*ಉಕ್ರೇನ್ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು
*ಈವರೆಗೆ 15 ವಿಮಾನದಲ್ಲಿ 3389 ಭಾರತೀಯರ ಏರ್‌ಲಿಫ್ಟ್
*ಇನ್ನು 5 ದಿನದಲ್ಲಿ 31 ವಿಮಾನ ಬಳಸಿ 6300 ಜನರನ್ನು ಕರೆ ತರುವ ಗುರಿ
*ವಾಯುಪಡೆಯ 4 ದೈತ್ಯ ಗ್ಲೋಬ್‌ಮಾಸ್ಟರ್‌ಗಳೂ ರವಾನೆ
ನವದೆಹಲಿ (ಮಾ. 03) : ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ, ಬುಧವಾರವೂ ತನ್ನ ಅವಿಶ್ರಾಂತ ಕಾಯಕ ಮುಂದುವರಿಸಿದೆ. ಈವರೆಗೆ 15 ವಿಮಾನಗಳಲ್ಲಿ 3389 ಜನರನ್ನು ಕರೆತರಲಾಗಿದೆ ಹಾಗೂ ಇನ್ನು ಕೆಲವು ದಿನಗಳಲ್ಲಿ 31 ವಿಮಾನದಲ್ಲಿ 6300 ಜನರನ್ನು ಕರೆತರುವ ಮಹದೋದ್ದೇಶ ಇರಿಸಿಕೊಂಡಿದೆ.ಯುದ್ಧಕ್ಕೂ ಮೊದಲು ಭಾರತ ಸರ್ಕಾರ ಸೂಚನೆ ನೀಡಿ ‘ಬೇಗ ಉಕ್ರೇನ್‌ನಿಂದ ಹೊರಡಬೇಕು’ ಎಂದು ಭಾರತೀಯರಿಗೆ ಸೂಚನೆ ನೀಡಿತ್ತು ಹಾಗೂ ಯುದ್ಧದ ಬಳಿಕ ವಿಮಾನದ ಮೂಲಕ ರಕ್ಷಣಾ ಕಾರಾರಯಚರಣೆ ನಡೆಸಿದೆ. ಈ ಎರಡೂ ಕಾರ್ಯಗಳಿಂದ ಈವರೆಗೆ ಉಕ್ರೇನ್‌ನಲ್ಲಿದ್ದ 20 ಸಾವಿರ ಜನರ ಪೈಕಿ ಶೇ.60ರಷ್ಟುಜನರು (ಅಂದಾಜು 12 ಸಾವಿರ ಜನ) ಭಾರತಕ್ಕೆ ಮರಳಿದ್ದಾರೆ ಎಂದು ಖುದ್ದು ಕೇಂದ್ರ ಸರ್ಕಾರ ಹೇಳಿದೆ.
15 ವಿಮಾನದಲ್ಲಿ ಈವರೆಗೆ 3389 ಜನರು ವಾಪಸ್: ಈವರೆಗೆ 15 ವಿಮಾನಗಳಲ್ಲಿ 3,389 ಜನರನ್ನು ಭಾರತಕ್ಕೆ ಕರೆತಂದಿದೆ. ಕಾರಾರಯಚರಣೆ ಆರಂಭವಾದ ಮೊದಲ ದಿನ ಶನಿವಾರ 219 ಮಂದಿ, ಭಾನುವಾರ 688 ಮಂದಿ, ಸೋಮವಾರ 489, ಮಂಗಳವಾರ 616 ಮತ್ತು ಬುಧವಾರ ಒಂದೇ ದಿನ 6 ವಿಮಾನಗಳಲ್ಲಿ 1377 ಮಂದಿ ಭಾರತಕ್ಕೆ ತಲುಪಿದ್ದಾರೆ. ರೊಮೆನಿಯಾ, ಪೋಲಂಡ್, ಹಂಗೇರಿ ಸೇರಿದಂತೆ ಉಕ್ರೇನ್ ನೆರೆಯ ದೇಶಗಳಿಂದ ಏರಿಂಡಿಯಾ, ಇಂಡಿಗೋ, ಸ್ಪೈಸ್ ಜೆಟ್ ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಇದನ್ನೂ ಓದಿ: Russia Ukraine Crisis: ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ
ಮುಂದಿನ 31 ವಿಮಾನದಲ್ಲಿ 6300 ಜನ: ಮಾರ್ಚ್ 8ರ ವರೆಗೂ ಈ ಕಾರಾರಯಚರಣೆ ಮುಂದುವರೆಯಲಿದ್ದು, 31 ವಿಮಾನಗಳು ಮುಂದಿನ ದಿನಗಳಲ್ಲಿ 6,300 ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲಿವೆ. ರೊಮೇನಿಯಾದ ಬುಕಾರೆಸ್ಟ್‌ನಿಂದ 21 ವಿಮಾನಗಳು, ಹಂಗೇರಿಯ ಬುಡಾಪೆಸ್ಟ್‌ನಿಂದ 4, ಪೋಲಂಡ್‌ನ ಝೇಜವ್‌ನಿಂದ 4, ಸ್ಲೋವೋಕಿಯಾದ ಕೋಶಿಟ್ಸದಿಂದ 1 ವಿಮಾನ ಕಾರ್ಯಾಚರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ಬಾರಿಗೆ ಏರಿಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ವಿಮಾನಗಳು 180 ಜನರನ್ನು ಹಾಗೂ ಏರಿಂಡಿಯಾ 250 ಮತ್ತು ಇಂಡಿಗೋ 216 ಜನರನ್ನು ಕರೆತರಲಿವೆ.
ವಾಯುಪಡೆ ವಿಮಾನಗಳು: ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗಾಗಿ ಹಾಗೂ ಉಕ್ರೇನ್‌ಗೆ ಮಾನವೀಯ ನೆರವನ್ನು ಹೊತ್ತುಕೊಂಡು ವಾಯುಪಡೆಯ ಎ ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಬುಧವಾರ ಮುಂಜಾನೆ ನವದೆಹಲಿಯಿಂದ ಹೊರಟಿದೆ. ಇಂಥ ಒಟ್ಟು 4 ಗ್ಲೋಬ್ ಮಾಸ್ಟರ್ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಹಾಗೂ ವಿಮಾನ ಮರಳಿ ಬರುವಾಗ ರೊಮೇನಿಯಾ ಗಡಿಗೆ ತಲುಪಿರುವ 800 ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲಿವೆ. ರಷ್ಯಾ ದಾಳಿಯಿಂದ ಸಂಕಷ್ಟಕ್ಕೀಡಾಗಿರುವ ಉಕ್ರೇನ್‌ಗೆ ಮೊದಲ ಬಾರಿ ಭಾರತ ಮಾನವೀಯ ನೆರವನ್ನು ನೀಡಿದೆ. ಔಷಧ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಭಾರತ ಉಕ್ರೇನ್‌ಗೆ ಕಳುಹಿಸಿಕೊಟ್ಟಿದೆ.
ಇದನ್ನೂ ಓದಿ: Russia Ukraine Crisis: 498 ಯೋಧರ ಸಾವು, ರಷ್ಯಾದ ಅಧಿಕೃತ ಹೇಳಿಕೆ
ಮತ್ತೆ ಪುಟಿನ್‌ಗೆ ಮೋದಿ ಫೋನ್ : ರಷ್ಯಾ-ಉಕ್ರೇನ್ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಸಭೆ ನಡೆಸಿದರು. ಇದೇ ವೇಳೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಹಾಗೂ ಉಕ್ರೇನ್‌ನಲ್ಲಿನ ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳುವಂತೆ ಸಹಕರಿಸಬೇಕು ಎಂದು ಕೋರಿದ್ದಾರೆ.
ಖಾರ್ಕೀವ್‌ನಲ್ಲಿ ರಷ್ಯಾ ಸಹಕಾರ: ಉಕ್ರೇನ್‌ನ ಖಾರ್ಕೀವ್ ನಗರದಲ್ಲಿ ಸಿಲುಕಿಕೊಂಡಿರುವ ಎಲ್ಲಾ ಭಾರತೀಯ ಮಹಿಳಾ ವಿದ್ಯಾರ್ಥಿಗಳನ್ನು ರಷ್ಯಾದ ನೆರವಿನೊಂದಿಗೆ ರಕ್ಷಿಸಲಾಗಿದೆ. ಅವರು ಉಕ್ರೇನ್‌ನ ಪಶ್ಚಿಮ ಗಡಿಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದಾರೆ. ಪುರುಷ ವಿದ್ಯಾರ್ಥಿಗಳ ರಕ್ಷಣೆ ಬಾಕಿ ಇದೆ. ಇದು ಶೀಘ್ರ ನಡೆಯಲಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.