿ ತನುಶ್ರೀ ಕತ್ತು ಕೊಯ್ದು, ದೇಹದ ಇತರೆ ಭಾಗಗಳಿಗೆ ಇರಿದು ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಕೋಟ್ಯಧೀಶೆ ಮಂಗಳಮುಖಿ ಹತ್ಯೆ; ಪತಿ ಮೇಲೆ ಅನುಮಾನ!

ತಿರುಪತಿಯಲ್ಲಿ ಮುಡಿ:

ತನುಶ್ರೀ ಕೊಲೆ ಬಳಿಕ ಮೂವರು ಆರೋಪಿಗಳು ತಿರುಪತಿಗೆ ಹೋಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಮುಡಿಕೊಟ್ಟಿದ್ದರು. ಬಳಿಕ ಶಿಡ್ಲಘಟ್ಟದ ಪರಿಚಿತರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ತನುಶ್ರೀ ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಏಕಾಏಕಿ ನಾಪತ್ತೆಯಾಗಿದ್ದ ಜಗದೀಶ್‌ ಬಗ್ಗೆ ಅನುಮಾನಗೊಂಡು ಹುಡುಕಾಟ ನಡೆಸುತ್ತಿದ್ದರು. ಶಿಡ್ಲಘಟ್ಟದಲ್ಲಿ ಆರೋಪಿಗಳು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಬಳಿಕ ಅಲ್ಲಿಗೆ ತೆರಳಿ ಮೂವರನ್ನೂ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos