* ಇರಾಕ್‌ನ ಅಮೆರಿಕ ರಾಯಭಾರ ಕಚೇರಿ ಬಳಿ ಇರಾನ್ ಕ್ಷಿಪಣಿ ದಾಳಿ
* ಯಾವುದೇ ಸಾವು ನೋವು ವರದಿಯಾಗಿಲ್ಲ
* ಸಿರಿಯಾದ ಡಮಾಸ್ಕಸ್‌ನಲ್ಲಿ ಕ್ಷಿಪಣಿ ದಾಳಿ ನಡೆದಿತ್ತು
* ಅಮೆರಿಕದ ರಾಯಭಾರ ಕಚೇರಿ ಗುರಿ?
ಬಾಗ್ದಾದ್(ಮೇ. 14) ಇರಾನ್ ಹಾಗೂ ಅಮೆರಿಕ ನಡುವಿನ ದೀರ್ಘಕಾಲದ ಹಗೆತನ ಮುಂದುವರೆದಿದ್ದು, ಇರಾಕಿನ ಇರ್ಬಿಲ್ ನಗರದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಸಮೀಪದಲ್ಲೇ ಇರಾನ್ ಭಾನುವಾರ ಸುಮಾರು 12 ಕ್ಷಿಪಣಿಗಳನ್ನು ಉಡಾಯಿಸಿದೆ. ಉಕ್ರೇನ್-ರಷ್ಯಾ ಯುದ್ಧದ ನಡುವೆ ಈ ದಾಳಿಯು ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟುಹೆಚ್ಚಿಸಿದೆ.
ಈ ದಾಳಿಯಿಂದಾಗಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಸಿರಿಯಾದ ಡಮಾಸ್ಕಸ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇರಾನಿನ ಇಬ್ಬರು ಕ್ರಾಂತಿಕಾರಿ ಯೋಧರು ಹತರಾಗಿದ್ದರು. ಇದರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದ ಕೆಲವೇ ದಿನಗಳ ನಂತರ ಈ ದಾಳಿ ನಡೆಸಿದೆ.
ದಾಳಿಯ ಕುರಿತು ಮಾತನಾಡಿದ ಬಾಗ್ದಾದಿನಲ್ಲಿರುವ ಇರಾಕಿನ ಅಧಿಕಾರಿಗಳು ಇರಾನ್ ನಿರ್ಮಿತ್ ಫತೇ-110 ಕ್ಷಿಪಣಿ ದಾಳಿಯನ್ನು ಅಮೆರಿಕದ ರಾಯಭಾರ ಕಚೇರಿಯನ್ನೇ ಗುರಿಯಾಗಿಸಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ. ಅದೇ ಇರಾನಿನ ವಕ್ತಾರ ಮೊಹಮ್ಮದ ಅಬ್ಬಾಸ್‌ಝಯೇದ್ ಇರ್ಬಿಲ್ ದಾಳಿಯ ಹಿಂದೆ ಇರಾನಿನ ಕೈವಾಡವಿಲ್ಲ. ಇರಾನ್ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರೆ ಅದು ಇನ್ನು ಭೀಕರವಾಗಿರಲಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ರಕ್ಷಣಾ ಕಚೇರಿ ಎಷ್ಟುಕ್ಷಿಪಣಿಗಳ ಮೂಲಕ ಇರಾನ್ ದಾಳಿ ನಡೆಸಿದ್ದು, ಕ್ಷಿಪಣಿಗಳು ಎಲ್ಲಿ ದಾಳಿ ನಡೆಸಿವೆ ಎಂಬುದರ ಬಗ್ಗೆ ಇನ್ನು ಸ್ಪಷ್ಟಮಾಹಿತಿ ಸಿಕ್ಕಿಲ್ಲ. ಅಮೆರಿಕದ ಸರ್ಕಾರಿ ಕಚೇರಿಗಳಿಗೆ ಕ್ಷಿಪಣಿ ದಾಳಿಯಿಂದಾಗಿ ಯಾವುದೇ ಹಾನಿಯಾಗಿಲ್ಲ. ಇರ್ಬಿಲ್‌ನ ರಾಯಭಾರ ಕಚೇರಿ ಹೊಸದಾಗಿ ನಿರ್ಮಾಣವಾಗಿದ್ದು, ಇನ್ನು ಅಲ್ಲಿ ಅಧಿಕಾರಿಗಳು ಕಾರ್ಯಾರಂಭವನ್ನೇ ಮಾಡಿಲ್ಲ. ಹೀಗಾಗಿ ಅಮೆರಿಕದ ರಾಯಭಾರ ಕಚೇರಿಯನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎನ್ನಲು ಯಾವುದೇ ನಿಖರ ಪುರಾವೆಗಳಿಲ್ಲ ಎಂದು ಹೇಳಿದೆ.
ಬಾಗ್ದಾದ್‌ನಲ್ಲಿರುವ ಇರಾಕಿನ ಪ್ರಧಾನ ಮಂತ್ರಿ ಮುಸ್ತಫಾ ಅಲ್-ಕಧಿಮಿ (Mustafa al-Kadhimi) ಅವರ ನಿವಾಸಕ್ಕೆ ಸ್ಫೋಟಕಗಳಿಂದ ತುಂಬಿದ್ದ ಡ್ರೋನ್ (Drone) ದಾಳಿ ಮಾಡಿತ್ತು.. ಇರಾಕಿ ಮಿಲಿಟರಿ ಇದನ್ನು ಹತ್ಯೆಯ ಯತ್ನ ಎಂದು ಕರೆದಿದ್ದು ಪ್ರಧಾನಿ ಕದಿಮಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸೇನೆ ತಿಳಿಸಿತ್ತು.
ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಕುರಿತು ಇರಾಕಿನ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳು (Protest) ಹಿಂಸಾಚಾರಕ್ಕೆ ತಿರುಗಿದ್ದವು. ಇದೇ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದ್ದು ಕಧಿಮಿ ಅವರ ವೈಯಕ್ತಿಕ ರಕ್ಷಣೆಗೆ ನಿಯೋಜಿಸಿದ್ದ ಹಲವಾರು ಸೇನೆಯ ಸದಸ್ಯರು ಗಾಯಗೊಂಡಿದ್ದರು.
ಮುಗಿಯದ ಸಮರ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರಕ್ಕೆ ಫುಲ್ ಸ್ಟಾಪ್ ಬಿದ್ದಿಲ್ಲ. ರಷ್ಯಾ ದಾಳಿಗೆ ಉಕ್ರೇನ್ ಪ್ರತಿರೋಧ ತೋರಿಸುತ್ತಲೇ ಬಂದಿದೆ. ಆಪರೇಷನ್ ಗಂಗಾ ಮೂಲಕ ಭಾರತದ ಎಲ್ಲ ವಿದ್ಯಾರ್ಥಿಗಳನ್ನು ತಾಯಿ ನಾಡಿಗೆ ವಾಪಸ್ ಕರೆದುಕೊಂಡು ಬರಲಾಗಿದೆ.