
ಉತ್ತರ ಭಾರತದಲ್ಲಿ ಚಳಿಯ ನರ್ತನ ಜೋರಾಗಿದೆ. ದಿನಗಳ ಹಿಂದಷ್ಟೇ ತೀವ್ರ ಚಳಿ ತಡೆದುಕೊಳ್ಳಲಾಗದೇ ಉಸಿರುಕಟ್ಟಿ ಒಂದೇ ಕುಟುಂಬದ ಮೂರು ಜನ ಸಾವನ್ನಪ್ಪಿದ ಘಟನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದಿತ್ತು. ಬರೀ ನಮ್ಮ ದೇಶದ ರಾಜ್ಯಗಳಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಚಳಿ ವಿಪರೀತವಾಗಿದ್ದು, ಚಳಿ ತಡೆದುಕೊಳ್ಳಲಾಗದೇ ಜನ ರೂಮ್ ಹೀಟರ್‌ಗಳ ಮೊರೆ ಹೋಗುತ್ತಿದ್ದಾರೆ. ಹಾಗೆಯೇ ಅಮೆರಿಕಾದಲ್ಲೂ ಚಳಿ ವಿಪರೀತವೆನಿಸಿದ್ದು, ಶೀತ ಚಂಡಮಾರುತದ ಹೊಡೆತಕ್ಕೆ ಸಿಲುಕಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಒಂದು ಲಕ್ಷದ 75 ಸಾವಿರ ಜನ ವಿದ್ಯುತ್ ಇಲ್ಲದೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ. ಇದರ ಜೊತೆಗೆ ಅಮೆರಿಕಾದಲ್ಲಿ 2,400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಚಳಿಗಾಲದ ಚಂಡಮಾರುತವೂ ಸೋಮವಾರ ಪೂರ್ವ ಅಮೆರಿಕಾದಾದ್ಯಂತ ಭಾರೀ ಹಿಮ ಮತ್ತು ಮಂಜಿನ ಮಳೆಯನ್ನು ಸುರಿಸಿದೆ. ಇದರಿಂದಾಗಿ ಮಿಡ್‌ವೆಸ್ಟ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು,ಇದರಲ್ಲಿ ಕನಿಷ್ಠ 5 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಈ ವಿಪರೀತವಾದ ಚಳಿಗಾಳಿಯ ಚಂಡಮಾರುತದಿಂದಾಗಿ ಲಕ್ಷಾಂತರ ಜನ ಪ್ರಯಾಣಿಕರಿಗೆ ತೊಂದರೆಯಾಗಿದೆ.
ನಿನ್ನೆ ಮಧ್ಯಾಹ್ನದ ವೇಳೆಗೆ ಮಿಸೌರಿಯಿಂದ ವರ್ಜೀನಿಯಾದವರೆಗೆ ವಿದ್ಯುತ್ ಕೂಡ ಇಲ್ಲದ ಕಾರಣ 175,000 ಕ್ಕೂ ಜನರು ಸಂಕಷ್ಟಕ್ಕೀಡಾಗಿದ್ದರು. ಅಮೆರಿಕಾದ ನ್ಯಾಷನಲ್ ವೆದರ್ ಸರ್ವಿಸ್ (NWS) ವಾಷಿಂಗ್ಟನ್‌ನಲ್ಲಿ ಒಂದು ಅಡಿವರೆಗೆ ಹಿಮ ಬೀಳುವ ಮುನ್ಸೂಚನೆ ನೀಡಿದೆ. ಇಂತಹ ಪ್ರತಿಕೂಲ ಹವಾಮಾನದಲ್ಲೂ ಕೂಡ ಅಮೆರಿಕಾ ಕಾಂಗ್ರೆಸ್ (ಅಮೆರಿಕಾದ ಸಂಸತ್) ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ವಿಜಯವನ್ನು ಪ್ರಮಾಣಿಕರಿಸುವುದಕ್ಕಾಗಿ ಅಲ್ಲಿ ಒಟ್ಟು ಸೇರಿತ್ತು. ಅವರ ಸಾವಿರಾರು ಬೆಂಬಲಿಗರು ಅಮೆರಿಕಾ ರಾಜಧಾನಿಯನ್ನು ಬಂದು ಸೇರಿದ್ದರು.
ನಿರ್ಗಮಿಸಲಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ತೀವ್ರ ಹವಾಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಪೀಡಿತ ರಾಜ್ಯಗಳಿಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ ಎಂದು ಅಮೆರಿಕಾ ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ. ತೀವ್ರವಾದ ಹಿಮಪಾತದಿಂದಾಗಿ ಅಮೆರಿಕಾದ ರಾಜಧಾನಿಯ ಗಾಢ ಬಣ್ಣದ ಸಾಲು ಸಾಲು ಮನೆಗಳು ಬಿಳಿ ಬಣ್ಣದಿಂದ ಮುಚ್ಚಲ್ಪಟ್ಟಿವೆ. ಅನಿವಾರ್ಯ ಕಾರಣಗಳಿಗಾಗಿ ಜನ ಹಿಮದ ನಡುವೆ ಅಲೆದಾಡುವಂತಾಗಿತ್ತು. ತೀವ್ರ ಹಿಮಗಾಳಿಯ ಹಿನ್ನೆಲೆಯಲ್ಲಿ ಇಲ್ಲಿ ಶಾಲಾ ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ಕನ್ಸಾಸ್ ಮತ್ತು ಮಿಸೌರಿ ಸೇರಿದಂತೆ ಹಲವು ರಾಜ್ಯಗಳಿಗೆ ಹಿಮಪಾತದ ಭೀಕರ ಸ್ಥಿತಿ ತಂದ ಚಂಡಮಾರುತವು ನಂತರ ಪೂರ್ವಕ್ಕೆ ತಿರುಗಿದೆ. ಈ ಚಂಡಮಾರುತ ಸಂಬಂಧಿ ದುರಂತಗಳಲ್ಲಿ ಇದುವರೆಗೆ ಐವರು ಸಾವನ್ನಪ್ಪಿದ್ದಾರೆ.
ಮಿಸೌರಿ ರಾಜ್ಯ ಹೆದ್ದಾರಿ ಗಸ್ತು ಪಡೆ ಎರಡು ಸಾವುಗಳನ್ನು ವರದಿ ಮಾಡಿದೆ, ರಸ್ತೆಯಲ್ಲಿ ಮಂಜಿನಿಂದಾಗಿ ವಾಹನ ಜಾರಿದ ಪರಿಣಾಮ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೆದ್ದಾರಿ ಗಸತು ಪಡೆಯು ರಸ್ತೆಯಲ್ಲಿ ಸಿಲುಕಿಕೊಂಡು ಸಾವಿರಕ್ಕೂ ಹೆಚ್ಚು ವಾಹನ ಸವಾರರ ಕರೆಗೆ ಸ್ಪಂದಿಸಿದೆ ಹಾಗೂ 356 ಅಪಘಾತಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಹಾವನ್ನೂ ಬಿಡದ ಚಳಿ, winterಗೆ ಹೆದರಿ ಬಿಲ ಸೇರುವ ನಾಗಪ್ಪ
ರಾಜ್ಯಾದ್ಯಂತ ಚಳಿ ಚಳಿ: ಉತ್ತರ ಭಾರತ ಗಡಗಡ, 15 ಡಿಗ್ರಿಗಿಂತ ಕೆಳಕ್ಕೆ ಕುಸಿದ ತಾಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ