
ಲೆವಿವ್(ಮಾ.07): ಸತತ 11 ದಿನಗಳ ಯುದ್ಧದಲ್ಲಿ ಉಕ್ರೇನ್ ಭಾರಿ ಪ್ರಮಾಣದ ಹಾನಿ ಅನುಭವಿಸಿದ್ದರೂ ಅದರ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ‘ನಾವು ರಷ್ಯಾದ ವಿರುದ್ಧ ಗೆಲ್ಲುತ್ತಿದ್ದೇವೆ’ ಎಂದು ಭಾನುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದೇಶವಾಸಿಗಳನ್ನು ಹಾಗೂ ಅಮೆರಿಕದ ಸಂಸದರನ್ನುದ್ದೇಶಿಸಿ ಮಾತನಾಡಿರುವ ಅವರು, ‘ಉಕ್ರೇನಿಯನ್ನರ ಮನೆಗಳ ಮೇಲೆ ರಷ್ಯನ್ನರು ಹಾಕುತ್ತಿರುವ 500 ಕಿಲೋ ತೂಕದ ಬಾಂಬ್‌ಗಳನ್ನು ನೋಡಿ. ಬೋರೋಡ್ಯಂಕಾದಲ್ಲಿ ನಿರ್ನಾಮವಾಗಿರುವ ಶಾಲೆ, ಅಂಗನವಾಡಿಯನ್ನು ನೋಡಿ. ಖಾರ್ಕೀವ್‌ನಲ್ಲಿ ಧ್ವಂಸಗೊಂಡಿರುವ ಚಚ್‌ರ್ ನೋಡಿ. ರಷ್ಯಾ ಏನೇನು ಅನಾಹುತ ಮಾಡಿದೆ ನೋಡಿ... ಈಗಾಗಲೇ ಅವರು ನಮ್ಮಲ್ಲಿರುವ ನಾಲ್ಕು ಸಕ್ರಿಯ ಅಣುಸ್ಥಾವರಗಳಲ್ಲಿ ಒಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿಷ್ಕಿ್ರಯ ಚೆರ್ನೋಬಿಲ್ ಸ್ಥಾವರವನ್ನೂ ವಶಪಡಿಸಿಕೊಂಡಿದ್ದಾರೆ. ಈಗ ಮೂರನೇ ಅಣುಸ್ಥಾವರದತ್ತ ಧಾವಿಸುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಂದು ಪುಟಿನ್ ಹಿಂದೆ ಕೈಕಟ್ಟಿ ನಿಂತಿದ್ದ ಮೋದಿ, ಮತ್ತೆ ವೈರಲ್ ಆಯ್ತು ಫೋಟೋ
ಅಮೆರಿಕದವರು ದಯವಿಟ್ಟು ನಮಗೆ ಹೆಚ್ಚಿನ ನೆರವು ಕೊಡಬೇಕು. ವಿಶೇಷವಾಗಿ ಉಕ್ರೇನ್‌ನ ಆಗಸವನ್ನು ರಕ್ಷಿಸಿಕೊಳ್ಳಲು ಯುದ್ಧ ವಿಮಾನಗಳನ್ನು ಕೊಡಬೇಕು. ರಷ್ಯಾವನ್ನು ನಾವು ಸೋಲಿಸುತ್ತಿದ್ದೇವೆ. ಅವರಿಗೆ ಭಾರಿ ಹಾನಿ ಉಂಟುಮಾಡುವ ಮೂಲಕ ನಾವೀಗ ದುಸ್ವಪ್ನವಾಗಿದ್ದೇವೆ. ರಷ್ಯಾದ ಸೇನೆಗಳು ಈ ವಾರ ನಮ್ಮ ಬಂದರು ನಗರಿ ಖೇರ್ಸನ್ ಅನ್ನು ವಶಪಡಿಸಿಕೊಂಡಿವೆ. ಖಾರ್ಕೀವ್, ಮೈಕೋಲೇವ್, ಚೆರ್ನಿಹಿವ್ ಹಾಗೂ ಸುಮಿ ನಗರಗಳನ್ನು ಕೂಡ ಸುತ್ತುವರೆದಿವೆ. ಆದರೆ, ಈ ನಗರಗಳ ಮೇಲೆ ಉಕ್ರೇನ್ ಸೇನೆ ತನ್ನ ಹಿಡಿತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಜೆಲೆನ್‌ಸ್ಕಿ ಹೇಳಿದ್ದಾರೆ.
ಜೆಲೆನ್‌ಸ್ಕಿಗೆ ಬೈಡನ್ ಕರೆ
ಭಾನುವಾರ ಮುಂಜಾನೆ ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ಅವರಿಗೆ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ರಷ್ಯಾದ ಮೇಲಿನ ನಿರ್ಬಂಧಗಳು ಹಾಗೂ ಉಕ್ರೇನ್‌ಗೆ ನೀಡುವ ನೆರವಿನ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಮಾತುಕತೆಯ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಆದರೆ ಈ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿದೆ.
ನಾನು ಪೋಲೆಂಡ್‌ಗೆ ಪಲಾಯನ ಮಾಡಿಲ್ಲ: ಜೆಲೆನ್‌ಸ್ಕಿ
ತಾನು ಪೋಲೆಂಡ್‌ಗೆ ಪಲಾಯನ ಮಾಡಿದ್ದಾಗಿ ರಷ್ಯಾದ ಆರೋಪವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆಸ್ಕಿ ಅಲ್ಲಗಳೆದಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ‘ನಾನು ಕೀವ್‌ನಲ್ಲೇ ಇದ್ದೇನೆ. ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಯಾರೂ ಪಲಾಯನ ಮಾಡಿಲ್ಲ’ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಗಾಯಗೊಂಡಿದ್ದ ಹರ್ಜೋತ್ ವಾಯುಪಡೆಯ ವಿಶೇಷ ವಿಮಾನದಲ್ಲಿ ಭಾರತಕ್ಕೆ!
‘ಜೆಲೆನ್‌ಸ್ಕಿ ಉಕ್ರೇನ್ ತೊರೆದು ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ’ ಎಂದು ರಷ್ಯಾ ಶುಕ್ರವಾರ ಆರೋಪಿಸಿತ್ತು. ಇದರ ಬೆನ್ನಲ್ಲೇ ವಿಡಿಯೋ ಬಿಡುಗಡೆ ಮಾಡಿರುವ ಜೆಲೆನ್‌ಸ್ಕಿ, ‘ನಾವೆಲ್ಲರೂ ಉಕ್ರೇನ್‌ನಲ್ಲೇ ಇದ್ದೇವೆ. ನಮ್ಮ ತಾಯ್ನಾಡಿನ ಸ್ವಾತಂತ್ರ್ಯವನ್ನು ಕಾಪಾಡಲು ಹೋರಾಡುತ್ತಿದ್ದೇವೆ. ಈ ಹೋರಾಟವನ್ನು ಮುಂದುವರೆಸುತ್ತೇವೆ’ ಎಂದು ಹೇಳಿದ್ದಾರೆ.
ಜೆಲೆನ್‌ಸ್ಕಿ ದೇಶ ತೊರೆದಿದ್ದಾರೆ ಎಂದು ಈ ಹಿಂದೆಯೂ ರಷ್ಯಾ 2 ಬಾರಿ ಆರೋಪ ಮಾಡಿತ್ತು. ಅಲ್ಲದೇ ಸ್ಥಳಾಂತರ ಮಾಡುವ ಅಮೆರಿಕದ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ