ನಾಯಕನಿಲ್ಲದ ಇರಾನ್‌ಗೆ ನೇತೃತ್ವ ಯಾರದ್ದು?

Kannadaprabha News   | Kannada Prabha
Published : Mar 04, 2026, 06:56 AM IST
Iran

ಸಾರಾಂಶ

ಖಮೇನಿ ಹತ್ಯೆ ಬಳಿಕ ಇರಾನ್‌ನ ಕಥೆ ಮುಗಿಯಿತು. ರಕ್ಷಣಾ ಸಚಿವ, ರೆವಲ್ಯೂಷನರಿ ಗಾರ್ಡ್ಸ್‌ ಮುಖ್ಯಸ್ಥ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಸಶಸ್ತ್ರ ಪಡೆಗಳ ಮುಖ್ಯಸ್ಥ ಸೇರಿದಂತೆ 48 ಪ್ರಮುಖ ತಲೆಗಳನ್ನು ಒಂದೇ ಏಟಿಗೆ ಹೊಡೆದುರುಳಿಸಿದ್ದಾಗಿ ಅಮೆರಿಕ ಹೇಳಿ ದೆ

ಟೆಹ್ರಾನ್‌: ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಇರಾನ್‌ನ ಕಥೆ ಮುಗಿಯಿತು. ಅದರಲ್ಲೂ ಇರಾನ್‌ನ ರಕ್ಷಣಾ ಸಚಿವ, ರೆವಲ್ಯೂಷನರಿ ಗಾರ್ಡ್ಸ್‌ ಮುಖ್ಯಸ್ಥ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಸಶಸ್ತ್ರ ಪಡೆಗಳ ಮುಖ್ಯಸ್ಥ ಸೇರಿದಂತೆ 48 ಪ್ರಮುಖ ತಲೆಗಳನ್ನು ಒಂದೇ ಏಟಿಗೆ ಹೊಡೆದುರುಳಿಸಿದ್ದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ ಬಳಿಕವಂತೂ ಇರಾನ್‌ ಕಥೆ ಮುಗಿದೇ ಹೋಯಿತು ಎಂದೇ ವಿಶ್ಲೇಷಣೆ ಮಾಡಲಾಗಿತ್ತು.

ಆದರೆ ಸದ್ಯದ ಸ್ಥಿತಿ ನೋಡಿದರೆ ಶಿಯಾ ದೇಶದ ಯುದ್ಧೋನ್ಮಾದ ಇನ್ನೂ ಹೆಚ್ಚಿದ್ದು, ಕೊಲ್ಲಿ ರಾಷ್ಟ್ರಗಳ ಹೊರಗೂ ಕೊಳ್ಳಿ ಇಡತೊಡಗಿದೆ. ಅಮೆರಿಕ, ಇಸ್ರೇಲ್‌ ಜಂಟಿ ದಾಳಿಯನ್ನು ತಡೆಯುವ ಜೊತೆಗೆ ಏಕಕಾಲಕ್ಕೆ 8-9 ದೇಶಗಳ ಮೇಲೆ ಏಕಾಂಗಿಯಾಗಿ ಇರಾನ್‌ ಯುದ್ಧ ನಡೆಸುತ್ತಿದೆ. ಹಾಗಿದ್ದರೆ ನಾಯಕನೇ ಇಲ್ಲದ ದೇಶವನ್ನು ಯುದ್ಧದಲ್ಲಿ ಮುನ್ನಡೆಸುತ್ತಿರುವವರು ಯಾರು?

ಕಳೆದ 5 ದಶಕಗಳ ಅವಧಿಯಲ್ಲಿ ಇರಾನ್‌, ಆಯತೊಲ್ಲಾ (ಸರ್ವೋಚ್ಚ ನಾಯಕನ ಪದವಿ) ಇಲ್ಲದ ಶೂನ್ಯ ವಾತಾವರಣ ಎದುರಿಸುತ್ತಿರುವುದು ಇದೇ ಮೊದಲು. ಇನ್ನು ಅಮೆರಿಕ ತಮ್ಮ ಮೇಲೆ ದಾಳಿ ನಡೆಸಬಹುದು ಎಂಬ ಗುಮಾನಿ ಹೊಂದಿದ್ದ ಅಯತೊಲ್ಲಾ ಖಮೇನಿ, ದಾಳಿಗೂ ಕೆಲವೇ ದಿನಗಳ ಮೊದಲು, ಒಂದು ವೇಳೆ ತಾವು ಸಾವನ್ನಪ್ಪಿದರೆ ಏನು ಮಾಡಬೇಕು ಎಂಬ ಬಗ್ಗೆ ತಮ್ಮ ಆಪ್ತರಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ಹೀಗೆ ಸಲಹೆ ಸ್ವೀಕರಿಸಿದವರ ಪೈಕಿ ಬಹುತೇಕ ಜನರು ಕೂಡಾ ಖಮೇನಿ ಜೊತೆಗೇ ಸಾವನ್ನಪ್ಪಿದ್ದಾರೆ.

ಮೂವರ ತಂಡ:

ಇಂಥ ಪರಿಸ್ಥಿತಿ ಎದುರಿಸಲೆಂದೇ ಇರಾನ್‌ನಲ್ಲಿ ಸಿದ್ಧಸೂತ್ರವೊಂದಿದೆ. ಅದು ದೇಶ ಸಂಕಷ್ಟಕ್ಕೆ ಸಿಕ್ಕಿದ್ದಾಗ ಮೂವರು ಹಿರಿಯರ ಸಮಿತಿ ರಚಿಸಿ ಅವರ ನೇತೃತ್ವದಲ್ಲೇ ದೇಶವನ್ನು ಮುನ್ನಡೆಸುವುದು. ಈ ಸಮಿತಿಯಲ್ಲಿ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌, ನ್ಯಾಯಾಂಗದ ಮುಖ್ಯಸ್ಥ ಘೋಲಮ್‌ಹೊಸೇನ್ ಮೊಹ್ಸೆನಿ ಎಜೆಯಿ ಮತ್ತು ಹಿರಿಯ ಧರ್ಮಗುರು ಅಲಿರೆಜಾ ಅರಾಫಿ ಸದಸ್ಯರಾಗಿದ್ದಾರೆ. ಸದ್ಯ ಈ ಮೂವರು ರಹಸ್ಯ ಸ್ಥಳದಲ್ಲಿ ಕುಳಿತು ಯುದ್ಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅವರ ಸೂಚನೆಯಂತೆಯೇ ದೇಶವನ್ನು ಮುನ್ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್‌ ನೂತನ ನಾಯಕನ ಆಯ್ಕೆ ಸಮಿತಿ ಇದ್ದ ಕಟ್ಟಡದ ಮೇಲೆ ದಾಳಿ

ಟೆಹ್ರಾನ್‌: ಸರ್ವೋಚ್ಚ ನಾಯಕ ಅಲಿ ಖಮೇನಿ ಜಾಗಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿರುವ ತ್ರಿಸದಸ್ಯ ಸಮಿತಿಯಿದ್ದ ಕಟ್ಟಡದ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ದಾಳಿ ಮಾಡಿವೆ. ಟೆಹ್ರಾನ್‌ನಲ್ಲಿರುವ ದಾಳಿಗೆ ತುತ್ತಾದ ಕಟ್ಟಡ ಭಾಗಷಃ ಕುಸಿದು ಅದಕ್ಕೆ ಭಾರೀ ಹಾನಿಯಾಗಿದೆ. ಈ ಬಗ್ಗೆ ಇರಾನ್‌ ಮಾಧ್ಯಮಗಳೇ ವರದಿ ಮಾಡಿದ್ದು, ‘ಕೋಮ್‌ನಲ್ಲಿರುವ ತಜ್ಞರ ಸಭೆಯ ಕಟ್ಟಡದ ಮೇಲೆ ಅಮೆರಿಕ ಮತ್ತು-ಇಸ್ರೇಲ್‌ನ ಕ್ರಿಮಿನಲ್‌ಗಳು ದಾಳಿ ಮಾಡಿದ್ದಾರೆ’ ಎಂದಿದೆ. ಖಮೇನಿಯನ್ನು ಕೂಡ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದ ವೇಳೆಯೇ ಕೊಲ್ಲಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
ಅಮೆರಿಕಕ್ಕೆ ತಲೆನೋವಾದ ಇರಾನ್‌ ಅಗ್ಗದ ಅಸ್ತ್ರಗಳು