ಕೊರೋನಾ ವಿರುದ್ಧ ಹೋರಾಟ| ಕೊರೋನಾ ವಿರುದ್ಧದ ಹೋರಾಟದಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಕನ್ನಡಿಗ| ಕನ್ನಡಿಗ ಪಿಂಚಿ ಶ್ರೀನಿವಾಸ್‌ಗೆ ಡ್ರೈವ್ ಆಫ್ ಹಾನರ್ ಗೌರವ|
ಬೆಂಗಳೂರು(ಏ.28): ಕೊರೋನಾ ವಿರುದ್ಧದ ಹೋರಾಟದಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಕನ್ನಡಿಗ, ನ್ಯೂಯಾರ್ಕ್ ನಿಯೋನಾಟಾಲಜಿ ವಿಭಾಗದ ನಿರ್ದೇಶಕ ಡಾ.ಪಿಂಚಿ ಶ್ರೀನಿವಾಸನ್ ಅವರಿಗೆ ಅಮೆರಿಕದಲ್ಲಿ ‘ಡ್ರೈವ್ ಆಫ್ ಹಾನರ್’ ಗೌರವ ಸಲ್ಲಿಸಲಾಗಿದೆ.
ನ್ಯೂಯಾರ್ಕ್ನ ಸೌತ್‌ನಸ್ಸೌನಲ್ಲಿ ಡಾ.ಪಿಂಚಿ ಶ್ರೀನಿವಾಸನ್ ಅವರ ಸೇವೆ ಗುರುತಿಸಿ, ಅಲ್ಲಿನ ಸರ್ಕಾರಿ ನೌಕರರು ಮತ್ತು ನಾಗರಿಕರು ಏ.25ರಂದು ಅವರ ಮನೆಯ ಮುಂದೆ ವಾಹನಗಳ ಪರೇಡ್ ನಡೆಸುವ ಮೂಲಕ ಗೌರವ ಸಲ್ಲಿಸಿದರು. ಡಾ.ಪಿಂಚಿ ಶ್ರೀನಿವಾಸನ್ ಅವರು ಕಲಬುರಗಿಯ ಎಂಆರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡಿ ಪ್ರಸ್ತುತ ನ್ಯೂಯಾರ್ಕ್ನ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವಾದ್ಯಂತ ಕನ್ನಡಿಗ ವೈದ್ಯರು ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆಯನ್ನು ಪ್ರಪಂಚದಾದ್ಯಂತ ಗುರುತಿಸಿ ಗೌರವಿಸಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಮೈಸೂರಿನ ವೈದ್ಯೆ ಡಾ.ಉಮಾ ಮಧುಸೂದನ್ ಅವರ ಸೇವೆಯನ್ನು ಗುರುತಿಸಿ ಅಮೆರಿಕದ ಸೌತ್ ವಿಂಡ್ಸರ್ ನಗರದ ಮಂದಿ ಡ್ರೈವ್ ಆಫ್ ಹಾನರ್ ಗೌರವ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.