Asianet Suvarna News Asianet Suvarna News

ಕುರ್ತಾದ ಮೇಲಿದ್ದ ಅರೇಬಿಕ್ ಬರಹ ಕುರಾನ್ ಎಂದು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಮುಂದಾದ ಗುಂಪು

ಕುರ್ತಾದ ಮೇಲಿದ್ದ ಅರೇಬಿಕ್ ಬರಹವನ್ನು ಕುರಾನ್ ಎಂದು ತಪ್ಪು ತಿಳಿದು ಮಹಿಳೆಯೋರ್ವಳ ಮೇಲೆ ಗುಂಪೊಂದು ದಾಳಿ ಮಾಡಲು ಮುಂದಾದ ಘಟನೆ ನಡೆದಿದ್ದು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಧೈರ್ಯ ಹಾಗೂ ಚಾಣಾಕ್ಷತನದಿಂದ ಮಹಿಳೆಯ ಜೀವ ಉಳಿದಿದೆ. 

Pakistan Mob mistook Arabic write up in kurta as Quran Verses and tried to attack one woman in Lahore akb
Author
First Published Feb 26, 2024, 10:54 AM IST

ಇಸ್ಲಮಾಬಾದ್: ಕುರ್ತಾದ ಮೇಲಿದ್ದ ಅರೇಬಿಕ್ ಬರಹವನ್ನು ಕುರಾನ್ ಎಂದು ತಪ್ಪು ತಿಳಿದು ಮಹಿಳೆಯೋರ್ವಳ ಮೇಲೆ ಗುಂಪೊಂದು ದಾಳಿ ಮಾಡಲು ಮುಂದಾದ ಘಟನೆ ನಡೆದಿದ್ದು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಧೈರ್ಯ ಹಾಗೂ ಚಾಣಾಕ್ಷತನದಿಂದ ಮಹಿಳೆಯ ಜೀವ ಉಳಿದಿದೆ. ಪಾಕಿಸ್ತಾನದ ಲಾಹೋರ್‌ನ ಹೊಟೇಲೊಂದರಲ್ಲಿ ಈ ಘಟನೆ ನಡೆದಿದೆ.

ಪಾಕಿಸ್ತಾನದ ಲಾಹೋರ್‌ನಲ್ಲಿದ್ದ ರೆಸ್ಟೋರೆಂಟ್ ಒಂದಕ್ಕೆ ಕುರ್ತಾ ಧರಿಸಿದ್ದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಭೋಜನ ಸೇವಿಸಲು ಆಗಮಿಸಿದ್ದರು. ಇವರು ಧರಿಸಿದ ಕುರ್ತಾದಲ್ಲಿ ಅರೇಬಿಕ್ ಲಿಪಿಯ ಬರಹಗಳಿದ್ದು, ಜನ ಇದು ಕುರಾನ್‌ಗೆ ಸಂಬಂಧಿಸಿದ ಗದ್ಯವೆಂದು ತಿಳಿದು ಆಕೆಯ ಮೇಲೆ ಮುಗಿಬಿದ್ದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿ ಒಮ್ಮೆಲೇ ನೂರಾರು ಜನ ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಭಾರಿ ಬಿಗಿ ಭದ್ರತೆಯೊಂದಿಗೆ ಮಹಿಳೆಯನ್ನು ರೆಸ್ಟೋರೆಂಟ್‌ನಿಂದ ಕರೆತಂದು ರಕ್ಷಣೆ ಮಾಡಿದ್ದಾರೆ. 

ಮದ್ವೆ ಮಾಡಿದ್ರೆ ಮಾತ್ರ ಮುಂದೆ ಓದ್ತೀನಿ; ಪಾಲಕರನ್ನು ಬೆದರಿಸಿ ಮದುವೆಯಾದ ಯುವಕ

ಮಹಿಳೆಯ ವಿರುದ್ಧ ಧರ್ಮ  ನಿಂದನೆಯ ಆರೋಪ ಹೊರಿಸಿದ ಜನರ ಗುಂಪು ಅಲ್ಲೇ ಕುರ್ತಾವನ್ನು ಬಿಚ್ಚುವಂತೆ ಮಹಿಳೆಗೆ ಬೆದರಿಕೆಯೊಡ್ಡಿದ್ದಾರೆ. ವಿಚಾರ ವಿಕೋಪಕ್ಕೆ ಹೋಗುವ ಸೂಚನೆ ಅರಿತ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ವಿಶೇಷವಾಗಿ ಮಹಿಳಾ ಅಧಿಕಾರಿ ಸೈಯದಾ ಶೆಹರ್ಬಾನೋ ನಖ್ವಿ ಜನರಿಗೆ ಆ ಕುರ್ತಾದಲ್ಲಿರುವುದು ಕುರಾನ್ ಅಲ್ಲ ಎಂಬುದನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೂ ಅಲ್ಲಿ ಸೇರಿದ್ದ ಜನ ಚದುರುವ ಲಕ್ಷಣ ಕಾಣದೇ ಇದ್ದಾಗ ಸೀದಾ ಹೊಟೇಲ್ ಒಳಗೆ ಬಂದ ಸೈಯದಾ ಮಹಿಳೆಗೆ ಬುರ್ಕಾ ತೊಡಿಸಿ ಮುಖವನ್ನು ಸಂಪೂರ್ಣ ಕವರ್ ಮಾಡಿ ಆಕೆಯ ಕೈ ಹಿಡಿದು ಹೊಟೇಲ್‌ನಿಂದ ಹೊರ ತಂದು ಬಿಟ್ಟಿದ್ದಾರೆ. ಈ ಮೂಲಕ ಆಕೆಯ ಮೇಲೆ ದಾಳಿಗೆ ಮುಂದಾಗಿದ್ದ ಗುಂಪಿನಿಂದ ಆಕೆಯನ್ನು ರಕ್ಷಣೆ ಮಾಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿ ಸೈಯದಾ ಶೆಹರ್ಬಾನೋ ನಖ್ವಿ ಅವರ ಈ ಧೈರ್ಯದ ನಡೆಗೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ. ಅವರು ಅಲ್ಲಿ ಸೇರಿದ ಜನರಿಗೆ ಇದು ಕುರಾನ್ ಬರಹ ಅಲ್ಲ ಎಂದು ಮನವರಿಕೆ ಮಾಡಿ ಮಹಿಳೆಯನ್ನು ಆ ಸ್ಥಳದಿಂದ ಸುರಕ್ಷಿತವಾಗಿ ಕರೆದೊಯ್ಯುತ್ತಿರುವ ವೀಡಿಯೋ ಈಗ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಭಾರತದ ಟಾಟಾ ಕಂಪನಿ ಪಾಕಿಸ್ತಾನಕ್ಕಿಂತಲೂ ಶ್ರೀಮಂತ

ಇನ್ನು ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದು, ಅಲ್ಲಿ ಆಕೆ ಜನರ ಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆ ಕೇಳುವುದಾಗಿ ಹೇಳಿದ್ದಾಗಿ ವರದಿಯಾಗಿದೆ. ನಾನು ಯಾವುದೇ ಧರ್ಮವನ್ನು ಹಾಗೂ ಜನರ ಧಾರ್ಮಿಕ ಭಾವನೆಯನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ, ಕುರ್ತಾ ಸುಂದರವಾದ ವಿನ್ಯಾಸವನ್ನು ಹೊಂದಿದ್ದರಿಂದ ನಾನು ಈ ಕುರ್ತಾವನ್ನು ಖರೀದಿಸಿದ್ದೆ ಎಂದು ಆಕೆ ಪೊಲೀಸರ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ.
 

 

 

Follow Us:
Download App:
  • android
  • ios