Asianet Suvarna News Asianet Suvarna News

SA20 2023 Final: ಪ್ರಶಸ್ತಿಗಾಗಿಂದು ಪ್ರಿಟೋರಿಯಾ ಕ್ಯಾಪಿಟಲ್ಸ್‌-ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ಕಾದಾಟ

ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಪ್ರಶಸ್ತಿಗಾಗಿ ಪ್ರಿಟೋರಿಯಾ ಕ್ಯಾಪಿಟಲ್ಸ್‌-ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ಕಾದಾಟ
ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ವಾಂಡರರ್ಸ್‌ ಮೈದಾನ ಆತಿಥ್ಯ

SA20 2023 Final Pretoria Capitals vs Sunrisers Eastern Cape All Cricket fans need to know kvn
Author
First Published Feb 11, 2023, 4:00 PM IST

ಜೋಹಾನ್ಸ್‌ಬರ್ಗ್‌(ಫೆ.11): ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ SA20 2023 ಟೂರ್ನಿಯ ಫೈನಲ್‌ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಶಸ್ತಿಗಾಗಿದಂದು ಪ್ರಿಟೋರಿಯಾ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. 

ದಕ್ಷಿಣ ಆಫ್ರಿಕಾದ ತಾರಾ ಆಲ್ರೌಂಡರ್ ವೇಯ್ನ್ ಪಾರ್ನೆಲ್ ನೇತೃತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಸೆಮಿಫೈನಲ್‌ನಲ್ಲಿ ಡೇವಿಡ್ ಮಿಲ್ಲರ್ ನೇತೃತ್ವದ ಪಾರ್ಲ್‌ ರಾಯಲ್ಸ್‌ ತಂಡವನ್ನು ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 31 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಂಪಾದಿಸಿತ್ತು.

ವಿಲ್‌ ಜೇಕ್ಸ್‌, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಎನಿಸಿಕೊಂಡಿದ್ದು, ಆಡಿದ 7 ಪಂದ್ಯಗಳಲ್ಲಿ 38.57ರ ಬ್ಯಾಟಿಂಗ್ ಸರಾಸರಿಯಲ್ಲಿ 270 ರನ್ ಗಳಿಸಿದ್ದಾರೆ. ಬರೋಬ್ಬರಿ 201.49ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿರುವ ವಿಲ್‌ ಜೇಕ್ಸ್‌, ಮೂರು ಅರ್ಧಶತಕ ಸಿಡಿಸಿ ಅಬ್ಬರಿಸಿದ್ದು, ಇದೀಗ ಫೈನಲ್‌ನಲ್ಲೂ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ಅವರ ಬೌಲಿಂಗ್‌ ಪಡೆಗೆ ನಡುಕ ಹುಟ್ಟಿಸಿದ್ದಾರೆ.

ಇನ್ನು ಮಾರಕ ವೇಗಿ ಏನ್ರಿಚ್ ನೋಕಿಯಾ, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದು, ಆಡಿದ 10 ಪಂದ್ಯಗಳಲ್ಲಿ ಕೇವಲ 6.28ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟು 18 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಆತನ ಕೆನ್ನೆಗೆ ಬಾರಿಸುತ್ತೇನೆಂದ ಮಾಜಿ ನಾಯಕ..!

ಇನ್ನೊಂದೆಡೆ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು ಆಡಿದ 10 ಪಂದ್ಯಗಳಲ್ಲಿ 19 ಅಂಕಗಳೊಂದಿಗೆ ನಾಕೌಟ್ ಹಂತ ಪ್ರವೇಶಿಸಿತ್ತು. ಇನ್ನು ಸೆಮಿಫೈನಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಬಲಿಷ್ಠ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಸೆಮಿಫೈನಲ್‌ನಲ್ಲಿ ನಾಯಕ ಏಯ್ಡನ್‌ ಮಾರ್ಕ್‌ರಮ್‌ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡವು ಫೈನಲ್‌ಗೇರುವಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸಿದ್ದರು. ಇದಷ್ಟೇ ಅಲ್ಲದೇ ಮಾರ್ಕ್‌ರಮ್‌, ಸನ್‌ರೈಸರ್ಸ್ ಪರ 11 ಪಂದ್ಯಗಳನ್ನಾಡಿ 34ರ ಸರಾಸರಿಯಲ್ಲಿ 340 ರನ್‌ ಸಿಡಿಸುವ ಮೂಲಕ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಎಡಗೈ ಸ್ಪಿನ್ನರ್‌ ರೋಲೆಫ್ ವ್ಯಾನ್‌ ಡರ್‌ ಮೆರ್ವೆ, ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ತಂಡದ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದು, ಕೇವಲ 9 ಪಂದ್ಯಗಳನ್ನಾಡಿ 5.33ರ ಎಕಾನಮಿಯಲ್ಲಿ ರನ್‌ ನೀಡಿ 16 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಫೈನಲ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವುಮ ವ್ಯಾನ್ ಡರ್ ಮೆರ್ವೆ ಎದುರು ಎಚ್ಚರಿಕೆಯ ಬ್ಯಾಟಿಂಗ್ ನಡೆಸಬೇಕಿದೆ.

ಫೈನಲ್ ಪಂದ್ಯದ ಚುಟುಕು ಮಾಹಿತಿ:

ಫೈನಲ್ ಪಂದ್ಯ: ಫೆಬ್ರವರಿ 11
ಸ್ಥಳ: ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್
ಸಮಯ: ಸಂಜೆ 8 ಗಂಟೆ(ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಪೋರ್ಟ್ಸ್‌18, ವೈಕಾಮ್ ಜಿಯೋಟಿವಿ ಆಫ್

Follow Us:
Download App:
  • android
  • ios