
ಜೈಪುರ(ನ.14): ಭಾರತದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಪಡೆಯುತ್ತಿರುವ ಹೊತ್ತಿನಲ್ಲೇ, ಭಾರತದಲ್ಲಿ ಸಾಂಪ್ರದಾಯಿಕ ಔಷಧಗಳ ಕುರಿತಾದ ಜಾಗತಿಕ ಕೇಂದ್ರವೊಂದನ್ನು ತೆರೆಯುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ. ಡಬ್ಲ್ಯುಎಚ್‌ಒದ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧೋನಾಮ್ ಘೇಬ್ರಿಯೇಸಸ್ ಈ ಕುರಿತು ಹೇಳಿಕೆ ನೀಡಿದ್ದಾರೆ.
5ನೇ ಆರ್ಯುವೇದ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜಸ್ಥಾನದ ಜೈಪುರ ಮತ್ತು ಗುಜರಾತ್‌ನ ಜಾಮ್‌ನಗರದಲ್ಲಿನ ಎರಡು ಅತ್ಯಾಧುನಿಕ ಆರ್ಯುವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ವೇಳೆ ಟೆಡ್ರೋಸ್ ಅವರ ವಿಡಿಯೋ ಸಂದೇಶವನ್ನು ಬಿತ್ತರಿಸಲಾಯಿತು.
ಸಂದೇಶದಲ್ಲಿ ಟೆಡ್ರೊಸ್ ಅವರು ‘ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಸ್ಥಾಪಿಸುವ ಘೋಷಣೆ ಮಾಡಲು ನನಗೆ ಸಂತಸವಾಗುತ್ತಿದೆ. ಇದು ಸಾಂಪ್ರದಾಯಿಕ ಮತ್ತು ಪೂರಕ ಔಷಧಗಳ ಕುರಿತಾದ ಸಾಕ್ಷ್ಯ, ಸಂಶೋಧನೆ, ತರಬೇತಿ ಮತ್ತು ಅರಿವು ಹೆಚ್ಚಿಸಲು ನೆರವಾಗಲಿದೆ. ಜೊತೆಗೆ ಈ ಕೇಂದ್ರವು ಆರೋಗ್ಯಪೂರ್ಣ, ಸುರಕ್ಷಿತ ವಿಶ್ವ ನಿರ್ಮಾಣ ಹಾದಿಯಲ್ಲಿ ವಿವಿಧ ದೇಶಗಳಿಗೆ ಸಾಂಪ್ರದಾಯಿಕ ಔಷಧ ಕುರಿತ ನೀತಿಗಳನ್ನು ರೂಪಿಸಲು ನೆರವಾಗಲು ಯೋಜಿಸಲಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ 2014-23 ಸಾಂಪ್ರದಾಯಿಕ ಔಷಧ ಯೋಜನೆಯ ಜಾರಿಗೆ ಇನ್ನಷ್ಟುಬಲವನ್ನು ತುಂಬಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ‘ಆರ್ಯುವೇದ ಭಾರತದ ಸಂಪ್ರದಾಯವಾಗಿದ್ದು ಅದರ ವ್ಯಾಪ್ತಿ ವಿಸ್ತರಣೆ, ಮಾನವತೆಯ ಅಭ್ಯುದಯಕ್ಕೆ ಕಾರಣವಾಗಲಿದೆ ಮತ್ತು ನಮ್ಮ ದೇಶದ ಸಾಂಪ್ರದಾಯಿಕ ಜ್ಞಾನವು ಇತರೆ ದೇಶಗಳನ್ನು ಸಂಪದ್ಭರಿತ ಮಾಡುತ್ತಿರುವುದಕ್ಕೆ ಭಾರತೀಯರಿಗೆ ಹೆಮ್ಮೆಯಾಗುತ್ತಿದೆ. ಭಾರತದಲ್ಲೇ ಕೇಂದ್ರ ಸ್ಥಾಪಿಸುವ ಡಬ್ಲ್ಯುಎಚ್‌ಒದ ನಿರ್ಧಾರ, ಎಲ್ಲಾ ಭಾರತೀಯರಿಗೂ ಹೆಮ್ಮೆಯ ವಿಷಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ