
ಬೀಜಿಂಗ್ (ಅಕ್ಟೋಬರ್ 23, 2022): ಒಬ್ಬರು ಗರಿಷ್ಠ ಎರಡು ಅವಧಿಗೆ ಮಾತ್ರ ಚೀನಾದ ಅಧ್ಯಕ್ಷರಾಗಬಹುದು (China President) ಎಂಬ ಕಮ್ಯುನಿಸ್ಟ್ ಪಕ್ಷದ (Communist Party) ನಿಯಮವನ್ನು ಮೀರಿ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ದಾಖಲೆಯ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಭಾನುವಾರ ಪುನರಾಯ್ಕೆಯಾಗಿದ್ದಾರೆ. ಶನಿವಾರ ಮುಕ್ತಾಯಗೊಂಡ, ಐದು ವರ್ಷಕ್ಕೊಮ್ಮೆ ನಡೆಯುವ, ಚೀನಾದ (China) ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಪ್ರಭಾವಿ ಸೆಂಟ್ರಲ್ ಕಮಿಟಿಗೆ (Central Committee) ಕ್ಸಿ ಜಿನ್‌ಪಿಂಗ್ ಪುನರಾಯ್ಕೆಯಾಗಿದ್ದರು. ಈ ಮೂಲಕ ಮಾವೋ ಝೆಡಾಂಗ್ (Mao Zedong) ನಂತರ ರಾಷ್ಟ್ರದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ತಮ್ಮ ಕೆಲವು ನಿಕಟ ಕಮ್ಯುನಿಸ್ಟ್ ಪಕ್ಷದ ಮಿತ್ರರಿಗೂ ಸಹ ಉನ್ನತ ಸ್ಥಾನ ನೀಡಿದ್ದಾರೆ. ಈಗ ಚೀನಾ ಮತ್ತೆ ಏಕವ್ಯಕ್ತಿ ಆಡಳಿತದ ಕಡೆಗೆ ತೆರಳುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇನ್ನು, ಚೀನಾ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ನಂತರ ಕ್ಸಿ ಜಿನ್‌ಪಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ "ಜಗತ್ತಿಗೆ ಚೀನಾ ಅಗತ್ಯವಿದೆ" ಎಂದು ಹೇಳಿದರು. "ವಿಶ್ವವಿಲ್ಲದೆ ಚೀನಾ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಮತ್ತು ಜಗತ್ತಿಗೆ ಚೀನಾದ ಅಗತ್ಯವಿದೆ". "ಸುಧಾರಣೆ ಮತ್ತು ತೆರೆದುಕೊಳ್ಳುವಿಕೆಯ ಕಡೆಗೆ 40 ವರ್ಷಗಳಿಗೂ ಹೆಚ್ಚು ಕಾಲದ ಪ್ರಯತ್ನಗಳ ನಂತರ, ನಾವು ತ್ವರಿತ ಆರ್ಥಿಕ ಅಭಿವೃದ್ಧಿ ಮತ್ತು ದೀರ್ಘಕಾಲೀನ ಸಾಮಾಜಿಕ ಸ್ಥಿರತೆ - ಹೀಗೆ ಎರಡು ಪವಾಡಗಳನ್ನು ಸೃಷ್ಟಿಸಿದ್ದೇವೆ ಎಂದು ಸಹ ಕ್ಸಿ ಜಿನ್‌ಪಿಂಗ್ ಹೇಳಿದರು.
ಇದನ್ನು ಓದಿ: ದಾಖಲೆಯ 3ನೇ ಅವಧಿಗೆ ಚೀನಾ ಅಧ್ಯಕ್ಷರಾಗಿ Xi Jinping..? ಇಂದಿನ ಸಭೆಯಲ್ಲಿ ಅಧ್ಯಕ್ಷ ಪಟ್ಟ..!
ನಮ್ಮ ಪಕ್ಷ ಮತ್ತು ನಮ್ಮ ಜನರ ದೊಡ್ಡ ನಂಬಿಕೆಗೆ ಅರ್ಹರು ಎಂದು ಸಾಬೀತುಪಡಿಸಲು ನಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಈ ಮಧ್ಯೆ, ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್‌ನ ಮುಖ್ಯಸ್ಥರಾಗಿಯೂ ಕ್ಸಿ ಜಿನ್‌ಪಿಂಗ್ ಮರುನೇಮಕಗೊಂಡಿದ್ದಾರೆ. 69 ವರ್ಷ ವಯಸ್ಸಿನ ಕ್ಸಿ ಜಿನ್‌ಪಿಂಗ್ ಚೀನಾದ ಅಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಖಚಿತವಾಗಿದ್ದರೂ, ಮಾರ್ಚ್ 2023ರಲ್ಲಿ ಚೀನಾ ಸರ್ಕಾರದ ವಾರ್ಷಿಕ ಶಾಸಕಾಂಗ ಅಧಿವೇಶನದಲ್ಲಿ ಔಪಚಾರಿಕವಾಗಿ ಘೋಷಿಸಲಾಗುವುದು ಎಂದು ತಿಳಿದುಬಂದಿದೆ.
ಒಂದು ವಾರ ಕಾಲ ನಡೆದ ಕಮ್ಯುನಿಸ್ಟ್ ರಾಷ್ಟ್ರೀಯ ಕಾಂಗ್ರೆಸ್ ಸಭೆಯ ನಂತರ 2,300 ಪಕ್ಷದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, 20 ನೇ ಕಾಂಗ್ರೆಸ್ ಸುಮಾರು 200 ಪಕ್ಷದ ಹಿರಿಯ ಅಧಿಕಾರಿಗಳ ಹೊಸ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ಅಚ್ಚರಿಯೆಂಬಂತೆ ಕ್ಸಿ ಜಿನ್‌ಪಿಂಗ್ ಅವರ ಕೆಲವು ನಿಕಟ ಮಿತ್ರರನ್ನು 7 ಜನರ ಸಮಿತಿಯಲ್ಲಿ ಘೋಷಿಸಲಾಯಿತು.
ಇದನ್ನೂ ಓದಿ: Chinaದಿಂದ ಯುದ್ಧೋತ್ಸಾಹ: ತೈವಾನ್ ವಶಕ್ಕೆ ಮಿಲಿಟರಿ ಬಳಸಲೂ ಹಿಂಜರಿಯುವುದಿಲ್ಲ ಎಂದ ಜಿನ್‌ಪಿಂಗ್
ಚೀನಾದ ಇತಿಹಾಸದಲ್ಲಿ ಯಾರೂ ಈವರೆಗೆ ಮೂರನೇ ಬಾರಿ ಅಧ್ಯಕ್ಷರಾಗಿಲ್ಲ. ಆದರೆ 69 ವರ್ಷದ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಮಾತ್ರವಲ್ಲ, ತಾವು ಬದುಕಿರುವವರೆಗೂ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ಸಂವಿಧಾನ ಬದಲಿಸಿಕೊಂಡಿದ್ದಾರೆ. ಈ ಹಿನ್ನೆಲೆ, ಒಂದು ದಶಕದ ಹಿಂದೆ ದೇಶದ ನಾಯಕನಾದ ನಂತರ, ಮಾವೋ ಹೊರತುಪಡಿಸಿ ಯಾವುದೇ ಆಧುನಿಕ ಚೀನೀ ಆಡಳಿತಗಾರನಂತೆ ಕ್ಸಿ ಜಿನ್‌ಪಿಂಗ್ ಅಧಿಕಾರದ ಕೇಂದ್ರೀಕರಣವನ್ನು ಸಾಧಿಸಿದ್ದಾರೆ. ಇನ್ನು, ಕ್ಸಿ ಜಿನ್‌ಪಿಂಗ್ ಮುಂದಿನ ಐದು ವರ್ಷಗಳಲ್ಲಿ ಚೀನಾದ ಸೊರಗುತ್ತಿರುವ ಆರ್ಥಿಕತೆಯನ್ನು ಮತ್ತು ಬೆಳೆಯುತ್ತಿರುವ ಅಮೆರಿಕ ಪೈಪೋಟಿಯನ್ನು ನಿರ್ವಹಿಸುವುದು ಸೇರಿದಂತೆ ಭಾರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಭಾರತ ಸಹಭಾಗಿತ್ವದ Quad ವಿರುದ್ಧ China ಕಿಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ