*ಉಕ್ರೇನ್‌ನ 3 ನಗರಗಳು, ಅನೇಕ ಸಣ್ಣ ಸಣ್ಣ ಪ್ರದೇಶಗಳಿಗೆ ಲಗ್ಗೆ
*ಜನವಸತಿ ಪ್ರದೇಶಗಳೂ ಗುರಿ: 2000 ಉಕ್ರೇನ್ ನಾಗರಿಕರ ಸಾವು
* ಮುನ್ನುಗ್ಗುತ್ತಿರುವ ರಷ್ಯಾ ಸೇನೆ ಹೊಸ ಸರ್ಕಾರ ರಚನೆ ಯತ್ನ?
ಕೀವ್ (ಮಾ. 03): ಉಕ್ರೇನ್ ವಶಕ್ಕೆ ತನ್ನ ಪ್ರಯತ್ನವನ್ನು ಮತ್ತಷ್ಟುತೀವ್ರಗೊಳಿಸಿರುವ ರಷ್ಯಾ ಸೇನೆ, ಯುದ್ಧದ 7ನೇ ದಿನವಾದ ಬುಧವಾರ ಯುದ್ಧದಲ್ಲಿ ಮತ್ತಷ್ಟುಮುನ್ನಡೆ ಸಾಧಿಸಿದೆ. ರಾಜಧಾನಿ ಕೀವ್ ನಗರವನ್ನು ಸುತ್ತುವರಿದು ಅದರ ಸಂಪೂರ್ಣ ವಶಕ್ಕೆ ತುದಿಗಾಲಲ್ಲಿ ನಿಂತಿದೆ. ಇನ್ನೊಂದು ಕಡೆ, ಭಾರತೀಯ ಮೂಲದವರೇ ಹೆಚ್ಚಿದ್ದ ಎರಡನೇ ಅತಿದೊಡ್ಡ ನಗರ ಖಾರ್ಕೀವ್ ಮೇಲೆ ಇನ್ನಿಲ್ಲದಂತೆ ಕ್ಷಿಪಣಿ ಹಾಗೂ ಬಾಂಬ್‌ಗಳ ಮಳೆಗರೆದು ಇಡೀ ನಗರವನ್ನು ತನ್ನ ವಶ ಮಾಡಿಕೊಂಡಿದೆ.
ಹಾಗೆಯೇ, ಈವರೆಗೆ ಪೂರ್ವ ಹಾಗೂ ಉತ್ತರದಿಂದ ದಾಳಿ ನಡೆಸಿದ್ದ ರಷ್ಯಾ ಈಗ ದಕ್ಷಿಣದ ಕಡಲತೀರ ಪ್ರದೇಶವಾದ ಖೇರ್ಸನ್ ಅನ್ನು ಸಂಪೂರ್ಣ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಆದರೆ ಖೇರ್ಸನ್ ಇನ್ನೂ ತನ್ನ ವಶದಲ್ಲೇ ಇರುವುದಾಗಿ ಉಕ್ರೇನ್ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ ಈ ನಗರದ ವಶದ ಕುರಿತು ಗೊಂದಲ ಇದೆ.
ಜೊತೆಗೆ ಆಯಕಟ್ಟಿನ ಪ್ರದೇಶಗಳಲ್ಲಿರುವ ಬಂದರು ನಗರಿಗಳಾದ ಒಡೆಸಾ ಮತ್ತು ಮರಿಯುಪೋಲ್ ನಗರಗಳನ್ನು ಸುತ್ತುವರೆದಿದ್ದು ಅವುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ರಷ್ಯಾ ಚುರುಕುಗೊಳಿಸಿವೆ. ಉತ್ತರದ ಶೆರಿನಿಯವ್ ನಗರದ ಮೇಲೂ ಕ್ಷಿಪಣಿ ದಾಳಿ ಮಾಡಿದೆ.
ಇದನ್ನೂ ಓದಿ: Operation Ganga: ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು: ಈವರೆಗೆ 3389 ಭಾರತೀಯರ ಏರ್‌ಲಿಫ್ಟ್!
ರಷ್ಯಾ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಭಯೋತ್ಪಾದನೆಗೆ ಹೋಲಿಸಿದ್ದು, ದಾಳಿಗೆ 2000 ಉಕ್ರೇನಿ ನಾಗರಿಕರು ಬಲಿಯಾಗಿದ್ದಾರೆ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ‘ಇದಕ್ಕೆ ಮುಂದಿನ ದಿನಗಳಲ್ಲಿ ರಷ್ಯಾ ಅಧ್ಯಕ್ಷರು ಭಾರೀ ಪರಿಣಾಮ ಎದುರಿಸಲಿದ್ದಾರೆ’ ಎಂದು ಪುಟಿನ್ ವಿರುದ್ಧ ಗುಡುಗಿದ್ದಾರೆ.
ಪ್ರತಿರೋಧಕ್ಕೆ ರಷ್ಯಾ ಸಡ್ಡು: 7 ದಿನಗಳ ಬಳಿಕವೂ ಪ್ರಮುಖ ನಗರಗಳಲ್ಲಿ ಉಕ್ರೇನಿ ಯೋಧರು ಈಗಲೂ ರಷ್ಯಾ ಸೈನಿಕರಿಗೆ ಭಾರೀ ಪ್ರತಿರೋಧ ತೋರುತ್ತಿದ್ದುದು ಕಂಡುಬಂದಿದೆ. ಹೀಗಾಗಿ ರಷ್ಯಾ ಸೇನೆ ತನ್ನ ಯುದ್ಧ ತಂತ್ರದಲ್ಲಿ ಬದಲಾವಣೆ ಮಾಡಿಕೊಂಡಿದೆ.
ಇದರ ಪರಿಣಾಮವೇ ಮೊದಲು ಸೇನಾ ನೆಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮಾತ್ರವೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ರಷ್ಯಾ ಸೇನೆ ಬುಧವಾರ ಕೀವ್, ಖಾರ್ಕಿವ್‌ನಲ್ಲಿ ಬಹುತೇಕ ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ಬಾಂಬ್, ಕ್ಷಿಪಣಿ, ಶೆಲ್, ರಾಕೆಟ್ ದಾಳಿ ನಡೆಸಿದೆ. ಬುಧವಾರ ಖಾರ್ಕಿವ್‌ನಲ್ಲಿ ಪೊಲೀಸ್ ಕಚೇರಿ, ಗುಪ್ತಚರ ಕಚೇರಿ ಮತ್ತು ಭದ್ರತಾ ಸೇವಾ ಕಚೇರಿ ಕಟ್ಟಡದ ಮೇಲೆ ರಾಕೆಟ್ ದಾಳಿ ನಡೆಸಲಾಗಿದ್ದು, ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ವಿವಿಧ ದಾಳಿಗಳಲ್ಲಿ ಅನೇಕರು ಗಾಯಗೊಂಡಿದ್ದಾರೆ. ಈ ಮೂಲಕ ಈ ನಗರಗಳಲ್ಲಿ ತಲ್ಲಣ ಸೃಷ್ಟಿಸುವ ಕೆಲಸ ಮಾಡಿದೆ.
ಇದನ್ನೂ ಓದಿ: Russia Ukraine Crisis: ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ
ಇನ್ನು ಮಂಗಳವಾರ ತಡರಾತ್ರಿ ರಷ್ಯಾ ಪಡೆಗಳು ರಾಜಧಾನಿ ಕೀವ್‌ನ ಟೀವಿ ಟವರ್ ಮೇಲೆ ನಡೆಸಿದ ದಾಳಿಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಉಕ್ರೇನ್ ಗುಪ್ತಚರರು ಮಾಹಿತಿ ರವಾನೆಗೆ ಈ ಕೇಂದ್ರ ಬಳಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಈ ದಾಳಿ ನಡೆಸಲಾಗಿದೆ. ಕೀವ್ ವಶಕ್ಕೆ ನಗರದ ಹೊರವಲಯದಲ್ಲಿ 65 ಕಿ.ಮೀ ಉದ್ದ ಸೇನೆಯ ತುಕಡಿ ನಿಯೋಜಿಸಿದ್ದ ರಷ್ಯಾ ಸೇನೆ, ನಿಧಾನವಾಗಿ ಅದನ್ನು ನಗರದತ್ತ ಮುನ್ನುಗ್ಗಿಸುತ್ತಿದೆ.
ಇದು ಯಾವುದೇ ಕ್ಷಣದಲ್ಲಿ ನಗರವನ್ನು ಪೂರ್ಣವಾಗಿ ಸುತ್ತುವರೆದು ಅದನ್ನು ವಶಪಡಿಸಿಕೊಳ್ಳುವ ಮೂಲಕ ದೇಶವನ್ನು ತೆಗೆದುಕೊಳ್ಳುವುದು ಮತ್ತು ದೇಶದಲ್ಲಿ ಹೊಸ ಸರ್ಕಾರ ರಚನೆ ಮಾಡುವುದು ರಷ್ಯಾ ಉದ್ದೇಶ ಎಂದು ಹೇಳಲಾಗಿದೆ. ಚೆರ್ನಿಯೇವ್ ನಗರದ ಮೇಲಿನ ಆಸ್ಪತ್ರೆ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, ಮುಖ್ಯ ಕಟ್ಟಡಕ್ಕೆ ಹಾನಿಯಾಗಿದೆ. ಆದರೆ ಸಾವು-ನೋವಿನ ಮಾಹಿತಿ ಲಭಿಸಿಲ್ಲ.
ಇನ್ನೂ ಹಲವು ಸಣ್ಣಪುಟ್ಟನಗರಗಳ ಹಲವು ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದ ಪರಿಣಾಮ ಹಲವು ನಗರಗಳು ಸ್ಮಶಾನ ಸದೃಶವಾಗಿದ್ದು, ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ. ಭಯದಿಂದ ಕೋಟ್ಯಂತರ ಜನರು ಕಳೆದ 7 ದಿನಗಳಿಂದ ಮನೆಯೊಳಗೆ ಅಥವಾ ಬಂಕರ್ ಒಳಗೆ ವಾಸ ಮಾಡುವಂತಾಗಿದೆ. ಅನ್ನಾಹಾರ ಸಮಸ್ಯೆಯೂ ಎದುರಾಗಿದೆ.
ಯಾವ ನಗರ? ಏನು ಸ್ಥಿತಿ?
1. ರಾಜಧಾನಿ ಕೀವ್: ಇಡೀ ನಗರವನ್ನು ಸುತ್ತುವರಿದಿರುವ ಭಾರೀ ಸಂಖ್ಯೆಯ ರಷ್ಯಾ ಸೇನಾ ಪಡೆ
2. ಖಾರ್ಕೀವ್ ನಗರ: 2ನೇ ಅತಿದೊಡ್ಡ ನಗರದ ಮೇಲೆ ಸತತ ಬಾಂಬ್ ದಾಳಿ, ವಶಕ್ಕೆ ತೀವ್ರ ಯತ್ನ
3. ಖೇರ್ಸನ್ ನಗರ: ದಕ್ಷಿಣ ಕರಾವಳಿಯ ಪ್ರಮುಖ ಪಟ್ಟಣ ವಶ: ರಷ್ಯಾ. ಇದಕ್ಕೆ ಉಕ್ರೇನ್ ನಕಾರ
4. ಸಣ್ಣ ನಗರಗಳು: ಬಂದರು ನಗರಿಗಳಾದ ಒಡೆಸಾ, ಮರಿಯುಪೋಲ್‌ಗಳನ್ನು ಸುತ್ತುವರೆದ ರಷ್ಯಾ
5. ಇತರೆ ಪ್ರದೇಶ: ಉತ್ತರದ ಶೆರಿನಿಯೇವ್ ಸೇರಿದಂತೆ ಇತರೆ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ
2000 ಉಕ್ರೇನ್ ನಾಗರಿಕರ ಸಾವು!
8.74 ಲಕ್ಷ ಜನ: ರಷ್ಯಾದ ಭೀಕರ ದಾಳಿಗೆ ಬೆಚ್ಚಿ ಈವರೆಗೆ ಉಕ್ರೇನ್ ತೊರೆದ ಜನರು
6000 ಸೈನಿಕರು: ಉಕ್ರೇನ್ ಪ್ರಕಾರ ಯುದ್ಧದಲ್ಲಿ ಹತ್ಯೆಯಾದ ರಷ್ಯನ್ ಯೋಧರು
2000 ಮಂದಿ: ರಷ್ಯಾ ದಾಳಿಯಲ್ಲಿ ಸಾವನ್ನಪ್ಪಿದ ಉಕ್ರೇನ್ ಜನಸಾಮಾನ್ಯರ ಸಂಖ್ಯೆ
88 ವಿಮಾನ: ಯುದ್ಧದಲ್ಲಿ ರಷ್ಯಾದ 58 ವಿಮಾನ, ಉಕ್ರೇನ್‌ನ 30 ವಿಮಾನ ಧ್ವಂಸ
31 ಹೆಲಿಕಾಪ್ಟರ್: ಉಕ್ರೇನ್ ದಾಳಿಯಲ್ಲಿ ನಾಶವಾದ ರಷ್ಯಾದ ಹೆಲಿಕಾಪ್ಟರ್‌ಗಳು
46 ಡ್ರೋನ್: ರಷ್ಯಾ ನಡೆಸಿದ ದಾಳಿಯಲ್ಲಿ ನಾಶವಾದ ಉಕ್ರೇನ್‌ನ ಡ್ರೋನ್‌ಗಳು
1545 ವಾಹನ: ಉಕ್ರೇನ್‌ನ 472, ರಷ್ಯಾದ 211 ಟ್ಯಾಂಕ್; ರಷ್ಯಾದ 862 ವಾಹನ ನಾಶ