*ಭಾರತದ ಮನವಿಗೆ ಓಗೊಟ್ಟ ರಷ್ಯಾ ಅಧಿಕಾರಿಗಳು
*ವಿದ್ಯಾರ್ಥಿನಿಯರ ಸುರಕ್ಷಿತ ತೆರವಿಗೆ ಅನುವು
*ರಷ್ಯಾ ಮೂಲಕ ಕರೆಯರಲು ಯತ್ನ: ರಷ್ಯಾ ರಾಯಭಾರಿ
ಖಾರ್ಕೀವ್/ನವದೆಹಲಿ (ಮಾ. 03) : ಉಕ್ರೇನ್-ರಷ್ಯಾ ಯುದ್ಧ ಆರಂಭವಾದ ನಂತರ ಇದೇ ಮೊದಲ ಬಾರಿ ರಷ್ಯಾ ದೇಶವು, ಅಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಬಂದಿದೆ. ಒಂದು ಕಡೆ ‘ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ರಷ್ಯಾಗೆ ಕರೆತಂದು ಅಲ್ಲಿಂದ ಭಾರತಕ್ಕೆ ಕಳಿಸಲು ಕ್ರಮ ಜರುಗಿಸಲಾಗುತ್ತದೆ’ ಎಂದು ದಿಲ್ಲಿಯಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಯುದ್ಧಪೀಡಿತ ಖಾರ್ಕೀವ್ ನಗರದಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯ ಹುಡುಗಿಯರನ್ನು ರಷ್ಯಾದ ನೆರವಿನೊಂದಿಗೆ ರಕ್ಷಿಸಲಾಗಿದೆ.
ಬುಧವಾರ ಬೆಳಗ್ಗೆ ದಿಲ್ಲಿಯಲ್ಲಿ ಮಾತನಾಡಿದ ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್, ‘ಭಾರತೀಯರ ಸುರಕ್ಷತೆ ಮತ್ತು ಅವರ ಸುರಕ್ಷಿತ ತೆರವಿನ ಬಗ್ಗೆ ನಾವು ಭಾರತದ ಜೊತೆ ನಿಟಕ ಸಂಪರ್ಕದಲ್ಲಿದ್ದೇವೆ. ಉಕ್ರೇನ್‌ನಲ್ಲಿನ ಖಾರ್ಕೀವ್, ಸುಮಿ ಮತ್ತು ಇನ್ನಿತರೆ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯರನ್ನು ನಮ್ಮ ದೇಶಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುವುದು. ಭಾರತೀಯರ ತೆರವಿಗೆ ವಿಶೇಷ ‘ಮಾನವೀಯ ಮಾರ್ಗ’ (ಹ್ಯುಮೆನಿಟೇರಿಯನ್ ಕಾರಿಡಾರ್) ಆರಂಭಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಭರವಸೆ ನೀಡಿದರು.
ಇದನ್ನೂ ಓದಿ: Russia Ukraine War: ರಷ್ಯಾದಿಂದ ಅಗ್ನಿ ಮಳೆ: 2000 ಉಕ್ರೇನ್ ನಾಗರಿಕರ ಸಾವು!
ಈ ಭರವಸೆಯ ಬೆನ್ನಲ್ಲೇ ರಷ್ಯಾ ಅಧಿಕಾರಿಗಳು ಭಾರತದ ಮನವಿಗೆ ಸ್ಪಂದಿಸಿದ್ದಾರೆ. ‘ರಷ್ಯಾದ ಬಹುಪಾಲು ಅಧಿಕಾರಿಗಳು ಈಗಾಗಲೇ ಖಾರ್ಕೀವ್ ನಗರವನ್ನು ತಲುಪಿದ್ದು, ಅವರ ನಿಯಂತ್ರಣದಲ್ಲೇ ನಗರ ಇದೆ. ಭಾರತೀಯರು ಸಿಲುಕಿಕೊಂಡಿರುವ ಸ್ಥಳಗಳನ್ನು ಗುರಿಯಾಗಿಸದಂತೆ ರಷ್ಯಾಗೆ ಮನವಿ ಮಾಡಲಾಗಿದೆ. ಮೊದಲ ಹಂತದಲ್ಲಿ, ಅವರ ಸಹಾಯದಿಂದ ಹುಡುಗಿಯರನ್ನು ತೆರವು ಮಾಡಿ ರೈಲು ನಿಲ್ದಾಣಕ್ಕೆ ಕರೆತರಲಾಗಿದೆ. ಅವರೆಲ್ಲರೂ ಉಕ್ರೇನ್‌ನ ಪಶ್ಚಿಮ ಗಡಿಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದಾರೆ. ಹಾಗೆಯೇ ಹುಡುಗರನ್ನು ಸ್ಥಳಾಂತರಿಸುವುದು ಮಾತ್ರ ಬಾಕಿ ಇದೆ. ಇದು ಶೀಘ್ರ ನಡೆಯಲಿದೆ’ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.
ನಾಯಿಯೊಂದಿಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿ!: ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನನ್ನು ಭಾರತಕ್ಕೆ ಕರೆತರುವ ಸಮಯದಲ್ಲಿ ವಿದ್ಯಾರ್ಥಿಯೊಬ್ಬರು ಸಾಕಿದ್ದ ನಾಯಿಯನ್ನೂ ಕರೆತರಲಾಗುತ್ತಿದೆ. ತಾನು ಸಾಕಿದ ನಾಯಿಯನ್ನು ನನ್ನೊಂದಿಗೆ ಭಾರತಕ್ಕೆ ಕರೆದೊಯ್ಯಲು ಅವಕಾಶ ನೀಡದಿದ್ದರೆ ತಾನೂ ಉಕ್ರೇನ್ ಬಿಟ್ಟು ಬರುವುದಿಲ್ಲ ಎಂದು ಆ ವಿದ್ಯಾರ್ಥಿ ರಿಶಬ್ ಈ ಹಿಂದೆ ಹೇಳಿದ್ದರು. ಅವರ ಮನವಿಗೆ ಓಗೊಟ್ಟು ರಿಶಬ್ ಜತೆ ಅವರ ಸಾಕು ನಾಯಿಯನ್ನೂ ಕರೆತರಲಾಗುತ್ತಿದೆ.
ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಪೋಲೆಂಡ್‌ಗೆ ನೇಮಕವಾಗಿರುವ ಸಚಿವ ವಿ.ಕೆ.ಸಿಂಗ್ ವಿಮಾನ ಹತ್ತುವ ವೇಳೆ ಆ ನಾಯಿಯ ಮೈದಡವಿ ವಿಮಾನ ಹತ್ತಿಸಿದ್ದಾರೆ. ಇದರಿಂದ ರಿಶಬ್ ಸಹ ಸಂತೋಷಗೊಂಡಿದ್ದಾರೆ. ಖಾರ್ಕಿವ್ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ರೇಡಿಯೋ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಯಾದ ರಿಶಬ್ ಕೌಶಿಕ್ ಭಾನುವಾರ ಡಿ.27ರಂದು ವಿಮಾನದಲ್ಲಿ ಭಾರತಕ್ಕೆ ಮರಳಬೇಕಾಗಿತ್ತು. ಆದರೆ ಅವರು ತಮ್ಮೊಂದಿಗೆ ಸಾಕು ನಾಯಿ ‘ಮಲಿಬು’ವನ್ನು ಬಿಟ್ಟು ದೇಶಕ್ಕೆ ಮರಳಲು ಒಪ್ಪದೇ ಉಕ್ರೇನಿನಲ್ಲೇ ಉಳಿದುಕೊಂಡಿದ್ದರು. ಪ್ರಸ್ತುತ ಆಪರೇಶನ್ ಗಂಗಾ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನದಲ್ಲಿ ನಾಯಿಯನ್ನು ಮರಳಿ ಕರೆತರಲಾಗಿದೆ.
Some of the evacuees brought their four legged best friends as well.
Good to have all of our aboard on the C-17 Globemaster ready to return to the safety of our motherland. pic.twitter.com/XprDh0p57K
ಇದನ್ನೂ ಓದಿ: Operation Ganga: ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು: ಈವರೆಗೆ 3389 ಭಾರತೀಯರ ಏರ್‌ಲಿಫ್ಟ್!
ಸ್ಲೊವಾಕಿಯಾ, ರೊಮೇನಿಯಾದಲ್ಲಿ ಸಚಿವರಿಂದ ರಕ್ಷಣಾ ಕಾರ್ಯ: ಯುದ್ಧಪೀಡಿದ ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನೇಮಕ ಮಾಡಿರುವ ನಾಲ್ವರು ಕೇಂದ್ರ ಸಚಿವರಲ್ಲಿ ಕಿರಣ್ ರಿಜಿಜು ಬುಧವಾರ ಸ್ಲೋವಾಕಿಯಾದ ನಗರ ಕೋಶಿಟ್ಸಗೆ ತಲುಪಿದ್ದಾರೆ. ರೋಮೆನಿಯಾ ತಲುಪಿರುವ ಜ್ಯೋತಿರಾಧಿತ್ಯ ಸಿಂಧಿಯಾ ರೊಮೆನಿಯಾ ಮತ್ತು ಮಾಲ್ಡೋವಾದ ಭಾರತದ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಕಿರಣ್‌ರಿಜಿಜು, ಹರ್ದೀಪ್‌ಪುರಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿ.ಕೆ.ಸಿಂಗ್ ಅವರನ್ನು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಉಕ್ರೇನ್‌ನ ನೆರೆಯ ದೇಶಗಳಿಗೆ ನೇಮಕ ಮಾಡಲಾಗಿತ್ತು. ಸ್ಪೈಸ್ ಜೆಟ್ ವಿಮಾನದಲ್ಲಿ ಸ್ಲವೋಕಿಯಾ ತಲುಪಿರುವ ರಿಜಿಜು, ಉಕ್ರೇನ್‌ನಿಂದ ಬಸ್ ಮುಖಾಂತರ ಬರುವ 189 ಭಾರತೀಯರನ್ನು ಗುರುವಾರ ಸ್ವದೇಶಕ್ಕೆ ಮರಳಿ ಕರೆತರಲಿದ್ದಾರೆ.
ಈ ನಡುವೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ‘ಮಾಲ್ಡೋವಾ ಮತ್ತು ರೊಮೇನಿಯಾದ ಭಾರತೀಯ ರಾಯಭಾರಿ ರಾಹುಲ್ ಶ್ರೀವಾಸ್ತವ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಆಪರೇಶನ್ ಗಂಗಾ ಈಗ ಮತ್ತಷ್ಟುವೇಗ ಪಡೆದುಕೊಂಡಿದೆ. ಮಾಲ್ಡೋವಾದ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬುಕಾರೆಸ್ಟ್‌ಗೆ ಅವರನ್ನು ಕರೆದೊಯ್ಯುವ ಸಾರಿಗೆಯ ಕುರಿತು ಮಾತುಕತೆ ನಡೆಸಲಾಗಿದೆ. ಅಲ್ಲಿಂದ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣ ಆರಂಭವಾಗಲಿದೆ’ ಎಂದಿದ್ದಾರೆ.