ತನ್ನ 27ನೇ ವರ್ಷಕ್ಕೇ ಉತ್ತರ ಕೊರಿಯಾದ ಆಡಳಿತದ ಚುಕ್ಕಾಣಿ ಹಿಡಿದ ಕಿಮ್ ಜಾಂಗ್ ಉನ್ ಕೇವಲ ಎರಡೇ ವರ್ಷಗಳಲ್ಲಿ ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬನಾಗಿ ಬೆಳೆದ ಪರಿ ಇದೆಯಲ್ಲ, ನಿಜಕ್ಕೂ ಅಚ್ಚರಿ ತರುವಂಥದ್ದು. ತನ್ನ ದೇಶದ ಜನರನ್ನು ಬಾವಿಯೊಳಗಿನ ಕಪ್ಪೆಯನ್ನಾಗಿಸಿ, ತಾನು ನಡೆದದ್ದೇ ದಾರಿ ಎಂದು, ಮೆರೆಯುವ ಈ ಸರ್ವಾಧಿಕಾರಿ ತನ್ನ ದೇಶದ ಪ್ರಜೆಗಳನ್ನು ಮಾತ್ರವಲ್ಲ, ಇಡೀ ವಿಶ್ವವನ್ನೇ ತನ್ನ ಬೆರಳ ತುದಿಯಲ್ಲಿ ಆಡಿಸುತ್ತಿರುವುದು ಮಾತ್ರ ನಿಜಕ್ಕೂ ಆಶ್ಚರ್ಯ...!
ಕಿಮ್ ಜಾಂಗ್ ಉನ್... ಕೊರೊನಾ ಹೊಡೆತದ ಮಧ್ಯೆಯೂ ಇಡೀ ಜಗತ್ತಿನಾದ್ಯಂತ ಕೇಳಿಬರುತ್ತಿರೋ ಹೆಸರು. ಉತ್ತರ ಕೊರಿಯಾ ಅನ್ನೋ ದುರಂತ ದೇಶದ ಸರ್ವಾಧಿಕಾರಿ ಈತ. ಜಗತ್ತನ್ನ ಆಳಿ ಹೋದ ಹಲವು ಸರ್ವಾಧಿಕಾರಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿ. ಹಿಟ್ಲರ್, ಮುಸಲೋನಿ, ಸದ್ದಾಂ ಹುಸೇನ್, ಗಡ್ಡಾಫಿ, ಇದಿ ಅಮೀನ್‌ರಂಥ ನರ ರಾಕ್ಷಸರನ್ನೂ ಮೀರಿಸಬಲ್ಲಂತವನು ಈತ. ಒಂದಿಡೀ ದೇಶವನ್ನ ತನ್ನ ಮುಷ್ಠಿಯಲ್ಲಿಟ್ಟುಕೊಂಡು ಆಡಿಸುತ್ತಿರೋ ವ್ಯಕ್ತಿ. ತನ್ನ ಹುಚ್ಚು ನಿರ್ಧಾರಗಳು, ನಿಗೂಢ ಬದುಕಿನ ಕಾರಣದಿಂದಲೇ ಇಡೀ ಜಗತ್ತಿನ ಗಮನ ಸೆಳೆದವನು. ಅಮೆರಿಕದಂತಹ ಬಲಾಢ್ಯ ದೇಶವನ್ನೇ ಹೈಡ್ರೋಜನ್ ಬಾಂಬ್ ಹಾಕಿ ಉಡಾಯಿಸಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ ಭೂಪ. ಇವನನ್ನ ಕಂಡರೆ ಜಗತ್ತಿನ ಹಲವು ದೇಶಗಳು ಹೆದರುತ್ವೆ. ಇಂಥಾ ಕಿಮ್ ಜಾಂಗ್ ಉನ್ ಈಗ ಸತ್ತೇ ಹೋಗಿದ್ದಾನೆ ಎಂದು ಸುದ್ದಿಯಾಗುತ್ತಿದೆ. ಉತ್ತರ ಕೊರಿಯಾಗೆ ಮಹಿಳೆಯೊಬ್ಬಳು ಉತ್ತರಾಧಿಕಾರಿಯಾಗಲಿದ್ದಾಳೆ ಅನ್ನೋ ಸುದ್ದಿಗಳು ಬರಲಾರಂಭಿಸಿವೆ. ಕಿಮ್ ಜಾಂಗ್ ಉನ್ ಸತ್ತಿದ್ದಾನೋ ಇಲ್ಲವೋ ಅನ್ನೋದನ್ನ ಇದುವರೆಗೂ ಆ ದೇಶ ಖಚಿತಪಡಿಸುತ್ತಿಲ್ಲ. ಒಂದಿಡೀ ದೇಶವನ್ನ ಜಗತ್ತಿನಿಂದಲೇ ದೂರವಿಟ್ಟು ತನ್ನ ಬೆರಳ ನೇರಕ್ಕೆ ಆಡಿಸುತ್ತಿರೋ ಈತನ ಹಿನ್ನೆಲೆಯೇನು..? ಕೇವಲ 27 ವರ್ಷಕ್ಕೆ ಈತ ಒಂದು ದೇಶದ ಸರ್ವಾಧಿಕಾರಿಯಾಗಿದ್ದು ಹೇಗೆ..? ಅಧಿಕಾರ ಉಳಿಸಿಕೊಳ್ಳಲು ಈತ ಮಾಡಿದ ಪಾತಕಗಳೆಷ್ಟು..? ಉರುಳಿಸಿದ ತಲೆಗಳೆಷ್ಟು..?
ಕಿಮ್ ಜಾಂಗ್ ಉನ್... ಈತ ಉತ್ತರ ಕೊರಿಯಾದ ಮೂರನೇ ಸರ್ವಾಧಿಕಾರಿ. ಇವನಿಗೂ ಮೊದಲು ಇವನ ಅಪ್ಪ, ತಾತ ಆ ದೇಶವನ್ನ ನಿರ್ಧಾಕ್ಷಿಣ್ಯವಾಗಿ ಆಳಿ ಹೋಗಿದ್ದಾರೆ. 2011 ರಿಂದ ಕಿಮ್ ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಆಗಿ ಅಧಿಕಾರ ನಡೆಸುತ್ತಿದ್ದಾನೆ. ಅಲ್ಲಿ ಇವನು ಮಾಡಿದ್ದೇ ಕಾನೂನು, ಹೇಳಿದ್ದೇ ನ್ಯಾಯ. ಎಲ್ಲಿಯವರೆಗೆ ಅಂದ್ರೆ ಆ ದೇಶದಲ್ಲಿ ಹೇರ್ ಕಟ್ ಯಾವ ರೀತಿ ಮಾಡಿಸಬೇಕು ಅನ್ನೋದನ್ನೂ ನಿರ್ಧರಿಸೋದು ಇವನೇ. ಇವನು ಹೇಳಿದ್ದನ್ನ ಬಿಟ್ಟು ಬೇರೆ ರೀತಿಯ ಹೇರ್ ಕಟ್ ಮಾಡಿಸಿಕೊಂಡ ಅಂದ್ರೆ ಮುಗಿದೇ ಹೋಯ್ತು ಕತೆ. ಅಂಥವನೆದೆಗೆ ಗುಂಡು ಬಿತ್ತು ಅಂತಲೇ ಅರ್ಥ. ಇವನೆಂಥಾ ಹುಚ್ಚು ದೊರೆ ಅನ್ನೋದಕ್ಕೆ ಇದೊಂದು ಉದಾಹರಣೆ ಸಾಕು. ಅಧಿಕಾರಕ್ಕಾಗಿ ತನ್ನ ಅಣ್ಣನನ್ನೇ ಕೊಲೆ ಮಾಡಿಸಿದ ಕ್ರೂರಿ ಈತ. ಅಷ್ಟೇ ಅಲ್ಲ, ತನ್ನ ಮಾತು ಕೇಳಲಿಲ್ಲ ಅನ್ನೋ ಕಾರಣಕ್ಕೆ ಸ್ವಂತ ಮಾವನಿಗೇ ಮರಣದಂಡನೆ ವಿಧಿಸಿದ ಪಾಪಿ ಇವನು. ಜಗತ್ತಿನ ಎಲ್ಲ ದೇಶಗಳಲ್ಲಿ ಮರಣದಂಡನೆ ಅನ್ನೋದು ಕಟ್ಟ ಕಡೇ ಶಿಕ್ಷೆಯಾದ್ರೆ ಈತನ ಆಡಳಿತದಲ್ಲಿ ಮರಣದಂಡನೆಯೇ ಮೊಟ್ಟ ಮೊದಲ ಶಿಕ್ಷೆ.
ಕಿಮ್ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹೀಗ್ ಮಾಡ್ತಾನಂತೆ!
ಉತ್ತರ ಕೊರಿಯಾದ ಇತಿಹಾಸವೇನು?
ಈ ಕಿಮ್ ಜಾಂಗ್ ಉನ್ ಬಗ್ಗೆ ಹೇಳಬೇಕು ಅಂದ್ರೆ ಉತ್ತರ ಕೊರಿಯಾದ ಇತಿಹಾಸದ ಬಗ್ಗೆಯೂ ಹೇಳಲೇಬೇಕು. ಮೊದಲಿಗೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎರಡೂ ಒಂದೇ ದೇಶವಾಗಿದ್ದವು. ವಸಾಹತುಶಾಹಿ ವ್ಯವಸ್ಥೆ ಉತ್ತುಂಗದಲ್ಲಿದ್ದಂತ ಸಂದರ್ಭದಲ್ಲಿ ಬಲಿಷ್ಠವಾಗಿದ್ದ ಜಪಾನ್ 1910ರಲ್ಲಿ ಈ ದೇಶವನ್ನ ಆಕ್ರಮಿಸಿಕೊಳ್ತು. 1945ರ ವರೆಗೆ ಅಂದ್ರೆ ಎರಡನೇ ಮಹಾಯುದ್ಧ ಮುಗಿಯೋವರೆಗೆ ಜಪಾನ್ ಕೊರಿಯಾದಲ್ಲಿ ಅಧಿಕಾರ ನಡೆಸಿತ್ತು. ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋತ ಮೇಲೆ ಅಮೆರಿಕ ಮತ್ತು ರಷ್ಯಾ ಒಟ್ಟಾಗಿದ್ದ ಕೊರಿಯಾವನ್ನ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಹಂಚಿಕೊಂಡ್ವು. ಉತ್ತರ ಕೊರಿಯಾ ರಷ್ಯಾದ ಪಾಲಾಗಿ ಕಮ್ಯುನಿಸಂ ಅನ್ನ ಅಳವಡಿಸಿಕೊಂಡ್ರೆ, ದಕ್ಷಿಣ ಕೊರಿಯಾ ವಶಪಡಿಸಿಕೊಂಡ ಅಮೆರಿಕ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾರಣವಾಯ್ತು. ಹಾಗೆ ರೂಪುಗೊಂಡಿದ್ದೇ ಕಮ್ಯುನಿಸ್ಟ್ ದೇಶ ಉತ್ತರ ಕೊರಿಯಾ. ಒಂದು ದೇಶವನ್ನ ಎರಡು ತುಂಡು ಮಾಡಿದ ಅಮೆರಿಕ ಮತ್ತು ರಷ್ಯಾ 1948-49ರ ವೇಳೆಗೆ ಅಲ್ಲಿಂದ ಎದ್ದು ಹೋದವು. ಆಗ ಉತ್ತರ ಕೊರಿಯಾದ ಅಧಿಕಾರ ಹಿಡಿದವನು ಕಿಮ್ ಇಲ್ ಸಂಗ್. ಈತ ಉತ್ತರ ಕೊರಿಯಾದ ಪಿತಾಮಹ. ಇವನು ಉತ್ತರ ಕೊರಿಯಾವನ್ನ 40 ವರ್ಷಗಳ ಕಾಲ ಆಳಿದ್ದ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಕಿಮ್ ಇಲ್ ಸಂಗ್ ಸೂಕ್ತ ಚಿಕಿತ್ಸೆ ಸಿಗದೇ ನರಳಿ ಸತ್ತುಹೋದ. ನಂತರ ಅಧಿಕಾರ ಹಿಡಿದವನು ಈತನ ಮಗ ಕಿಮ್ ಜಾಂಗ್ ಇಲ್. ಈತನ ಅವಧಿಯಲ್ಲೇ ಆ ದೇಶ ರಕ್ಷಣೆಯ ವಿಚಾರದಲ್ಲಿ ಬಲಿಷ್ಠವಾಗಿದ್ದು. ಇದಕ್ಕೆ ಚೀನಾ ಬೆನ್ನಿಗಿತ್ತು ಅನ್ನೋದೂ ಅಷ್ಟೇ ನಿಜ. 1994 ರಿಂದ 2011 ರವರೆಗೆ ದೇಶದ ಸರ್ವಾಧಿಕಾರಿಯಾಗಿದ್ದ. 2011ರಲ್ಲಿ ಕಿಮ್ ಜಾಂಗ್ ಇಲ್ ಅನಾರೋಗ್ಯದಿಂದ ಮೃತಪಟ್ಟಾಗ ತನ್ನ 27 ನೇ ವರ್ಷಕ್ಕೆ ಸರ್ವಾಧಿಕಾರಿಯಾದವನು ಈಗಿನ ಕಿಮ್ ಜಾಂಗ್ ಉನ್.
ಮೊದಲ ಭೇಟಿಯಲ್ಲೇ ಕಿಮ್ ಹೃದಯ ಗೆದ್ದ ಸುಂದರಿ, ಎಲ್ಲೀಗ ಅವಳು?
ಉತ್ತರ ಕೊರಿಯಾದ ಜನರ ಪಾಲಿಗೆ ಕಿಮ್ ಜಾಂಗ್ ಉನ್, ಆತನ ತಂದೆ ಮತ್ತು ತಾತ ಸಾಕ್ಷಾತ್ ದೇವರುಗಳೇ. ದೇಶೋದ್ಧಾರಕ್ಕಾಗಿ ಸ್ವರ್ಗದಿಂದಲೇ ಇಳಿದುಬಂದವರು. ಹಾಗಂತ ಇಡೀ ದೇಶದ ಜನರನ್ನ ನಂಬಿಸಲಾಗಿದೆ. ನಂಬದೇ ಇರುವವರನ್ನ ಬಂದೂಕಿನ ನಳಿಕೆಯಿಟ್ಟು ನಂಬಿಸಲಾಗುತ್ತೆ. ಈ ಸರ್ವಾಧಿಕಾರಿಗಳು ಮಾಡೋ ಹುಚ್ಚಾಟವನ್ನ ಅಲ್ಲಿನ ಜನ ಸಾಕ್ಷಾತ್ ದೇವರ ಲೀಲೆ ಅಂತಲೇ ನಂಬುತ್ತಾರೆ. ಹಾಗೆ ಅವರನ್ನ ಈ ಸರ್ವಾಧಿಕಾರಿಗಳೇ ನಂಬಿಸಿದರೋ, ಅಥವಾ ಜನರೇ ವದಂತಿಗಳನ್ನ ಸೃಷ್ಟಿಸಿಕೊಂಡು ನಂಬಿದರೋ ಗೊತ್ತಿಲ್ಲ. ಆದ್ರೆ ಒಂದಿಡೀ ದೇಶವನ್ನ ಈ ಕಿಮ್ ನ ಕುಟುಂಬ ಕಳೆದ 70 ವರ್ಷಗಳಿಂದ ಇಡೀ ಜಗತ್ತಿನಿಂದಲೇ ದೂರ ಇಟ್ಟಿದೆ. ಉತ್ತರ ಕೊರಿಯಾ ಜಗತ್ತಿನಲ್ಲೇ ಸುಭಿಕ್ಷ ದೇಶ ಅಂತ ಅಲ್ಲಿನ ಜನರನ್ನ ನಂಬಿಸಲಾಗಿದೆ. ಇಡೀ ಜಗತ್ತಿನದ್ದೇ ಒಂದು ದಾರಿಯಾದ್ರೆ, ಉತ್ತರ ಕೊರಿಯಾದ್ದೇ ಮತ್ತೊಂದು ದಾರಿ. ಈ ದೇಶದೊಳಗೆ ಏನಾಗುತ್ತೆ ಅನ್ನೋದು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಇನ್ನು ಹೊರಜಗತ್ತಿನ ಆಗುಹೋಗುಗಳು ಇಲ್ಲಿನ ಜನರಿಗೆ ತಿಳಿಯುವುದೇ ಇಲ್ಲ. ಯಾಕಂದ್ರೆ ಅಲ್ಲಿ ಇಂಟರ್ ನೆಟ್ ಎಲ್ಲರಿಗೂ ಲಭ್ಯವಿಲ್ಲ. ಮೊಬೈಲ್ ಫೋನ್ ಸಂಪರ್ಕ ಇದೆಯಾದ್ರೂ ಅದು ದೇಶದ ಒಳಗೆ ಮಾತ್ರ. ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅಲ್ಲಿ ಪ್ರವೇಶವಿಲ್ಲ. ವಿದೇಶಿ ಸಂಗೀತಕ್ಕೂ ನಿಷೇಧವಿದೆ. ಅದೊಂತರ ಇಡೀ ಜಗತ್ತಿನ ಪಾಲಿಗೆ ನಿಗೂಢ ದೇಶ. ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ಬದುಕು ಕೂಡ ಅಷ್ಟೇ ನಿಗೂಢ.
ಅಧಿಕಾರ ಹಿಡಿದ ಎರಡೇ ವರ್ಷದಲ್ಲಿ ಪ್ರಭಾವಿಯಾದ ಕಿಮ್
ತನ್ನ 27 ನೇ ವರ್ಷಕ್ಕೆ ಉತ್ತರ ಕೊರಿಯಾದ ಸರ್ವಾಧಿಕಾರಿಯಾದ ಕಿಮ್ ಜಾನ್ ಉನ್ ಇನ್ನೇನು ಮಾಡಬಲ್ಲ ಅಂತಲೇ ಜಗತ್ತು ಭಾವಿಸಿತ್ತು. ಆದ್ರೆ ಅಧಿಕಾರ ಹಿಡಿದ ಎರಡೇ ವರ್ಷಕ್ಕೆ ಜಗತ್ತಿನ ಪ್ರಭಾವಿ ವ್ತಕ್ತಿಗಳ ಸಾಲಿಗೆ ಬಂದುಬಿಟ್ಟ. ಎರಡೂವರೆ ಕೋಟಿ ಜನಸಂಖ್ಯೆಯ ದೇಶದಲ್ಲಿ ಹತ್ತು ಲಕ್ಷ ಸೈನಿಕರ ಸೇನೆ ಕಟ್ಟಿದ. ತನ್ನ ಆದೇಶವನ್ನ ಮೀರಿದವರನ್ನ ನಿರ್ಧಾಕ್ಷಿಣ್ಯವಾಗಿ ನೇಣಿಗೇರಿಸಿದ. ಅಂಥವರ ಇಡೀ ಕುಟುಂಬವನ್ನೇ ಜೈಲಿಗೆ ದೂಡಿ ಬಿಡುತ್ತಿದ್ದ. ಹಾಗೆ ಉಸಿರು ಚೆಲ್ಲಿದವರ ಸಂಖ್ಯೆ ಅದೆಷ್ಟೋ. ಸರ್ಕಾರದಲ್ಲಿ ತನ್ನ ಮಾತು ಕೇಳದ ಅಧಿಕಾರಿಗಳನ್ನ ಗುಂಡಿಟ್ಟು ಮುಗಿಸಿಬಿಡುತ್ತಿದ್ದ. ಜನ ಇವನ ಆಡಳಿತವನ್ನ ನೋಡಿ ಈ ಹುಚ್ಚು ದೊರೆ ಹೇಳಿದ್ದನ್ನ ಚಾಚೂ ತಪ್ಪದೇ ಪಾಲಿಸಲಾರಂಭಿಸಿದ್ರು. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲಾ ಕ್ರೌರ್ಯಗಳನ್ನ ಮಾಡಬೇಕೋ ಅದನ್ನೆಲ್ಲವನ್ನೂ ಮಾಡಿಬಿಟ್ಟ. ಇಂಥಾ ಕಿಮ್ 2009ರಲ್ಲೇ ರಿ ಸೋಲ್ ಜು ಎಂಬಾಕೆಯನ್ನ ಮದುವೆಯಾಗಿದ್ದ. ಈತ ಹೋದಲ್ಲಿ ಬಂದಲ್ಲೆಲ್ಲಾ ಆಕೆ ಕಾಣಿಸಿಕೊಳ್ತಿದ್ಲು. ಆದ್ರೆ ಕಳೆದ ಒಂದೆರಡು ವರ್ಷಗಳಿಂದ ಆಕೆ ಎಲ್ಲಿದ್ದಾಳೆ, ಏನಾದಳು ಅನ್ನೋ ಮಾಹಿತಿಯೇ ಇಲ್ಲ.
ಉತ್ತರ ಕೊರಿಯಾದಲ್ಲಿ ಕೊರೋನಾ ಇಲ್ವಾ?
ಕಿಮ್ ಜಾಂಗ್ ಉನ್ ಅನ್ನೋ ಆಕೃತಿಯನ್ನ ನೋಡಿದ್ರೆ ಆತನ ದೇಶದ ಜನರಷ್ಟೇ ನಡುಗೋದಿಲ್ಲ. ಜಗತ್ತಿನ ಬಲಾಢ್ಯ ದೇಶ ಅಂತ ಹೇಳಿಕೊಳ್ಳೋ ಅಮೆರಿಕವೂ ಈತನನ್ನ ನೋಡಿದ್ರೆ ಹೆದರುತ್ತೆ. ಯಾವಾಗ ತನ್ನ ದೇಶದ ಮೇಲೆ ದಂಡೆತ್ತಿ ಬರುತ್ತಾನೋ ಅಂತ ದಕ್ಷಿಣ ಕೊರಿಯಾ ದಿನದ 24 ಗಂಟೆಯೂ ಯುದ್ಧ ಸನ್ನದ್ಧವಾಗಿಯೇ ಇರುತ್ತೆ. ಜಪಾನ್ ಈತನ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟೇ ಇರುತ್ತೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾವನ್ನ ಆಜನ್ಮ ವೈರಿಗಳೆಂದೇ ಪರಿಗಣಿಸೋ ಕಿಮ್ ಜಾಂಗ್ ಉನ್ ಒಂದರ ಬೆನ್ನಿಗೊಂದರಂತೆ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸಿಬಿಟ್ಟ. ಇಡೀ ಜಗತ್ತನ್ನೇ ಬೂದಿ ಮಾಡಿಬಿಡಬಲ್ಲ ಹೈಡ್ರೋಜನ್ ಬಾಂಬ್ ಪ್ರಯೋಗಿಸಿ ಅಮೆರಿಕವನ್ನ ಅಕ್ಷರಶಃ ನಡುಗಿಸಿದ್ದ. ನ್ಯೂಕ್ಲಿಯರ್ ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಪ್ರಯೋಗಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಮೇಲೆ ಯುದ್ಧ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಕಿಮ್ ಜಾಂಗ್ ಉನ್ ಅಮೆರಿಕದ ಮೇಲೆ ಹೈಡ್ರೋಜನ್ ಬಾಂಬ್ ಹಾಕಿ ಉಡಾಯಿಸಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ. ಆಗಲೇ ವಿಶ್ವದ ದೊಡ್ಡಣ್ಣ ಅಂತ ಬೀಗುತ್ತಿದ್ದ ಅಮೆರಿಕ ನಡುಗೋದಕ್ಕೆ ಶುರುವಾಗಿದ್ದು. ಅದಾದ ಮೇಲೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಮಧ್ಯೆ ಶಾಂತಿಯ ಮಾತುಕತೆ ನಡೆದಿತ್ತು. ಈ ಮಾತುಕತೆಯ ನಂತರವೂ ಈತನನ್ನ ಜಗತ್ತಿನ ಯಾವ ದೇಶವೂ ನಂಬೋದಿಲ್ಲ, ಚೀನಾವೊಂದನ್ನ ಬಿಟ್ಟು.
ಇಂಥಾ ತಿಕ್ಕಲು ಸರ್ವಾಧಿಕಾರಿ ಈಗ ಹೃದಯ ಶಸ್ತ್ರ ಚಿಕಿತ್ಸೆಯಿಂದಾದ ಯಡವಟ್ಟಿನಿಂದ ಸಾಯುವ ಹಂತದಲ್ಲಿದ್ದಾನೆ. ಸತ್ತೇ ಹೋಗಿದ್ದಾನೆ ಅನ್ನೋ ಸುದ್ದಿಗಳು ಬರುತ್ತಿವೆ. ಇವನು ಬದುಕಿ ಬಂದರೆ ಉತ್ತರ ಕೊರಿಯಾದ ಜನರ ಪಾಲಿನ ನರಕ ಮುಂದುವರಿಯುತ್ತೆ. ಸತ್ತು ಹೋಗಿದ್ದೇ ನಿಜವಾದ್ರೆ, ಆ ದೇಶವನ್ನ ಈತನ ತಂಗಿ ಕಿಮ್ ಯೋ ಜಾಂಗ್ ಆಳ್ವಿಕೆ ಮಾಡಬಹುದು. ಇಲ್ಲವೇ ಉತ್ತರ ಕೊರಿಯಾದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ, ಚೀನಾ ಮೇಲಾಟ ನಡೆಸಲೂಬಹುದು. ಎಲ್ಲವೂ ಕಿಮ್ ನ ಸಾವು-ಬದುಕಿನ ಮೇಲೆ ನಿರ್ಧಾರವಾಗಲಿದೆ.
- ಶಶಿ ಶೇಖರ್, ಸುವರ್ಣ ನ್ಯೂಸ್