
ಅಮೆರಿಕಾ (America)ಕ್ಕೆ ಕೋರೊನಾಗಿಂತ ದೊಡ್ಡ ಗಂಡಾಂತರ ಕಾದಿದ್ಯಾ? ಹೀಗೊಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ, ಚೀನಾ (China) ನಡೆಸುತ್ತಿರುವ ಹೊಂಚಿನ ಬಗ್ಗೆ ತಜ್ಞರು ಅಮೆರಿಕಾಕ್ಕೆ ನೀಡಿದ ಎಚ್ಚರಿಕೆ. ಕೊರೊನಾ ಮೂಲ ಚೀನಾ. ಅಲ್ಲಿನ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ (Corona virus) ಹುಟ್ಟಿಕೊಂಡಿದೆ ಎನ್ನುವ ಆರೋಪ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಚೀನಾ ಕೋವಿಡ್ನ ಮೂಲದ ಬಗ್ಗೆ ಹಲವಾರು ಬಾರಿ ಬಹಿರಂಗವಾಗಿ ಆರೋಪ ಮಾಡಿದ್ದರು. ಆದ್ರೆ ಚೀನಾ ತನ್ನ ಮೇಲೆ ಬಂದ ಆರೋಪವನ್ನು ನಿರಾಕರಿಸ್ತಲೇ ಬಂದಿದೆ. ಈಗ ಮತ್ತೊಂದು ರೀತಿಯಲ್ಲಿ ಅಮೆರಿಕಾ ಮೇಲೆ ದಾಳಿ ನಡೆಸಲು ಸಜ್ಜಾದಂತಿದೆ. ಚೀನಾದ ವ್ಯವಹಾರಗಳ ಬಗ್ಗೆ ಪ್ರಮುಖ ತಜ್ಞರೊಬ್ಬರು ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಬೀಜಿಂಗ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವಂತೆ ಮನವಿ ಕೂಡ ಮಾಡಿದ್ದಾರೆ. ಅಮೆರಿಕ ತ್ವರಿತವಾಗಿ ತನ್ನ ಕೆಲಸ ಮಾಡ್ದೆ ಹೋದ್ರೆ ಅದು ಕೊರೊನಾಕ್ಕಿಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಅಮೆರಿಕಾಕ್ಕೆ ವಿಷಕಾರಿ ಶಿಲೀಂದ್ರ ಎಂಟ್ರಿ : ಕಳೆದ ಕೆಲ ದಿನಗಳ ಹಿಂದೆ, ವಿಷಕಾರಿ ಶಿಲೀಂಧ್ರ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಯುನ್ಕಿಂಗ್ ಜಿಯಾನ್ ಮತ್ತು ಜುನ್ಯಾಂಗ್ ಲಿಯು ಎಂಬ ಇಬ್ಬರು ಚೀನೀ ನಾಗರಿಕರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅವರ ಬಂಧನದ ನಂತ್ರ, ತಜ್ಞರ ಎಚ್ಚರಿಕೆ ಗಮನ ಸೆಳೆದಿದೆ. 33 ವರ್ಷದ ಯುನ್ಕಿಂಗ್ ಜಿಯಾನ್ ಮತ್ತು ಆಕೆಯ ಪ್ರೇಮಿ ಕ್ಸುನ್ಯೊಂಗ್ ಲಿಯು 'ಫ್ಯುಸಾರಿಯಮ್ ಗ್ರಾಮಿನೇರಮ್' ಎಂಬ ಶಿಲೀಂಧ್ರವನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಈ ಶಿಲೀಂಧ್ರ ಗೋಧಿ, ಬಾರ್ಲಿ, ಮೆಕ್ಕೆಜೋಳ ಮತ್ತು ಅಕ್ಕಿಯ "ಹೆಡ್ ಬ್ಲೈಟ್" ರೋಗಕ್ಕೆ ಕಾರಣವಾಗುತ್ತದೆ.
ವೈಜ್ಞಾನಿಕ ಭಾಷೆಯಲ್ಲಿ ಈ ಶಿಲೀಂಧ್ರವನ್ನು ಸಂಭಾವ್ಯ ಕೃಷಿ ಭಯೋತ್ಪಾದನಾ ಆಯುಧ ಎಂದು ವರ್ಗೀಕರಿಸಲಾಗಿದೆ. ಈ ಶಿಲೀಂಧ್ರ ಪ್ರತಿ ವರ್ಷ ಶತಕೋಟಿ ಡಾಲರ್ ನಷ್ಟವನ್ನುಂಟುಮಾಡುತ್ತದೆ. ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ವಾಂತಿ, ಯಕೃತ್ತಿನ ಹಾನಿ ಮತ್ತು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುತ್ತದೆ. ಇದು ಅಮೆರಿಕವನ್ನು ಒಳಗಿನಿಂದ ಅಸ್ಥಿರಗೊಳಿಸಲು ಚೀನಾ ನಡೆಸಿದ ರಹಸ್ಯ ಕಾರ್ಯಾಚರಣೆಯಂತಿದೆ. ಚೀನೀ ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳ ಪ್ರಮುಖ ವಿಶ್ಲೇಷಕರಾದ ಗಾರ್ಡನ್ ಜಿ. ಚಾಂಗ್, ಇದು ಅಮೆರಿಕದ ಮೇಲಿನ ದಾಳಿ ಎಂದಿದ್ದಾರೆ. ಚೀನಾ ನಾಗರಿಕರ ಬಂಧನದ ನಂತರ ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಚಾಂಗ್, ಈ ಪಿತೂರಿ ಆಪತ್ತನ್ನು ಸೂಚಿಸುತ್ತದೆ ಎಂದಿದ್ದಾರೆ.
ಇದನ್ನು ತಡೆಯುವ ಏಕೈಕ ಮಾರ್ಗವೆಂದರೆ ಚೀನಾದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವುದು ಎಂದು ಚಾಂಗ್ ಹೇಳಿದ್ದಾರೆ. ಚೀನಾದೊಂದಿಗೆ ಸಂಬಂಧ ಮುರಿದುಕೊಳ್ಳುವುದು ಜನರಿಗೆ ದೊಡ್ಡ ಹೆಜ್ಜೆಯಂತೆ ಕಾಣ್ಬಹುದು. ಆದ್ರೆ ಈಗಿನ ಪರಿಸ್ಥಿತಿಯಲ್ಲಿ ಅದು ಅನಿವಾರ್ಯ. ಇಲ್ಲವೆಂದ್ರೆ ಅಮೆರಿಕಾ ದೊಡ್ಡ ಸಮಸ್ಯೆಯಲ್ಲಿ ಮುಳುಗಲಿದೆ ಎಂದು ಚಾಂಗ್ ಹೇಳಿದ್ದಾರೆ.
ಬಂಧಿತ ಚೀನೀ ನಾಗರಿಕರು, ಚೀನಾ ವಿಜ್ಞಾನಿಗಳು ಎನ್ನಲಾಗ್ತಿದೆ. ಈ ಹಿಂದೆ ಚೀನಾದಲ್ಲಿ ಈ ಶಿಲೀಂಧ್ರದ ಮೇಲೆ ಪ್ರಯೋಗ ಮಾಡಿದ್ದರು. ಅಮೆರಿಕಕ್ಕೆ ಶಿಲೀಂಧ್ರ ತಂದ ನಂತ್ರವೂ ಅಕ್ರಮ ಸಂಶೋಧನೆ ನಡೆಸಿದ್ದರು. ಇದು ಕೇವಲ ಜೈವಿಕ ಕಳ್ಳಸಾಗಣೆ ಘಟನೆಯಲ್ಲ, ಇದು ಮಾವೋವಾದಿ ಸಿದ್ಧಾಂತವನ್ನು ಆಧರಿಸಿದ ಪೀಪಲ್ ವಾರ್ ಎಂದು ಚಾಂಗ್ ಹೇಳಿದ್ದಾರೆ. ಚಾಂಗ್ ಸುಮಾರು ಎರಡು ದಶಕಗಳ ಕಾಲ ಚೀನಾ ಮತ್ತು ಹಾಂಗ್ ಕಾಂಗ್ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಶಾಂಘೈನಲ್ಲಿ, ಯುಎಸ್ ಕಾನೂನು ಸಂಸ್ಥೆ ಪಾಲ್ ವೈಸ್ನ ವಕೀಲರಾಗಿ ಕೆಲಸ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ