ಶೀಘ್ರದಲ್ಲಿಯೇ 70,000 ರೂ.ಗೆ 10 ಗ್ರಾಂ ಬಂಗಾರ; ₹27,000 ಇಳಿಕೆ ಮಾಹಿತಿ ಕೊಟ್ಟ ಚಿನ್ನದ ಗಣಿಯ ಸಿಇಒ

Synopsis
Gold Prediction: ಚಿನ್ನದ ಗಣಿಗಾರಿಕೆ ಕಂಪನಿಯೊಂದು ಮುಂದಿನ 12 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ₹70,000ಕ್ಕೆ ಇಳಿಕೆಯಾಗಬಹುದು ಎಂದು ಭವಿಷ್ಯ ನುಡಿದಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹27,000 ರೂ.ಗಳವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.
ನವದೆಹಲಿ: ಇಡೀ ವಿಶ್ವದಾದ್ಯಂತ ಚಿನ್ನದ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ಈ ಕಾರಣದಿಂದ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ಬರೆಯುತ್ತಿದೆ. ಚಿನ್ನದ ಗಣಿಗಾರಿಕೆ ನಡೆಸುವ ಅತಿದೊಡ್ಡ ಕಂಪನಿಯೊಂದು 10 ಗ್ರಾಂ ಚಿನ್ನದ ಬೆಲೆ 70,000 ರೂಪಾಯಿ ಆಗಲಿದೆ ಎಂದು ಭವಿಷ್ಯ ನುಡಿದಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆಯಲ್ಲಿ 27,000 ರೂ.ಗಳವರೆಗೆ ಕಡಿಮೆಯಾಗಲಿದೆ ಎಂದು ಹೇಳಿಕೊಂಡಿದೆ. ಸಾಲಿಡ್‌ಕೋರ್ ರಿಸೋರ್ಸಸ್ ಪಿಎಲ್‌ಸಿ ಕಝಾಕಿಸ್ತಾನ್‌ನ ಪ್ರಮುಖ ಚಿನ್ನದ ಗಣಿಗಾರಿಕೆ ಕಂಪನಿಯಾಗಿದೆ. ಈ ಕಂಪನಿಯ ಸಿಇಒ, ಮುಂದಿನ 12 ತಿಂಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಾಣಬಹುದು ಎಂದು ವಿಶ್ಲೇಷಿಸಿದ್ದಾರೆ.
ಅಮೆರಿಕ ಕರೆನ್ಸಿ ಡಾಲರ್ ಮೌಲ್ಯ ಹೆಚ್ಚಳ, ಚೀನಾ-ಯುಎಸ್ ನಡುವಿನ ವ್ಯಾಪಾರ ಘರ್ಷಣೆ ಸೇರಿದಂತೆ ಇನ್ನಿತರ ಜಾಗತಿಕ ವಿಷಯಗಳು ನೇರವಾಗಿ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿಯೂ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1 ಲಕ್ಷಕ್ಕೂ ಅಧಿಕವಾಗಿ, ನಂತರ 3,000 ರೂ.ವರೆಗೂ ಇಳಿಕೆಯಾಗಿದೆ. ಕಝಾಕಿಸ್ತಾನ್‌ನ ಚಿನ್ನದ ಗಣಿಗಾರಿಕೆ ಕಂಪನಿ ಸಾಲಿಡ್‌ಕೋರ್ ಈ ಮೊದಲು ಪಾಲಿಮೆಟಲ್ ಹೆಸರಿನಿಂದ ಜನಪ್ರಿಯವಾಗಿತ್ತು. ಇದೀಗ ಸಾಲಿಡ್‌ಕೋರ್ ಕಂಪನಿಯ ಸಿಇಒ ವಿಟಾಲಿ ನೆಸಿಸ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಇಒ ವಿಟಾಲಿ ನೆಸಿಸ್ ಹೇಳಿದ್ದೇನು?
ಮುಂದಿನ 12 ತಿಂಗಳಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $2,500 ತಲುಪುವ ನಿರೀಕ್ಷೆಗಳಿವೆ. ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಪ್ರತಿ ಔನ್ಸ್ ಬೆಲೆ 3,300 ಡಾಲರ್ ಆಗಿದೆ. ಈ ಬೆಳವಣಿಗೆ ಹೀಗೆಯೇ ಮುಂದುವರಿದ್ರೆ 12 ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂಪಾಯಿ ಆಗಲಿದೆ. ಪ್ರತಿ 10 ಗ್ರಾಂ ಚಿನ್ನಕ್ಕೆ 27,000 ರೂ.ಗಳಷ್ಟು ಅಗ್ಗವಾಗಲಿದೆ. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $ 1,800-1,900 ಮಟ್ಟಕ್ಕೆ ಮತ್ತೆ ಹೋಗಲ್ಲ. ಜಗತ್ತಿನಲ್ಲಿ ನಡೆಯುತ್ತಿರುವ ಹೊಸ ರಾಜಕೀಯ ವಿದ್ಯಮಾನಗಳಿಂದ ಚಿನ್ನದ ಬೆಲೆ ಹೆಚ್ಚಳವಾಯ್ತು ಎಂದು ವಿಟಾಲಿ ನೆಸಿಸ್ ಹೇಳುತ್ತಾರೆ.
ಇದನ್ನೂ ಓದಿ: ಅಕ್ಷಯ ತೃತೀಯ: ಆನ್‌ಲೈನಲ್ಲಿ ಚಿನ್ನ ಕೊಂಡು, ಕ್ಯಾಶ್ ಬ್ಯಾಕ್ ಪಡೀರಿ
ಈ ವರ್ಷ ಶೇ.26ರಷ್ಟು ಏರಿಕೆ?
ಹಿಂದಿನಿಂದಲೂ ಚಿನ್ನವನ್ನು ಸುರಕ್ಷಿತ ಹೂಡಿಕೆಯೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಮೆರಿಕ ಸರ್ಕಾರದ ಟ್ಯಾರಿಫ್ ಹೆಚ್ಚಳದಿಂದ ಚಿನ್ನದ ಮೇಲಿನ ಹೂಡಿಕೆ ಅಧಿಕವಾಯ್ತು. ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯಿಂದಾಗಿ ಜನರು ಸುರಕ್ಷಿತ ಹೂಡಿಕೆಯಾಗಿರು ಚಿನ್ನದತ್ತ ಮುಖ ಮಾಡುತ್ತಾರೆ. ಈ ವರ್ಷ ಇಲ್ಲಿವರೆಗೆ ಶೇ.26ರಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ. ಅಮೆರಿಕ ವಿಧಿಸಿರುವ ಆಮದು ಸುಂಕಗಳು ಆರ್ಥಿಕ ಹಿಂಜರಿತದ ಭೀತಿಯನ್ನು ಹೆಚ್ಚಿಸಿದ್ದು, ಇದರಿಂದಾಗಿ ಚಿನ್ನದ ಬೇಡಿಕೆ ಹೆಚ್ಚಿದೆ ಎಂದು ಸಿಇಒ ವಿಟಾಲಿ ನೆಸಿಸ್ ಮಾರುಕಟ್ಟೆ ಬೆಳವಣಿಗೆಯ ಮಾಹಿತಿಯನ್ನು ನೀಡುತ್ತಾರೆ.
ಯುಎಸ್‌ನಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸಲಾಗಿರುವ ಶೇ.125ರಷ್ಟು ಸುಂಕವನ್ನು ತೆಗೆದು ಹಾಕಲು ಚೀನಾ ಯೋಚನೆ ನಡೆಸುತ್ತಿದೆ. ವಿನಾಯಿತಿ ನೀಡುವ ಆಮದು ಸರಕುಗಳ ಪಟ್ಟಿಯನ್ನು ನೀಡುವಂತೆ ಚೀನಾ ಕೇಳಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಂಕವನ್ನು ಕಡಿತಗೊಳಿಸುವ ಬಗ್ಗೆ ಮಾತನಾಡಿದ್ದು, ಉಭಯ ದೇಶಗಳ ನಡುವೆ ನೇರ ಮಾತುಕತೆ ಪ್ರಾರಂಭವಾಗಿದೆ ಎಂದಿದ್ದಾರೆ. ಅಮೆರಿಕದ ಡಾಲರ್ ಮೌಲ್ಯವೂ ಹೆಚ್ಚಿದ್ದು, ಮಾರ್ಚ್ ನಂತರ ಮೊದಲ ಬಾರಿಗೆ ವಾರದ ಲಾಭದತ್ತ ಸಾಗುತ್ತಿದೆ. ಚಿನ್ನವು ಸಾಮಾನ್ಯವಾಗಿ ಡಾಲರ್‌ಗಳಲ್ಲಿ ಮೌಲ್ಯಯುತವಾಗಿರುವುದರಿಂದ ಬಲವಾದ ಡಾಲರ್ ಚಿನ್ನದ ಬೆಲೆಗಳ ಮೇಲೆ ಒತ್ತಡ ಹೇರುತ್ತದೆ. ಡಾಲರ್ ಬಲಗೊಂಡಾಗ ಚಿನ್ನದ ಬೆಲೆ ಕುಸಿಯಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.
ಇದನ್ನೂ ಓದಿ: 189 ದೇಶಕ್ಕೆ ಹೋದರೂ ಅನ್‌ಲಿಮಿಟೆಡ್, ರೋಮಿಂಗ್ ಡೇಟಾ ಪ್ಲಾನ್ ಘೋಷಿಸಿದ ಏರ್‌ಟೆಲ್