* ನ್ಯಾಟೋ ತಂಟೆಗೆ ಬಂದರೆ 3ನೇ ವಿಶ್ವಯುದ್ಧಕ್ಕೂ ಹೇಸಲ್ಲ: ಬೈಡೆನ್
* ರಷ್ಯಾ ವಿರುದ್ಧ ಅಮೆರಿಕ ಮೊದಲ ಗುಡುಗು
* ಚೀನಾಕ್ಕೂ ಎಚ್ಚರಿಕೆ ಕೊಟ್ಟ ಅಮೆರಿ ಅಧ್ಯಕ್ಷ
* ಇಷ್ಟು ದಿನ ಸುಮ್ಮನಿದ್ದ ಹಿರಿಯಣ್ಣ
ವಾಷಿಂಗ್ಟನ್ (ಮೇ14) ಉಕ್ರೇನ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ರಷ್ಯಾ(Russai) ಮೇಲೆ ಕೊತ ಕೊತ ಕುದಿಯುತ್ತಿರುವ ಅಮೆರಿಕ (America)ನೇರಾನೇರ 3ನೇ ವಿಶ್ವ ಯುದ್ಧದ ಎಚ್ಚರಿಕೆ ನೀಡಿದೆ. ‘ನ್ಯಾಟೋ (NATO) ಸದಸ್ಯ ದೇಶಗಳ ಮೇಲೆ ದಾಳಿಯೇನಾದರೂ ಆದರೆ ಸುಮ್ಮನಿರುವುದಿಲ್ಲ. ಆ ದೇಶಗಳ ಪ್ರತಿ ಇಂಚು ಭೂಮಿಯನ್ನೂ ರಕ್ಷಿಸಿಕೊಳ್ಳುತ್ತೇವೆ. ಅದು ಮೂರನೇ ಮಹಾಯುದ್ಧಕ್ಕೆ (world war) ಕಾರಣವಾದರೂ ತೊಂದರೆ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಗುಡುಗಿದ್ದಾರೆ.
ಇದೇ ವೇಳೆ, ಉಕ್ರೇನ್ ಬೇಡಿಕೆಯಂತೆ ಆ ದೇಶವನ್ನು ನೋ ಫ್ಲೈ (ವಿಮಾನ ಹಾರಾಟ ನಿರ್ಬಂಧಿತ ವಲಯ) ಎಂದು ಘೋಷಿಸಲಾಗದು. ಹಾಗೆ ಮಾಡಿದರೆ ರಷ್ಯಾ ಜತೆ ಗುಂಡಿನ ಕಾಳಗಕ್ಕೆ ಇಳಿಯಬೇಕಾಗುತ್ತದೆ ಎಂದೂ ತಿಳಿಸಿದ್ದಾರೆ.
ರಷ್ಯಾ ದಾಳಿ ಹಿನ್ನೆಲೆಯಲ್ಲಿ ಸ್ವೀಡನ್ ಹಾಗೂ ಫಿನ್‌ಲೆಂಡ್‌ಗಳು ನ್ಯಾಟೋ ಸೇರಲು ಇಚ್ಛೆ ವ್ಯಕ್ತಪಡಿಸಿವೆ ಹಾಗೂ ಅದಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಅಮೆರಿಕದ ಈ ಎಚ್ಚರಿಕೆ ಹೊರಬಿದ್ದಿದೆ. ಬಾಲ್ಟಿಕ್ ದೇಶಗಳು ಹಾಗೂ ರೊಮೇನಿಯಾ ಗಡಿಗೆ 12 ಸಾವಿರ ಯೋಧರನ್ನು ರವಾನೆ ಮಾಡಿದ ಬೆನ್ನಲ್ಲೇ ಅಮೆರಿಕ ಈ ಮಾತು ಆಡುತ್ತಿರುವುದರಿಂದ ರಷ್ಯಾ ಜತೆ ನೇರ ಸಂಘರ್ಷಕ್ಕೆ ಇಳಿಯಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.
ಫಿಲಡೆಲ್ಫಿಯಾದಲ್ಲಿ ಡೆಮೊಕ್ರೆಟಿಕ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್, ಪೂರ್ವ ಯುರೋಪ್‌ನ ನ್ಯಾಟೋ ದೇಶಗಳಲ್ಲಿ ಅಮೆರಿಕ ಪಡೆಗಳ ಉಪಸ್ಥಿತಿಯನ್ನು ಬಲಗೊಳಿಸಲಾಗುವುದು. ಉಕ್ರೇನ್‌ಗೂ ಸೇನಾ ನೆರವು ತ್ವರಿತಗೊಳಿಸಲಾಗುವುದು. ಆದರೆ ಉಕ್ರೇನ್ ಅಧ್ಯಕ್ಷರು ಹಾಗೂ ಅಮೆರಿಕದ ಕೆಲ ಸಂಸದರ ಬೇಡಿಕೆಯಂತೆ ನೇರವಾಗಿ ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಚೀನಾಕ್ಕೂ ಎಚ್ಚರಿಕೆ: ಈ ನಡುವೆ, ಜಾಗತಿಕ ಸಮುದಾಯ ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳ ಪರಿಣಾಮದಿಂದ ರಷ್ಯಾವನ್ನು ಪಾರು ಮಾಡಲು ಚೀನಾ ಮುಂದಾದಲ್ಲಿ ಅದು ಕೂಡಾ ತಕ್ಕ ಪರಿಣಾಮ ಎದುರಿಸಬೇಕಾಗಿ ಬರುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಇರಾನ್ ಅಮೆರಿಕ ಕಿತ್ತಾಟ: ಇರಾನ್ ಹಾಗೂ ಅಮೆರಿಕ ನಡುವಿನ ದೀರ್ಘಕಾಲದ ಹಗೆತನ ಮುಂದುವರೆದಿದ್ದು, ಇರಾಕಿನ ಇರ್ಬಿಲ್ ನಗರದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಸಮೀಪದಲ್ಲೇ ಇರಾನ್ ಭಾನುವಾರ ಸುಮಾರು 12 ಕ್ಷಿಪಣಿಗಳನ್ನು ಉಡಾಯಿಸಿದೆ. ಉಕ್ರೇನ್-ರಷ್ಯಾ ಯುದ್ಧದ ನಡುವೆ ಈ ದಾಳಿಯು ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟುಹೆಚ್ಚಿಸಿದೆ.
ಈ ದಾಳಿಯಿಂದಾಗಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಸಿರಿಯಾದ ಡಮಾಸ್ಕಸ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇರಾನಿನ ಇಬ್ಬರು ಕ್ರಾಂತಿಕಾರಿ ಯೋಧರು ಹತರಾಗಿದ್ದರು. ಇದರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದ ಕೆಲವೇ ದಿನಗಳ ನಂತರ ಈ ದಾಳಿ ನಡೆಸಿದೆ.
ದಾಳಿಯ ಕುರಿತು ಮಾತನಾಡಿದ ಬಾಗ್ದಾದಿನಲ್ಲಿರುವ ಇರಾಕಿನ ಅಧಿಕಾರಿಗಳು ಇರಾನ್ ನಿರ್ಮಿತ್ ಫತೇ-110 ಕ್ಷಿಪಣಿ ದಾಳಿಯನ್ನು ಅಮೆರಿಕದ ರಾಯಭಾರ ಕಚೇರಿಯನ್ನೇ ಗುರಿಯಾಗಿಸಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ. ಅದೇ ಇರಾನಿನ ವಕ್ತಾರ ಮೊಹಮ್ಮದ ಅಬ್ಬಾಸ್‌ಝಯೇದ್ ಇರ್ಬಿಲ್ ದಾಳಿಯ ಹಿಂದೆ ಇರಾನಿನ ಕೈವಾಡವಿಲ್ಲ. ಇರಾನ್ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರೆ ಅದು ಇನ್ನು ಭೀಕರವಾಗಿರಲಿದೆ ಎಂದು ಹೇಳಿದ್ದಾರೆ.